ವಿಭೂತಿ ಒಂದು ರಹಸ್ಯ, ಶಕ್ತಿ ಮತ್ತು ಅದರ ಮಹತ್ವ !

ಭಸ್ಮ ಮತ್ತು ವಿಭೂತಿ

ಹಿಂದೂ ಧರ್ಮದಲ್ಲಿ ಪವಿತ್ರ ಬೂದಿಯ ಎರಡು ವಿಧಗಳನ್ನು ಹೇಳಲಾಗಿದೆ. ಒಂದು ಭಸ್ಮ, ಇದನ್ನು ಸ್ಮಶಾನದಿಂದ ಪಡೆಯಲಾಗುತ್ತದೆ. ಭಸ್ಮ ಮತ್ತು ಶಂಭೋ ಮಹಾದೇವನಿಗೆ ಸಂಬಂಧ ವಿದೆ. ಭಸ್ಮ ಎಂದೊಡನೆ ನಮ್ಮ ಕಣ್ಮುಂದೆ ಅಘೋರಿಗಳ ಚಿತ್ರ ಬರುತ್ತದೆ, ಏಕೆಂದರೆ ಅವರು ಸಂಪೂರ್ಣ ಶರೀರಕ್ಕೆ ಭಸ್ಮ ಹಚ್ಚುತ್ತಾರೆ.

ವಿಭೂತಿ ಅಂದರೆ ಪವಿತ್ರ ಬೂದಿ ! ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ವಿಭೂತಿಯನ್ನು ಹಣೆಗೆ ಹಚ್ಚುತ್ತಿದ್ದಾರೆ. ವಿಭೂತಿಯು ಮಂತ್ರಜಪದೊಂದಿಗೆ ಯಾವುದೇ ಧುನಿ, ಹೋಮ ಅಥವಾ ಯಜ್ಞದಲ್ಲಿನ ವಿಶಿಷ್ಟ ಕಟ್ಟಿಗೆಗಳು, ತುಪ್ಪ, ಔಷಧಿ ವನಸ್ಪತಿಗಳು ಮತ್ತು ಕೆಲವು ಪವಿತ್ರ ವಿಷಯಗಳಿಂದ ಸಿದ್ಧವಾಗಿರುತ್ತದೆ. ಪವಿತ್ರ ವಿಭೂತಿಯನ್ನು ಹಣೆಗೆ ಹಚ್ಚುವುದು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುವ ಲೇಖನ !

‘ಈ ಶರೀರವು ನಶ್ವರವಾಗಿದೆ ಮತ್ತು ಒಂದು ದಿನ ಇದರದ್ದೂ ಬೂದಿಯಾಗಲಿದೆ; ಆದ್ದರಿಂದ ನಾವು ದೇಹದ ಮೇಲೆ ಆಸಕ್ತಿಯನ್ನು ಇಟ್ಟು ಕೊಳ್ಳಬಾರದು’ ಎಂಬುದನ್ನು ಭಸ್ಮವು ನೆನಪಿಸುತ್ತದೆ. ಇನ್ನೊಂದು ವಿಧವೆಂದರೆ ವಿಭೂತಿ ! ಒಣಗಿದ ಗೋಮಯ(ಬೆರಣಿ), ಅಕ್ಕಿಯ ತೌಡು, ಶಮಿ, ಅಶ್ವತ್ಥ, ವಟ ವೃಕ್ಷಗಳ ಕಟ್ಟಿಗೆ ಹಾಗೂ ಇತರ ವಸ್ತುಗಳನ್ನು ಒಟ್ಟಿಗೆ ಸೇರಿಸಿ ಉರಿಸಲಾಗುತ್ತದೆ. ಅದರ ಮೇಲೆ ಯೋಗ್ಯ ಮಂತ್ರೋಚ್ಚಾರವನ್ನು ಮಾಡಲಾಗುತ್ತದೆ.

ಭಾರತದಲ್ಲಿ ದೇಹಕ್ಕೆ ವಿಭೂತಿ ಹಚ್ಚುವುದು ಸಾಮಾನ್ಯವಾಗಿದೆ. ಯಾವುದಾದರೊಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿದರೆ ಆ ಪರಿಸರದಲ್ಲಿನ ಆಧ್ಯಾತ್ಮಿಕ ಮಂಡಳದವರು ದೇಹಕ್ಕೆ ವಿಭೂತಿ ಹಚ್ಚಿರುವುದು ನಮಗೆ ಕಾಣಿಸುತ್ತದೆ. ವಿಭೂತಿಯನ್ನು ಮೈಗೆ ಹಚ್ಚುವುದರಿಂದ ಮನುಷ್ಯನ ಕೆಟ್ಟ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಭಸ್ಮ ಮತ್ತು ವಿಭೂತಿ ಒಂದೇ ಆಗಿದೆ, ಎಂದು ಅನೇಕ ಜನರು ನಂಬುತ್ತಾರೆ. ಇದರ ಬಗ್ಗೆ ಭಿನ್ನಾಭಿಪ್ರಾಯಗಳು ಇರಬಹುದು.

ಈ  ವಸ್ತುಗಳನ್ನು ಸುಟ್ಟ ನಂತರ ಸಿದ್ಧ ವಾಗುವ ಬೂದಿಯನ್ನು ಬಟ್ಟೆಯಿಂದ ಸೋಸ ಲಾಗುತ್ತದೆ. ಈ ರೀತಿ ಪವಿತ್ರ ವಿಭೂತಿ ಸಿದ್ಧವಾಗುತ್ತದೆ. ವಿಭೂತಿ ಎಂದರೆ ಗೌರವ ಮತ್ತು ವಿಭೂತಿ ಹಚ್ಚಿಕೊಳ್ಳುವವರಿಗೆ ಅದು ಗೌರವವನ್ನು ನೀಡುತ್ತದೆ ಎಂದು ಹೇಳುತ್ತಾರೆ. ಯೋಗ್ಯ ವಿಧಾನದಿಂದ ಸಿದ್ಧಪಡಿಸಿದ ವಿಭೂತಿಯಲ್ಲಿ ಒಂದು ವಿಶಿಷ್ಟ ಗುಣವಿರುತ್ತದೆ, ಇದರಿಂದ ಶಕ್ತಿಯು ಹಸ್ತಾಂತರವಾಗುತ್ತದೆ ಅಥವಾ ಹರಡುತ್ತದೆ. ಶಿವಲಿಂಗದ ಮೇಲೆ ತ್ರಿಪುಂಡ್ರವನ್ನು ಹಚ್ಚಿರುತ್ತಾರೆ. ಇದಕ್ಕಾಗಿ ವಿಭೂತಿಯನ್ನು ಉಪಯೋಗಿಸಲಾಗುತ್ತದೆ.

ಭಸ್ಮದ ಮಹತ್ವ 

ಧಾರ್ಮಿಕ ಪ್ರಸಂಗಗಳಲ್ಲಿ ಮತ್ತು ಉಪಾಸನೆ ಯಲ್ಲಿ ತ್ರಿಪುಂಡ್ರಕ್ಕೆ ವಿಶೇಷ ಮಹತ್ವವಿದೆ. ಹಣೆಯ ಮೇಲೆ ಮತ್ತು ಕೈಗಳ ಮೇಲೆ ತ್ರಿಪುಂಡ್ರವನ್ನು ಹಚ್ಚುವ ಪದ್ಧತಿಯಿದೆ. ಆಜ್ಞಾಚಕ್ರವು ಹಣೆಯ ಮಧ್ಯಭಾಗದಲ್ಲಿ ಇರುತ್ತದೆ, ಅಲ್ಲಿ ತ್ರಿಪುಂಡ್ರವನ್ನು ಹಚ್ಚಲಾಗುತ್ತದೆ, ಅಂದರೆ ವಿಭೂತಿಯನ್ನು ಹಚ್ಚಲಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳು ಬರುವುದಿಲ್ಲ. ಅದರೊಂದಿಗೆ ನಕಾರಾತ್ಮಕವೂ ಹೋಗುತ್ತದೆ. ಮನಸ್ಸು ಸಾತ್ತ್ವಿಕವಾಗಿರುತ್ತದೆ. ವಿಭೂತಿಯು ನಮ್ಮಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ದೇಹದಲ್ಲಿರುವ ಸಪ್ತ ಚಕ್ರಗಳನ್ನು ನಿಯಂತ್ರಣದಲ್ಲಿಡುತ್ತದೆ.

ವಿಭೂತಿ ಹಚ್ಚಿಕೊಳ್ಳುವ ಲಾಭ 

೧. ಎರಡು ಹುಬ್ಬುಗಳ ಮಧ್ಯಭಾಗದಲ್ಲಿ ಭಸ್ಮ ಅಥವಾ ವಿಭೂತಿಯನ್ನು ಹಚ್ಚುವುದರಿಂದ ಉರಿಬಿಸಿಲಿನಿಂದಾಗುವ ತಲೆನೋವು ಕಡಿಮೆ ಆಗುತ್ತದೆ. ಮೂರನೇ ಕಣ್ಣು ನಿಮ್ಮ ಅಂತರ್ಮನಸ್ಸನ್ನು ಪ್ರತಿನಿಧಿಸುತ್ತಿದ್ದು ಅದು ನಿಮ್ಮ ಮನಸ್ಸಿನಲ್ಲಿನ ವಿಚಾರಗಳ ಮಾಧ್ಯಮದಿಂದ ಕಾರ್ಯನಿರತವಾಗಿರುತ್ತದೆ. ನಿಮ್ಮ ದೇಹದಲ್ಲಿನ ಈ ಚಕ್ರದಲ್ಲಿ ನಕಾರಾತ್ಮಕ ವಿಚಾರಗಳಿಂದ ನಕಾರಾತ್ಮಕ ಊರ್ಜೆಯು ದೇಹದಲ್ಲಿ ಪ್ರವೇಶಿಸುತ್ತಿರುತ್ತದೆ; ಆದರೆ ಅಲ್ಲಿ ವಿಭೂತಿ ಹಚ್ಚುವುದರಿಂದ ನಕಾರಾತ್ಮಕ ಊರ್ಜೆಯು ದೇಹದಲ್ಲಿ ಪ್ರವೇಶಿಸದಂತೆ ತಡೆಯಬಹುದು.

೨. ವಿಭೂತಿಯನ್ನು ಹಚ್ಚುವುದರಿಂದ ದೇಹದ ಅನಗತ್ಯ ತೇವಾಂಶವನ್ನು ಅದು ಹೀರಿಕೊಂಡು ಶೀತದಿಂದಲೂ ರಕ್ಷಣೆ ಮಾಡುತ್ತದೆ.

೩. ಒಂದು ವೇಳೆ ನಿಮ್ಮ ದೇಹದಲ್ಲಿ ಊರ್ಜೆಯ ಸ್ರೋತವು ಪ್ರವಹಿಸುವುದರಲ್ಲಿ ಅಡತಡೆಗಳಿದ್ದರೆ, ವಿಭೂತಿ ಹಚ್ಚುವುದರಿಂದ ದೇಹದಲ್ಲಿ ಊರ್ಜೆಯ ಸ್ರೋತವನ್ನು ಪ್ರವೇಶಿಸುವ ಬಾಗಿಲುಗಳು ತೆರೆಯುತ್ತವೆ ಮತ್ತು ನೈಸರ್ಗಿಕ ಊರ್ಜೆಯನ್ನು ಪೂರೈಸುತ್ತದೆ.

೪. ದೇವಸ್ಥಾನ ಅಥವಾ ಪವಿತ್ರ ಸ್ಥಳಗಳಿಗೆ ಹೋದಾಗ ಪ್ರಸಾದವೆಂದು ವಿಭೂತಿಯನ್ನು ಕೊಡಲಾಗುತ್ತದೆ. ಇದೊಂದು ರೀತಿಯ ಪವಿತ್ರ ಭಸ್ಮವಾಗಿದೆ. ಈ ವಿಭೂತಿಯನ್ನು ಕೊಟ್ಟ ನಂತರ ನಾವು ಮೊದಲು ಹಣೆಗೆ ಹಚ್ಚುತ್ತೇವೆ ಮತ್ತು ಅದರಲ್ಲಿನ ಚಿಟಿಕೆಯಷ್ಟನ್ನು ನಾಲಿಗೆಯ ಮೇಲೆ ಇಡುತ್ತೇವೆ, ಆದ್ದರಿಂದ ವಿಭೂತಿಯ ಪವಿತ್ರದ ಕಣಗಳು ನಮ್ಮ ದೇಹದಲ್ಲಿ ಹೋಗುತ್ತವೆ.

೫. ವಿಭೂತಿಯನ್ನು ಬಲಗೈಯಲ್ಲಿ ತೆಗೆದುಕೊಳ್ಳಬೇಕು, ಅದನ್ನು ಗೌರವಿಸಬೇಕು.ದೇಶದಲ್ಲಿನ ಕೆಲವು ದೇವಸ್ಥಾನಗಳಲ್ಲಿ ಪ್ರಸಾದವೆಂದು ವಿಭೂತಿಯನ್ನು ಕೊಡಲಾಗುತ್ತದೆ.

ಭಸ್ಮದ ಬೆಟ್ಟ 

ಶ್ರೀ ಕ್ಷೇತ್ರ ಗಾಣಗಾಪುರದಲ್ಲಿನ ಭಸ್ಮದ ಬೆಟ್ಟವು ನಿಮಗೆ ಗೊತ್ತಿದೆಯೇ ? ಭಗವಾನ ಪರಶುರಾಮನು ಜಗತ್ತಿನ ಕಲ್ಯಾಣಕ್ಕಾಗಿ ಇಲ್ಲಿ ದೊಡ್ಡ ಯಜ್ಞವನ್ನು ಮಾಡಿದ್ದನು. ಆ ಯಜ್ಞದಲ್ಲಿನ ವಿಭೂತಿ ಸಂಗ್ರಹವಾಗಿ ಅಲ್ಲಿ ಒಂದು ಬೆಟ್ಟ ಸಿದ್ಧವಾಯಿತು. ಅನೇಕ ವರ್ಷಗಳಿಂದ ಭಕ್ತರು ಈ ವಿಭೂತಿ ಅಥವಾ ಪವಿತ್ರ ಬೂದಿಯನ್ನು ಒಯ್ಯುತ್ತಾರೆ; ಆದರೂ ಆ ಬೆಟ್ಟವು ಇದ್ದ ಹಾಗೆಯೇ ಇದೆ. ಶ್ರೀಕ್ಷೇತ್ರ ಗಾಣಗಾಪುರದಲ್ಲಿನ ಈ ವಿಭೂತಿ ಅಥವಾ ಪವಿತ್ರವಾದ ಭಸ್ಮವು ಅಲ್ಲಿನ ಮುಖ್ಯ ಗುರುಪ್ರಸಾದವಾಗಿದೆ.

– ಶ್ರೀ. ಯಶವಂತ ನಾಯಿಕ, ಮಲೇಷ್ಯಾ