೧೪ ಜನವರಿ ೨೦೨೬ ರಂದು ಮಕರಸಂಕ್ರಾಂತಿ ಇದೆ. ಆ ನಿಮಿತ್ತ…

೧. ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣ (ಪ್ರವೇಶ)
‘ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ‘ಸಂಕ್ರಾಂತಿ’ ಎಂದು ಕರೆಯಲಾಗುತ್ತದೆ. ವರ್ಷದಲ್ಲಿ ಒಟ್ಟು ೧೨ ಸಂಕ್ರಾಂತಿಗಳು ಬರುತ್ತವೆ. ಅವುಗಳಲ್ಲಿ ಆಷಾಢ ಮತ್ತು ಪುಷ್ಯ ಮಾಸದ ಸಂಕ್ರಾಂತಿಗಳು ಅತ್ಯಂತ ಪ್ರಮುಖವಾಗಿವೆ ಎಂದು ಪರಿಗಣಿಸಲಾಗುತ್ತದೆ; ಆಷಾಢದಲ್ಲಿ ಸೂರ್ಯನು ಕರ್ಕ ರಾಶಿಯನ್ನು ಪ್ರವೇಶಿಸಿದಾಗ ದಕ್ಷಿಣಾಯನ ಆರಂಭವಾಗುತ್ತದೆ ಮತ್ತು ಪುಷ್ಯ ಮಾಸದಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಉತ್ತರಾಯಣ ಆರಂಭವಾಗುತ್ತದೆ. ಭಾರತೀಯರು ಮಕರ ಸಂಕ್ರಮಣವನ್ನು ಹೆಚ್ಚು ಮಹತ್ವದ್ದಾಗಿದೆ ಎಂದು ತಿಳಿಯುತ್ತಾರೆ. ಅದು ಅತ್ಯಂತ ಪುಣ್ಯಕಾಲವೆಂದು ಪರಿಗಣಿಸಲಾಗುತ್ತದೆ. ಈ ಉತ್ತರಾಯಣದ ಮಹಿಮೆ ಎಷ್ಟೆಂದರೆ, ಇಚ್ಛಾಮರಣಿಯಾದ ಭೀಷ್ಮ ಪಿತಾಮಹರು ಪ್ರಾಣ ಬಿಡಲು ಉತ್ತರಾಯಣ ಬರುವವರೆಗೆ ಕಾದಿದ್ದರು. ‘ಉತ್ತರಾಯಣದಲ್ಲಿ ಮರಣ ಹೊಂದಿದರೆ ಉತ್ತಮ ಗತಿ ಸಿಗುತ್ತದೆ’ ಎಂಬ ನಂಬಿಕೆಯಿದೆ. ಕೇವಲ ಮರಣಾ ನಂತರ ಮಾತ್ರವಲ್ಲ, ಜೀವನದಲ್ಲೂ ಪ್ರಗತಿ ಹೊಂದಲು ಉತ್ತರಾಯಣದ ಸಕಾರಾತ್ಮಕ ಶಕ್ತಿಯೇ ಅವಶ್ಯಕವಾಗಿದೆ ! ಭಾರತೀಯರ ದೃಷ್ಟಿಯಲ್ಲಿ ಮಕರ ಸಂಕ್ರಮಣವು ಉತ್ತರ ಗೋಲಾರ್ಧದಲ್ಲಿ ವಾಸಿಸುವ ಭಾರತೀಯರಿಗೆ ಈ ಕಾಲದಲ್ಲಿ ಸೂರ್ಯನ ಪ್ರಕಾಶ ಮತ್ತು ಉಷ್ಣತೆಯ ಲಾಭ ಸಿಗುವುದರಿಂದ ಇದನ್ನು ಉತ್ಸವವಾಗಿ ಆಚರಿಸಲಾಗುತ್ತದೆ. ಆರ್ಯರು ಉತ್ತರ ಧ್ರುವದಲ್ಲಿ ವಾಸಿಸುತ್ತಿದ್ದರು. ಅವರಿಗೆ ಅದು ಹೆಚ್ಚು ಆನಂದದಾಯಕವಾಗಿರಬಹುದು.
ಡಿಸೆಂಬರ್ ೨೨ ರ ಸುಮಾರಿಗೆ ಸೂರ್ಯನು ಸಾಯನ ಧನು ರಾಶಿಯಿಂದ ಮಕರ ರಾಶಿಯಲ್ಲಿ ಮತ್ತು ನಂತರ ಸುಮಾರು ೨೩ ದಿನಗಳ ನಂತರ, ಅಂದರೆ ಜನವರಿ ೧೪ ರ ಸುಮಾರಿಗೆ ಮಕರ ರಾಶಿಯಲ್ಲಿ ಪ್ರವೇಶಿಸುತ್ತಾನೆ. ಶುದ್ಧ ನಿರಾಯನ ಪಂಚಾಂಗಗನುಸಾರ (ಟಿಳಕ ಪಂಚಾಂಗ) ಜನವರಿ ೧೦ ರಂದು ಪ್ರವೇಶವಾಗುತ್ತದೆ. ಸಾಮಾನ್ಯವಾಗಿ ೧೯೧೫ ರ ಸುಮಾರಿಗೆ ಈ ಸಂಕ್ರಮಣವು ಜನವರಿ ೧೩ ರಂದು ಬರುತ್ತಿತ್ತು. ಸದ್ಯ ಅದು ಜನವರಿ ೧೪ ರಂದು ಬರುತ್ತದೆ ಮತ್ತು ನಿಧಾನವಾಗಿ ಮುಂದೆ ಜನವರಿ ೧೫ ರಂದು ಬರಲಿದೆ.
೨. ಮಕರಸಂಕ್ರಾಂತಿ ಹಬ್ಬವನ್ನು ಆಚರಿಸುವ ಪದ್ಧತಿ
ಈ ಹಬ್ಬವು ಸೂರ್ಯನಿಗೆ ಅವಲಂಬಿಸಿದೆ. ಇತರ ಹಬ್ಬಗಳು ಚಂದ್ರಮಾಸಕ್ಕೆ ಅವಲಂಬಿಸಿರುತ್ತವೆ. ಇದು ಆನಂದದ ಹಬ್ಬವಾಗಿದೆ. ಸಂಕ್ರಾಂತಿಯ ಕುಲಾಚಾರವು ೩ ದಿನಗಳದ್ದಾಗಿದೆ. ಮಕರಸಂಕ್ರಾಂತಿಯ ಹಿಂದಿನ ದಿನವನ್ನು ‘ಭೋಗಿ’ ಎಂದು ಆಚರಿಸಲಾಗುತ್ತದೆ. ಅಂದು ಎಳ್ಳು ಹಚ್ಚಿದ ರೊಟ್ಟಿ, ಹೆಸರುಬೇಳೆ ಕಿಚಡಿ ಮತ್ತು ತರಕಾರಿ ಪಲ್ಯಗಳನ್ನು ಸೂರ್ಯನಿಗೆ ನೈವೇದ್ಯ ಮಾಡಿ ಪ್ರಸಾದವಾಗಿ ಸೇವಿಸಲಾಗುತ್ತದೆ. ಇದು ಉಪಭೋಗದ ಹಬ್ಬವಾಗಿರುವುದರಿಂದ ಇದನ್ನು ‘ಭೋಗಿ’ ಎಂದು ಕರೆಯುತ್ತಾರೆ. ಸಂಕ್ರಾಂತಿಯ ಸಮಯದಲ್ಲಿರುವ ಚಳಿಯಿಂದ ಈ ಹಬ್ಬದಲ್ಲಿ ಎಳ್ಳಿಗೆ ತುಂಬಾ ಮಹತ್ವವಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಎಳ್ಳಿನ ಎಣ್ಣೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಯಿಂದ ಮೈ ಒಡೆಯವುದು, ಮಸಾಜ್, ಕೂದಲುಗಳ ಬೆಳವಣಿಗೆ ಇವುಗಳಿಗಾಗಿ ಎಳ್ಳಿನ ಎಣ್ಣೆ ಉತ್ತಮ ! ಎಳ್ಳಿನಲ್ಲಿನ ಸ್ನೇಹ ಮತ್ತು ಬೆಲ್ಲದ ಸಿಹಿ ಎಂದು ಎಳ್ಳುಬೆಲ್ಲವನ್ನು ಹಂಚುತ್ತಾರೆ. ಬೆಲ್ಲದಲ್ಲಿ ಕಬ್ಬಿಣದ ಅಂಶವಿರುತ್ತದೆ ಮತ್ತು ಬೆಲ್ಲವು ಸಕ್ಕರೆಗಿಂತ ಒಳ್ಳೆಯದು.
೩. ಸಂಕ್ರಾಂತಿ ಮತ್ತು ಕಿಂಕ್ರಾಂತಿಯ ಹಿಂದಿನ ಪೌರಾಣಿಕ ಕಥೆ
ಸಂಕರಾಸುರ ಮತ್ತು ಕಿಂಕರಾಸುರ ಎಂಬ ಇಬ್ಬರು ದೈತ್ಯರು ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದರು. ದೇವಿಯು ಸಂಕರಾಸುರನನ್ನು ಸಂಹರಿಸಿದಳು ಮತ್ತು ಮರುದಿನ ಕಿಂಕರಾಸುರನನ್ನು ಸಂಹರಿಸಿದಳು. ಇಬ್ಬರೂ ಪ್ರಾಣವನ್ನು ಬಿಡುವಾಗ ದೇವಿಯ ಕಡೆಗೆ ನೋಡಿ ಕೈ ಜೋಡಿಸಿದರು; ಆದ್ದರಿಂದ ಈ ಕುಲಾಚಾರವನ್ನು ಇವರ ಹೆಸರಿನಿಂದ ಅಂದರೆ ‘ಸಂಕ್ರಾಂತಿ’ ಮತ್ತು ಮರುದಿನ ‘ಕಿಂಕ್ರಾಂತಿ’ ಎಂದು ಪ್ರಸಿದ್ಧವಾಯಿತು. ಕಿಂಕ್ರಾಂತಿಯನ್ನು ‘ಕರಿ’ದಿನವೆಂದೂ ಕರೆಯುತ್ತಾರೆ, ಇದನ್ನು ಶುಭ ಕಾರ್ಯಗಳಿಗೆ ಬಳಸುವುದಿಲ್ಲ.
೪. ಸಂಕ್ರಾಂತಿ ಬರುವುದು ಎಂದರೇನು ?
ಶಾಸ್ತ್ರದ ಭಾಗವೆಂದು ಪಂಚಾಂಗದಲ್ಲಿ ಸಂಕ್ರಾಂತಿಯ ಫಲವನ್ನು ಕೊಡಲಾಗಿದೆ. ಅದರಲ್ಲಿ ದೇವಿಯ ವಾಹನ, ಶಸ್ತ್ರ, ವಸ್ತ್ರ, ಅವಸ್ಥೆ, ಅಲಂಕಾರ ಇಂತಹ ವಿವಿಧ ವಿಷಯಗಳನ್ನು ಕೊಟ್ಟಿರುತ್ತಾರೆ. ಗಣಿತದ ಲೆಕ್ಕಾಚಾರದ ಪ್ರಕಾರ ಮಳೆಯ ಮುನ್ಸೂಚನೆ ಮತ್ತು ಅದರಿಂದ ಉಂಟಾಗುವ ಸಮೃದ್ಧಿ ಅಥವಾ ಬರಗಾಲವನ್ನು ತಿಳಿಯಲು ಇದರ ಉಪಯೋಗವಾಗುತ್ತದೆ. ಪಂಚಾಂಗದಲ್ಲಿ ಅದರ ಚಿತ್ರವೂ ಇರುತ್ತದೆ. ಅವಳು ವಾಹನದಿಂದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನ ಕಡೆಗೆ ಹೋಗುತ್ತಾಳೆ ಮತ್ತು ಮೂರನೇ ದಿಕ್ಕಿನ ಕಡೆಗೆ ನೋಡುತ್ತಿರುತ್ತಾಳೆ. ‘ಅವಳು ಯಾವ ದಿಕ್ಕಿನಿಂದ ಬರುತ್ತಾಳೆಯೋ, ಆ ದಿಕ್ಕಿಗೆ ಸಮೃದ್ಧಿ ಮತ್ತು ಯಾವ ಕಡೆಗೆ ಹೋಗುತ್ತಾಳೆ ಮತ್ತು ನೋಡುತ್ತಾಳೆ ಆಕಡೆಗೆ ಸಂಕಟಗಳು ಬರುತ್ತವೆ’, ಎಂದು ತಿಳಿಯುತ್ತಾರೆ. ಈ ಎಲ್ಲ ಗಣಿತದ ಆಧಾರದ ಮೇಲೆ ಭವಿಷ್ಯವಾಣಿಯಾಗಿರುತ್ತದೆ. ‘ಸಂಕ್ರಾಂತಿಯು ಬರುವ ಕಡೆಗೆ ಸಂಕಟಗಳು ಬರುತ್ತವೆ, ಎಂಬ ನಂಬಿಕೆ ಇರುವುದರಿಂದ ಸಂಕ್ರಾಂತಿ ಬರುವುದು, ಅಂದರೆ ಸಂಕಟ ಬರುವುದು’, ಎಂಬ ಅರ್ಥದ (ವಾಕ್ಪ್ರಚಾರ) ನುಡಿಗಟ್ಟು ರೂಢಿಗೆ ಬಂದಿದೆ.
೫. ಸಂಕ್ರಾಂತಿಯ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಏಕೆ ಧರಿಸುತ್ತಾರೆ ?
ಮಕರ ಸಂಕ್ರಾಂತಿಯಂದು ಕಪ್ಪು ಬಣ್ಣಕ್ಕೆ ತುಂಬಾ ಮಹತ್ವವಿದೆ. ಇತರ ಯಾವ ಹಬ್ಬದಲ್ಲಿ ಈ ಬಣ್ಣವನ್ನು ಬಳಸುವುದಿಲ್ಲ; ಆದರೆ ಇದರ ಹಿಂದಿನ ಶಾಸ್ತ್ರೀಯ ಕಾರಣವೆಂದರೆ, ಶೀತ ಪ್ರದೇಶದಲ್ಲಿ ನಿಧಾನವಾಗಿ ಸೂರ್ಯನ ಪ್ರಕಾಶವು ಬೀಳತೊಡಗುವುದರಿಂದ ಬೆಚ್ಚಗಿರಲು ಕಪ್ಪು ಬಣ್ಣವನ್ನು ಬಳಸುತ್ತಾರೆ; ಏಕೆಂದರೆ ಕಪ್ಪು ಬಣ್ಣವು ಉಷ್ಣತೆ ಹೀರಿಕೊಳ್ಳುತ್ತದೆ; ಆದ್ದರಿಂದ ಮಹಿಳೆಯರು ಕಪ್ಪು ಬಣ್ಣದ ಸೀರೆಗಳನ್ನು ಉಟ್ಟು ಅರಿಶಿಣ-ಕುಂಕುಮವನ್ನು ನೀಡಿ ಎಳ್ಳುಬೆಲ್ಲ ಮತ್ತು ಕೆಲವು ವಸ್ತುಗಳನ್ನು ದಾನವಾಗಿ ಕೊಡುತ್ತಾರೆ.
೬. ‘ಮಡಕೆ’ಯ ಮಹತ್ವ
ಚಿನ್ನ ಮತ್ತು ಮಣ್ಣು ಈ ಎರಡು ವಿಧಗಳ ಪಾತ್ರೆಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಧಿಕ ಮಹತ್ವವಿದೆ. ಹುಲಿಯ ಹಾಲನ್ನು ಕೇವಲ ಚಿನ್ನದ ಪಾತ್ರೆಯಲ್ಲಿ ಮಾತ್ರ ಸಂಗ್ರಹಿಸಬಹುದು, ಎಂದು ಹೇಳುತ್ತಾರೆ. ಇತರ ಧಾತುಗಳು ಆ ಹಾಲಿನಲ್ಲಿ ಕರಗುತ್ತವೆ. ಮಣ್ಣಿನ ಮಡಕೆಯಲ್ಲಿ ಸುಗ್ಗಿಯ ದಿನಗಳಲ್ಲಿನ ಕಬ್ಬಿನ ತುಂಡುಗಳು, ಗೋದಿ, ಬೋರೆಹಣ್ಣುಗಳು, ಎಳ್ಳುಬೆಲ್ಲ, ಅರಿಶಿನ-ಕುಂಕುಮ, ಕರ್ಪುರ, ದಕ್ಷಿಣೆ ಹಾಕಿ ಅದರ ಮೇಲೆ ಅರಿಶಿಣ-ಕುಂಕುಮದ ರೇಖೆಯನ್ನು ಎಳೆದು ಮುತ್ತೈದೆಯರಿಗೆ ದಾನ ನೀಡುತ್ತಾರೆ. ಮಣ್ಣು ನಮ್ಮ ಜೀವನದಲ್ಲಿನ ಮಹತ್ವದ ಅಂಶವಾಗಿದೆ ! ಜನ್ಮ-ಮೃತ್ಯುವಿನ ಸ್ಥಳಗಳಲ್ಲಿ ಮಣ್ಣಿನ ಮಡಕೆಗೆ ತುಂಬಾ ಮಹತ್ವವಿದೆ. ಇಂದು ವೈಜ್ಞಾನಿಕ ಪ್ರಯೋಗಗಳು ‘ಮಣ್ಣಿನ ಪಾತ್ರೆಯಲ್ಲಿನ ಪದಾರ್ಥಗಳು ಹೆಚ್ಚು ರುಚಿಕರ, ಕಡಿಮೆ ಎಣ್ಣೆಯ ಬಳಕೆ, ಆರೋಗ್ಯಕ್ಕೆ ಪೌಷ್ಟಿಕವೆಂದು ಸಾಬೀತುಪಡಿಸಿವೆ.
೭. ಭಾರತಾದ್ಯಂತ ಆಚರಿಸಲಾಗುವ ಸಂಕ್ರಾಂತಿ
ದೇಶದ ಎಲ್ಲ ಪ್ರದೇಶಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬಂಗಾಲದಲ್ಲಿ ಕಾಕಂಬಿ (ಬೆಲ್ಲದ ಮೂಲ ಸ್ಥಿತಿ) ಮತ್ತು ಎಳ್ಳಿನಿಂದ ಸಿದ್ಧಪಡಿಸಿದ ‘ತಿಳುವಾ’ ಈ ಪದಾರ್ಥ ಮತ್ತು ಅಕ್ಕಿಹಿಟ್ಟಿನಲ್ಲಿ ತುಪ್ಪ, ಸಕ್ಕರೆ ಹಾಕಿ ಮಾಡಿದ ‘ಪಿಷ್ಟಕ’ ಈ ಪದಾರ್ಥವನ್ನು ತಿನ್ನುತ್ತಾರೆ ಮತ್ತು ಹಂಚುತ್ತಾರೆ; ಆದ್ದರಿಂದ ಇದನ್ನು ‘ತಿಳುಕ್ಷಾ ಸಂಕ್ರಾಂತಿ’ ಮತ್ತು ‘ಪಿಷ್ಟಕ ಸಂಕ್ರಾಂತಿ’, ಎಂದು ಕರೆಯುತ್ತಾರೆ. ದಕ್ಷಿಣದ ಕಡೆಗೆ ಕೆಲವೆಡೆ ಸಂಕ್ರಾಂತಿಗೆ ‘ಪೊಂಗಲ್’ ಎಂದು ಕರೆಯುತ್ತಾರೆ. ‘ಈ ದಿನದಂದು ಮಾಡಿದ ತೀರ್ಥಸ್ನಾನ, ದಾನಕ್ಕೆ ವಿಶೇಷ ಪುಣ್ಯವೆಂದು ನಂಬುತ್ತಾರೆ; ಆದ್ದರಿಂದ ಎಳ್ಳಿನಂತೆ ಸ್ನಿಗ್ಧತೆ ಮತ್ತು ಬೆಲ್ಲದಂತೆ ಸಿಹಿಯ ಸಂಕೇತವಾಗಿರುವ ಎಳ್ಳುಬೆಲ್ಲವನ್ನು ಕೊಟ್ಟು ಪರಸ್ಪರರಲ್ಲಿನ ಸ್ನೇಹ ಮತ್ತು ಮಾಧುರ್ಯವನ್ನು ಹೆಚ್ಚಿಸಬೇಕು’, ಎಂಬ ಸಂದೇಶವನ್ನು ನೀಡುವ, ಸಮಾಜದ ದೃಷ್ಟಿಯಿಂದಲೂ ಮಹತ್ವವಾದ ಈ ಹಬ್ಬವು ಎಲ್ಲಡೆ ಉತ್ಸಾಹದಿಂದ ಆಚರಿಸುತ್ತಾರೆ. ನಾವು ಕೂಡ ‘ಎಳ್ಳುಬೆಲ್ಲ ತಿಂದು, ಒಳ್ಳೆ ಮಾತಾಡಿ, ಎಂದು ಹಾರೈಸುತ್ತ ಹಬ್ಬವನ್ನು ಆಚರಿಸೋಣ !’
– ದೀಪಾ ಜೋಶಿ (ಆಧಾರ : ಮಾಸಿಕ ‘ಜೇಷ್ಠವಿಶ್ವ’, ಜನೆವರಿ ೨೦೧೯)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು