ಆಗ ಎಲ್ಲಿ ಹೋಗಿತ್ತು ಸ್ತ್ರೀಗೌರವ ?

ಕೆಲವು ದಿನಗಳ ಹಿಂದೆ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಅವರು ಪಾಟಲಿಪುತ್ರದಲ್ಲಿ (ಪಾಟ್ನಾ) ಹೊಸದಾಗಿ ನೇಮಕಗೊಂಡ ‘ಆಯುಷ್ಯ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡುವಾಗ ಯುನಾನಿ ಡಾ. ನುಸ್ರತ ಪರ್ವೀನ್‌ ಅವರ ಹಿಜಾಬ್‌ ಎಳೆದರು. ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳವು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ನಂತರ ಈ ವಿಷಯವು ದೇಶಾದ್ಯಂತ ವೇಗವಾಗಿ ಹರಡಿತು. ಇದರಿಂದ ವಿರೋಧ ಪಕ್ಷಗಳೂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ್‌ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾದವು. ಈ ಆಘಾತದಿಂದಾಗಿ ಡಾ. ನುಸ್ರತ ಪರ್ವೀನ್‌ ಬಿಹಾರದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ ಎಂಬ ಸುದ್ದಿಗಳು ದಿನಪತ್ರಿಕೆಗಳಲ್ಲಿ ಬಂದಿವೆ. ‘ಶಾಲಾ ಜೀವನದಿಂದ ಹಿಡಿದು ವೈದ್ಯಕೀಯ ಸೇವೆಗೆ ಸೇರುವವರೆಗೆ ನಾನು ನಿಯಮಿತವಾಗಿ ಹಿಜಾಬ್‌ ಧರಿಸುತ್ತಿದ್ದೇನೆ; ಆದರೆ ಇಂತಹ ಅನುಭವ ನನಗೆ ಇದೇ ಮೊದಲು’  ಎಂದು ಡಾ. ನುಸ್ರತ ಪರ್ವೀನ್‌ ಅವರ ಭಾವನಾತ್ಮಕ ಪ್ರತಿಕ್ರಿಯೆಯನ್ನೂ ಮಾಧ್ಯಮಗಳು ಪ್ರಕಟಿಸಿವೆ. ಒಬ್ಬ ಮಹಿಳೆಯ ಹಿಜಾಬ್‌ ಎಳೆಯುವುದು, ಅದೂ ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡುವುದು ಮುಖ್ಯಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿಗೆ ಶೋಭಿಸುವುದಿಲ್ಲ. ಈ ಘಟನೆಯ ನಂತರ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷದ ನಾಯಕರು ನಿತೀಶಕುಮಾರ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್‌ ಈ ಕೃತ್ಯವನ್ನು ‘ನಿರ್ಲಜ್ಜತನ, ‘ನೀಚ ಕೃತ್ಯ’ ಎಂದು ಕರೆದಿದೆ. ‘ಅವರು ಕ್ಷಮೆಯಾಚನೆಗೂ ಅರ್ಹರಲ್ಲ’ ಎಂದು ಹೇಳುತ್ತಾ ನಿತೀಶ ಕುಮಾರ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ. ನಿತೀಶ ಕುಮಾರ ಅವರ ಈ ಕೃತ್ಯವನ್ನು ಎಂದಿಗೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ; ಏಕೆಂದರೆ ಭಾರತೀಯ ಸಂಸ್ಕ್ರತಿಯು ಸ್ತ್ರೀಯರನ್ನು ಗೌರವಿಸುವುದನ್ನು ಕಲಿಸುತ್ತದೆ. ಆದ್ದರಿಂದ ಕಾಂಗ್ರೆಸ್‌, ರಾಷ್ಟ್ರೀಯ ಜನತಾ ದಳ ಅಥವಾ ಇತರ ವಿರೋಧ ಪಕ್ಷಗಳ ಟೀಕೆಗಳಲ್ಲಿ ತಪ್ಪೇನಿಲ್ಲ; ಆದರೆ ಒಬ್ಬ ಮುಸಲ್ಮಾನ ಮಹಿಳೆಯ ಹಿಜಾಬ್‌ ಎಳೆಯುವುದು ಅವಮಾನ ಎಂದಾದರೆ, ಸ್ತ್ರೀಯ ಮಾನಭಂಗ ಮಾಡುವುದು ಅದಕ್ಕಿಂತ ದೊಡ್ಡ ಅಪರಾಧ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇಂತಹ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯೇ ಆಗಬೇಕಲ್ಲ ? ನಿತೀಶ ಕುಮಾರ ಅವರ ಕೃತ್ಯ ತಪ್ಪು; ಆದರೆ ಸ್ತ್ರೀ ಯಾವ ಧರ್ಮದವಳು ಎಂಬುದರ ಆಧಾರದಲ್ಲಿ ಯಾರಾದರೂ ಅವಳ ಗೌರವದ ಮಟ್ಟವನ್ನು ನಿರ್ಧರಿಸುತ್ತಿದ್ದರೆ, ಅದು ಅದಕ್ಕಿಂತ ದೊಡ್ಡ ಅಪರಾಧವಾಗಿದೆ. ಕಾಂಗ್ರೆಸ್‌, ಸಾಮ್ಯವಾದಿ ಮತ್ತು ಪ್ರಗತಿಪರರು ಕಳೆದ ಹಲವು ವರ್ಷಗಳಿಂದ ಈ ಅಪರಾಧವನ್ನು ಮಾಡುತ್ತಿದ್ದಾರೆ. ಮುಸಲ್ಮಾನ ಮಹಿಳೆಯ ಹಿಜಾಬ್‌ ಎಳೆದಾಗ ಸ್ತ್ರೀಗೌರವದ ಬಗ್ಗೆ ಮಾತನಾಡುವವರು, ಸಾವಿರಾರು ಹಿಂದೂ ಯುವತಿಯರು ಲವ್‌ ಜಿಹಾದ್‌ ಬಲೆಯಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದರೂ ಒಂದೇ ಒಂದು ಮಾತನ್ನೂ ಹೇಳುವುದಿಲ್ಲ. ಹಾಗಾದರೆ, ಆ  ಸ್ತ್ರೀಯರ ಗೌರವ ಎಲ್ಲಿ ಹೋಗುತ್ತದೆ ?

ಮಹಿಳೆಯ ಗೌರವ ಹಿಂದೂ ಅಥವಾ ಮುಸಲ್ಮಾನ ಎಂಬುದರ ಮೇಲೆ ನಿರ್ಧಾರವಾಗುತ್ತದೆಯೇ ?

‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ? ಎಂಬ ಮತಾಂಧ ಸಂಘಟನೆಯು ಹಿಂದೂ ಧರ್ಮದ ಬ್ರಾಹ್ಮಣ, ಗುಜರಾತಿ, ಜೈನ್‌, ಸಿಕ್ಪ್ಖ್ಪ್, ಮರಾಠಿ ಮುಂತಾದ ಸಮುದಾಯಗಳ ಹಿಂದೂ ಯುವತಿಯರನ್ನು ಲವ್‌ ಜಿಹಾದ್‌ ನಲ್ಲಿ ಸಿಲುಕಿಸಲು ‘ರೇಟ್‌ ಕಾರ್ಡ’ ಘೋಷಿಸಿತ್ತು. ಕೆಲವು ವರ್ಷಗಳ ಹಿಂದೆ ಲವ್‌ ಜಿಹಾದ್‌ ಪ್ರಕರಣದಲ್ಲಿ ಬಂಧಿತನಾದ ಮುಸಲ್ಮಾನ ಯುವಕನ ಬಳಿಯೂ ‘ರೇಟ್‌ ಕಾರ್ಡ’ ಪತ್ತೆಯಾಗಿತ್ತು. ಅಂದು ಕಾಂಗ್ರೆಸ್‌ ಅಥವಾ ಸಾಮ್ಯವಾದಿಗಳಿಗೆ ಮಹಿಳೆಯರ ಗೌರವ ನೆನಪಾಗಲಿಲ್ಲ. ಡಾ. ನುಸ್ರತ ಪರ್ವೀನ ಅವರ ಗೌರವದ ಬಗ್ಗೆ ಮಾತನಾಡುವುದು ಕಾಂಗ್ರೆಸ್ಸಿನ ಕೇವಲ ನಾಟಕವಷ್ಟೇ. ಕಾಂಗ್ರೆಸ್ಸಿಗೆ ನಿಜವಾಗಿಯೂ ಮಹಿಳೆಯರ ಗೌರವದ ಬಗ್ಗೆ ಕಾಳಜಿ ಇದ್ದಿದ್ದರೆ, ಲವ್‌ ಜಿಹಾದ್‌ನಲ್ಲಿ ಸಿಲುಕಿದ ಹಿಂದೂ ಯುವತಿಯರಿಗೆ ನ್ಯಾಯ ಕೊಡಿಸಲು ಧ್ವನಿ ಎತ್ತುತ್ತಿತ್ತು. ಆದರೆ ಮಹಿಳೆ ಹಿಂದೂವೋ ಅಥವಾ ಮುಸಲ್ಮಾನಳೋ ಎಂಬುವುದರ ಮೇಲೆ ಕಾಂಗ್ರೆಸ್ಸಿನ ಸ್ತ್ರೀಗೌರವ ನಿರ್ಧಾರವಾಗುತ್ತದೆ.

ರಾಜಕೀಯ ಲಾಭದ ಮೇಲೆ ಸ್ತ್ರೀ ಗೌರವ ನಿರ್ಧಾರವಾಗುತ್ತದೆಯೇ ?

ವರ್ಷ ೨೦೧೪ ರಲ್ಲಿ ಜಾರ್ಖಂಡ್‌ನ ರಾಷ್ಟ್ರೀಯ ಶೂಟರ್‌ ತಾರಾ ಸಹದೇವ ಅವರೊಂದಿಗೆ ರಣಜಿತ ಕುಮಾರ ಕೊಹ್ಲಿ ಎಂಬ ಸುಳ್ಳು ಹೆಸರಿನಲ್ಲಿ ರಕಿಬುಲ್‌ ಹಸನ್‌ ಎಂಬ ಮುಸಲ್ಮಾನನು ಹಿಂದೂ ಪದ್ಧತಿಯಂತೆ ವಿವಾಹವಾದನು. ವಿವಾಹದ ನಂತರ ಅವನು ಮುಸಲ್ಮಾನ ಎಂದು ತಿಳಿದಾಗ ತಾರಾ ಸಹದೇವ ನ್ಯಾಯಾಲಯದ ಮೊರೆ ಹೋದರು. ಸುಮಾರು ೯ ವರ್ಷಗಳ ಕಾಲ ಅವರು ನ್ಯಾಯಾಂಗ ಹೋರಾಟ ಮಾಡಿದರು. ಕೊನೆಗೆ ೨೦೨೩ ರಲ್ಲಿ ವಿಶೇಷ  ಸಿಬಿಐ ನ್ಯಾಯಾಲಯವು ರಕಿಬುಲ ಹಸನಗೆ ಜೀವಾವಧಿ ಶಿಕ್ಷೆ ವಿಧಿಸಿತು. ಈ ಪ್ರಕರಣದಲ್ಲೂ ಕಾಂಗ್ರೆಸ್‌ ಮೌನವಾಗಿತ್ತು. ಇಂತಹ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿದ್ದರೂ, ದೌರ್ಜನ್ಯ ಮಾಡುವವರು ಮುಸಲ್ಮಾನರಾಗಿರುವುದರಿಂದ ಕಾಂಗ್ರೆಸ್ಸಿಗೆ ಅದು ಕ್ಷಮ್ಯ ಎನಿಸುತ್ತಿರಬಹುದು. ರಾಜಕೀಯ ಲಾಭದ ಲೆಕ್ಕಾಚಾರ ಹಾಕಿ ಸ್ತ್ರೀ ಗೌರವದ ನಿಲುವು ತಳೆಯುವುದು ಕಾಂಗ್ರೆಸ್ಸಿನ ನಿರ್ಲಜ್ಜತನವಾಗಿದೆ.

ಇದಕ್ಕೂ ಮೀರಿ ಕಾಂಗ್ರೆಸ್‌ ಎಷ್ಟ್ಟು ನಿರ್ಲಜ್ಜವಾಗಿದೆ ಎಂಬುದಕ್ಕೆ ಎಷ್ಟೋ ಉದಾಹರಣೆಗಳು ಸಿಗುತ್ತವೆ. ಡಾ. ನುಸ್ರತ ಪರ್ವೀನ ಅವರ ಹಿಜಾಬ್‌ ಎಳೆದ ನಿತೀಶ ಕುಮಾರ ಅವರು ರಾಜಕೀಯ ಶತ್ರು ಎಂಬ ಕಾರಣಕ್ಕಷ್ಟೇ ಕಾಂಗ್ರೆಸ್‌ ಟೀಕಿಸುತ್ತಿದೆ. ಒಂದು ವೇಳೆ ಡಾ. ಪರ್ವೀನ್‌ ಅವರ ಅವಮಾನವನ್ನು ಯಾರಾದರೂ ಮುಸಲ್ಮಾನರೇ ಮಾಡಿದ್ದರೆ, ಕಾಂಗ್ರೆಸ್‌ ನಾಯಕರು ಅಂದು ತುಟಿ ಬಿಚ್ಚುತ್ತಿರಲಿಲ್ಲ. ೨೦೧೫ ನೆ ಇಸ್ವಿಯಲ್ಲಿ ಉತ್ತರಾಖಂಡದ ಶಾಯರಾ ಬಾನೊ ಎಂಬ ಮುಸಲ್ಮಾನ ಮಹಿಳೆಗೆ ಆಕೆಯ ಪತಿ ರಿಜ್ವಾನ್‌ ಅಹ್ಮದ್‌ ಪತ್ರದ ಮೂಲಕ 3 ಬಾರಿ ತಲಾಖ್‌ ಎಂದು ಹೇಳಿ ವಿಚ್ಛೇದನ ನೀಡಿದ್ದನು. ಇದರ ವಿರುದ್ಧ ಶಾಯರಾ ಬಾನೊ ನ್ಯಾಯಾಲಯಕ್ಕೆ ಹೋದಾಗ ಕಾಂಗ್ರೆಸ್‌ ಅವರಿಗೆ ಬೆಂಬಲ ನೀಡಲಿಲ್ಲ. ಬದಲಾಗಿ ವರ್ಷ ೨೦೧೯ ರಲ್ಲಿ ಭಾಜಪ ಸರಕಾರವು ತ್ರಿವಳಿ ತಲಾಖ್‌ ವಿರುದ್ಧ ಮುಸಲ್ಮಾನ ಮಹಿಳಾ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆಯನ್ನು ತಂದಾಗ ಕಾಂಗ್ರೆಸ್‌ ಕಪಟತನದ ನಿಲುವು ತಳೆಯಿತು. ಈ ಕಾಯ್ದೆಯ ಮೂಲಕ ಮೌಖಿಕ, ಲಿಖಿತ, ?ಎಸ್‌.ಎಮ್. ಎಸ್ (ಕಿರುಸಂದೇಶ) ಅಥವಾ ವಾಟ್ಸಾಪ್‌ ಮೂಲಕ ನೀಡುವ ತ್ರಿವಳಿ ತಲಾಖ್‌ ಅನ್ನು ರದ್ದುಗೊಳಿಸಲಾಯಿತು. ಈ ಸಮಯದಲ್ಲಿ ಮುಸಲ್ಮಾನ ಮಹಿಳೆಯ ಮೇಲಿನ ಅನ್ಯಾಯಕ್ಕಿಂತಲೂ ಕಾಂಗ್ರೆಸ್ಸಿಗೆ ಮುಸಲ್ಮಾನ ಸಮಾಜದ ವೋಟ್‌ ಬ್ಯಾಂಕ್‌ (ಮತಪೆಟ್ಟಿಗೆಗಳು) ಮುಖ್ಯವಾಗಿತ್ತು. ಕಾಂಗ್ರೆಸ್ಸಿಗೆ ಮುಸಲ್ಮಾನ ಮಹಿಳೆಯರ ಗೌರವದ ಬಗ್ಗೆಯಲ್ಲ, ಬದಲಾಗಿ ಮುಸಲ್ಮಾನರ ಮತಗಳ ಬಗ್ಗೆ ಚಿಂತೆಯಿದೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ.

ಕಾಂಗ್ರೆಸ್ಸಿನ ಈ ಪರಂಪರೆ ಇಂದಿನದ್ದಲ್ಲ. ವರ್ಷ ೧೯೭೮ ರಲ್ಲಿ ಮಧ್ಯಪ್ರದೇಶದ ೬೨ ವರ್ಷದ ಶಾಬಾನೊ ಬೇಗಂ ಎಂಬ ಮುಸಲ್ಮಾನ ಮಹಿಳೆಗೆ ಆಕೆಯ ಪತಿ ಮಹಮ್ಮದ ಅಹ್ಮದ ಖಾನ್‌ ಮದುವೆಯಾದ ೪೦ ವರ್ಷಗಳ ನಂತರ ತ್ರಿವಳಿ ತಲಾಖ್‌ ನೀಡಿದ್ದನು. ಆ ಸಮಯದಲ್ಲಿ ಅವರಿಗೆ ೫ ಮಕ್ಕಳಿದ್ದರು. ಮುಸ್ಲಿಂ ಪರ್ಸನಲ್‌ ಲಾ ಪ್ರಕಾರ ವಿಚ್ಛೇದನದ ನಂತರ ಕೇವಲ ೩ ತಿಂಗಳು ಮಾತ್ರ ಜೀವನಾಂಶ ನೀಡಲು ಅವಕಾಶವಿದೆ; ಆದರೆ ಭಾರತವು ಜಾತ್ಯತೀತ ದೇಶ ಎಂದು ನಮೂದಿಸಿದ ಸರ್ವೋಚ್ಚ ನ್ಯಾಯಾಲಯವು, ಶಾಬಾನೊ ಅವರಿಗೆ ಜೀವನಾಂಶ ನೀಡುವಂತೆ ಮಹಮ್ಮದ ಖಾನ್‌ಗೆ ಆದೇಶಿಸಿತು. ಮುಸಲ್ಮಾನರ ಮತಗಳಿಗಾಗಿ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ವರ್ಷ ೧೯೮೬ ರಲ್ಲಿ ಮುಸ್ಲಿಂ ಮಹಿಳಾ (ವಿಚ್ಛೇದನ ಹಕ್ಕುಗಳ ರಕ್ಷಣೆ) ಕಾಯ್ದೆಯನ್ನು ಅಂಗೀಕರಿಸಿ ತ್ರಿವಳಿ ತಲಾಖ್‌ಗೆ ರಕ್ಷಣೆ ನೀಡಿದರು. ಈ ಕಾಯ್ದೆಯಿಂದಾಗಿ ಸರ್ವೋಚ್ಚ ನ್ಯಾಯಾಲಯವು ಶಾಬಾನೊ ಅವರಿಗೆ ನೀಡಿದ್ದ ತೀರ್ಪು ತಾನಾಗಿಯೇ ರದ್ದಾಯಿತು. ಕೇವಲ ಮುಸಲ್ಮಾನರ ಮತಗಳಿಗಾಗಿ ರಾಜೀವ ಗಾಂಧಿಯವರು ಒಬ್ಬ ವೃದ್ಧ ಮತ್ತು ಅಸಹಾಯಕ ಮಹಿಳೆಯ ಗೌರವವನ್ನೂ ಉಳಿಸಲಿಲ್ಲ. ಇಂತಹ ಪರಂಪರೆಯುಳ್ಳ ಕಾಂಗ್ರೆಸ್ಸಿಗೆ ಡಾ. ನುಸ್ರತ ಪರ್ವೀನ ಅವರ ಗೌರವದ ಬಗ್ಗೆಯಲ್ಲ, ಬದಲಾಗಿ ಮುಸಲ್ಮಾನರ ಮತಗಳ ಬಗ್ಗೆ ಕಾಳಜಿಯಿದೆ ಎಂಬುದನ್ನು ಗಮನಿಸಬೇಕಾಗಿದೆ, ವಿಷಯವು ಹಿಜಾಬ್‌ ಇರಲಿ, ತ್ರಿವಳಿ ತಲಾಖ್‌ ಇರಲಿ ಅಥವಾ ಮುಸಲ್ಮಾನರ ಓಲೈಕೆ ಇರಲಿ, ಭಾರತದಲ್ಲಿ ಮತಾಂಧತೆಯನ್ನು ಸಮಯಕ್ಕೆ ಸರಿಯಾಗಿ ಹತ್ತಿಕ್ಕುವುದೇ ಇದಕ್ಕೆ ಇರುವ ಏಕೈಕ ಪರಿಹಾರವಾಗಿದೆ.