ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ

ಮುಂಬಯಿ – ಮರಾಠಿ ರಂಗಭೂಮಿಯನ್ನು ಆಧುನಿಕ ಮತ್ತು ಪ್ರಾಯೋಗಿಕ ಮಟ್ಟಕ್ಕೆ ಕೊಂಡೊಯ್ದ ಹಾಗೂ ಜಾಗತಿಕ ಮಟ್ಟದ ಗುರುತನ್ನು ತಂದುಕೊಟ್ಟ ಹಿರಿಯ ನಿರ್ದೇಶಕಿ, ನಟಿ ಮತ್ತು ರಂಗಕರ್ಮಿ ವಿಜಯಾ ಮೆಹ್ತಾ ಅವರು ಜೂನ್ ೩೦ ರಂದು ತಮ್ಮ ನಿವಾಸದಲ್ಲಿ ವೃದ್ಧಾಪ್ಯದಿಂದ ನಿಧನರಾದರು. ಅವರಿಗೆ ೯೨ ವರ್ಷ ವಯಸ್ಸಾಗಿತ್ತು. ರಂಗಭೂಮಿಯನ್ನೇ ತಮ್ಮ ಕರ್ಮಭೂಮಿ ಎಂದು ಭಾವಿಸಿದ್ದ ಅವರು, ಆಯುಷ್ಯದ ಕೊನೆಯವರೆಗೂ ನಾಟಕಕ್ಕಾಗಿ ತಮ್ಮನ್ನು ಮುಡುಪಾಗಿಟ್ಟಿದ್ದರು. ​೧೯೬೦ ರಲ್ಲಿ ಅವರು ‘ರಂಗಾಯನ’ ಎಂಬ ಪ್ರಾಯೋಗಿಕ ನಾಟ್ಯಶಾಲೆಯನ್ನು ಸ್ಥಾಪಿಸಿದ್ದರು. ಆ ಮಾಧ್ಯಮದ ಮೂಲಕ ಅವರು ಅನೇಕ ಪ್ರಸ್ತಾಪಿತ ಚೌಕಟ್ಟುಗಳನ್ನು ಮುರಿದರು. ನಾಟ್ಯಕ್ಷೇತ್ರದಲ್ಲಿ ಅವರು ‘ಬಾಯಿ’ ಎಂದೇ ಅತ್ಯಂತ ಆದರದಿಂದ ಗುರುತಿಸಲ್ಪಡುತ್ತಿದ್ದರು. ಅನೇಕ ಹಿರಿಯ ಕಲಾವಿದರು, ಲೇಖಕರು, ನಿರ್ದೇಶಕರು ಅವರ ಗರಡಿಯಲ್ಲಿ ಪಳಗಿದ್ದರು. ವಿಕ್ರಮ ಗೋಖಲೆ, ಭಕ್ತಿ ಬರ್ವೆ, ಸುಕನ್ಯಾ ಕುಲಕರ್ಣಿ, ನಾನಾ ಪಾಟೇಕರ್, ನೀನಾ ಕುಲಕರ್ಣಿ, ರೀಮಾ ಲಾಗೂ ಮುಂತಾದ ಅನೇಕ ದಿಗ್ಗಜ ಮರಾಠಿ ಕಲಾವಿದರ ದಂಡೇ ಅವರ ಶಿಸ್ತಿನಿಂದ ರೂಪುಗೊಂಡಿತು.

‘ಹಮಿದಾಬಾಯಿಚಿ ಕೋಠಿ’, ‘ವಾಡಾ ಚಿರೇಬಂದಿ’, ‘ಸಂಧ್ಯಾಛಾಯಾ’, ‘ಅಖೇರಚಾ ಸವಾಲ’, ‘ಬ್ಯಾರಿಸ್ಟರ್’, ‘ಸಾವಿತ್ರಿ’, ‘ಪುರುಷ್’ ಮುಂತಾದ ಅನೇಕ ಪ್ರಸಿದ್ಧ ನಾಟಕಗಳನ್ನು ಅವರು ನಿರ್ದೇಶಿಸಿದ್ದರು ಮತ್ತು ಅದರಲ್ಲಿ ನಟಿಸಿದ್ದರು. ‘ಪೆಸ್ತನಜಿ’, ‘ಸ್ಮೃತಿಚಿತ್ರೆ’, ‘ರಾವ್ ಸಾಹೇಬ್’ ಮುಂತಾದ ಅವರ ಮರಾಠಿ ಚಲನಚಿತ್ರಗಳೂ ಎಲ್ಲರ ನೆನಪಿನಲ್ಲಿ ಉಳಿದಿವೆ. ‘ಮರಾಠಿ ರಂಗಭೂಮಿಯ ಒಂದು ಅನುಭವಸಂಪನ್ನ ಮತ್ತು ವೈಚಾರಿಕ ಸುವರ್ಣಯುಗ ಅವರೊಂದಿಗೆ ಕೊನೆಗೊಂಡಿತು’, ಎಂಬ ಪ್ರತಿಕ್ರಿಯೆಯೇ ರಂಗಭೂಮಿಯ ಕ್ಷೇತ್ರದಿಂದ ವ್ಯಕ್ತವಾಗುತ್ತಿದೆ. ಅವರ ನಿಧನದ ನಂತರ ಮರಾಠಿ ನಾಟಕ ಮತ್ತು ಚಲನಚಿತ್ರ ಸೃಷ್ಟಿಯ ಪ್ರಮುಖ ಕಲಾವಿದರು ಶೋಕ ಸಂದೇಶಗಳನ್ನು ಪ್ರಸಾರ ಮಾಡಿದ್ದಾರೆ. ‘ನ್ಯಾಷನಲ್ ಸೆಂಟರ್ ಫಾರ್ ದ ಪರಫಾರ್ಮಿಂಗ್ ಆರ್ಟ್ಸ್’ ಅಂದರೆ ‘ಎನ್.ಸಿ.ಪಿ.ಎ.’ ಸಂಸ್ಥೆಯ ನಿರ್ದೇಶಕ ಹುದ್ದೆಯಲ್ಲಿ ಅವರು ೧೭ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ‘ಝಿಮ್ಮಾ : ಆಠವಣಿಂಚಾ ಗೋಫ’ ಎಂಬ ಅವರ ಆತ್ಮಚರಿತ್ರೆಯೂ ಅವರ ಸುಂದರ ಜೀವನ ಪ್ರಯಾಣವನ್ನು ವರ್ಣಿಸುತ್ತದೆ. ಸರಕಾರವು ಅವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು.