ಡಿಜಿಟಲ್’ ಮಾಧ್ಯಮಗಳ ಅತಿಬಳಕೆ ! ಮಕ್ಕಳ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ !

ಇಂದಿನ ‘ಡಿಜಿಟಲ್’ ಯುಗದಲ್ಲಿ ಚಿಕ್ಕ ಮಕ್ಕಳ ಜೀವನದಲ್ಲಿ ಮೊಬೈಲ್, ದೂರದರ್ಶನ (ಟಿವಿ), ‘ಟ್ಯಾಬ್ಲೆಟ್‌’, ಕಂಪ್ಯೂಟರ್‌ ಇವುಗಳಂತಹ ಎಲೆಕ್ಟ್ರಾನಿಕ್‌ ಸಾಧನಗಳ ಪ್ರಮಾಣವು ವಿಪರೀತ ಹೆಚ್ಚಾಗಿದೆ. ಊಟ ಮಾಡುವಾಗ, ಮಕ್ಕಳನ್ನು ಸಮಾಧಾನಪಡಿಸಲು, ಅವರ ಗಮನವನ್ನು ಬೇರೆಡೆಗೆ ಸೆಳೆಯಲು, ಉಪಾಹಾರಗೃಹಗಳು ಅಥವಾ ಕಾರ್ಯಕ್ರಮ ಮುಂತಾದ ಸ್ಥಳಗಳಲ್ಲಿ ಮಕ್ಕಳು ತೊಂದರೆ ಕೊಡಬಾರದೆಂದು, ಪ್ರಯಾಣದಲ್ಲಿ, ಮಲಗುವಾಗ ಹೀಗೆ ವಿಭಿನ್ನ ಪರಿಸ್ಥಿತಿಗಳಲ್ಲಿ ಪೋಷಕರು ಮಕ್ಕಳಿಗೆ ಡಿಜಿಟಲ್‌ ಸಾಧನಗಳನ್ನು ಬಳಸಲು ಕೊಡುತ್ತಾರೆ. ಜಗತ್ತಿನಾದ್ಯಂತ ಚಿಕ್ಕ ಮಕ್ಕಳಲ್ಲಿ ‘ಸ್ಕ್ರೀನ್‌ ಟೈಮ್’ (ಮೊಬೈಲ್, ಟಿವಿ, ಟ್ಯಾಬ್ಲೆಟ್, ಕಂಪ್ಯೂಟರ್‌ ನೋಡುವ ಅವಧಿ) ಹೆಚ್ಚುತ್ತಿರುವ ಬಳಕೆಯು ಅವರ ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಅಧ್ಯಯನದಿಂದ ಇದರ ಆಘಾತಕಾರಿ ವಾಸ್ತವ ಬೆಳಕಿಗೆ ಬಂದಿದೆ. ಕೇವಲ ನಗರಗಳ ಮಕ್ಕಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ‘ಸ್ಕ್ರೀನ್‌ ಟೈಮ್’ ಹೆಚ್ಚಿದೆ ಎಂಬುದು ವಿಶೇಷ !

ಈ ಅಧ್ಯಯನದಲ್ಲಿ ಮಕ್ಕಳ ೭ ದಿನಗಳ ನಿರೀಕ್ಷಣೆಯನ್ನು ಮಾಡಿ ‘ಸ್ಕ್ರೀನ್‌ ಟೈಮ್’ ಮತ್ತು ಅದರ ಮಕ್ಕಳ ಬೆಳವಣಿಗೆಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲಾಯಿತು. ಈ ಅಧ್ಯಯನದ ಪ್ರಕಾರ ಮಕ್ಕಳ ಸರಾಸರಿ ‘ಸ್ಕ್ರೀನ್‌ ಟೈಮ್’ rದಿನಕ್ಕೆ ೨.೩೯ ಗಂಟೆಗಳಷ್ಟಿತ್ತು ಮತ್ತು ಶೇ. ೭೩ ರಷ್ಟು ಮಕ್ಕಳಲ್ಲಿ ಜಾಗತಿಕ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಿಗಿಂತ ಹೆಚ್ಚು ‘ಸ್ಕ್ರೀನ್‌ ಟೈಮ್’ ಕಂಡುಬಂದಿತು.

೧. ಹೆಚ್ಚಿನ ‘ಸ್ಕ್ರೀನ್‌ ಟೈಮ್‌’ನಿಂದ ಮಕ್ಕಳಲ್ಲಿ ಮಾತನಾಡುವ ತೊಂದರೆ, ಸಂವಾದ ನಡೆಸುವ ಸಾಮರ್ಥ್ಯ ಕಡಿಮೆಯಾಗುವುದು, ಸಣ್ಣ ಮತ್ತು ದೊಡ್ಡ ಚಲನವಲನ ಗಳನ್ನು ಮಾಡುವಾಗ ತೊಂದರೆಯಾಗುವುದು, ಸಾಮಾಜಿಕ ಸಂವಾದಗಳಲ್ಲಿ ಕಡಿಮೆ ಸಹಭಾಗ, ದೈನಂದಿನ ಚಟುವಟಿಕೆಗಳಲ್ಲಿ ಅಡಚಣೆಗಳು ಮುಂತಾದ ಪರಿಣಾಮಗಳು ಕಂಡುಬಂದವು.

೨. ಈ ಅಧ್ಯಯನದ ಪ್ರಕಾರ, ೨ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಭಾಷಾ ಅಭಿವೃದ್ಧಿಯ ಜೊತೆಗೆ ಗ್ರಹಣ ಸಾಮರ್ಥ್ಯ, ಸಂವಾದ ಕೌಶಲ್ಯಗಳಲ್ಲಿ ಕೊರತೆ ಕಂಡುಬಂದಿತು, ಆದರೆ ೨ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಮಕ್ಕಳಲ್ಲಿ ವಿಶೇಷವಾಗಿ ಭಾಷಾ ಮತ್ತು ಸಂವಾದ ಸಾಧಿಸುವ ಸಾಮರ್ಥ್ಯಗಳಲ್ಲಿ ಕೊರತೆಯ ಜೊತೆಗೆ ಇತರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿಯೂ ತೊಂದರೆ ಕಂಡುಬಂದಿತು.

೩. ತಾಯಂದಿರ ‘ಸ್ಕ್ರೀನ್‌ ಟೈಮ್’ ಹೆಚ್ಚಿರುವುದು, ಮಲಗುವ ಮೊದಲು ಸ್ಕ್ರೀನ್‌ನ ಬಳಕೆ ಇವುಗಳಿಂದಲೂ ಮಕ್ಕಳ ‘ಸ್ಕ್ರೀನ್‌ ಟೈಮ್’ ಹೆಚ್ಚಾಗುತ್ತದೆ, ಎಂದು ತಿಳಿದುಬಂದಿದೆ.

೪. ಶೇ. ೮೯ ರಷ್ಟು ಮಕ್ಕಳಿಗೆ ವಯಸ್ಸಿನ ೨ ವರ್ಷಗಳ ಮೊದಲೆ ಸ್ಕ್ರೀನ್‌ನ ಪರಿಚಯ ಆಗಿತ್ತು, ಹಾಗೆಯೇ ಕೇವಲ ಶೇ. ೫ ರಷ್ಟು ಪೋಷಕರು ಮಕ್ಕಳ ಸ್ಕ್ರೀನ್‌ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರು; ಆದರೆ ಅವರಲ್ಲಿಯೂ ಅನೇಕ ಪೋಷಕರು ಈ ನಿರ್ಬಂಧಗಳನ್ನು ಪಾಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಪೋಷಕರು ೨ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಡಿಜಿಟಲ್‌ ಸಾಧನಗಳನ್ನು ಬಳಸಲು ಕೊಡುವುದನ್ನು ನಿಲ್ಲಿಸಬೇಕು.

ಆಧಾರ : ‘ನ್ಯಾಷನಲ್‌ ಲೈಬ್ರರಿ ಆಫ್‌ ಮೆಡಿಸಿನ್’ ಜಾಲತಾಣ