೨೧ ನೇ ಶತಮಾನದ ’ಇಂಧನ ಯುದ್ಧ’ : ತೈಲ, ಅನಿಲ ಮತ್ತು ಜಾಗತಿಕ ಬಲಾಢ್ಯ ಶಕ್ತಿ ಇವುಗಳ ನಡುವಿನ ಬದಲಾಗುತ್ತಿರುವ ಸಂಘರ್ಷ !

ಸಾಮ್ರಾಜ್ಯಗಳ ಉದಯ ಮತ್ತು ಪತನವು ಅನೇಕ ಬಾರಿ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಅವಲಂಬಿಸಿರುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಔದ್ಯೋಗಿಕ ಕ್ರಾಂತಿಯ ನಂತರ ತೈಲವು ಜಾಗತಿಕ ಆರ್ಥಿಕತೆಯ ಜೀವಾಳವಾಗಿದೆ. ಇಂದಿನ ಡಿಜಿಟಲ್ ಮತ್ತು ತಂತ್ರಜ್ಞಾನದ ಪ್ರಾಬಲ್ಯದ ಯುಗದಲ್ಲೂ ವಿಶ್ವದ ಯಂತ್ರೋಪಕರಣಗಳು, ಸಾರಿಗೆ ಮತ್ತು ಮಿಲಿಟರಿ ವ್ಯವಸ್ಥೆಗಳು ತೈಲ ಹಾಗೂ ಅನಿಲದ ಮೇಲೆ ಅವಲಂಬಿತವಾಗಿವೆ. ಜಗತ್ತು ಹೊಸ ಇಂಧನ ಮೂಲಗಳತ್ತ ಸಾಗುತ್ತಿದ್ದರೂ, ತೈಲಕ್ಕಾಗಿ ನಡೆಯುವ ಸಂಘರ್ಷವು ಮುಗಿದಿಲ್ಲ; ಬದಲಾಗಿ ಅದು ಹೊಸ ಮತ್ತು ಹೆಚ್ಚು ಸಂಕೀರ್ಣ ರೂಪವನ್ನು ಪಡೆದುಕೊಂಡಿದೆ ಎಂಬುದು ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಸ್ಪಷ್ಟವಾಗುತ್ತದೆ.

೧. ತೈಲಕ್ಕಾಗಿ ಜಾಗತಿಕ ಬಲಾಢ್ಯ ಶಕ್ತಿಗಳು ನೇರ ಯುದ್ಧದ ಬದಲು ‘ಗ್ರೇ ಝೋನ್ ವಾರ್ ಫೇರ್’ (ಹಸಿರು ವಲಯ ಯುದ್ಧತಂತ್ರ) ಅವಲಂಬಿಸುವುದು

ಇಂದಿನ ಯುಗದಲ್ಲಿ ಅಮೇರಿಕ, ರಷ್ಯಾ ಮತ್ತು ಚೀನಾದಂತಹ ಜಾಗತಿಕ ಬಲಾಢ್ಯ ಶಕ್ತಿಗಳ ನಡುವೆ ಪೂರ್ಣ ಪ್ರಮಾಣದ ‘ಮಹಾಯುದ್ಧ’ ನಡೆಯುವ ಸಾಧ್ಯತೆ ಬಹಳ ಕಡಿಮೆ ಇದೆ. ಇದಕ್ಕೆ ಮುಖ್ಯ ಕಾರಣ ಪರಮಾಣು ಶಸ್ತ್ರಗಳ ಭಯ ಮತ್ತು ಪರಸ್ಪರ ಆರ್ಥಿಕ ಅವಲಂಬನೆಯಾಗಿದೆ. ಒಂದು ವೇಳೆ ಈ ದೇಶಗಳು ತೈಲಕ್ಕಾಗಿ ನೇರವಾಗಿ ಸಂಘರ್ಷಕ್ಕೆ ಇಳಿದರೆ, ಜಾಗತಿಕ ಪೂರೈಕೆ ಸರಪಳಿಯು ಸಂಪೂರ್ಣವಾಗಿ ಕುಸಿಯುತ್ತದೆ ಮತ್ತು ವಿಜಯಿಯಾದ ದೇಶಕ್ಕೂ ದೊಡ್ಡ ಮಟ್ಟದ ಆರ್ಥಿಕ ಹಾನಿಯಾಗುತ್ತದೆ. ಆದಾಗ್ಯೂ, ನೇರ ಮಿಲಿಟರಿ ಸಂಘರ್ಷದ ಅನುಪಸ್ಥಿತಿಯ ಅರ್ಥ ಶಾಂತಿ ಸ್ಥಾಪನೆಯಾಗಬಹುದು  ಎಂದಲ್ಲ. ಬಲಾಢ್ಯ ಮಹಾಶಕ್ತಿಗಳು ಈಗ ‘ಗ್ರೇ ಝೋನ್ ವಾರ್‌ಫೇರ್’ ಮೊರೆ ಹೋಗುತ್ತಿವೆ. ಇದರಲ್ಲಿ ವೆನೆಜುವೆಲಾದಂತಹ ದೇಶಗಳಲ್ಲಿ ಆಡಳಿತ ಬದಲಾವಣೆಯ ಪ್ರಯತ್ನಗಳು, ಮಧ್ಯಪ್ರಾಚ್ಯದ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಮತ್ತು ಸಮುದ್ರ ಮಾರ್ಗಗಳ ಮೇಲೆ ನಿಯಂತ್ರಣ ಸಾಧಿಸುವುದು ಸೇರಿದೆ.

೨. ವೆನೆಜುವೆಲಾ ವಿಶ್ವ ಶಕ್ತಿಗಳಿಗೆ ಆರ್ಥಿಕ ಮತ್ತು ರಾಜತಾಂತ್ರಿಕ ಚದುರಂಗದಾಟದ ಕೇಂದ್ರ

ವೆನೆಜುವೆಲಾ ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ, ಆದರೂ ಅದು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ತೈಲ ಸಂಪನ್ಮೂಲಗಳು ಒಂದು ದೇಶಕ್ಕೆ ‘ವರದಾನ’ ವಾಗುವ ಬದಲು ‘ಶಾಪ’ವಾಗಿ ಹೇಗೆ ಪರಿಣಮಿಸುತ್ತವೆ ಎಂಬುದಕ್ಕೆ ಅಲ್ಲಿನ ಬಿಕ್ಕಟ್ಟು ಒಂದು ಉತ್ತಮ ಉದಾಹರಣೆಯಾಗಿದೆ. ಸದ್ಯ ಅಲ್ಲಿನ ಸರಕಾರದ ಮೇಲೆ ಒತ್ತಡ ಹೇರಲು ಅಮೆರಿಕಾ ಪ್ರಜಾಪ್ರಭುತ್ವದ ಹೆಸರಿನಲ್ಲಿ ಆರ್ಥಿಕ ದಿಗ್ಬಂಧನಗಳನ್ನು ಬಳಸುತ್ತಿದೆ. ರಷ್ಯಾ ಮತ್ತು ಚೀನಾ ದೇಶಗಳು ಇಲ್ಲಿ ಭಾರಿ ಹೂಡಿಕೆ ಮತ್ತು ಸಾಲದ ಮೂಲಕ ತಮ್ಮ ಉಪಸ್ಥಿತಿಯನ್ನು ತೋರಿಸುತ್ತಿವೆ. ಈ ಸಂಘರ್ಷವು ನೇರ ಯುದ್ಧಕ್ಕಿಂತ ’ಸೌಮ್ಯ ಯುದ್ಧ’ ಮತ್ತು ’ಆರ್ಥಿಕ ದಿಗ್ಬಂಧನ’ವಾಗಿದೆ. ವೆನೆಜುವೆಲಾದ ತೈಲವು ರಷ್ಯಾ ಅಥವಾ ಚೀನಾದ ಪ್ರಭಾವದಿಂದ ಮುಕ್ತವಾಗಿ ರುವುದನ್ನು ಖಚಿತಪಡಿಸಿಕೊಳ್ಳುವುದು ಅಮೆರಿಕದ ಗುರಿಯಾಗಿದೆ.

ಜಾಗತಿಕ ವಿಪತ್ತು ತಡೆಯಲು ‘ಇಂಧನ ರಾಜತಾಂತ್ರಿಕತೆ’ಗೆ ಆದ್ಯತೆ ನೀಡಬೇಕು

ಜಗತ್ತು ಸಂಪೂರ್ಣವಾಗಿ ಸ್ವತಂತ್ರವಾಗುವ ವರೆಗೆ ಮತ್ತು ವಿಕೇಂದ್ರೀಕೃತ ಇಂಧನ ಮೂಲಗಳನ್ನು (ಸೌರ ಮತ್ತು ಪವನಶಕ್ತಿ) ಅವಲಂಬಿಸುವ ವರೆಗೆ ತೈಲದ ಸುತ್ತ ಸುತ್ತುವ ಈ ಇಂಧನ ಯುದ್ಧಗಳು ಮಾನವಕುಲಕ್ಕೆ ಅಪಾಯವನ್ನು ತಂದೊಡ್ಡುತ್ತಲೇ ಇರುತ್ತವೆ. ಪ್ರಾದೇಶಿಕ ಸಂಘರ್ಷಗಳು ಜಾಗತಿಕ ವಿಪತ್ತುಗಳಾಗಿ ಬದಲಾಗುವುದನ್ನು ತಡೆಯಲು ಜಾಗತಿಕ ಸಮುದಾಯವು ಸಂಪನ್ಮೂಲಗಳ ನ್ಯಾಯಯುತ ವಿತರಣೆ ಮತ್ತು ‘ಇಂಧನ ರಾಜತಾಂತ್ರಿಕತೆ’ಗೆ ಆದ್ಯತೆ ನೀಡುವುದು ಅತ್ಯಾವಶ್ಯಕವಾಗಿದೆ.

– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.

೩. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇಂಧನವನ್ನು ಆಯುಧವಾಗಿ ಬಳಸುವ ಕುರಿತು ರಷ್ಯಾ ಮತ್ತು ಅಮೆರಿಕದ ನೀತಿ

೨೧ ನೇ ಶತಮಾನದ ಅತಿ ದೊಡ್ಡ ಇಂಧನ ಸಂಘರ್ಷವು ರಷ್ಯಾ-ಉಕ್ರೇನ್ ಯುದ್ಧದ ರೂಪದಲ್ಲಿ ಹೊರಹೊಮ್ಮಿದೆ. ಇಲ್ಲಿನ ಸಂಘರ್ಷ ಕೇವಲ ಭೂಮಿಗಾಗಿ ಮಾತ್ರವಲ್ಲ, ಯುರೋಪಿನ ಇಂಧನ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿಯೂ ಆಗಿದೆ.

ಅ. ಇಂಧನವನ್ನು ಆಯುಧವಾಗಿ ಬಳಸುವುದು : ರಷ್ಯಾ ’ನೋರ್ಡ್ ಸ್ಟ್ರೀಮ್ ಪೈಪ್‌ಲೈನ್’ ಮೂಲಕ ಯುರೋಪ್‌ಗೆ ಪೂರೈಕೆಯಾಗುವ ಅನಿಲವನ್ನು ಸ್ಥಗಿತಗೊಳಿಸಿ ಅದನ್ನು ಇಂಧನ ಆಯುಧವಾಗಿ ಬಳಸಿತು.

. ಅಮೆರಿಕಕ್ಕೆ ಲಾಭ : ಈ ಬಿಕ್ಕಟ್ಟಿನಿಂದಾಗಿ ಅಮೆರಿಕವು ಯುರೋಪ್‌ಗೆ ಪ್ರಮುಖ ದ್ರವ ನೈಸರ್ಗಿಕ ಅನಿಲ (ಎಲ್.ಎನ್.ಜಿ.) ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು.

ಇ. ಅಮೆರಿಕದಿಂದ ‘ಪ್ರಾಕ್ಸಿ’ (ಪರೋಕ್ಷ) ಯುದ್ಧ : ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ನೆರವು ಮತ್ತು ರಷ್ಯಾದ ಮೇಲೆ ಹೇರಲಾದ ಸಾವಿರಾರು ನಿರ್ಬಂಧಗಳು ಈ ಆಧುನಿಕ ಇಂಧನ ಯುದ್ಧದ ಭಾಗವಾಗಿವೆ.

೪. ಆಧುನಿಕ ಇಂಧನ ಯುದ್ಧದ ಹೊಸ ಶಸ್ತ್ರಗಳು

ಇಂದಿನ ಯುಗದಲ್ಲಿ ‘ಟ್ಯಾಂಕ್‌ಗಳು’ ಮತ್ತು ‘ಕ್ಷಿಪಣಿ’ಗಳಿಗಿಂತ ಈ ಕೆಳಗಿನ ವಿಧಾನಗಳು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗುತ್ತಿವೆ:

ಅ. ಆರ್ಥಿಕ ನಿಬಂಧಗಳು : ಇರಾನ್ ಮತ್ತು ರಷ್ಯಾದ ಮೇಲಿನ ನಿರ್ಬಂಧಗಳಿಂದಾಗಿ ಅವರ ತೈಲ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಒಂದೇ ಒಂದು ಗುಂಡು ಹಾರಿಸದೆ ದೇಶವನ್ನು ಮಂಡಿಯೂರಿಸುವ ಮಾರ್ಗವಿದು.

ಆ. ಸೈಬರ್ ಕಾರ್ಯಾಚರಣೆ : ಶತ್ರು ದೇಶದ ತೈಲ ಶುದ್ಧೀಕರಣ ಘಟಕಗಳು ಅಥವಾ ’ಪವರ್ ಗ್ರಿಡ್’ಗಳ ಮೇಲೆ ಸೈಬರ್ ದಾಳಿ ನಡೆಸುವುದು ಈಗ ಯುದ್ಧದ ಹೊಸ ಆಯಾಮಗಳಾಗಿವೆ.

ಇ. ಖಾಸಗಿ ಸೈನ್ಯ : ರಷ್ಯಾದ ‘ವಾಗನರ್’ ಸಮೂಹದಂತಹ ಖಾಸಗಿ ಮಿಲಿಟರಿ ಸಂಸ್ಥೆಗಳು ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ತೈಲ ಸಮೃದ್ಧ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿವೆ. ಇದರಿಂದಾಗಿ ರಷ್ಯಾ ಸರಕಾರಕ್ಕೆ ನೇರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ. ಸಮುದ್ರ ದಿಗ್ಬಂಧನ : ಜಾಗತಿಕ ಬಲಾಢ್ಯ ಶಕ್ತಿಗಳು ದಕ್ಷಿಣ ಚೀನಾ ಸಮುದ್ರ ಮತ್ತು ಹಾರ್ಮುಜ್ ಜಲಸಂಧಿಯಂತಹ ಸಮುದ್ರ ಮಾರ್ಗಗಳಲ್ಲಿ ನೌಕಾಪಡೆಯ ಒತ್ತಡವನ್ನು ಹೇರಿ ಇಂಧನ ಪೂರೈಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ.

೫. ಮಧ್ಯಪ್ರಾಚ್ಯವು ಸಂಘರ್ಷದ ಪಾರಂಪರಿಕ ಕೇಂದ್ರ

ಇರಾಕ್, ಲಿಬಿಯಾ ಮತ್ತು ಸಿರಿಯಾದ ಸಂಘರ್ಷಗಳ ಹಿಂದೆ ತೈಲವು ಪ್ರಮುಖ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಹಗೆತನವು ಅನೇಕ ಬಾರಿ ತೈಲ ಬೆಲೆಗಳು ಮತ್ತು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ‘ಪ್ರಾಕ್ಸಿ ಸಂಘರ್ಷಗಳು’ (ಉದಾಹರಣೆಗೆ, ಯೆಮನ್‌ನ ಹೂತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವೆ) ಮೂಲಭೂತವಾಗಿ ಇಂಧನ ಮೂಲಗಳು ಮತ್ತು ಆಯಕಟ್ಟಿನ ಮಾರ್ಗಗಳ ನಿಯಂತ್ರಣಕ್ಕಾಗಿ ನಡೆಯುವ ಹೋರಾಟಗಳಾಗಿವೆ.

೬. ಭವಿಷ್ಯದಲ್ಲಿ ತೈಲದಂತೆಯೇ ಪ್ರಮುಖ ಖನಿಜಗಳಿಗಾಗಿ ಸಂಘರ್ಷ

ಜಗತ್ತು ಸ್ವಚ್ಛ ಇಂಧನದತ್ತ ಸಾಗುತ್ತಿದ್ದಂತೆ, ಈ ಸಂಘರ್ಷದ ಗಮನವು ತೈಲದಿಂದ ಲಿಥಿಯಂ, ಕೋಬಾಲ್ಟ್ ಮತ್ತು ತಾಮ್ರದಂತಹ ಖನಿಜಗಳತ್ತ ವಲಸೆ ಹೋಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಬ್ಯಾಟರಿಗಳಿಗಾಗಿ ಈ ಖನಿಜಗಳ ಮೇಲೆ ನಿಯಂತ್ರಣ ಸಾಧಿಸುವುದು ಭವಿಷ್ಯದ ’ಹೊಸ ತೈಲ ಯುದ್ಧ’ವಾಗಲಿದೆ. ಚೀನಾ ಈಗಾಗಲೇ ಈ ಸಂಪನ್ಮೂಲಗಳ ಮೇಲೆ ತನ್ನ ಹಿಡಿತವನ್ನು ಬಲಪಡಿಸಿದೆ. ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.

೭. ಸಾರಾಂಶ

೨೧ ನೇ ಶತಮಾನದಲ್ಲಿ ಇಂಧನ ಯುದ್ಧವು ಮುಗಿದಿಲ್ಲ; ಆದರೆ ಅದು ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯವಾಗಿದೆ. ಜಾಗತಿಕ ಬಲಾಢ್ಯ ಶಕ್ತಿ ಈಗ ನೇರವಾಗಿ ಯುದ್ಧಭೂಮಿಗೆ ಪ್ರವೇಶಿಸುವ ಬದಲು ನಿರ್ಬಂಧಗಳು, ಪರೋಕ್ಷ ಗುಂಪುಗಳು ಮತ್ತು ಆರ್ಥಿಕ ಒತ್ತಡಗಳ ಮೂಲಕ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿವೆ. ತೈಲ ಮತ್ತು ಅನಿಲವು ಕೇವಲ ಇಂಧನಗಳಲ್ಲ, ಅವು ಭೂ-ರಾಜಕೀಯದ ಚದುರಂಗದಾಟದ ಕಾಯಿಗಳಾಗಿವೆ.

– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.