ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam

  • ಮಹಾರಾಷ್ಟ್ರ ಕಂದಾಯ ಸಚಿವರಿಂದ ಜಿಲ್ಲಾಧಿಕಾರಿಗಳಿಗೆ ಆದೇಶ

  •  ಮಹಾರಾಷ್ಟ್ರ ಮಂದಿರ ಮಹಾಸಂಘದ ನಿರಂತರ ಪ್ರಯತ್ನಕ್ಕೆ ಸಂದ ಜಯ

ಮುಂಬಯಿ – ಲಕ್ಷಾಂತರ ಹಿಂದೂ ಭಕ್ತರ ಕುಲದೇವತೆಯಾಗಿರುವ ತುಳಜಾಪುರದ ಶ್ರೀ ತುಳಜಾಭವಾನಿ ದೇವಿಯ ೪ ಸಾವಿರದ ೧೨೧ ಎಕರೆಗೂ ಅಧಿಕ ಇನಾಮು ಭೂಮಿಯ ಅನಧಿಕೃತ ವರ್ಗಾವಣೆ ಮತ್ತು ಮಾರಾಟದ ಪ್ರಕರಣಗಳ ಬಗ್ಗೆ ಈಗ ಮಹಾರಾಷ್ಟ್ರ ರಾಜ್ಯ ಸರಕಾರದ ವತಿಯಿಂದ ತನಿಖೆ ನಡೆಸಲಾಗುವುದು. ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನೀಲ ಘನವಟ್ ಅವರು ನೀಡಿದ ವಿವರವಾದ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ರಾಜ್ಯದ ಕಂದಾಯ ಸಚಿವ ಚಂದ್ರಶೇಖರ ಬಾವಂಕುಳೆ ಅವರು, ಧಾರಾಶಿವ್ ಜಿಲ್ಲಾಧಿಕಾರಿಗಳಿಗೆ ಈ ಕುರಿತು ತಕ್ಷಣವೇ ತನಿಖಾ ಸಮಿತಿಯನ್ನು ನೇಮಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಅಂದಿನ ನಿಜಾಮ್ ಸರಕಾರವು ಶ್ರೀ ತುಳಜಾಭವಾನಿ ದೇವಿಗೆ ೧ ಸಾವಿರದ ೬೬೬.೧೪ ಹೆಕ್ಟೇರ್, ಅಂದರೆ ಅಂದಾಜು ೪ ಸಾವಿರದ ೧೨೧.೧೪ ಎಕರೆ ಭೂಮಿಯನ್ನು ಬಹುಮಾನ ಎಂದು ನೀಡಿತ್ತು. ಕಾನೂನಿನ ಪ್ರಕಾರ ಈ ಭೂಮಿಯನ್ನು ಖರೀದಿ ಅಥವಾ ಮಾರಾಟ ಮಾಡಲು ಬರುವುದಿಲ್ಲ ಮತ್ತು ಇದಕ್ಕೆ ‘ಗೇಣಿ ಕಾಯ್ದೆ’ (ಕುಳ ಕಾಯ್ದೆ) ಕೂಡ ಅನ್ವಯಿಸುವುದಿಲ್ಲ. ಹೀಗಿದ್ದೂ, ಕಂದಾಯ ಅಧಿಕಾರಿಗಳು ಮತ್ತು ಇತರ ವ್ಯಕ್ತಿಗಳ ಶಾಮೀಲಾತಿಯಿಂದ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಲಾಗಿದೆ ಎಂಬ ಆರೋಪವಿದೆ.

ಶ್ರೀ ತುಳಜಾಭವಾನಿ ದೇವಿ ಸಂಸ್ಥಾನದ ಹೆಸರಿನಲ್ಲಿ ಕಾಗದ ಪತ್ರಗಳ ಪ್ರಕಾರ ೩ ಸಾವಿರದ ೩೯೭ ಎಕರೆ ಭೂಮಿ ಇದ್ದರೆ, ಪ್ರತ್ಯಕ್ಷ ಸ್ವಾಧೀನ ಮಾತ್ರ ೪ ಮಠಗಳ ಖಾಸಗಿ ವ್ಯಕ್ತಿಗಳ ಬಳಿ ಇದೆ. ಇದರೊಂದಿಗೆ ‘ಜಗದಂಬಾ ನ್ಯಾಸ’ (ಟ್ರಸ್ಟ್) ಹೆಸರಿನಲ್ಲಿದ್ದ ೪೦೩ ಎಕರೆ ಭೂಮಿಯನ್ನು ಮುಖ್ಯ ಟ್ರಸ್ಟ್‌ಗೆ ಕತ್ತಲಲ್ಲಿಟ್ಟು, ನೇರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಲಾಗಿದೆ. ಕಾನೂನನ್ನು ಉಲ್ಲಂಘಿಸಿ ೬೩.೦೩ ಎಕರೆ ಭೂಮಿಯ ಪೈಕಿ ಕೆಲವು ಭೂಮಿಯನ್ನು ‘ರಕ್ಷಿತ ಗೇಣಿದಾರರು’ ಎಂದು ತೋರಿಸಿ ಅನಧಿಕೃತವಾಗಿ ಮಾರಾಟ ಮಾಡಲಾಗಿದೆ. ಇನ್ನು ಒಬ್ಬ ಪ್ರಧಾನ ಗುಮಾಸ್ತ (ಅವ್ವಲ್ ಕಾರ್ಕುನ್) ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ೨೬೧ ಎಕರೆ ಭೂಮಿಯನ್ನು ೭೩ ಖಾಸಗಿ ವ್ಯಕ್ತಿಗಳ ಹೆಸರಿಗೆ ೭/೧೨ ಉತಾರಾದಲ್ಲಿ (ಪಹಣಿ) ದಾಖಲಿಸಿದ್ದಾನೆ. ಇದಲ್ಲದೆ, ಅಪ್ಸಿಂಗಾ ಮತ್ತು ಉಫಳಾ ಗ್ರಾಮಗಳ ೧೫೮ ಎಕರೆ ಭೂಮಿಯನ್ನು ಅನಧಿಕೃತವಾಗಿ (ಹಕ್ಕು ಬದಲಾವಣೆ) ದಾಖಲೆಗಳನ್ನು ಮಾಡಿ ಲೂಟಿ ಮಾಡಲಾಗಿದೆ.

ಈ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ತಕ್ಷಣವೇ ಮೊಕದ್ದಮೆ ದಾಖಲಿಸಿ! – ಸುನೀಲ ಘನವಟ್, ರಾಷ್ಟ್ರೀಯ ಸಂಘಟಕ, ಮಂದಿರ ಮಹಾಸಂಘ

ಶ್ರೀ ಸುನೀಲ್ ಘನ್ವತ್, ರಾಷ್ಟ್ರೀಯ ಸಂಘಟಕರು, ಮಂದಿರ ಮಹಾಸಂಘ

ಈ ಪ್ರಕರಣದ ಕಾನೂನುಬಾಹಿರ ವರ್ಗಾವಣೆಯಲ್ಲಿ ಭಾಗಿಯಾಗಿರುವ ಅಂದಿನ ಉಪಜಿಲ್ಲಾಧಿಕಾರಿ, ಟ್ರಸ್ಟಿಗಳು ಮತ್ತು ಸಂಬಂಧಪಟ್ಟ ಪ್ರಭಾವಿ ವ್ಯಕ್ತಿಗಳ ವಿರುದ್ಧ ತಕ್ಷಣವೇ ಮೊಕದ್ದಮೆಗಳನ್ನು ದಾಖಲಿಸಬೇಕು ಎಂಬುದು ಮಹಾಸಂಘದ ಆಗ್ರಹವಾಗಿದೆ. ಸರಕಾರವು ತನ್ನ ವಿಶೇಷ ಅಧಿಕಾರವನ್ನು ಬಳಸಿ ಎಲ್ಲಾ ಅನಧಿಕೃತ ಖರೀದಿ ಪತ್ರಗಳನ್ನು ಹಾಗೂ ೭/೧೨ ಉತಾರಾದಲ್ಲಿನ ದಾಖಲೆಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಸಂಪೂರ್ಣ ೧ ಸಾವಿರದ ೬೬೬.೧೪ ಹೆಕ್ಟೇರ್ ಭೂಮಿಯನ್ನು ಮರಳಿ ಶ್ರೀ ತುಳಜಾಭವಾನಿ ದೇವಸ್ಥಾನದ ಪ್ರತ್ಯಕ್ಷ ನಿಯಂತ್ರಣಕ್ಕೆ ಒಪ್ಪಿಸಬೇಕು ಎಂದು ಮಹಾಸಂಘವು ಒತ್ತಾಯಿಸಿದೆ.

ಸಂಪಾದಕೀಯ ನಿಲುವು

ಇಷ್ಟೊಂದು ಸಾವಿರಾರು ಎಕರೆ ಭೂಮಿಯ ಅನಧಿಕೃತ ವರ್ಗಾವಣೆ ಮತ್ತು ಮಾರಾಟ ಹೇಗೆ ಸಾಧ್ಯ? ಇದರಿಂದ ದೇವಸ್ಥಾನಗಳ ಸರಕಾರೀಕರಣದ ಭೀಕರ ದುಷ್ಪರಿಣಾಮಗಳು ಎದ್ದು ಕಾಣುತ್ತವೆ. ದೇವರ ಸೇವೆಯನ್ನು ಆತನ ಭಕ್ತನೇ ಅತ್ಯುತ್ತಮವಾಗಿ ಮಾಡಲು ಸಾಧ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಹಿಂದೂಗಳ ದೇವಸ್ಥಾನಗಳನ್ನು ತಕ್ಷಣವೇ ಸರಕಾರೀಕರಣದಿಂದ ಮುಕ್ತಗೊಳಿಸುವುದು ಅತ್ಯಗತ್ಯವಾಗಿದೆ!