ಕಣ್ಮರೆಯಾಗುತ್ತಿರುವ ಮುಗ್ಧತೆ !

ಸದ್ಯ, ೧೨ ರಿಂದ ೧೩ ವರ್ಷ ವಯಸ್ಸಿನ ಹುಡುಗ-ಹುಡುಗಿಯರಲ್ಲಿ ಒಂದು ಹೊಸ ‘ಟ್ರೆಂಡ್’ (ಹೊಸ ರೂಢಿ) ಆರಂಭವಾಗಿದೆ ! ಈ ಮಕ್ಕಳು ತಮ್ಮೊಳಗೆ ಪರಸ್ಪರ ಕೇಳಿಕೊಳ್ಳುತ್ತಾರೆ, ‘ನಿನಗೆ ‘ಬಾಯ್‌ಫ್ರೆಂಡ್’ (ಪ್ರಿಯಕರ) ಇದ್ದಾನಾ ?’ ಅಥವಾ ‘ನಿನಗೆ ‘ಗರ್ಲ್‌ಫ್ರೆಂಡ್’ (ಪ್ರೇಯಸಿ) ಇದ್ದಾಳಾ ?’ ಹಾಗೇನಾದರೂ ಇದ್ದರೆ, ಅದುನ್ನು ಅವರ ದೃಷ್ಟಿಯಲ್ಲಿ ಗೌರವದ ವಿಷಯವೆಂದು ಪರಿಗಣಿಸಲಾಗುತ್ತದೆ; ಆದರೆ ಒಂದು ವೇಳೆ ಯಾವುದೇ ಹುಡುಗನಿಗೆ ಪ್ರೇಯಸಿ ಇಲ್ಲದಿದ್ದರೆ ಅಥವಾ ಹುಡುಗಿಗೆ ಪ್ರಿಯಕರ ಇಲ್ಲದಿದ್ದರೆ, ಅವರನ್ನು ಕೀಳಾಗಿ ಕಾಣಲಾಗುತ್ತದೆ ಅಥವಾ ಸ್ನೇಹದಲ್ಲಿ ದೂರವಿಡಲಾಗುತ್ತದೆ ಅಥವಾ ‘ದಡ್ಡರು’ ಎಂದು ತಿಳಿಯಲಾಗುತ್ತದೆ. ಈ ಮಕ್ಕಳ ವಯಸ್ಸು ಎಷ್ಟು ? ಅವರು ಏನು ಮಾಡುತ್ತಿದ್ದಾರೆ ? ಓದುವುದು ಬಿಟ್ಟು ಈ ಮಕ್ಕಳು ಯಾವುದರ ಹಿಂದೆ ಬಿದ್ದಿದ್ದಾರೆ ? ಈ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜವಾಗಿದೆ. ಪೋಷಕರು ಕೂಡ ಕೆಲವೊಮ್ಮೆ ಇದು ಹೊಸ ‘ಟ್ರೆಂಡ್’ ಎಂದು ತಿಳಿದು ನಿರ್ಲಕ್ಷಿಸುತ್ತಾರೆ ಅಥವಾ ನಕ್ಕು ತಳ್ಳಿಹಾಕುತ್ತಾರೆ; ಆದರೆ ಇದು ಅಂದುಕೊಂಡಷ್ಟು ಸರಳವಲ್ಲ. ಯಾವ ವಿಷಯವನ್ನು ೧೮ ಅಥವಾ ೨೦ ವರ್ಷಗಳ ನಂತರ ಅನುಭವಿಸುವುದು ಸೂಕ್ತವೋ, ಅದನ್ನು ಈ ಅಬೋಧ ವಯಸ್ಸಿನಲ್ಲಿ ಅನುಭವಿಸಲಾಗುತ್ತಿದ್ದರೆ, ಅದನ್ನು ಗಂಭೀರ ಎಂದು ಪರಿಗಣಿಸಬೇಕಾಗುತ್ತದೆ. ಯಾವ ವಯಸ್ಸಿನ ಮಕ್ಕಳಿಗೆ ಪ್ರೌಢಾವಸ್ಥೆಗೆ ಬಂದ ನಂತರ ಆಕರ್ಷಣೆಯ ಭಾವನೆ ಮತ್ತು ಪ್ರೇಮದ ಭಾವನೆಯನ್ನು ನಿಭಾಯಿಸಲು ಏನು ಮಾಡಬೇಕು ? ಎಂಬುದು ಗೊತ್ತಿಲ್ಲವೋ, ಅವರು ಕೇವಲ ಆಕರ್ಷಣೆಯಿಂದ ಇಂತಹ ಚರ್ಚೆ ಮಾಡುತ್ತಿದ್ದರೆ, ಅದು ದೇಶದ ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಮತ್ತು ಮಹಾಶಕ್ತಿಯ ಕನಸು ಕಾಣುತ್ತಿರುವ ಭಾರತಕ್ಕೆ ಮಾರಕವಾಗಬಹುದು.

ಹಿಂದೆ, ಈ ವಯಸ್ಸಿನ ಹುಡುಗ-ಹುಡುಗಿಯರಲ್ಲಿ ಓದಿನ ಸ್ಪರ್ಧೆ ಇರುತ್ತಿತ್ತು. ರಜೆಯ ಸಮಯದಲ್ಲಿ ಎಲ್ಲಿಗೆಲ್ಲಾ ಪ್ರವಾಸಕ್ಕೆ ಹೋಗಬೇಕು ?, ಹೇಗೆ ಮೋಜು ಮಾಡಬೇಕು ? ಎಂಬ ಚರ್ಚೆಗಳು ನಡೆಯುತ್ತಿದ್ದವು. ಕೆಲವೊಮ್ಮೆ ‘ನಾನು ಭವಿಷ್ಯದಲ್ಲಿ ಹೀಗಾಗಬೇಕು’ ಎಂದು ಕನಸುಗಳನ್ನು ಕಾಣುತ್ತಿದ್ದರು. ಈಗ, ‘ಪ್ರವಾಸಕ್ಕೆ ಹೋಗಬೇಕು; ಆದರೆ ಪ್ರೇಯಸಿಯೊಂದಿಗೆ’ ಎಂದು ನಿರ್ಧರಿಸಲಾಗುತ್ತದೆ. ಈಗ ಚಿಕ್ಕ ವಯಸ್ಸಿನಲ್ಲಿಯೇ ಪ್ರೇಮದ ಪ್ರಮಾಣವಚನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಿಜವಾಗಿಯೂ ಓದುವ ಆಸಕ್ತಿ ಇರುವ ಮಕ್ಕಳಿಗೆ ಈ ಪರಿಸ್ಥಿತಿ ವಿಚಲಿತ ಮಾಡಬಹುದು. ಈ ವಯಸ್ಸಿನಲ್ಲಿ ಯಾವುದೇ ಪ್ರಬುದ್ಧತೆ ಇಲ್ಲದ್ದರಿಂದ, ಅವರಿಗೆ ‘ಪ್ರೇಮ’ ಎಂದರೇನು ? ಎಂಬುದು ಸರಿಯಾಗಿ ತಿಳಿದಿರುವುದಿಲ್ಲ ಮತ್ತು ಓದಿನಲ್ಲೂ ಗಮನ ಇರುವುದಿಲ್ಲ. ಇದರಿಂದ ಇಡೀ ತರಗತಿಯ ಮೇಲೆ, ಆ ಮೂಲಕ ಶಾಲೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೂ ಪರಿಣಾಮ ಆಗಬಹುದು. ಮಕ್ಕಳಲ್ಲಿ ಮುಗ್ಧತೆ ಮಾಯವಾಗಿ ಇಂತಹ ವಿಷಯಗಳನ್ನು ನಿಭಾಯಿಸುವುದರಿಂದ ಅವರು ಅಕಾಲಿಕವಾಗಿ ದೊಡ್ಡವರಾಗುತ್ತಾರೆ. ಇದು ಅಪಾಯಕಾರಿಯಾಗಿದೆ. ಹಿಂದೆ ಪೋಷಕರ ಮುಂದೆ ಸ್ನೇಹಿತರೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತಿದ್ದ ಮಕ್ಕಳು ಇಂದು ಪೋಷಕರ ಕಣ್ಣಿನಲ್ಲಿ ಕಣ್ಣಿಟ್ಟು (ಬಾಲಿಶ) ಪ್ರೀತಿಯನ್ನು ವ್ಯಕ್ತಪಡಿಸಿ ಪ್ರೌಢಿಮೆಯನ್ನು ಮೆರೆಯುತ್ತಿದ್ದಾರೆ. ‘ನನಗೆ ಪ್ರಿಯಕರ ಅಥವಾ ಪ್ರೇಯಸಿ ಇಲ್ಲ’ ಎಂಬ ವಿಚಾರ ಮಕ್ಕಳನ್ನು ನಿರಾಶೆಯತ್ತ ಕೊಂಡೊಯ್ಯುತ್ತಿದೆ. ಪೋಷಕರು ಈ ವಯಸ್ಸಿನ ಹುಡುಗ-ಹುಡುಗಿಯರನ್ನು ಎಚ್ಚರಿಕೆಯಿಂದ ನಿಭಾಯಿಸಿ, ಅವರ ಮುಂದೆ ಬೇರೆ ಗುರಿಯನ್ನು ಇಡಬೇಕು. ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ಮತ್ತು ‘ಪ್ರೇಮ’, ‘ಲೈಂಗಿಕತೆ’, ‘ಹಣ’ವನ್ನು ಆಕರ್ಷಿಸುವ ಹೊರಗಿನ ಪರಿಸ್ಥಿತಿಯು ಮಕ್ಕಳ ಭವಿಷ್ಯ ವನ್ನು ಹಾಳು ಮಾಡಬಹುದು. ಆದ್ದರಿಂದ, ಈ ವಯಸ್ಸಿನ ಮಕ್ಕಳಲ್ಲಿ ಯಾವುದು ಯೋಗ್ಯ-ಯಾವುದು ಅಯೋಗ್ಯ ಎಂದು ತಿಳಿಯುವ ಸದ್ವಿವೇಕ ಬುದ್ಧಿಯನ್ನು ಬೆಳೆಸಲು ಪ್ರಯತ್ನಿಸಬೇಕು !

– ಸೌ. ನಮ್ರತಾ ದಿವೇಕರ, ಸನಾತನ ಆಶ್ರಮ, ದೇವದ, ಪನವೇಲ.