ದಸರಾದಂದು ಹಲಗೆಯ (ಪಾಟಿಯ) ಮೇಲೆ ಸರಸ್ವತಿಯ ಚಿತ್ರವನ್ನು ಏಕೆ ಬಿಡಿಸುತ್ತಾರೆ

ದೇವಿಯು ರಾಕ್ಷಸರೊಂದಿಗೆ ೧೦ ದಿನಗಳ ಕಾಲ ಯುದ್ಧ ಮಾಡಿ ದಸರಾದಂದು ವಿಜಯವನ್ನು ಸಾಧಿಸಿದಳು. ಕೆಲವರು, ‘ಪಾಂಡವರು ತಮ್ಮ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿ ದಸರಾದ ದಿನ ಯುದ್ಧಕ್ಕೆ ಸಿದ್ಧರಾಗಿದ್ದರು’, ಎಂದು ಹೇಳುತ್ತಾರೆ. ಇನ್ನು ಕೆಲವರು, ‘ಈ ದಿನದಂದು ಪ್ರಭು ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿದ್ದನು; ಆದ್ದರಿಂದ ಈ ದಿನ ರಾವಣನ ಪ್ರತಿಮೆಯನ್ನು ಸುಡಲಾಗುತ್ತದೆ. ಮಂದಾರ ಎಲೆಗಳನ್ನು ಹಂಚುವುದರಿಂದ ಹಳೆಯ ಸಂಕಟಗಳು ಕೊನೆಗೊಳ್ಳುತ್ತವೆ’, ಎಂದು ಹೇಳುತ್ತಾರೆ. ಕೆಲವರು ತಮ್ಮ ಬಳಿ ಇರುವ ಉಪಕರಣಗಳು, ಯಂತ್ರಗಳು ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಪೂಜಿಸುತ್ತಾರೆ. ಅದರಲ್ಲಿ ಸರಸ್ವತಿಯ ಒಂದು ಚಿತ್ರವನ್ನು ಬಿಡಿಸಲಾಗುತ್ತದೆ. ನಾವು ಚಿಕ್ಕವರಿದ್ದಾಗ ದಸರಾದಂದು ಸರಸ್ವತಿಯ ಚಿತ್ರವನ್ನು ಬಿಡಿಸಿ ಅದನ್ನು ಶಾಲೆಗೂ ತೆಗೆದುಕೊಂಡು ಹೋಗುತ್ತಿದ್ದೆವು. ಸಂಜೆ ಇಂತಹುದೇ ಚಿತ್ರವನ್ನು ಕುಂಕುಮ ಅಥವಾ ಲೇಖನಿಯಿಂದ ಬಿಡಿಸಿ ನಮ್ಮ ಹಿರಿಯರು ಸರಸ್ವತಿಯ ಪೂಜೆಯನ್ನು ಮಾಡುತ್ತಿದ್ದರು. ಆ ತ್ರಿಕೋನಾಕೃತಿಯ ಬೀಜಮಂತ್ರವನ್ನು ಬಳಸಿ ಈ ಸರಸ್ವತಿಯ ಯಂತ್ರವನ್ನು ಬಿಡಿಸಲಾಯಿತು ಮತ್ತು ಅದು ಪ್ರಚಲಿತವಾಯಿತು. ಈ ಸರಸ್ವತಿ ಯಂತ್ರವು ಸರಸ್ವತಿಗೆ ಸಂಬಂಧಿಸಿದ ಗ್ರಂಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳೊಂದಿಗೆ ಕಂಡುಬರುತ್ತದೆ. ತಂತ್ರಶಾಸ್ತ್ರದ ಯಾವುದೇ ಯಂತ್ರವು ಬೀಜಮಂತ್ರದ ಪ್ರಕಟೀಕರಣವಾಗಿರುತ್ತದೆ. ಇಂತಹ ಅನೇಕ ಯಂತ್ರಗಳು ಬಹುಶಃ ಎಲ್ಲಾ ದೇವಿ-ದೇವತೆಗಳದ್ದೂ ಇರಬಹುದು. ಈ ಆಕೃತಿ ಎಂದರೆ ಬೀಜಮಂತ್ರದ ಸಾಂಕೇತಿಕ ಆಕೃತಿ ರೂಪದ ಒಂದು ಸಣ್ಣ ರೂಪವಾಗಿದೆ.

– ರಶ್ಮಿ ಡೊಂಗರೆ (ಆಧಾರ : ದೈನಿಕ ‘ನವರಾಷ್ಟ್ರ’)