ಯಕ್ಷಗಾನ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ ಮಂಗಳೂರು ಪೊಲೀಸರು !


ಮಂಗಳೂರು – ಗಣೇಶೋತ್ಸವದ ಅಂಗವಾಗಿ ಇಲ್ಲಿನ ಸಜಿಪಮುನ್ನೂರುನಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಪೊಲೀಸರು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಸ್ಥಗಿತಗೊಳಿಸಿದರು. ಶಬ್ದ ಮಾಲಿನ್ಯದ ಕಾರಣ ನೀಡಿ ಈ ಧಾರ್ಮಿಕ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಗೆ ನಿಷೇಧ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಯಕ್ಷಗಾನ ಕಾರ್ಯಕ್ರಮಗಳನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

1. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಟಕ, ಯಕ್ಷಗಾನ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿಯೂ ಚರ್ಚೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತು ಇತರರು ಯಕ್ಷಗಾನ, ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಿ ಕಲಾವಿದರಿಗೆ ಸಹಾಯ ಮಾಡಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದರು. ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ಕೂಡಾ ಸಂಪ್ರದಾಯದ ವಿಷಯದಲ್ಲಿ ಕಾನೂನಿನಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಕಾಂಗ್ರೆಸ್‌ನ ಕೆಲವು ಶಾಸಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. (ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡುವುದಕ್ಕೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ಶಾಸಕರು ಕಾಂಗ್ರೆಸ್‌ನ ನಿಜವಾದ ಮನಸ್ಥಿತಿಯನ್ನು ತೋರಿಸಿಕೊಟ್ಟಿದ್ದಾರೆ ! – ಸಂಪಾದಕರು)

2. ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕಲಾವಿದರಾದ ದೇವದಾಸ್ ಕಾಪಿಕಾಡ್ ಅವರ ಯಕ್ಷಗಾನ ಕಾರ್ಯಕ್ರಮವನ್ನು ಇತ್ತೀಚೆಗೆ ನಿಲ್ಲಿಸಲಾಗಿತ್ತು. ಅವರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು, ‘ನಾವು ಕಾನೂನನ್ನು ಗೌರವಿಸುತ್ತೇವೆ; ಆದರೆ ಸರಕಾರ ನಮ್ಮಂತಹ ಬಡ ಕಲಾವಿದರ ಜೀವನೋಪಾಯವನ್ನು ಕಸಿದುಕೊಳ್ಳಬಾರದು. ನಮ್ಮ ಯಕ್ಷಗಾನದಿಂದ ಜಿಲ್ಲೆಯಲ್ಲಿ ಎಂದಿಗೂ ಶಾಂತಿ ಭಂಗವಾದ ಅಥವಾ ಯಾವುದೇ ಅಹಿತಕರ ಘಟನೆ ನಡೆದ ಉದಾಹರಣೆ ಇಲ್ಲ.’ (ಒಂದು ಕಾಲದಲ್ಲಿ ಕಲೆಗೆ ಬೆಂಬಲ ನೀಡಿದ ಹಿಂದಿನ ರಾಜರುಗಳು ಎಲ್ಲಿ ಮತ್ತು ಅವಕಾಶ ಸಿಕ್ಕಾಗ ಅದಕ್ಕೆ ವಿರೋಧ ವ್ಯಕ್ತಪಡಿಸುವ ಇಂದಿನ ಕಾಂಗ್ರೆಸ್ ರಾಜಕಾರಣಿಗಳು ಎಲ್ಲಿ ! – ಸಂಪಾದಕರು)

ಸಂಪಾದಕೀಯ ನಿಲುವು

ಕಾನೂನು ಪಾಲಿಸುವ ನೆಪ ಹೇಳುವ ಪೊಲೀಸರು ವರ್ಷಪೂರ್ತಿ ಮುಂಜಾನೆ 5 ಗಂಟೆಗೆ ಮಸೀದಿಗಳಿಂದ ಬರುವ ಧ್ವನಿ ಮಾಲಿನ್ಯದ ಬಗ್ಗೆ ಏನೂ ಮಾಡುವುದಿಲ್ಲ. ಇದೇ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಅದರ ಪೊಲೀಸರ ಸರ್ವಧರ್ಮ ಸಮಭಾವ !