ವೇದಗಳಲ್ಲಿನ ಮಾತೃತ್ವಭಾವ !


೧. ವೇದಗಳಲ್ಲಿ ತಾಯಿ ಮತ್ತು ಮಾತೃತ್ವದ ಅಸಾಧಾರಣ ಮಹತ್ವ !

ವೇದಗಳಲ್ಲಿ ತಾಯಿ ಮತ್ತು ಅವಳ ಮಗುವಿನ ಸಂಬಂಧವನ್ನು ಅನೇಕ ಆಯಾಮಗಳಲ್ಲಿ ವಿವರಿಸಲಾಗಿದೆ. ಕೇವಲ ಹೆರಿಗೆಯ ನಂತರವಷ್ಟೇ ಮಾತೃತ್ವ ಬರುತ್ತದೆ ಎಂದೇನಿಲ್ಲ, ದುರ್ಬಲರಿಗೆ ಪ್ರೀತಿಯಿಂದ ಆಧಾರ ನೀಡುವ ಮತ್ತು ಅವರನ್ನು ಪೋಷಿಸುವ ಪ್ರತಿಯೊಬ್ಬ ವ್ಯಕ್ತಿಯೂ ತಾಯಿಯ ಪಾತ್ರದಲ್ಲಿರುತ್ತಾನೆ; ಆದುದರಿಂದಲೇ ವೈದಿಕ ಮಾನವರು ನಮಗೆ ಜನ್ಮ ನೀಡುವ ತಾಯಿಯಂತೆ ನಮ್ಮನ್ನು ಪ್ರೀತಿಯಿಂದ ರಕ್ಷಿಸುವ ಈಶ್ವರನನ್ನೂ ತಾಯಿಗೆ ಸಮಾನವೆಂದು ಪರಿಗಣಿಸುತ್ತಾರೆ.

ವೇದಗಳಲ್ಲಿ ಉಲ್ಲೇಖಿಸಲಾದ ‘ಮಾತೃ ಶಬ್ದದ ಅರ್ಥ ಸಮಕಾಲೀನ ಸಂಸ್ಕೃತ ಭಾಷೆಯಲ್ಲಿ ‘ನಿರ್ಮಿಸುವವಳು, ಎಂದಾಗಿದೆ. ವೈದಿಕ ಸಮಾಜದ ಕುಟುಂಬವ್ಯವಸ್ಥೆಯಲ್ಲಿ ತಾಯಿಯ ಪಾತ್ರವು ಇದೇ ರೀತಿಯದ್ದಾಗಿತ್ತು. ಪುರುಷಪ್ರದಾನ ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಪೋಷಿಸುವ ಮತ್ತು ಅವರ ವ್ಯಕ್ತಿತ್ವವನ್ನು ರೂಪಿಸುವ ತಾಯಿಗೆ ಮಹತ್ವದ ಸ್ಥಾನವಿತ್ತು.

‘ಅಥರ್ವವೇದದಲ್ಲಿಯೂ, ಆನಂದ ತುಂಬಿದ ಕುಟುಂಬದಲ್ಲಿ ತಾಯಿಯು ಇತರ ಸದಸ್ಯರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತಾಳೆ ಎಂದು ಉಲ್ಲೇಖಿಸಲಾಗಿದೆ. ವೈದಿಕ ಕಾಲದಲ್ಲಿ, ತಾಯಿಯು ಮನೆಯ ಒಡತಿ ಮತ್ತು ಇಡೀ ಕುಟುಂಬದ ಸೃಷ್ಟಿಕರ್ತಳು ಎಂದು ನಂಬಲಾಗಿತ್ತು. ವಿದ್ವಾಂಸರು ಮತ್ತು ಸ್ವತಂತ್ರ ಮಹಿಳೆಯರನ್ನು, ಅಂದರೆ ತಾಯಿಯನ್ನು ತಮ್ಮ ಮಕ್ಕಳ ‘ಮೊದಲ ಗುರು ಎಂದು ನಂಬಲಾಗುತ್ತದೆ.

‘ಅನುವ್ರತಃ ಪಿತುಃ ಪುತ್ರೋ ಮಾತ್ರಾ ಭವತು ಸಂಮನಾಃ | (ಅಥರ್ವವೇದ, ಕಾಂಡ ೩, ಸೂಕ್ತ ೩೦, ಖಂಡ ೨), ಅಂದರೆ ‘ಮಗನು ತಂದೆಯ ಅನುರ್ವತಿ (ತಂದೆಯು ಮಾಡುತ್ತಿರುವ ಅನುಕೂಲಕರ ಕರ್ಮಗಳನ್ನು ಮಾಡುವವನು) ಮತ್ತು ತಾಯಿಯ ಮನಸ್ಸಿನಂತೆ ಮನಸ್ಸು (ವಿಚಾರ) ಇರುವವನಾಗಿರಬೇಕು.

ಸಹೃದಯಂ ಸಾಂಮನಸ್ಯಮವಿದ್ವೇಷಂ ಕೃಣೋಮಿ ವಃ |

ಅನ್ಯೋ ಅನ್ಯಮಭಿ ಹರ್ಯತ್ ವತ್ಸಂ ಜಾತಮಿವಾಘ್ನ್ಯಾ||

– ಅಥರ್ವವೇದ, ಕಾಂಡ ೩, ಸೂಕ್ತ ೩೦, ಖಂಡ ೧

ಅರ್ಥ : (ಸದ್ಗೃಸ್ಥರೇ, ನಾನು ನಿಮಗಾಗಿ ಏಕರೂಪ ಹೃದಯಗಳು, ಏಕರೂಪ ಮನಸ್ಸುಗಳು ಮತ್ತು ದ್ವೇಷ ಇಲ್ಲದಿರುವಿಕೆಯನ್ನು ನಿಗದಿತಪಡಿಸುತ್ತೇನೆ. ಹಸುವು ತನ್ನ ನವಜಾತ ಕರುವನ್ನು ಪ್ರೀತಿಸುವಂತೆ, ನೀವು ಪರಸ್ಪರರನ್ನು ಪ್ರೀತಿಸಿರಿ.

ತಾಯಿ ಮತ್ತು ಮಗನ ಸಂಬಂಧದಷ್ಟೇ ಎಲ್ಲ ಸಂಬಂಧಗಳು ಪವಿತ್ರ ಮತ್ತು ಅವಿನಾಶಿಯಾಗಿರಬೇಕು, ಹೀಗೆ ಹೇಳುವುದು, ಪರೋಕ್ಷವಾಗಿ ‘ವೈದಿಕ ಜನರ ಜೀವನದಲ್ಲಿ ಈ ಸಂಬಂಧ ಎಷ್ಟು ಮಹತ್ವದ್ದಾಗಿತ್ತು, ಎಂಬುದನ್ನು ಸಿದ್ಧಪಡಿಸುತ್ತದೆ.

೨. ಮಾತೃತ್ವವನ್ನು ಗೌರವಿಸುವ ವೈದಿಕ ಜನರ ಪ್ರವೃತ್ತಿ !

ಮಕ್ಕಳನ್ನು ಹೆತ್ತು ವಂಶವನ್ನು ಮುಂದುವರೆಸುವುದು ಮದುವೆಯ ಮುಖ್ಯ ಉದ್ದೇಶವಾಗಿತ್ತು. ಆದುದರಿಂದ ‘ವಿವಾಹ ಬಂಧನದಲ್ಲಿ ಸಿಲುಕಿದ ಸ್ತ್ರೀ ಒಬ್ಬ ಉತ್ತಮ ತಾಯಿ ಮತ್ತು ಒಬ್ಬ ಧೈರ್ಯಶಾಲಿ ಮಗನನ್ನು ಹೆರುವ ತಾಯಿಯಾಗಿರಬೇಕು, ಎಂಬ ನಿರೀಕ್ಷೆ ಇತ್ತು. ಅದಕ್ಕಾಗಿ ವಿವಿಧ ಸಂಸ್ಕಾರ ವಿಧಿಗಳನ್ನೂ ಮಾಡಲಾಗುತ್ತಿತ್ತು. ‘ಹೇ ನವವಧುವೇ, ತನ್ನ ಗರ್ಭದಲ್ಲಿನ ಎಲ್ಲವನ್ನೂ ಸೇರಿಸಿಕೊಳ್ಳುವ ಪೃಥ್ವಿಯಂತೆ ವೀರ ಪುತ್ರ ಜಯಂತನನ್ನು (ದೇವೇಂದ್ರ ಮತ್ತು ಇಂದ್ರಾಣಿಯರ ಪುತ್ರ) ಹೊತ್ತ ಇಂದ್ರಾಣಿಯಂತಹ ಸುದೃಢ ಗರ್ಭವನ್ನು ಧರಿಸು. ಎಲ್ಲ ದೇವತೆಗಳು ನಿನ್ನ ಗರ್ಭವನ್ನು ಸರಿಯಾಗಿ ಪೋಷಿಸಲಿ ಮತ್ತು ಯೋಗ್ಯ ಸಮಯದಲ್ಲಿ ಜನಿಸಿದ ಮಗನು ತನ್ನ ತಾಯಿಯನ್ನು ರಕ್ಷಿಸುವ, ಶೂರ ಮತ್ತು ಶ್ರೇಷ್ಠನಾಗಲಿ. ಈ ಶುಭ ಹಾರೈಕೆಯನ್ನು ವೇದಗಳಲ್ಲಿ ವ್ಯಕ್ತಪಡಿಸಲಾಗಿದೆ.

‘ಪುತ್ರವತಿ ಆಗುವುದನ್ನು ಮಹಿಳೆಯ ಭಾಗ್ಯದ ಪರಮೋತ್ಕರ್ಷವೆಂದು ಪರಿಗಣಿಸಲಾಗುತ್ತಿತ್ತು. ಮಾತೃತ್ವ ವನ್ನು ಗೌರವಿಸುವ ವೈದಿಕ ಜನರ ಪ್ರವೃತ್ತಿ ಅಥರ್ವವೇದದ ಕೆಳಗಿನ ಸಾಲುಗಳಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ, ‘ಹೇ ಮಗಳೇ, ನಿನಗೆ ಜನ್ಮ ನೀಡಿದ ತಾಯಿಯ ಕಡೆಯವರನ್ನು ಮತ್ತು ನಿನ್ನ ಪತಿಗೆ ಜನ್ಮ ನೀಡಿದ ಅತ್ತೆಯ ಕಡೆಯವರನ್ನು ಮತ್ತು ಅವರಿಬ್ಬರ ಪರಿಸರವನ್ನು ಒಂದಾಗಿಸು, ಎಂದು ಹೇಳಲಾಗಿದೆ.

ವೈದಿಕ ಸಾಹಿತ್ಯದ ಕೆಲವು ಉಪಮೆಗಳಲ್ಲಿಯೂ ಮಾತೃತ್ವದ ಬಗ್ಗೆ ವಿಶೇಷ ಗೌರವದ ಉಲ್ಲೇಖವಿದೆ. ‘ಮಕ್ಕಳನ್ನು ಪಡೆದ ಮಹಿಳೆಯ ಸುತ್ತ ಅವಳ ಮಕ್ಕಳು ಸೇರುವಂತೆ, ಪುರೋಹಿತರೂ ಸೋಮ(ಶಿವನ ಹೆಸರು)ನ ಸುತ್ತಲೂ ಸೇರುತ್ತಾರೆ ಅಥವಾ ‘ಹಸುವು ತನ್ನ ಕರುವನ್ನು ಪ್ರೀತಿಯಿಂದ ನೆಕ್ಕುವಂತೆ, ನಮ್ಮ ಸ್ತೋತ್ರಗಳು ಇಂದ್ರನನ್ನು ಸ್ಪರ್ಶಿಸಲಿ ಮತ್ತು ರಾತ್ರಿಯು ತಾಯಿಯಂತೆ ರಕ್ಷಿಸುತ್ತದೆ. ಹಗಲು ನಮ್ಮನ್ನು ರಾತ್ರಿಯ ವಶಕ್ಕೆ ಒಪ್ಪಿಸಿ ತಾನು ವಿಶ್ರಾಂತಿ ಪಡೆಯುತ್ತದೆ.

೩. ದೇವತೆಗಳು ಮತ್ತು ನಿಸರ್ಗದ ಬಗ್ಗೆ ವೈದಿಕ ಕಾಲದಲ್ಲಿನ ಜನರ ಪ್ರೇಮಭಾವ !

ವೇದಗಳ ಆಯ್ದ ಶ್ಲೋಕಗಳಲ್ಲಿ ಜಗತ್ತಿನ ಉತ್ಪತ್ತಿಯ ವಿಚಾರ ಮಾಡಲಾಗಿದೆ. ಈ ಚರಾಚರ ಅಸ್ತಿತ್ವದ ಬಗ್ಗೆ ಕುತೂಹಲವನ್ನು ವ್ಯಕ್ತ ಮಾಡಲಾಗಿದೆ. ಇದರಿಂದಲೂ ವೈದಿಕ ಕಾಲದ ಜನರ ದೇವತೆ ಮತ್ತು ನಿಸರ್ಗದ ವಿಷಯದಲ್ಲಿ ಪ್ರೇಮಭಾವ ಕಾಣಿಸುತ್ತದೆ. ಋಗ್ವೇದದಲ್ಲಿ ದೇವರುಗಳೊಂದಿಗೆ ದೇವಿಯರಿಗೂ ಪ್ರಾರ್ಥನೆಯನ್ನು ಮಾಡಲಾಗಿದೆ. ದೇವಿಯರ ಸಂಖ್ಯೆ ಕಡಿಮೆಯಿದ್ದರೂ ಜನರ ಮನಸ್ಸಿನಲ್ಲಿ ಅವರಿಗೆ ಒಂದು ಮಹತ್ವದ ಸ್ಥಾನವಿತ್ತು. ಇವರಲ್ಲಿ ಕೆಲವರನ್ನು ತಾಯಿಯೆಂದು ಪೂಜಿಸಲಾಗುತ್ತದೆ.

೪. ತನ್ನ ಭಕ್ತರನ್ನು ಎಲ್ಲ ಬಂಧನಗಳಿಂದ ಮುಕ್ತ ಮಾಡುವ ತಾಯಿಸ್ವರೂಪ ಅದಿತಿ !

ಈ ದೇವಿಯರಲ್ಲಿ ‘ಅದಿತಿಯ ಹೆಸರನ್ನು ಪ್ರಮುಖವಾಗಿ ತೆಗೆದುಕೊಳ್ಳಬೇಕು. ಅದಿತಿಯನ್ನು ದೇವರುಗಳ ತಾಯಿಯೆಂದು ವರ್ಣಿಸಲಾಗಿದೆ. ಆದಿತ್ಯರ ತಾಯಿ, ಅಂದರೆ ದೇವರುಗಳ ಜನ್ಮದಾತೆ ಅದಿತಿಯು ಜಗತ್ತಿನ ಎಲ್ಲ ರಾಜರ, ಹಾಗೆಯೇ ಎಲ್ಲ ಶ್ರೇಷ್ಠ ಮತ್ತು ಶಕ್ತಿಶಾಲಿ ಪುತ್ರರ ತಾಯಿಯಾಗಿದ್ದಾಳೆ. ಅಷ್ಟೇ ಅಲ್ಲದೇ ಜಗತ್ತಿನ ಎಲ್ಲ ಜೀವಗಳನ್ನು ನಿಯಂತ್ರಿಸುವ ಸಾಧಿಸುವ, ಅಂದರೆ ಜಾಗತಿಕ ನಿಯಮಗಳ ಒಡತಿ ಅವಳೇ ಆಗಿದ್ದಾಳೆ. ಅದಿತಿಯು ಇವರೆಲ್ಲರನ್ನು ರಕ್ಷಿಸುತ್ತಾಳೆ. ಎಲ್ಲರಿಗೂ ಕೌಶಲ್ಯದಿಂದ ಮಾರ್ಗದರ್ಶನ ಮಾಡುತ್ತಾಳೆ. ಅವಳ ಪುತ್ರ, ಅಂದರೆ ಆದಿತ್ಯನೊಂದಿಗೆ ಅವಳ ಸ್ತುತಿಯನ್ನು ಮಾಡಿದರೆ ದುಃಖಗಳಿಂದ ರಕ್ಷಣೆ ಮತ್ತು ಕಲ್ಯಾಣ ಪ್ರಾಪ್ತಿಯಾಗುತ್ತದೆ.

ಪಾಪ ಮತ್ತು ಅಪರಾಧಿತನದಿಂದ ಮುಕ್ತರಾಗಲು ಅವಳ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಈ ವಿವರಣೆಯಿಂದ, ಈ ಪ್ರಾರ್ಥನೆಯ ಹಿಂದಿರುವ ಶಾಶ್ವತ ಭಾವನೆ ಏನಿದೆಯೆಂದರೆ ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ, ಯಾರಾದರೂ ನಮ್ಮನ್ನು ಕ್ಷಮಿಸಿದರೂ ಅಥವಾ ಕ್ಷಮಿಸದಿದ್ದರೂ ನಮ್ಮ ತಾಯಿ ನಮ್ಮನ್ನು ಖಂಡಿತವಾಗಿಯೂ ಕ್ಷಮಿಸುತ್ತಾಳೆ. ‘ನ ದೀಯತೆ ಖಂಡ್ಯತೆ ಬಧ್ಯತೆ ಬೃಹತ್ತ್ವಾತ್ |, ಅಂದರೆ ‘ದೊಡ್ಡದಾಗಿರುವುದರಿಂದ ಯಾರಿಗೂ ನೀಡಲಾಗುವುದಿಲ್ಲ, ವಿಭಜಿಸಲು ಸಾಧ್ಯವಾಗುವುದಿಲ್ಲ, ಬಂಧನದಲ್ಲಿ ಕಟ್ಟಲಾಗುವುದಿಲ್ಲ, ಈ ರೀತಿ ತಾಯಿಯ ರೂಪದಲ್ಲಿ ಅದಿತಿಯ ಪ್ರತಿಮೆ ಇದೆ. ಅನೇಕ ಸ್ಥಳಗಳಲ್ಲಿ ಅದಿತಿಯ ಕಲ್ಪನೆಯನ್ನು ಪೃಥ್ವಿಯ ರೂಪದಲ್ಲಿ ಮಾಡಲಾಗಿದೆ. ವೇದಗಳ ಋಷಿಗಳು, ‘ಈ ಪೃಥ್ವಿ ಅಥವಾ ಅದಿತಿಯೇ ತಾಯಿ, ತಂದೆ, ಪುತ್ರ, ದೇವರು ಇತ್ಯಾದಿಯಾಗಿದ್ದಾರೆ. ಏನೆಲ್ಲ ಸೃಷ್ಟಿಯಾಗಿದೆಯೋ, ಆಗುತ್ತಿದೆಯೋ ಮತ್ತು ಆಗುವುದೋ, ಅದೆಲ್ಲವೂ ಪೃಥ್ವಿಯಿಂದಲೇ !, ಎಂದು ಹೇಳುತ್ತಾರೆ.

೫. ಪೃಥ್ವಿಯನ್ನು ತಾಯಿಗೆ ಸಮಾನವೆಂದು ಪರಿಗಣಿಸುವ ವೈದಿಕ ಸಂಸ್ಕೃತಿ !

ಆಹಾರಧಾನ್ಯಗಳನ್ನು ಉತ್ಪಾದಿಸುವ ಭೂಮಿಗೆ ‘ಭೂಮಾತೆ ಎಂದು ಋಷಿಮುನಿಗಳು ಅದರ ಗುಣಗಾನ ಮಾಡುತ್ತಾರೆ. ಭೂಮಾತೆಯನ್ನು ಸ್ತುತಿಸುವ ‘ಭೂಮಿಸೂಕ್ತದಲ್ಲಿ ಋಷಿಗಳು ಭೂಮಿಯೊಂದಿಗಿರುವ ತಮ್ಮ ಸಂಬಂಧವನ್ನು ವರ್ಣಿಸುವಾಗ, ‘ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ | (ಅಥರ್ವವೇದ, ಕಾಂಡ ೧೨, ಸೂಕ್ತ ೧, ಖಂಡ ೧೨), ಅಂದರೆ ‘ಭೂಮಿಯು ನನ್ನ ತಾಯಿಯಾಗಿದ್ದಾಳೆ, ನಾನು ಭೂಮಿಯ ಪುತ್ರನಾಗಿದ್ದೇನೆ, ಎಂದು ಹೇಳುತ್ತಾರೆ.

ಯಾವ ರೀತಿ ತಾಯಿಯು ತನ್ನ ಮಗುವಿಗೆ ಅನ್ನದ ಸಾರವೆಂದು ಹಾಲನ್ನು ಕುಡಿಸಿ ಪೋಷಿಸುತ್ತಾಳೆಯೋ, ಅದೇ ರೀತಿ ಭೂಮಾತೆಯೂ ನಮ್ಮನ್ನು ಪುಷ್ಟಿಗೊಳಿಸಬೇಕು ಮತ್ತು ನಮ್ಮ ಇಚ್ಛೆಯನ್ನು ಪೂರೈಸಬೇಕು. ಅವರು ಭೂಮಾತೆಗೆ, ‘ಅವಳ ಒಳಗೆ ಜೀವಗಳನ್ನು ಪೋಷಿಸುವ ಪದಾರ್ಥಗಳು ಉತ್ಪತ್ತಿಯಾಗುತ್ತವೆ. ಅವುಗಳ ಲಾಭ ನಮಗೆ ಸಿಗಲಿ, ಎಂದು ಪ್ರಾರ್ಥಿಸುತ್ತಾರೆ

ಪೃಥ್ವಿಯನ್ನು ತೃಪ್ತಗೊಳಿಸಲು ಋಷಿಗಳು ಅಕ್ಕಿಯ ಕಾಳು ಗಳನ್ನು ಸ್ಮರಿಸಿ, ‘ನಾನು ಮಂತ್ರಗಳನ್ನು ಯೋಗ್ಯ ರೀತಿಯಲ್ಲಿ ಪಠಿಸಿ ನಿಮ್ಮನ್ನು ಅಗ್ನಿಯಲ್ಲಿ ಅರ್ಪಿಸುತ್ತೇನೆ. ತಾಯಿಯು ತನ್ನ ಮಕ್ಕಳ ಹತ್ತಿರವಿದ್ದಂತೆ, ನೀವು ಸಹ ನಿಮ್ಮ ತಾಯಿಯ, ಅಂದರೆ ಭೂಮಿಯ ಬಳಿ ಇರಿ, ಎಂದು ಹೇಳುತ್ತಾರೆ. ಪೃಥ್ವಿಯು ಮಾನವ ಮತ್ತು ಎಲ್ಲ ಸಜೀವ ಪ್ರಾಣಿಗಳಿಗೆ ಪೋಷಣೆ ಮಾಡುತ್ತದೆ, ಇದು ವೈಜ್ಞಾನಿಕ ಸತ್ಯ; ಆದರೆ ನಮಗೆ ಎಲ್ಲವನ್ನೂ ನೀಡುವ ಭೂಮಿಯನ್ನು ನಮ್ಮ ತಾಯಿಯೆಂದು ನಂಬುವ ಮತ್ತು ಅವಳ ಅಮೂಲ್ಯ ಸಂಪತ್ತನ್ನು ನಾಶ ಮಾಡದೇ ಅದನ್ನು ಅತ್ಯಂತ ಸಂಯಮದಿಂದ ಮತ್ತು ಕೃತಜ್ಞತೆಯಿಂದ ಸ್ವೀಕರಿಸುವ ವೈದಿಕ ಮನೋಭಾವ ಅನುಕರಣೀಯವಾಗಿದೆ.

೬. ತಾಯಿಗೆ ಸಮಾನವಾದ ನದಿಗಳಿಗೆ ‘ತಾಯಿಯ ಸ್ಥಾನ !

ಅಲೆದಾಡುವ ವೈದಿಕ ಜನರ ಸ್ಥಿರ ಜೀವನದ ಪ್ರವಾಸವನ್ನು ಸುಲಭ ಮಾಡುವ ನದಿಗಳಿಗೂ ‘ತಾಯಿಯ ಸ್ಥಾನವನ್ನು ನೀಡಲಾಗಿದೆ. ಋಗ್ವೇದದ ಒಂದು ಸೂಕ್ತದಲ್ಲಿ ಸರಸ್ವತಿ ನದಿಯ ಉಲ್ಲೇಖವನ್ನು ‘ಅಂಬಿತಮೆ ನದಿತಮೆ ದೇವಿತಮೆ ಸರಸ್ವತಿ | (ಋಗ್ವೇದ, ಮಂಡಲ ೨, ಸೂಕ್ತ ೪೧, ಋಚಾ ೧೬), ಅಂದರೆ ‘ಅವಳು ತಾಯಂದಿರಲ್ಲಿ, ನದಿಗಳಲ್ಲಿ ಮತ್ತು ದೇವಿಯರಲ್ಲಿ ಶ್ರೇಷ್ಠಳಾದ ಸರಸ್ವತಿ ಎಂದು ಮಾಡಲಾಗಿದೆ. ಅದರಲ್ಲಿ ಅವಳಿಗೆ ‘ಅಂಬಿತಮೆ ಎಂದು ಸಂಬೋಧಿಸಿ ಗೌರವಿಸಲಾಗಿದೆ.

ವಿಶ್ವಾಮಿತ್ರ ಋಷಿಗಳು ವಿಪಾಶ ಮತ್ತು ಶುತುದ್ರಿ ನದಿಗಳನ್ನು ಸ್ತುತಿಸುವಾಗ ಅವುಗಳನ್ನು ‘ತಾಯಿಗೆ ಸಮಾನ ಎಂದು ಹೇಳುತ್ತಾರೆ. ಅವರು ಆ ನದಿಗಳಿಗೆ ಅವುಗಳ ಪ್ರವಾಹವನ್ನು ಕಡಿಮೆ ಮಾಡಲು ವಿನಂತಿಸಿಕೊಳ್ಳುತ್ತಾರೆ. ಇದರಿಂದ ಅವುಗಳಿಗೆ ಮುಂದೆ ಸಾಗಲು ಸಾಧ್ಯವಾಗುತ್ತದೆ. ಅವರ ಈ ನಿವೇದನೆಯಿಂದ, ತಾಯಿಯು ತನ್ನ ಮಗುವಿಗೆ ಹಾಲುಣಿಸಲು ಬಾಗುವಂತೆ, ನದಿಗಳೂ ಕೆಳಗೆ ಬಾಗುತ್ತವೆ.

೭. ವೇದಗಳಲ್ಲಿನ ಅಷ್ಟಮಾತೃಕೆಯರ ವರ್ಣನೆ !

ವೇದಗಳಲ್ಲಿ ‘ಮಾತೃಕಾ ಹೆಸರಿನಿಂದ ಯಾವ ದೇವರ ಸಮೂಹಗಳ ಉಲ್ಲೇಖ ಮಾಡಲಾಗುತ್ತದೆಯೋ, ಅವು ೮ ಇವೆ. ಅವುಗಳ ಪೈಕಿ ಅಷ್ಟಮಾತೃಕೆಯರ ವರ್ಣನೆ ಮುಂದಿನಂತಿದೆ.

ಬ್ರಾಹ್ಮೀ ಮಾಹೇಶ್ವರಿ ಚಂಡಿ ವಾರಾಹಿ ವೈಷ್ಣವೀ ತಥಾ |

ಕೌಮಾರಿ ಚೈವ ಚಾಮುಂಡಾ ಚರ್ಚಿಕೆತ್ಯಷ್ಟಮಾತರಃ ||

ಅರ್ಥ : ಬ್ರಾಹ್ಮೀ, ಮಾಹೇಶ್ವರೀ, ಚಂಡಿ, ವಾರಾಹಿ, ವೈಷ್ಣವೀ, ಕೌಮಾರಿ, ಚಾಮುಂಡಾ ಮತ್ತು ಚರ್ಚಿಕಾ ಇವರು ಅಷ್ಟಮಾತೆಯರಾಗಿದ್ದಾರೆ.

ಈ ಮಾತೃಕೆಯರ ದೇವಸ್ಥಾನಗಳು ಅಥವಾ ಮೂರ್ತಿಗಳು ಇಂದಿಗೂ ಭಾರತದಲ್ಲಿ ವಿವಿಧ ಸ್ಥಳಗಳಲ್ಲಿ ಕಂಡು ಬರುತ್ತವೆ. ಇಂದು ದಕ್ಷಿಣ ಭಾರತ ಮತ್ತು ನೇಪಾಳದಂತಹ ಸ್ಥಳಗಳಲ್ಲಿ ಅವುಗಳನ್ನು ಪೂಜಿಸಲಾಗುತ್ತದೆ. ತಾಯಿಯ ರೂಪದಲ್ಲಿ ಪೂಜಿಸಲಾಗುವ ಈ ದೇವಿಯರಲ್ಲಿ ಸ್ತ್ರೀಯ ಪಾಲನೆಪೋಷಣೆ ಮತ್ತು ಸಂಹಾರ ಮಾಡುವ ಹೀಗೆ ಎರಡೂ ರೂಪಗಳನ್ನು ತೋರಿಸಲಾಗಿದೆ. ಇದರಿಂದ ತಾಯಿ ತನ್ನ ಮಗುವಿನ ಹಿತಕ್ಕಾಗಿ ಪರಿಸ್ಥಿತಿಗನುಸಾರ ಸೌಮ್ಯ ಅಥವಾ ಕಠಿಣವಾಗಬಹುದು ಎಂಬುದು ಸ್ಪಷ್ಟವಾಗುತ್ತದೆ. ಇದಲ್ಲದೇ ವೇದಗಳಲ್ಲಿ ಉಷಾ, ವಾಕ್ ಅಂದರೆ ವಾಣಿ, ಈಡಾ, ಪೃಷ್ಣೀ, ಬೃಹದ್ದೀವಾ, ಏಕಾಷ್ಟಕಾ ಮುಂತಾದ ಎಲ್ಲ ದೇವರುಗಳ ಅಥವಾ ಅಗ್ನಿ ಇತ್ಯಾದಿ ಎಲ್ಲ ದೇವತೆಗಳ ತಾಯಿಯೆಂದು ವರ್ಣಿಸಲಾಗಿದೆ.

೮. ಭಕ್ತರಿಗೆ ಈಶ್ವರನ ದೇವತ್ವಕ್ಕಿಂತ ಅವನಲ್ಲಿನ ಮಾತೃತ್ವಭಾವದ ಆಕರ್ಷಣೆಯೇ ಹೆಚ್ಚು !

ಇದರೊಂದಿಗೆಯೇ ವೇದಮಾತೆ ಎಂದು ಗಾಯತ್ರಿ ಅಥವಾ ಚಂಡಿ ಇವರ ಸ್ತುತಿಯೂ ಕಂಡು ಬರುತ್ತದೆ. ವೇದಗಳ ನಂತರ ಪುರಾಣಕಾಲದಲ್ಲಿ ಮತ್ತು ಇಂದಿಗೂ ಯಾರನ್ನು ಪ್ರಮುಖವಾಗಿ ಉಪಾಸನೆ ಮಾಡಲಾಗುತ್ತದೆಯೋ, ಆ ಲಕ್ಷ್ಮೀ, ಪಾರ್ವತಿ, ಸರಸ್ವತಿ ಮುಂತಾದ ದೇವಿಯರನ್ನು ಸಹ ‘ತಾಯಿ ಎಂದು ನೋಡಲಾಗುತ್ತದೆ. ಅವರನ್ನು ಪೂಜಿಸಿ, ಅವರ ಮಾತೃತ್ವದ ಛಾಯೆ ನಮಗೆ ಸತತವಾಗಿ ಸಿಗಲಿ ಎಂಬ ಇಚ್ಛೆಯನ್ನು ನಾವು ಇಟ್ಟುಕೊಳ್ಳುತ್ತೇವೆ.

ಅರ್ಧನಾರಿನಟೇಶ್ವರನಂತಹ ದೇವತೆಯ ಉಪಾಸನೆಯೂ, ಯಾವುದೇ ದೇವತೆಗೆ ತಾಯಿಯ ರೂಪದ ಸ್ತ್ರೀತ್ವವಿಲ್ಲದೇ ಪೂರ್ಣತ್ವ ಪ್ರಾಪ್ತವಾಗುವುದಿಲ್ಲವೆಂದು ಸಿದ್ಧಪಡಿಸುತ್ತದೆ. ಪ್ರಕೃತಿಯ ಮೂರ್ತ ಮತ್ತು ಅಮೂರ್ತ ಸೃಷ್ಟಿಗಳ ಮುಂದೆ ನತಮಸ್ತಕರಾಗಿ ಅವುಗಳಲ್ಲಿ ಮಾತೃಪ್ರೇಮವನ್ನು ನೋಡುವ ವೈದಿಕ ಋಷಿಗಳಿಂದ ಹಿಡಿದು ನಮ್ಮೆಲ್ಲ ಅಪರಾಧಗಳನ್ನು ಕ್ಷಮಿಸಿ ಪ್ರೀತಿಯ ನೆರಳನ್ನು ನೀಡುವ ವಿಠ್ಠಲನನ್ನು ತಾಯಿ ಎಂದು ತಿಳಿದು ಅವರ ದರ್ಶನಕ್ಕೆ ಹೋಗುವ ವಾರಕರಿ ಸಮುದಾಯದ ವರೆಗೆ ಎಲ್ಲರಿಗೂ ಈಶ್ವರನ ದೇವತ್ವಕ್ಕಿಂತ ಅವನಲ್ಲಿನ ಮಾತೃತ್ವಭಾವವೇ ಹೆಚ್ಚು ಆಕರ್ಷಿಸುತ್ತದೆ.

– ಪ್ರಾಚೀ ಪಾಠಕ (ಆಧಾರ : ಮಾಸಿಕ ‘ವಿವೇಕ, ಹಿಂದಿ)