ಮೆಕಾಲೆಯ ಮನಸ್ಥಿತಿಯನ್ನು ಬುಡಸಮೇತ ಕಿತ್ತೆಸೆಯಿರಿ !

ಆಂಗ್ಲ ಅಧಿಕಾರಿ ಲಾರ್ಡ್ ಮೆಕಾಲೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಧ್ವಜಾರೋಹಣದ ಕಾರ್ಯಕ್ರಮವು ನೆರವೇರಿತು. ಈ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ವಿಶೇಷವಾಗಿ ಆಂಗ್ಲ ಅಧಿಕಾರಿ ಲಾರ್ಡ್ ಮೆಕಾಲೆಯ ಬಗ್ಗೆ ಉಲ್ಲೇಖಿಸಿದರು. ‘ಮೆಕಾಲೆಯ ಮನಸ್ಥಿತಿ ಮತ್ತು ಗುಲಾಮಗಿರಿಯ ಸಂಕೋಲೆಗಳನ್ನು ಕಿತ್ತೆಸೆಯಿರಿ,’ ಎಂದು ಮೋದಿಯವರು ತಮ್ಮ ಭಾಷಣದಲ್ಲಿ ನಿರಂತರವಾಗಿ ಪುನರುಚ್ಚರಿಸಿದರು. ಪ್ರಧಾನಮಂತ್ರಿ ಮೋದಿಯವರ ಈ ಭಾಷಣದಲ್ಲಿನ ಅಂಶಗಳನ್ನು ಅವಲೋಕಿಸಿದರೆ, ಭಾರತವು ಕಳೆದ ಅನೇಕ ಶತಮಾನಗಳಿಂದ ಗುಲಾಮಗಿರಿಯ ಮನಸ್ಥಿತಿಯಲ್ಲಿತ್ತು ಮತ್ತು ಅದರಿಂದ ದೇಶವು ತನ್ನ ಅಸ್ತಿತ್ವ, ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಂಡಿತ್ತು ಎಂಬುದು ಸ್ಪಷ್ಟವಾಗುತ್ತದೆ. ಭಾರತದಲ್ಲಿ ‘ಪ್ರಸ್ತುತ ಅನೇಕ ಭಾಗಗಳಲ್ಲಿರುವ ಬಡತನ, ಭ್ರಷ್ಟಾಚಾರ, ಅವಿದ್ಯಾವಂತರ ಪ್ರಮಾಣ, ಕೆಲವು ಕೆಟ್ಟ ರೂಢಿಗಳಿಂದಾಗಿ ದೇಶವು ಅನೇಕ ವರ್ಷಗಳಲ್ಲ, ಶತಮಾನಗಳಿಂದಲೇ ಹಿಂದುಳಿದಿತ್ತು’ ಎಂದು ಪಾಶ್ಚಾತ್ಯರಿಂದ ಭಾರತದ ಚಿತ್ರಣವನ್ನು ಬಿಂಬಿಸಲಾಗಿತ್ತು. ಪಾಶ್ಚಾತ್ಯ ವಿದ್ವಾಂಸರು (ಅಥವಾ ಬುದ್ಧಿಭೇದ ಮಾಡುವ ಪಿತೂರಿಕಾರರು) ‘ಭಾರತೀಯರಲ್ಲಿ ತಮ್ಮ ಬಗ್ಗೆಯೇ ಕೀಳರಿಮೆ ಉಂಟಾಗಿ, ಅವರು ಪಾಶ್ಚಿಮಾತ್ಯ ದೇಶಗಳನ್ನು ಹೊಗಳಿ ಅವುಗಳ ಶ್ರೇಷ್ಠತೆಯನ್ನು ಒಪ್ಪಿಕೊಳ್ಳಬೇಕು ಮತ್ತು ಅವರಲ್ಲಿ ಗುಲಾಮಗಿರಿಯ ಮನೋಭಾವನೆ ಸೃಷ್ಟಿಯಾಗಬೇಕು’, ಈ ಸ್ವರೂಪದ ಬರವಣಿಗೆಗಳನ್ನು ಮಾಡಿದ್ದರು.

 

ಭಾರತದಿಂದಾಗಿ ಇಂಗ್ಲೆಂಡ್‌ನಲ್ಲಿ ಮೊದಲ ಪಾಠಶಾಲೆ !

ಈ ಎಲ್ಲದರ ನೇತೃತ್ವ ವಹಿಸದವನು ಆ ಬ್ರಿಟಿಷರ ಮೆಕಾಲೆ ! ಮೆಕಾಲೆಯು ಭಾರತೀಯ ಸಮಾಜ, ಶಿಕ್ಷಣ ಪದ್ಧತಿ ಮತ್ತು ಜೀವನಶೈಲಿಯನ್ನು ಇಡೀ ಭಾರತದಲ್ಲಿ ಸಂಚರಿಸಿ ನೋಡಿದ್ದನು. ‘ಭಾರತದ ಮೇಲೆ ಆಂಗ್ಲರಿಗಿಂತ ಮೊದಲು ಮೊಘಲರು ಮತ್ತು ಇತರ ಇಸ್ಲಾಮಿ ಆಕ್ರಮಣಕಾರರು ಅನೇಕ ಶತಮಾನಗಳ ಕಾಲ ಆಳ್ವಿಕೆ ನಡೆಸಿದರು. ಎಷ್ಟೆಲ್ಲಾ ಮಿತಿಮೀರಿದ ದೌರ್ಜನ್ಯ, ಲಕ್ಷಾಂತರ ಜನರ ಹತ್ಯೆ, ಲಕ್ಷಾಂತರ ಹಿಂದೂ ಹೆಣ್ಣುಮಕ್ಕಳು-ಮಹಿಳೆಯರ ಮೇಲೆ ಬಲಾತ್ಕಾರ ಮತ್ತು ಅವರ ಹತ್ಯೆ, ಕೋಟ್ಯಂತರ ಜನರನ್ನು ಮತಾಂತರಿಸಿದ್ದರೂ, ಭಾರತೀಯರ ವರ್ತನೆ, ಸಭ್ಯತೆ ಹಾಗೂ ಸಂಸ್ಕೃತಿಯು ಇಂದಿಗೂ ಗಟ್ಟಿಯಾಗಿ ನಿಂತಿದೆ. ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಒಬ್ಬನೇ ಒಬ್ಬ ಭಿಕ್ಷುಕನೂ ಕಾಣಸಿಗಲಿಲ್ಲ. ಹಳ್ಳಿಗಳು ಸ್ವಯಂಪೂರ್ಣವಾಗಿವೆ, ಜನರು ಸುಶಿಕ್ಷಿತರಾಗಿದ್ದಾರೆ’, ಇವೆಲ್ಲವನ್ನು ಮೆಕಾಲೆ ಅನುಭವಿಸಿ ದನು ಮತ್ತು ಸಂಸ್ಕಾರ, ಧರ್ಮಾಚರಣೆ, ಕೌಶಲ್ಯ ಮತ್ತು ಗುಣಗಳಿಂದ ಪರಿಪೂರ್ಣವಾಗಿರುವ ಭಾರತೀಯ ಸಮಾಜದ ಮೇಲೆ ದೀರ್ಘಕಾಲದ ವರೆಗೆ ಕೇವಲ ಅಂಜಿಸಿ-ಬೆದರಿಸಿ ಅಥವಾ ಕೇವಲ ಸೈನ್ಯದ ಬಲದ ಮೇಲೆ ಆಳ್ವಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವನು ಮನಗಂಡನು. ಈ ಭಾರತೀಯ ಸಮಾಜವನ್ನು ದೀರ್ಘಕಾಲ ಗುಲಾಮಗಿರಿಯಲ್ಲಿ ಇಡಲು ಬೇರೆ ಏನಾದರೂ ವಿಶೇಷ ಮಾಡಬೇಕು, ಎಂಬುದನ್ನೂ ಅವನು ನಿರ್ಧರಿಸಿದನು. ಆ ಸಮಯದಲ್ಲಿ ಭಾರತೀಯರನ್ನು ಅವರ ಮೂಲಕ್ಕೆ ಜೋಡಿಸಿಡುವ ಒಂದು ವ್ಯವಸ್ಥೆ ಭಾರತದಲ್ಲಿತ್ತು. ಅದೆಂದರೆ ಗುರುಕುಲ ಶಿಕ್ಷಣ ಪದ್ಧತಿ ! ಈ ವ್ಯವಸ್ಥೆಯನ್ನೇ ನಾಶಪಡಿಸಲು ಮೆಕಾಲೆ ನಿರ್ಧರಿಸಿದನು. ಆಂಗ್ಲರು ಭಾರತಕ್ಕೆ ಬರುವ ಮೊದಲು ಸುಮಾರು ೭ ಲಕ್ಷ ೫೦ ಸಾವಿರಗಳಿಗಿಂತ ಹೆಚ್ಚು ಗುರುಕುಲಗಳಿದ್ದವು ! ಈ ಗುರುಕುಲ ವ್ಯವಸ್ಥೆಯನ್ನು ನೋಡಿಯೇ ಬೆಲ್‌ ಎಂಬ ಕ್ರಿಶ್ಚಿಯನ್‌ ಧರ್ಮಪ್ರಚಾರಕನು ಇಂಗ್ಲೆಂಡ್‌ಗೆ ಹೋದ ನಂತರ ಮೊತ್ತಮೊದಲ ಶಾಲೆಯನ್ನು ತೆರೆದನು. ಅಂದರೆ ಅಲ್ಲಿ ಶಿಕ್ಷಣವು ಕೇವಲ ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾಗಿತ್ತು. ಸಮಾಜದ ಎಲ್ಲ ಘಟಕಗಳಿಗೂ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ, ಭಾರತದಲ್ಲಿನ ಇಷ್ಟೊಂದು ದೊಡ್ಡ ಸಂಖ್ಯೆಯ ಗುರುಕುಲಗಳನ್ನು ಕಂಡು, ಅವನು ಮೊದಲ ಶಾಲೆಯನ್ನು ಪ್ರಾರಂಭಿಸಿದನು.

ಗಂಡು-ಹೆಣ್ಣುಮಕ್ಕಳಿಗಾಗಿ ಗುರುಕುಲ !

ಇಂದು ಭಾರತದಲ್ಲಿ ೩ ಲಕ್ಷಗಳಿಗಿಂತ ಹೆಚ್ಚು ಮಿಷನರಿಗಳು, ಚರ್ಚ್‌-ಸಂಯೋಜಿತ ಶಾಲೆಗಳು ಬಂದಿವೆ. ಹಾಗಾದರೆ, ‘ಈಗ ಎಷ್ಟು ಗುರುಕುಲಗಳು ಉಳಿದಿವೆ ? ‘, ಎಂಬ ಪ್ರಶ್ನೆಗಳು ಮೂಡುತ್ತದೆ. ಇಂದು ಗುರುಕುಲಗಳಲ್ಲಿ ಶಿಕ್ಷಣ ಪಡೆಯುವುದು ಎಂದರೆ ಹಿಂದುಳಿದವರು ಎಂದು ತಿಳಿಯಲಾಗುತ್ತದೆ ಮತ್ತು ‘ಕಾನ್ವೆಂಟ್’ ಶಿಕ್ಷಣವನ್ನು ಪ್ರತಿಷ್ಠಿತವೆಂದು ಭಾವಿಸಲಾಗುತ್ತಿದೆ, ಎಂದರೆ ಇದು ಒಂದು ರೀತಿಯ ಗುಲಾಮಗಿರಿಯೇ ಆಗಿದೆ. ಬ್ರಿಟಿಷರ ಪೂರ್ವ ಕಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುರು ಕುಲಗಳಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳ ಶಿಕ್ಷಣವನ್ನು ನೀಡಲಾಗುತ್ತಿತ್ತು. ಪ್ರತಿ ಹಳ್ಳಿಯಲ್ಲಿ ಒಂದು ಗುರುಕುಲ ಇರುತ್ತಿತ್ತು. ಅಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಕಲೆ ಮತ್ತು ವಿದ್ಯೆಯ ಬಳಕೆಯನ್ನು ಆ ಹಳ್ಳಿಯಲ್ಲಿಯೇ ಮಾಡುತ್ತಿದ್ದರು. ಪರಿಣಾಮವಾಗಿ, ಗ್ರಾಮದಲ್ಲಿನ ಬಡಗಿ ಕೆಲಸ, ಕಮ್ಮಾರಿಕೆ, ಮನೆ ಕಟ್ಟುವಿಕೆ, ರಸ್ತೆ ನಿರ್ಮಾಣ, ನೀರಿನ ವ್ಯವಸ್ಥೆ, ರೋಗಿಗಳ ವ್ಯವಸ್ಥೆ ಇತ್ಯಾದಿ ಎಲ್ಲವೂ ಆ ಗ್ರಾಮದಲ್ಲಿಯೇ ಆಗುತ್ತಿತ್ತು. ಜನರಿಗೆ ಗ್ರಾಮಕ್ಕಾಗಿ ಏನಾದರೂ ದೊಡ್ಡ ಕೆಲಸ ಮಾಡಬೇಕಾಗಿದ್ದರೆ ಮಾತ್ರ ಅವರು ಬೇರೆ ಗ್ರಾಮಗಳಿಗೆ ಅಥವಾ ತಾಲೂಕಿಗೆ ಹೋಗಬೇಕಾಗುತ್ತಿತ್ತು, ಅಂದರೆ, ಗ್ರಾಮಗಳು ಸ್ವಯಂಪೂರ್ಣವಾಗಿದ್ದವು. ಗುರು ಕುಲಗಳಲ್ಲಿ ಗಂಡು-ಹೆಣ್ಣುಮಕ್ಕಳು ಇಬ್ಬರಿಗೂ ಶಿಕ್ಷಣ ದೊರೆಯುತ್ತಿತ್ತು. ಅತ್ಯಂತ ಪ್ರಾಚೀನ ಕಾಲದಲ್ಲಿ ಅಪಾಲಾ, ಗಾರ್ಗಿ, ಲೋಪಾಮುದ್ರಾ ಮೊದಲಾದ ಸ್ತ್ರೀ ವಿದ್ವಾಂಸರ ಹೆಸರುಗಳು ಪ್ರಸಿದ್ಧವಾಗಿವೆ. ಇವರು ತರ್ಕಶಾಸ್ತ್ರ ಮತ್ತು ಶಾಸ್ತ್ರಗಳ ಜ್ಞಾನದಲ್ಲಿ ಪರಿಣಿತರಾಗಿದ್ದರು. ಸ್ತ್ರೀಯರು ನಗರಗಳ ನೇತೃತ್ವ ವಹಿಸುತ್ತಿದ್ದರು. ಇದರ ಕಾರಣವೇನೆಂದರೆ, ಕೆಲವು ಹೆಣ್ಣುಮಕ್ಕಳಿಗೆ ಶಸ್ತ್ರವಿದ್ಯೆ ಮತ್ತು ಯುದ್ಧ ಕಲೆಯ ಶಿಕ್ಷಣವನ್ನೂ ನೀಡಲಾಗುತ್ತಿತ್ತು. ‘ಗುರು ಕುಲಗಳಲ್ಲಿ ಕೇವಲ ಬ್ರಾಹ್ಮಣರೇ ಶಿಕ್ಷಕರಾಗಿರುತ್ತಿದ್ದರು, ವೇದಗಳ ಅಧ್ಯಯನದ ಹಕ್ಕು ಕೇವಲ ಬ್ರಾಹ್ಮಣರಿಗಿತ್ತು’ ಎಂಬ ತಪ್ಪು ತಿಳುವಳಿಕೆಯೂ ಒಂದು ದೊಡ್ಡ ಪಿತೂರಿಯ ಭಾಗವಾಗಿದೆ. ಪ್ರಖ್ಯಾತ ಲೇಖಕ ಧರ್ಮಪಾಲ್‌ ಇವರು ಬ್ರಿಟಿಷ್‌ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಮೂಲ ದಾಖಲೆಗಳನ್ನು ಪರಿಶೀಲಿಸಿದಾಗ, ಭಾರತವನ್ನು ಗುಲಾಮಗಿರಿಗೆ ತಳ್ಳಲು ಬ್ರಿಟಿಷರ ಎಷ್ಟು ದೊಡ್ಡ ಪಿತೂರಿಯಾಗಿತ್ತು’ ಎಂಬ ಅನೇಕ ಉದಾಹರಣೆಗಳನ್ನು ನೀಡಿ ಸ್ಪಷ್ಟಪಡಿಸಿದ್ದಾರೆ. ಗುರುಕುಲಗಳಲ್ಲಿ ಕೇವಲ ಶೇ. ೭ ರಿಂದ ಶೇ. ೪೮ ರಷ್ಟು ಶಿಕ್ಷಕರು ಮಾತ್ರ ಬ್ರಾಹ್ಮಣರಾಗಿದ್ದರೆ, ಉಳಿದವರು ಬೇರೆ ವರ್ಣದವರಾಗಿದ್ದರು. ವಿದ್ಯಾರ್ಥಿಗಳಿಗೆ ಅವರ ವರ್ಣಕ್ಕನುಸಾರ ಗುರುಕುಲದಲ್ಲಿ ಶಿಕ್ಷಣ ಸಿಗುತ್ತಿತ್ತು. ೪ ರಿಂದ ೫ ವರ್ಷಗಳ ಪ್ರಾಥಮಿಕ ಶಿಕ್ಷಣದ ಅವಧಿ ಇತ್ತು, ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗೆ ಅವನ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ೧೦೦ ರಷ್ಟು ಜನಸಂಖ್ಯೆಯಿರುವ ಹಳ್ಳಿಯಲ್ಲಿ ಒಂದು ಶಾಲೆ ಇರುತ್ತಿತ್ತು. ಭಾರತೀಯ ಶಿಕ್ಷಣ ವ್ಯವಸ್ಥೆಯು ಇಷ್ಟು ಉತ್ತಮವಾಗಿದ್ದರೆ, ಭಾರತವು ಎಂದಾದರೂ ಹಿಂದುಳಿಯಲು ಸಾಧ್ಯವೇ ? ಭಾರತ ಎಂದಿಗಾದರೂ ಹಿಂದುಳಿದಿತ್ತೇ ? ಈ ಶಿಕ್ಷಣ ವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ಭಗ್ನಗೊಳಿಸಿ ಉದ್ದೇಶಪೂರ್ವಕವಾಗಿ ಭಾರತೀಯರನ್ನು ಮತ್ತು ಭಾರತವನ್ನು ದುಃಖ, ದಾರಿದ್ರ್ಯದಲ್ಲಿ ನೂಕಿದವನು ಮೆಕಾಲೆಯಂತಹ ಆಂಗ್ಲನೇ ಆಗಿದ್ದನು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಾಮ್ಯವಾದಿ ಮತ್ತು ಜಿಹಾದಿಗಳು ತಮ್ಮ ಕೈಗೆ ತೆಗೆದುಕೊಂಡರು ಮತ್ತು ಭಾರತೀಯ ಆದರ್ಶ, ಪರಂಪರೆಗಳನ್ನು ತಿರಸ್ಕರಿಸಿ ಪಾಶ್ಚಾತ್ಯ ವಿಕೃತಿಗಳನ್ನು ಮಕ್ಕಳಿಗೆ ಕಲಿಸಲು ಅವುಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಿದರು.

ಇದರ ಪರಿಣಾಮವೆಂದು ಭಾರತದ ಅನೇಕ ತಲೆಮಾರುಗಳು ರಾಷ್ಟ್ರ ಮತ್ತು ಧರ್ಮದ ಬಗ್ಗೆ ಸ್ವಾಭಿಮಾನರಹಿತವಾದವು. ಇವರೇ ಆ ಬಿಳಿಯ ಇಂಗ್ಲಿಷರ ಸ್ಥಾನವನ್ನು ಆಕ್ರಮಿಸಿದ, ಹಿಂದೂ ಸಂಸ್ಕೃತಿ, ಮತ್ತು ಮೌಲ್ಯಗಳನ್ನು ಕಡೆಗಣಿಸುವ ಕಪ್ಪು ಆಂಗ್ಲರು ! ಬಟ್ಟೆ ಎಂದರೆ ಏನು ಎಂದೂ ತಿಳಿದಿರದಿದ್ದಾಗ ಆಚಾರ-ವಿಚಾರಗಳಲ್ಲಿ ಸಂಪನ್ನವಾಗಿದ್ದ ಭಾರತವು ಪಾಶ್ಚಾತ್ಯರನ್ನು ಏಕೆ ಹೊಗಳಬೇಕು ? ಭಾರತದಿಂದ ಕೊಳ್ಳೆ ಹೊಡೆದ ಅಪಾರ ಧನರಾಶಿಗಳಿಂದಲೇ ಯಾವ ದೇಶಗಳು ಸಮೃದ್ಧವಾದವೋ, ಅಂತಹ ದೇಶಗಳ ಆದರ್ಶವನ್ನು ನಮ್ಮ ದೇಶವು ಏಕೆ ತೆಗೆದುಕೊಳ್ಳಬೇಕು ? ಈಗ ಭಾರತದಲ್ಲಿ ಆಗುತ್ತಿರುವ ಭೌತಿಕ ವಿಕಾಸವು ಆಧ್ಯಾತ್ಮಿಕ ವಿಕಾಸವಾಗುವವರೆಗೆ ಇದನ್ನು ನಿಜವಾದ ‘ವಿಕಾಸ’ ಎಂದು ಕರೆಯಲು ಸಾಧ್ಯವಿಲ್ಲ. ನಮ್ಮ ಆಹಾರ, ಭಾಷೆ, ಧಿರಿಸು, ವಸ್ತು, ಸಾಹಿತ್ಯ ಎಲ್ಲವೂ ಭಾರತೀಯವಾಗಿರಲೇಬೇಕು, ಅದೇ ರೀತಿ ನಮ್ಮ ಮನಸ್ಸೂ ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯಿಂದ ತುಂಬಿರಬೇಕು. ಆಗ ಮಾತ್ರ ಭಾರತವು ನಿಜವಾದ ಅರ್ಥದಲ್ಲಿ ಗುಲಾಮಗಿರಿಯ ಅಥವಾ ಮೆಕಾಲೆಯ ಮನಸ್ಥಿತಿಯನ್ನು ಕಿತ್ತೆಸೆಯುವುದು ಮತ್ತು ಹೊಸ ತೇಜಸ್ಸಿನೊಂದಿಗೆ ಜಾಗತಿಕ ಕ್ಷಿತಿಜದಲ್ಲಿ ಸೂರ್ಯನಂತೆ ಪುನಃ ಪ್ರಜ್ವಲಿಸುತ್ತದೆ !