ಬಂಗಾಲ ಮತ್ತು ಈಶಾನ್ಯ ಭಾರತದಲ್ಲಿ ಮುಸಲ್ಮಾನ-ಕ್ರೈಸ್ತ ಜನಸಂಖ್ಯೆಯಲ್ಲಿ ಹೆಚ್ಚಳ, ಹಿಂದೂಗಳ ಜನಸಂಖ್ಯೆಯಲ್ಲಿ ಕುಸಿತ !

ಪಂಥೀಯ ವರ್ಗೀಕರಣವು ಭಾರತದ ಜನಸಂಖ್ಯೆಯ ಸ್ವರೂಪವನ್ನು ಹೇಗೆ ಬದಲಾಯಿಸುತ್ತಿದೆ ?

ಭಾರತವು ವಿವಿಧ ಧರ್ಮಗಳ ಜನರ ದೇಶವಾಗಿದೆ. ಇಲ್ಲಿ ಬಹುಸಂಖ್ಯಾತ ಜನರು ಹಿಂದೂ ಧರ್ಮದ ಅನುಯಾಯಿಗಳಾಗಿದ್ದಾರೆ; ಆದರೆ, ದೊಡ್ಡ ವರ್ಗ ಇಸ್ಲಾಂ, ಕ್ರೈಸ್ತ, ಸಿಕ್ಖ್, ಬೌದ್ಧ ಮತ್ತು ಜೈನ ಧರ್ಮಗಳನ್ನು ಅನುಸರಿಸುತ್ತಾರೆ. ಕಾಲಕ್ಕನುಗುಣವಾಗಿ ಧರ್ಮಗಳ ಆಧಾರದಲ್ಲಿ ಜನಸಂಖ್ಯೆಯಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಈ ಬದಲಾವಣೆಗಳು ಅಷ್ಟೊಂದು ಮಹತ್ವದೆಂದು ಅನಿಸದಿದ್ದರೂ, ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಅವು ಗಮನಾರ್ಹವಾಗಿವೆ, ವಿಶೇಷವಾಗಿ ಬಂಗಾಲ, ಆಸ್ಸಾಂ ಮತ್ತು ಈಶಾನ್ಯ ಭಾರತದಲ್ಲಿ. ಪ್ರಸ್ತುತ, ನಮ್ಮಲ್ಲಿ ೨೦೧೧ ರ ಜನಸಂಖ್ಯೆಯ ಅಂಕಿ-ಅಂಶಗಳು ಮಾತ್ರ ಲಭ್ಯವಿದ್ದು, ಅವು ೨೦೦೧ ರಿಂದ ೨೦೧೧ ರವರೆಗಿನ ಅವಧಿಯಲ್ಲಿ ಜನಸಂಖ್ಯೆಯ ಬದಲಾವಣೆಗಳ ಚಿತ್ರಣವನ್ನು ತೋರಿಸುತ್ತವೆ.

೧. ಯಾವ ಬದಲಾವಣೆಗಳಾಗಿವೆ ?

ಅ. ರಾಷ್ಟ್ರೀಯ ಮಟ್ಟದಲ್ಲಿ : ಹಿಂದೂ ಜನಸಂಖ್ಯೆಯು ಶೇ. ೮೦.೪೬ ರಿಂದ ಶೇ. ೭೯.೮ ಕ್ಕೆ ಇಳಿದಿದೆ. ಮುಸಲ್ಮಾನ ಜನಸಂಖ್ಯೆಯು ಶೇ. ೧೩.೪೩ ರಿಂದ ಶೇ. ೧೪.೨೩ ಕ್ಕೆ ಏರಿದೆ. ಕ್ರೈಸ್ತ ಜನಸಂಖ್ಯೆಯಲ್ಲೂ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಈ ಅಂಕಿ-ಅಂಶಗಳನ್ನು ನೋಡಿದರೆ ದೊಡ್ಡ ಬದಲಾವಣೆ ಕಂಡುಬರದಿದ್ದರೂ, ಜಿಲ್ಲಾ ಮಟ್ಟದಲ್ಲಿ ಈ ಬದಲಾವಣೆ ಸ್ಪಷ್ಟವಾಗಿ ಅರಿವಾಗುತ್ತವೆ.

ಆ. ಭಾರತದ ೬೪೦ ಜಿಲ್ಲೆಗಳಲ್ಲಿ : ೪೬೮ ಜಿಲ್ಲೆಗಳಲ್ಲಿ ಹಿಂದೂ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ (ಸುಮಾರು ಶೇ. ೭೦ ಜಿಲ್ಲೆಗಳು). ೨೨೭ ಜಿಲ್ಲೆಗಳಲ್ಲಿ ಈ ಇಳಿಕೆ ಶೇ. ೦.೭ ಕ್ಕಿಂತ ಹೆಚ್ಚಿದೆ. ತದ್ವಿರುದ್ದ ೫೧೩ ಜಿಲ್ಲೆಗಳಲ್ಲಿ ಮುಸಲ್ಮಾನರ ಮತ್ತು ೪೩೯ ಜಿಲ್ಲೆಗಳಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಹೆಚ್ಚಳ ದಾಖಲಾಗಿದೆ.

೨. ಬಂಗಾಲದಲ್ಲಿ ಏನು ನಡೆದಿದೆ ?

ಇಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ನಿರಂತರ ಮತ್ತು ಸ್ಪಷ್ಟ ಹೆಚ್ಚಳ ಕಂಡುಬರುತ್ತಿದೆ. ಮಾಲ್ಡಾ, ಮುರ್ಷಿದಾಬಾದ, ಉತ್ತರ ದಿನಾಜಪುರ, ಉತ್ತರ ಮತ್ತು ದಕ್ಷಿಣ ೨೪ ಪರಗಣ ಜಿಲ್ಲೆಗಳಲ್ಲಿ ಈ ಹೆಚ್ಚಳ ಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ಹಿಂದೂ ಜನಸಂಖ್ಯೆಯು ಶೇ. ೧ ರಷ್ಟು ಇಳಿದಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ಈ ಬದಲಾವಣೆಗಳ ಪ್ರತಿಬಿಂಬವು ಸ್ಥಳೀಯ ಜೀವನದಲ್ಲಿ, ಅಂದರೆ ಅಂಗಡಿಗಳ ಸ್ವರೂಪ, ಮಾರುಕಟ್ಟೆ ವಾತಾವರಣ, ಶಾಲೆಗಳ ರಜೆ, ಸ್ಥಳೀಯ ರಾಜಕೀಯ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತದೆ.

೩. ಆಸ್ಸಾಂನಲ್ಲಿ ಹೆಚ್ಚುತ್ತಿರುವ ಚಿಂತೆ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಆಸ್ಸಾಂನ ಧುಬರಿ, ಬಾರಪೇಟಾ, ಗೋಲಪಾರಾ, ಮೋರಿಗಾಂವ ಇತ್ಯಾದಿ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಗಡಿಯಾಚೆಗಿನ ಅಕ್ರಮ ವಲಸೆ (ಕ್ರಾಸ್ ಬಾರ್ಡರ್ ಮೂವ್‌ಮೆಂಟ್) ಇದಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದಾಗಿಯೇ ಆಸ್ಸಾಂನಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಮತ್ತು ನುಸುಳುಕೋರರ ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಯಿತು.

೪. ಪೂರ್ವೋತ್ತರ ರಾಜ್ಯಗಳಲ್ಲಿ ಕ್ರೈಸ್ತರ ವೇಗದ ಹೆಚ್ಚಳ ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಕ್ರೈಸ್ತ ಜನಸಂಖ್ಯೆಯು ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ೨೩೮ ಜಿಲ್ಲೆಗಳಲ್ಲಿ ಕ್ರೈಸ್ತ ಜನಸಂಖ್ಯೆಯು ಶೇ. ೫೦ ಕ್ಕಿಂತ ಹೆಚ್ಚಾಗಿದೆ. ಈ ಹೆಚ್ಚಳವು ಮುಖ್ಯವಾಗಿ ಬುಡಕಟ್ಟು ಮತ್ತು ದುರ್ಗಮ ಪ್ರದೇಶಗಳಲ್ಲಿ ಕಂಡುಬಂದಿದೆ. ಇಲ್ಲಿ ಕ್ರೈಸ್ತ ಮಿಷನರಿಗಳ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕಾರ್ಯಗಳನ್ನು ಇದರ ಹಿಂದಿನ ಕಾರಣಗಳೆಂದು ಪರಿಗಣಿಸಲಾಗಿದೆ. ಈಗ ಈ ಪ್ರದೇಶಗಳಲ್ಲಿ ಕ್ರೈಸ್ತ ಧರ್ಮವನ್ನು ‘ಸ್ಥಳೀಯ ಧರ್ಮವೆಂದು ಪರಿಗಣಿಸಲಾಗುತ್ತದೆ. ಬಹುಸಂಖ್ಯಾತ ಬುಡಕಟ್ಟು ಸಮುದಾಯವು ಸ್ವತಃ ಕ್ರೈಸ್ತರೆಂದು ಘೋಷಿಸಿಕೊಳ್ಳುತ್ತದೆ.

೫. ಸರಕಾರಿ ನಕಾಶೆಗಳಿಂದ ಇದು ಸ್ಪಷ್ಟವಾಗುತ್ತದೆ

ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಶಮಿಕಾ ರವಿ ಅವರು ೨೦೦೧ ರಿಂದ ೨೦೧೧ ರ ಅವಧಿಯ ಧಾರ್ಮಿಕ ಬದಲಾವಣೆಗಳ ನಕ್ಷೆಗಳನ್ನು ಬಿಡುಗಡೆ ಮಾಡಿದರು, ಇದರಲ್ಲಿ ಹಿಂದೂ ಜನಸಂಖ್ಯೆಯು ಅತಿ ಹೆಚ್ಚು ಇಳಿದಿರುವ ಪ್ರದೇಶಗಳನ್ನು ತೋರಿಸಲಾಗಿದೆ. ಮುಸಲ್ಮಾನ ಮತ್ತು ಕ್ರೈಸ್ತರ ಜನ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ.

೬. ಈ ಬದಲಾವಣೆಗಳು ಏಕೆ ಆಗುತ್ತಿವೆ ?

ಇದಕ್ಕೆ ಜನನದರ ಮುಖ್ಯ ಕಾರಣವಾಗಿದೆ. ಮುಸಲ್ಮಾನ ಸಮುದಾಯದ ಜನನದರವು ಹಿಂದೂಗಳಿಗಿಂತ ಹೆಚ್ಚಿದೆ, ಆದರೂ ಈ ವ್ಯತ್ಯಾಸವು ಈಗ ನಿಧಾನವಾಗಿ ಕಡಿಮೆಯಾಗುತ್ತಿದೆ. ಮೂಲತಃ, ಒಂದು ಧರ್ಮದ ಅನುಯಾಯಿಗಳ ಸಂಖ್ಯೆ ಹೆಚ್ಚಿರುವಲ್ಲಿ, ಅವರ ಬೆಳವಣಿಗೆಯೂ ಹೆಚ್ಚಿರುತ್ತದೆ. ಈಶಾನ್ಯ ಭಾರತದಲ್ಲಿ ವಲಸೆ ಮತ್ತು ಧಾರ್ಮಿಕ ಮತಾಂತರ ಕೂಡ ದೊಡ್ಡ ಕಾರಣಗಳಾಗಿವೆ. ಹಿಂದೂ ಜನಸಂಖ್ಯೆಯ ಇಳಿಕೆಯು ಮಿಶ್ರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಮುಸಲ್ಮಾನರ ಬೆಳವಣಿಗೆಯು ಈಗಾಗಲೇ ದೊಡ್ಡ ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಸಂಭವಿಸಿದೆ. ಕ್ರೈಸ್ತರ ಬೆಳವಣಿಗೆಯು ಮುಖ್ಯವಾಗಿ ಬುಡಕಟ್ಟು ಮತ್ತು ಗುಡ್ಡುಗಾಡು ಪ್ರದೇಶಗಳಲ್ಲಿ ಕಂಡುಬಂದಿದೆ.

೭. ಈ ಬದಲಾವಣೆಯು ಆಕಸ್ಮಿಕವಲ್ಲ !

೧೯೬೧ ರಿಂದ ೨೦೧೧ ರ ವರೆಗಿನ ೫೦ ವರ್ಷಗಳಲ್ಲಿ, ಪ್ರತಿ ದಶಕದಲ್ಲೂ ಮುಸಲ್ಮಾನರ ಜನಸಂಖ್ಯೆಯ ಶೇಕಡಾವಾರು ಹೆಚ್ಚಾಗಿದೆ. ಉದಾಹರಣೆಗೆ, ೧೯೬೧ ರಿಂದ ೧೯೭೧ ರ ಅವಧಿಯಲ್ಲಿ ಶೇ. +೦.೫, ೧೯೯೧ ರಿಂದ ೨೦೦೧ ರ ಅವಧಿಯಲ್ಲಿ ಶೇ. +೦.೮, ಮತ್ತು ೨೦೦೧ ರಿಂದ ೨೦೧೧ ರ ಅವಧಿಯಲ್ಲಿ ಶೇ. +೦.೮ ರಷ್ಟು ಈ ಶೇಕಡಾವಾರು ಹೆಚ್ಚಾಗಿದೆ. ಇದು ದೀರ್ಘಕಾಲದ ಪ್ರವೃತ್ತಿಯಾಗಿದ್ದು, ಆಕಸ್ಮಿಕ ಬದಲಾವಣೆಯಲ್ಲ.

೮. ಈ ಅಂಕಿ-ಅಂಶಗಳ ಮಹತ್ವ

ಭಾರತದಲ್ಲಿ ಧರ್ಮ, ಗುರುತು ಮತ್ತು ಸಾಮಾಜಿಕ ಜೀವನಕ್ಕೆ ರಾಜಕಾರಣದೊಂದಿಗೆ ನಿಕಟ ಸಂಬಂಧ ಇರುವುದರಿಂದ, ಸ್ವಲ್ಪ ಧಾರ್ಮಿಕ ಬದಲಾವಣೆಗಳು ಕೂಡ ದೊಡ್ಡ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರುತ್ತವೆ. ಬಂಗಾಲ ಮತ್ತು ಆಸ್ಸಾಂ ರಾಜ್ಯಗಳ ಜನಸಂಖ್ಯೆಯಲ್ಲಿನ ಬದಲಾವಣೆಗಳು ಸ್ಥಳೀಯ ರಾಜಕೀಯ, ಹಬ್ಬಗಳು, ಶೈಕ್ಷಣಿಕ ನೀತಿಗಳು, ಭೂವಿವಾದಗಳ ಮೇಲೂ ಪರಿಣಾಮ ಬೀರಿವೆ. ಬುಡಕಟ್ಟು ಪ್ರದೇಶಗಳಲ್ಲಿ ಕ್ರೈಸ್ತ ಧಾರ್ಮಿಕ ಮತಾಂತರದಿಂದಾಗಿ ಸಾಂಸ್ಕೃತಿಕ ಗುರುತು ಬದಲಾಗುತ್ತಿದೆ.

೯. ಜಾಗರೂಕತೆ ಮುಖ್ಯ

ಭಾರತದ ವೈವಿಧ್ಯತೆಯು ಅದರ ನಿಜವಾದ ಶಕ್ತಿಯಾಗಿದೆ; ಆದರೆ, ಈ ವೈವಿಧ್ಯತೆ ಸಮತೋಲಿತ ಮತ್ತು ಸಾಮರಸ್ಯದಿಂದಿರಲು ನಡೆಯುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯಕ. ೨೦೦೧ ರಿಂದ ೨೦೧೧ ರ ದಶಕದಲ್ಲಿ ಹೆಚ್ಚಿನ ಜಿಲ್ಲೆಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಿದೆ, ಆದರೆ ಮುಸಲ್ಮಾನ ಮತ್ತು ಕ್ರೈಸ್ತ ಜನಸಂಖ್ಯೆ ಹೆಚ್ಚಾಗಿದೆ, ವಿಶೇಷವಾಗಿ ಬಂಗಾಳ, ಅಸ್ಸಾಂ ಮತ್ತು ಈಶಾನ್ಯ ಭಾರತದಲ್ಲಿ. ಈ ಬದಲಾವಣೆಗಳು ಹಳೆಯದಾಗಿದ್ದು, ಈಗ ಹೆಚ್ಚು ಸೂಕ್ಷ್ಮ ಭೌಗೋಲಿಕ ಪ್ರದೇಶಗಳಲ್ಲಿ ತೀವ್ರವಾಗಿ ಗೋಚರಿಸಲು ಪ್ರಾರಂಭಿಸಿವೆ.

(ಭಾರತದಲ್ಲಿ ಹಿಂದೂಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಮತ್ತು ಮುಸಲ್ಮಾನ ಹಾಗೂ ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದ ರಾಷ್ಟ್ರೀಯ ಭದ್ರತೆಗೆ ಸವಾಲಾಗಿದೆ. ಮುಸಲ್ಮಾನ ಮತ್ತು ಕ್ರೈಸ್ತರ ಜನಸಂಖ್ಯೆ ಹೆಚ್ಚಾಗಲು ಧಾರ್ಮಿಕ ಮತಾಂತರ, ಲವ್ ಜಿಹಾದ್ ಮತ್ತು ಇತರ ಕಾರಣಗಳಿವೆ. ಇದನ್ನು ತಡೆಯಲು ಕೇಂದ್ರ ಸರಕಾರವು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು, ಧಾರ್ಮಿಕ ಮತಾಂತರ ನಿಷೇಧ ಕಾನೂನು, ಸಮಾನ ನಾಗರಿಕ ಸಂಹಿತೆ, ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಗಳನ್ನು ಜಾರಿಗೆ ತರುವುದು ಅವಶ್ಯಕ. ಮುಖ್ಯವಾಗಿ, ಭಾರತವನ್ನು ‘ಜಾತ್ಯತೀತತೆಯಿಂದ ಮುಕ್ತಗೊಳಿಸಿ ‘ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಇದಕ್ಕೆ ಮೂಲಭೂತ ಪರಿಹಾರವಾಗಿದೆ ! – ಸಂಪಾದಕರು)

(ಕೃಪೆ : ‘ಆಪ್ ಇಂಡಿಯಾ ಜಾಲತಾಣ)