Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್‌ನ ಹೊಸ ಹೆಜ್ಜೆ!

ಐ.ಬಿ.ಎಮ್. ಈ ಜಾಗತಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆಯೂ ಇದೇ ಹೆಜ್ಜೆಯನ್ನಿಟ್ಟಿದೆ

ಡಿಯರಬಾರ್ನ್ (ಅಮೆರಿಕ) – ವಾಹನಗಳನ್ನು ತಯಾರಿಸುವ ಪ್ರತ್ಪ್ರಸಿದ್ಧ ಸಂಸ್ಥೆಯಾದ ‘ಫೋರ್ಡ್’, ತನ್ನ ನೂರಾರು ಅನುಭವಿ ‘ಮಾನವ’ ಎಂಜಿನಿಯರ್‌ ಗಳನ್ನು ಮರಳಿ ಕೆಲಸಕ್ಕೆ ಸೇರಿಸಿಕೊಂಡಿದೆ. ಈ ಎಂಜಿನಿಯರ್‌ ಗಳು ‘ಎಐ’ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಗಳಿಗೆ ಪರಿಹರಿಸಲು ಸಾಧ್ಯವಾಗದ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕೆಲಸ ಮಾಡಲಿದ್ದಾರೆ. ಇದೇ ರೀತಿ ‘ಕಾಮನ್‌ ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ’ ಮತ್ತು ‘ಐ.ಬಿ.ಎಮ್.’ ನಂತಹ ಪ್ರಸಿದ್ಧ ಸಂಸ್ಥೆಗಳೂ ಸಹ ಎಐ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವಾಗ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದವು; ಆದರೆ ಈಗ ಅವುಗಳೂ ಸಹ ಮತ್ತೊಮ್ಮೆ ಮಾನವ ಸಂಪನ್ಮೂಲದ ಕಡೆಗೆ ಗಮನ ಹರಿಸುತ್ತಿರುವುದು ಕಂಡುಬರುತ್ತಿದೆ.

ಎಐ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ!

ವಿಶ್ಲೇಷಕರ ಪ್ರಕಾರ, ಎಐ ಅನ್ನು ಹೆಚ್ಚಾಗಿ ಬಳಸುವಾಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದು ವ್ಯವಹಾರದ ಬೆಳವಣಿಗೆಗೆ ಅತ್ಯುತ್ತಮ ಮಾರ್ಗವಾಗುವುದು ಎಂದೇನೂ ಇಲ್ಲ. ಇದಕ್ಕೂ ಮುನ್ನ ಎಐ ಎಲ್ಲವನ್ನೂ ಮಾಡಬಲ್ಲದು ಎಂದು ಸಂಸ್ಥೆಗಳು ಭಾವಿಸಿದ್ದವು; ಆದರೆ ಈಗ ಆ ಆಲೋಚನೆಯಲ್ಲಿ ಬದಲಾವಣೆಯಾಗುತ್ತಿದೆ.

‘ಎಐ’ನ ಮಿತಿಗಳ ಬಗ್ಗೆ ೬ ತಜ್ಞರು ಅಥವಾ ಸಂಸ್ಥೆಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು!

೧. ಎಐ ಒಂದು ಅತ್ಯುತ್ತಮ ಸಾಧನವಾಗಿದೆ; ಆದರೆ ಅದನ್ನು ತರಬೇತಿಗೊಳಿಸಲು ಬಳಸಲಾಗುವ ಮಾಹಿತಿ ಎಷ್ಟು ಗುಣಮಟ್ಟದ್ದಾಗಿರುತ್ತದೆಯೋ, ಆ ವ್ಯವಸ್ಥೆಯು ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ!’’ ಫೋರ್ಡ್ ನ ‘ವೆಹಿಕಲ್ ಹಾರ್ಡ್‌ವೇರ್ ಎಂಜಿನಿಯರಿಂಗ್’ ವಿಭಾಗ, ಉಪಾಧ್ಯಕ್ಷರು, ಚಾರ್ಲ್ಸ್ ಪೂನ್

೨. ‘ಕಾಮನವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ’ ಸಂಸ್ಥೆಯು ಉದ್ಯೋಗಿಗಳನ್ನು ಕಡಿಮೆ ಮಾಡುವ ಘೋಷಣೆ ಮಾಡುವಾಗ, ‘ವ್ಯವಹಾರದ ದೃಷ್ಟಿಯಿಂದ ಎಲ್ಲಾ ಸಂಬಂಧಿತ ವಿಷಯಗಳ ಬಗ್ಗೆ ಸೂಕ್ತವಾಗಿ ಯೋಚಿಸಿರಲಿಲ್ಲ’ ಮತ್ತು ‘ಅಗತ್ಯವಿರುವ ಹುದ್ದೆಗಳ ಮೌಲ್ಯಮಾಪನ ಮಾಡುವಾಗ ಇನ್ನಷ್ಟು ಆಳವಾಗಿ ಯೋಚಿಸಬೇಕಾಗಿತ್ತು’ ಎಂದು ಒಪ್ಪಿಕೊಂಡಿದೆ.

೩. ‘ಐ.ಬಿ.ಎಮ್.’ ಸಂಸ್ಥೆಯು ತನ್ನ ಮಾನವ ಸಂಪನ್ಮೂಲ ವಿಭಾಗದ ಕೆಲಸಗಳಿಗಾಗಿ ಎಐ ಬಳಕೆಯನ್ನು ಆರಂಭಿಸಿತ್ತು. ಈ ವ್ಯವಸ್ಥೆಯು ಶೇ. ೯೪ ರಷ್ಟು ನಿಯಮಿತ ವಿನಂತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿತು; ಆದರೆ ನೈತಿಕ ಸಂದಿಗ್ಧತೆಗಳಿದ್ದ ಉಳಿದ ಶೇ. ೬ ರಷ್ಟು ಪ್ರಕರಣಗಳನ್ನು ನಿಭಾಯಿಸುವಲ್ಲಿ ಅದು ವಿಫಲವಾಯಿತು. ತದನಂತರ ಸಂಸ್ಥೆಯು ೨೦೨೬ ರಲ್ಲಿ ತನ್ನ ಎಲ್ಲಾ ವ್ಯವಹಾರ ವಿಭಾಗಗಳಲ್ಲಿ ಅಮೆರಿಕದಲ್ಲಿ ‘ಎಂಟ್ರಿ-ಲೆವೆಲ್’ (ಆರಂಭಿಕ ಹಂತದ) ಉದ್ಯೋಗಿಗಳ ನೇಮಕಾತಿಯನ್ನು ಮೂರು ಪಟ್ಟು ಹೆಚ್ಚಿಸುವ ಯೋಜನೆಯನ್ನು ಘೋಷಿಸಿತು.

೪. ‘ಆಟೊಮೇಷನ್’ (ಸ್ವಯಂಚಾಲಿತ ತಂತ್ರಜ್ಞಾನ) ಅನ್ನು ಪ್ರೋತ್ಸಾಹಿಸಿದ ಅನೇಕ ಸಂಸ್ಥೆಗಳು ನಂತರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಟ್ಟವು; ಏಕೆಂದರೆ ಅವು ಎಐ ಮೇಲೆ ನಿಗಾ ಇಡಲು ಅಗತ್ಯವಾಗಿದ್ದ ಜನರನ್ನು ಕೆಲಸದಿಂದ ಹೊರಹಾಕಿದ್ದವು.- ‘ಇನ್ ಟ್ಯೂಷನ್ ಲ್ಯಾಬ್ಸ್’ ವರದಿ

೫. ಶೇ. ೩೯ ರಷ್ಟು ವ್ಯಾಪಾರಿ ಮುಖಂಡರು ಎಐ ಅನುಷ್ಠಾನದಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದರು. ಆದಾಗ್ಯೂ, ಇವರಲ್ಲಿ ಶೇ. ೫೫ ರಷ್ಟು ಮಾಲೀಕರು ಉದ್ಯೋಗಿಗಳನ್ನು ತೆಗೆದುಹಾಕುವ ತಮ್ಮ ನಿರ್ಧಾರಗಳು ತಪ್ಪು ಎಂದು ಒಪ್ಪಿಕೊಂಡಿದ್ದಾರೆ! – ‘ಆರ್ಗ್‌ವ್ಯೂ’ ವರದಿ

೬. ಎಐನಿಂದಾಗಿ ಕೆಲಸದ ಸ್ಥಳಗಳಲ್ಲಿ ಬದಲಾವಣೆಯಾಗುತ್ತಿದೆ; ಆದರೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವುದಕ್ಕಿಂತ, ಮಾನವ ಮತ್ತು ಎಐ ನಡುವೆ ಸಹಕಾರವನ್ನು ಬೆಳೆಸುವುದರಲ್ಲಿ ಸಂಸ್ಥೆಗಳಿಗೆ ಹೆಚ್ಚಿನ ಮೌಲ್ಯ ಕಂಡುಬರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ! – ‘ಕ್ಯಾಪಿಟಲ್ ಟೆಕ್ನಾಲಜಿ ಯೂನಿವರ್ಸಿಟಿ’ಯ ಅಭಿಪ್ರಾಯ

ಸಂಪಾದಕೀಯ ನಿಲುವು

ಎಐ, ಅಂದರೆ ಕೃತಕ ಬುದ್ಧಿಮತ್ತೆಯು ಅಂತಿಮವಾಗಿ ಮಾನವನೇ ನಿರ್ಮಿಸಿದ ಒಂದು ವ್ಯವಸ್ಥೆಯಾಗಿದೆ. ಭಗವಂತನು ಮಾನವನಂತಹ ಸುಧಾರಿತ ಯಂತ್ರವನ್ನು ಸೃಷ್ಟಿಸಿದ್ದಾನೆ, ಅದರ ಸ್ಥಾನವನ್ನು ಬೇರೆ ಯಾರೂ ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ, ಎಂಬುದನ್ನು ಈ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ ಮತ್ತು ಇದರಿಂದ ವಿಜ್ಞಾನಿಗಳಿಗೆ ಯೋಚಿಸುವಂತೆ ಪ್ರೇರೇಪಿಸುತ್ತವೆ!