Hindu Marriage Act : ಹಿಂದೂ ವಿವಾಹ: ಹೈಕೋರ್ಟ್‌ನ ಮಹತ್ವದ ಸ್ಪಷ್ಟನೆ

ಗುಜರಾತ್ ಹೈಕೋರ್ಟ್‌ನ ಮಹತ್ವದ ತೀರ್ಪು

ಕರ್ಣಾವತಿ (ಗುಜರಾತ್) – ಹಿಂದೂ ಸಂಸ್ಕೃತಿಯಲ್ಲಿ ವಿವಾಹವನ್ನು ಒಂದು ‘ಸಂಸ್ಕಾರ’ ಎಂದು ಪರಿಗಣಿಸಲಾಗಿದೆ. ಹಿಂದೂ ವಿವಾಹ ಕಾಯ್ದೆಯ ಪ್ರಕಾರ ವಿವಾಹ ಮಾನ್ಯವಾಗಲು ಕೇವಲ ವಿವಾಹ ನೋಂದಣಿ ಪ್ರಮಾಣಪತ್ರವಿದ್ದರೆ ಸಾಲದು, ಸಪ್ತಪದಿ ಮತ್ತು ಇತರ ಅಗತ್ಯ ಧಾರ್ಮಿಕ ವಿಧಿಗಳನ್ನು ಪೂರೈಸುವುದು ಅತ್ಯಂತ ಕಡ್ಡಾಯವಾಗಿದೆ, ಎಂದು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಒಂದು ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ನ್ಯಾಯಾಲಯದ ಹಿಂದಿನ ತೀರ್ಪನ್ನು ರದ್ದುಗೊಳಿಸುತ್ತಾ ಹೈಕೋರ್ಟ್ ಈ ಕೆಳಗಿನಂತೆ ಸ್ಪಷ್ಟಪಡಿಸಿದೆ,

೧. ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಅನುಗುಣವಾಗಿ ವಿವಾಹ ಪದ್ಧತಿಗಳು ಬದಲಾಗಬಹುದು; ಆದರೆ ಹಿಂದೂ ಸಂಪ್ರದಾಯದಲ್ಲಿ ಪತ್ನಿಯನ್ನು ಪತಿಯ ‘ಅರ್ಧಾಂಗಿನಿ’ ಎಂದು ಪರಿಗಣಿಸಲಾಗಿದೆ. ವಿವಾಹವು ಒಂದು ಸಂಸ್ಥೆಯಾಗಿದ್ದು, ಹೊಸ ಕುಟುಂಬದ ಅಡಿಪಾಯ ನಿರ್ಮಿಸುತ್ತದೆ. ಹಾಗಾಗಿ ಯುವಕ-ಯುವತಿಯರು ಮದುವೆಯಂತಹ ಪವಿತ್ರ ಬಂಧನಕ್ಕೆ ಒಳಗಾಗುವ ಮುನ್ನ ಈ ಸಂಸ್ಥೆಯ ಮಹತ್ವ ಮತ್ತು ಗಾಂಭೀರ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.

೨. ವಿವಾಹವೆಂದರೆ ಕೇವಲ ಕುಣಿತ, ಊಟ-ತಿಂಡಿ ಅಥವಾ ವಾಣಿಜ್ಯ ವ್ಯವಹಾರವಲ್ಲ. ಇದೊಂದು ಪವಿತ್ರ ಸಂಸ್ಕಾರ. ವಿವಾಹದ ವಿಧಿಗಳು ಕೇವಲ ಔಪಚಾರಿಕತೆಯಲ್ಲ, ವ್ಯಕ್ತಿಯ ಆತ್ಮವನ್ನು ಶುದ್ಧೀಕರಿಸುವ ಪದ್ಧತಿ ಎಂದು ಪರಿಗಣಿಸಲಾಗುತ್ತದೆ.

೩. ವಿವಾಹವು ಇಬ್ಬರು ವ್ಯಕ್ತಿಗಳ ನಡುವೆ ಜೀವನಪರ್ಯಂತ ಗೌರವ, ಸಮಾನತೆ ಮತ್ತು ಸಮ್ಮತಿಯ ಆಧಾರದ ಮೇಲೆ ಸಂಬಂಧವನ್ನು ನಿರ್ಮಿಸುತ್ತದೆ. ಹಿಂದೂ ಧರ್ಮದಲ್ಲಿ ವಿವಾಹವನ್ನು ಮೋಕ್ಷ ಪಡೆಯುವ ಒಂದು ಮಾರ್ಗವೆಂದೂ ನೋಡಲಾಗುತ್ತದೆ; ಆದರೆ ಅದಕ್ಕಾಗಿ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಪೂರ್ಣಗೊಳಿಸುವುದು ಅವಶ್ಯಕ.

ಏನಿದು ಪ್ರಕರಣ?

ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಕೌಶಲ್ ಸೋನಾರ್ ಎಂಬಾತನು ಕರ್ಣಾವತಿಯ ಯುವತಿಯೊಬ್ಬಳ ಜೊತೆ ನಡೆದ ವಿವಾಹದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದನು. ಕೌಶಲ್ ಪ್ರಕಾರ, ಆ ಯುವತಿಯೊಂದಿಗೆ ಅವನಿಗೆ ಎಂದಿಗೂ ಮದುವೆಯಾಗಿರಲಿಲ್ಲ. ಆ ಯುವತಿಯು ಅವನ ಪೋಷಕರನ್ನು ಭೇಟಿಯಾಗಿ, ಮದುವೆ ಪ್ರಮಾಣಪತ್ರ ತೋರಿಸಿ ತಾನು ಪತ್ನಿ ಎಂದು ಹಕ್ಕು ಸಾಧಿಸಿದಾಗ, ಈ ಮದುವೆಯ ವಿಷಯ ಅವನಿಗೆ ತಿಳಿಯಿತು. ‘ವಂಚನೆ ಮಾಡಿ ಮತ್ತು ಒತ್ತಡ ಹೇರಿ ವಿವಾಹ ಪ್ರಮಾಣಪತ್ರದ ಮೇಲೆ ನನ್ನ ಸಹಿ ಪಡೆಯಲಾಗಿದೆ’, ಎಂದು ಕೌಶಲ್ ಆರೋಪಿಸಿದ್ದನು. ಇನ್ನು, ಕೌಟುಂಬಿಕ ನ್ಯಾಯಾಲಯದ ಮುಂದೆ, ತಮ್ಮ ನಡುವೆ ಯಾವುದೇ ವಿವಾಹ ಸಮಾರಂಭ ಅಥವಾ ಧಾರ್ಮಿಕ ವಿಧಿಗಳು ನಡೆದಿಲ್ಲ ಮತ್ತು ಅವರು ಎಂದಿಗೂ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸಿಲ್ಲ ಎಂದು ಯುವತಿ ಸ್ವತಃ ಒಪ್ಪಿಕೊಂಡಿದ್ದಳು.

ಯುವತಿಯೇ ಸ್ವತಃ ವಿಧಿಗಳು ನಡೆದಿಲ್ಲ ಎಂದು ಒಪ್ಪಿಕೊಂಡಿದ್ದರೂ, ಕೌಟುಂಬಿಕ ನ್ಯಾಯಾಲಯವು ಕೌಶಲ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ಈ ತೀರ್ಪು ತಪ್ಪಾಗಿದೆ ಎಂದು ಹೇಳಿದ ಹೈಕೋರ್ಟ್, ಆ ತೀರ್ಪನ್ನು ರದ್ದುಗೊಳಿಸಿ ಈ ವಿವಾಹವನ್ನು ಅಮಾನ್ಯ ಎಂದು ಘೋಷಿಸಿತು.