ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram

  • ಜಗದ್ಗುರು ಸಂತ ತುಕಾರಾಂ ಮಹಾರಾಜರ ವೈಕುಂಠಗಮನದ ಕುರಿತು ಶರದ್ ಪವಾರ್ ಅವರ ಆಕ್ಷೇಪಾರ್ಹ ಹೇಳಿಕೆ!

  • ವಾರಕರಿ ಸಂಪ್ರದಾಯದಿಂದ ತೀವ್ರ ಆಕ್ರೋಶ!

ಜಗದ್ಗುರು ಸಂತ ತುಕಾರಾಂ ಮಹಾರಾಜರು ವೈಕುಂಠ ಪೀಠಾರೋಹಣದ 375ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶರದ್ ಪವಾರ್.

ಪಿಂಪ್ರಿ-ಚಿಂಚವಡ (ಮಹಾರಾಷ್ಟ್ರ) – ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ. ಹಾಗೆ ಹೇಳುವುದೆಂದರೆ, ಒಂದು ನಿರ್ದಿಷ್ಟ ವರ್ಗವು ತನ್ನ ಕೃತ್ಯಗಳನ್ನು ಮುಚ್ಚಿಡಲು ಹೇರಿದ ಸಂಗತಿಗಳನ್ನು ನಿಜವೆಂದು ನಂಬಿದಂತೆ ಆಗುತ್ತದೆ ಎಂದು ಅಕುರ್ಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರವಾದಿ ಶರದ್ ಚಂದ್ರ ಪವಾರ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಜಗದ್ಗುರು ಸಂತ ತುಕಾರಾಂ ಮಹಾರಾಜರ 375ನೇ ವೈಕುಂಠಗಮನ ವರ್ಷದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಆಷಾಢ ಏಕಾದಶಿ ಮತ್ತು ಪಲ್ಲಕ್ಕಿ ಉತ್ಸವದ ಪವಿತ್ರ ವಾತಾವರಣದ ನಡುವೆಯೇ ಮಹಾರಾಷ್ಟ್ರದ ಆರಾಧ್ಯ ದೈವ ಹಾಗೂ ಸಂತರ ಪರಂಪರೆಯ ಮೇಲೆ ನಡೆದ ಈ ಕೆಸರೆರಚಾಟದಿಂದ ವಾರಕರಿ ಸಂಪ್ರದಾಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಆಕ್ರೋಶದ ಅಲೆ ಎದ್ದಿದೆ. ರಾಜಕೀಯ ಸ್ವಾರ್ಥಕ್ಕಾಗಿ ಸಂತರ ಇತಿಹಾಸ ಮತ್ತು ವಾರಕರಿಗಳ ಅಸ್ಮಿತೆಯನ್ನು ಹದಗೆಡಿಸುವುದನ್ನು ನಿಲ್ಲಿಸಿ ಎಂದು ವಾರಕರಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಶರದ್ ಪವಾರ್ ಅವರು ಈ ಹೇಳಿಕೆಯ ನಂತರ ತಮ್ಮ ಅಧಿಕೃತ ಫೇಸ್‌ಬುಕ್ ಪೋಸ್ಟ್‌ನಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತಾ, ಜಗದ್ಗುರು ತುಕೋಬಾರಾಯರ ಭಲೇ ತರೀ ದೇಊ ಕಾಸೇಚೀ ಲಂಗೋಟೀ, ನಾಠಾಳಾಚೇ ಮಾಥೀ ಹಾ ಣೂ ಕಾಠೀ (ಒಳ್ಳೆಯವರಿಗೆ ನಮ್ಮ ಸರ್ವಸ್ವವನ್ನಾದರೂ ನೀಡೋಣ, ಆದರೆ ದುಷ್ಟರ ತಲೆಗೆ ಕೋಲಿನಿಂದ ಹೊಡೆಯೋಣ) ಎಂಬ ಅಭಂಗದ ಉಲ್ಲೇಖವನ್ನು ನೀಡಿದ್ದಾರೆ. (ಸಂತರ ಹೆಸರಿನಲ್ಲಿ ತಮ್ಮ ಹಿಂದೂ ವಿರೋಧಿ ಕಾರ್ಯಸೂಚಿಯನ್ನು ಜಾರಿಗೊಳಿಸುವ ರಾಜಕಾರಣಿಗಳಿಗೆ ವಾರಕರಿ ಸಂಪ್ರದಾಯದ ದೈವಿಕ ತತ್ವಜ್ಞಾನವೇ ತಕ್ಕ ಉತ್ತರ ನೀಡಬಲ್ಲದು! – ಸಂಪಾದಕರು)

ಸಂತರ ವಿಚಾರಗಳು ಶರದ್ ಪವಾರ್ ಅವರಿಗೆ ಒಪ್ಪಿಗೆಯಿಲ್ಲ ! – ಆಚಾರ್ಯ ತುಷಾರ್ ಭೋಸಲೆ, ರಾಜ್ಯ ಅಧ್ಯಕ್ಷರು, ಭಾಜಪ ಆಧ್ಯಾತ್ಮಿಕ ರಂಗ

ಆಚಾರ್ಯ ತುಷಾರ್ ಭೋಸಲೆ

ಶರದ್ ಪವಾರ್ ಅವರಿಗೆ ಮೂಲತಃ ಹಿಂದೂ ಸಂತರು ಮತ್ತು ಅವರ ವಿಚಾರಗಳು ಒಪ್ಪಿಗೆಯಿಲ್ಲ. ಜಗದ್ಗುರು ತುಕೋಬಾ ಸೇರಿದಂತೆ ಇತರ ಸಮಕಾಲೀನ ಸಂತರ ವೈಕುಂಠಗಮನದ ಅಭಂಗಗಳು ಲಭ್ಯವಿರುವಾಗ, ಅದರ ಬಗ್ಗೆ ಅವರು ಪ್ರಶ್ನೆ ಎತ್ತದಿದ್ದರೆ ಅವರೇನು ಶರದ್ ಪವಾರ್? ಆದರೆ ಅವರು ಒಪ್ಪಲಿ ಅಥವಾ ಬಿಡಲಿ ಅದರಿಂದ ಯಾವುದೇ ಪ್ರಯೋಜನವಿಲ್ಲ; ಏಕೆಂದರೆ ಮಹಾರಾಷ್ಟ್ರದ ಲಕ್ಷಾಂತರ ವಾರಕರಿಗಳು ಕಳೆದ 375 ವರ್ಷಗಳಿಂದ ಜಗದ್ಗುರು ಸಂತ ತುಕಾರಾಂ ಮಹಾರಾಜರ ವೈಕುಂಠಗಮನವನ್ನು ನಂಬುತ್ತಾರೆ ಮತ್ತು ಚಂದ್ರ-ಸೂರ್ಯರಿರುವವರೆಗೂ ಈ ಸತ್ಯವು ಇಂತಹ ಯಾರೋ ಒಬ್ಬರ ಮಾತುಗಳಿಂದ ಬದಲಾಗುವುದಿಲ್ಲ.

 

 

 

ಸುದ್ದಿಯಲ್ಲಿರಲು ನಡೆಸುತ್ತಿರುವ ಹತಾಶೆಯ ಪ್ರಯತ್ನ ! – ಹ.ಭ.ಪ. ರಾಮಕೃಷ್ಣ ಹನುಮಂತ್ ಮಹಾರಾಜ್ ವೀರ, ವಾರಕರಿ ಪೈಕ್ ಸಂಘ

ಎಚ್.ಬಿ.ಪಿ. ರಾಮಕೃಷ್ಣ ಹನುಮಂತ ಮಹಾರಾಜ್ ವೀರ

ಯಾವುದೇ ಒಂದು ವಿಷಯವನ್ನು ಉದ್ದೇಶಪೂರ್ವಕವಾಗಿ ಮತ್ತು ತಪ್ಪು ದೃಷ್ಟಿಕೋನದಿಂದ ಸಮಾಜದ ಮುಂದೆ ಮಂಡಿಸುವುದನ್ನು ಶಾಸ್ತ್ರದಲ್ಲಿ ಪ್ರಮಾದ ಎಂಬ ದೋಷ ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಜಕೀಯ ಜೀವನ ಮತ್ತು ಪಕ್ಷವು ಧೂಳೀಪಟವಾದ ನಂತರವೂ, ಹೇಗಾದರೂ ಮಾಡಿ ತಾವೇ ಸುದ್ದಿಯ ಕೇಂದ್ರಬಿಂದುವಾಗಿ ಇರಬೇಕು ಎಂಬುದಕ್ಕಾಗಿ ನಡೆಸುತ್ತಿರುವ ಹತಾಶೆಯ ಪ್ರಯತ್ನ ಇದಾಗಿದೆ. ಸಮಾಜದಲ್ಲಿ ಬಿರುಕು ಮೂಡಿಸುವುದೇ ಇವರ ಇಂದಿನವರೆಗಿನ ಬಂಡವಾಳವಾಗಿದೆ. ಇದು ಇವರ ಮೊದಲ ಪ್ರಯತ್ನವೇನಲ್ಲ. ಇವರ ಇಂತಹ ಎಲ್ಲಾ ಪ್ರಯತ್ನಗಳಿಗೆ ವಾರಕರಿ ಸಂಪ್ರದಾಯದ ತತ್ವಜ್ಞಾನವೇ ಸದಾ ಮೇಲುಗೈ ಸಾಧಿಸಲಿದೆ.

ಸಂಪಾದಕೀಯ ನಿಲುವು

  • ತಮ್ಮನ್ನು ಪ್ರಗತಿಪರರೆಂದು ಕರೆದುಕೊಳ್ಳುವವರಿಗೆ ಹಿಂದೂ ಸಂತರ ಅಲೌಕಿಕತೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಕ್ಕೇ ಅವರು ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ವಾರಕರಿ ಸಂಪ್ರದಾಯವು ಇಂತವರಿಂದ ಕ್ಷಮೆಯಾಚಿಸುವಂತೆ ಮಾಡಲೇಬೇಕು!
  • ಆಧ್ಯಾತ್ಮದ ಸಾಸಿವೆಯಷ್ಟೂ ಅಭ್ಯಾಸವಿಲ್ಲದವರಿಗೆ ವೈಕುಂಠಗಮನದಂತಹ ಅತ್ಯುನ್ನತ ಮಟ್ಟದ ಸ್ಥಿತಿಯ ಬಗ್ಗೆ ಏನು ತಾನೇ ತಿಳಿಯಲು ಸಾಧ್ಯ?