‘ಟ್ಯಾರಿಫ್’ (ಆಮದು ಸುಂಕ) ಆಟದಿಂದ ಯಾರಿಗೆ ಕುತ್ತು ? ಯಾರಿಗೆ ಹೊಡೆತ ಬೀಳಲಿದೆ ?

ಜನವರಿ ತಿಂಗಳಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಡೊನಾಲ್ಡ್ ಟ್ರಂಪ್‌ ಅವರು ತೆಗೆದುಕೊಳ್ಳುತ್ತಿರುವ ನಿಲುವು ಮತ್ತು ನಿರಂತರ ಹೇಳಿಕೆಗಳು, ಭಾರತ ಮತ್ತು ಅಮೆರಿಕದ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುವಂತಿದೆ. ಭಾರತದ ಮೇಲೆ ಶೇ. ೫೦ ರಷ್ಟು ‘ಟ್ಯಾರಿಫ್’ ವಿಧಿಸುವ ನಿರ್ಧಾರವು ಟ್ರಂಪ್‌ ಅವರ ಒತ್ತಡ ತಂತ್ರದ ಒಂದು ಭಾಗವಾಗಿರಬಹುದು. ಭಾರತವು ಈ ನಿರ್ಧಾರಕ್ಕೆ ಸೂಕ್ತ, ಸಮರ್ಪಕ ಮತ್ತು ದೃಢವಾಗಿ ಪ್ರತಿಕ್ರಿಯಿಸಿದೆ; ಏಕೆಂದರೆ ಭಾರತಕ್ಕೆ ಈ ‘ಟ್ಯಾರಿಫ್‌’ನ ಪರಿಣಾಮಗಳು ಮತ್ತು ಅದರ ತೀಕ್ಷ್ಣತೆಯ ಬಗ್ಗೆ ಕಲ್ಪನೆಯಿದೆ.

ಡಾ. ಶೈಲೇಂದ್ರ ದೇವಳಾಣಕರ್‌

೧. ಚೀನಾ ಅಮೆರಿಕಾಕ್ಕೆ ಅಪರೂಪದ ಖನಿಜಗಳ ಪೂರೈಕೆಯನ್ನು ನಿಲ್ಲಿಸಿದ್ದರಿಂದ ಆದ ಪರಿಣಾಮ

ಅಮೆರಿಕಾ ವಿಧಿಸಿರುವ ಶೇ. ೫೦ ರಷ್ಟು ಆಮದು ಸುಂಕದ ಪರಿಣಾಮ ಭಾರತದ ಮೇಲೆ ಅತ್ಯಲ್ಪವಾಗಿದೆ; ಏಕೆಂದರೆ ಭಾರತದ ‘ಜಿಡಿಪಿ’ಯಲ್ಲಿ (ಸಕಲ ರಾಷ್ಟ್ರೀಯ ಉತ್ಪನ್ನದಲ್ಲಿ) ರಫ್ತಿನ ಪಾಲು ಶೇ. ೨೦ ರಷ್ಟಿದೆ. ಚೀನಾದ ‘ಜಿಡಿಪಿ’ಯಲ್ಲಿ ರಫ್ತಿನ ಪಾಲು ಶೇ. ೬೦ ರಷ್ಟಿದೆ. ಆದ್ದರಿಂದ ಅಮೆರಿಕದ ಈ ನಿರ್ಧಾರದಿಂದ ಚೀನಾ ಮೇಲೆ ಪರಿಣಾಮ ಬೀರಬಹುದು. ಟ್ರಂಪ್‌ ಮೊದಲು ಚೀನಾದ ಮೇಲೆ ಶೇ. ೨೦೦ ರಷ್ಟು ಟ್ಯಾರಿಫ್‌ ವಿಧಿಸಿದ್ದರು. ನಂತರ ಇದ್ದಕ್ಕಿದ್ದಂತೆ ಎರಡೂ ದೇಶಗಳ ನಡುವೆ ವ್ಯಾಪಾರ ಒಪ್ಪಂದವಾಗಿದೆ ಎಂದು ಹೇಳಿ ಈ ಟ್ಯಾರಿಫ್ನ್ನು ಕಡಿಮೆ ಮಾಡಲಾಯಿತು. ಇದು ಏಕಾಏಕಿ ನಡೆದಿದ್ದಲ್ಲ. ಚೀನಾ ಒಂದು ಕುತಂತ್ರಿ ದೇಶವಾಗಿದೆ. ಟ್ರಂಪ್‌ ಟ್ಯಾರಿಫ್‌ ವಿಧಿಸಿದ ನಂತರ ಚೀನಾ ಅಮೆರಿಕಾಕ್ಕೆ ಅಪರೂಪದ ಖನಿಜಗಳ ಪೂರೈಕೆಯನ್ನು ನಿಲ್ಲಿಸಿತು. ಇದರಿಂದಾಗಿ ಟ್ರಂಪ್‌ ಅವರ ‘ಮೇಕ್‌ ಇನ್‌ ಅಮೆರಿಕಾ’ (ಅಮೆರಿಕಾದಲ್ಲಿಯೇ ಉತ್ಪಾದಿಸುವುದು)ದಂತಹ ಯೋಜನೆಗಳಿಗೆ ಅಪಾಯ ಬಂದೊದಗಿತು. ಪರಿಣಾಮವಾಗಿ, ಟ್ರಂಪ್‌ ಚೀನಾ ಮುಂದೆ ಮಂಡಿಯೂರಬೇಕಾಯಿತು.

೨. ಭಾರತ – ಅಮೆರಿಕಾಗಳ ಮೇಲಾಗುವ ಪರಿಣಾಮ

ಭಾರತದ ವಿಚಾರಕ್ಕೆ ಬಂದರೆ, ಅಮೆರಿಕಾಕ್ಕೆ ಆಗುವ ರಫ್ತಿನಲ್ಲಿ ದೊಡ್ಡ ಉದ್ಯಮಗಳ ಪಾಲು ಹೆಚ್ಚಿದ್ದು, ಸಣ್ಣ ವ್ಯಾಪಾರಿಗಳ ಪಾಲು ಕಡಿಮೆಯಿದೆ. ‘ಜೆಮ್ಸ್ ಅಂಡ್‌ ಜುವೆಲ್ಲರಿ’, ‘ಆಟೋಪಾರ್ಟ್ಸ್‌’ (ವಾಹನದ ಬಿಡಿಭಾಗಗಳು) ತಯಾರಿಸುವ ದೊಡ್ಡ ಕಂಪನಿಗಳು, ಇಂಡಸ್ಟ್ರಿಯಲ್‌ ಪ್ರಾಡಕ್ಟ್ಸ್‌ ಮತ್ತು ‘ಫಾರ್ಮಸ್ಯೂಟಿಕಲ್ಸ್ ಕಂಪನಿಗಳು’ (ಔಷಧಿ ತಯಾರಿಕಾ ಸಂಸ್ಥೆ ಗಳು) ಅಮೆರಿಕಾಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತವೆ; ಆದರೆ ಭಾರತಕ್ಕಿರುವ ಒಂದು ದೊಡ್ಡ ಸಕಾರಾತ್ಮಕ ಅಂಶವೆಂದರೆ ದೇಶೀಯ ಬೇಡಿಕೆ. ಭಾರತದ ‘ಡೊಮೆಸ್ಟಿಕ್‌ ಕನ್ಸಂಪ್ಷನ್’ (ದೇಶೀಯ ಬಳಕೆ) ‘ಜಿಡಿಪಿ’ಯ ಶೇ. ೪೦ ರಷ್ಟಿದೆ. ಆದ್ದರಿಂದ ಭಾರತವು ಜಾಗತಿಕ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ.

ಭಾರತದ ಆರ್ಥಿಕತೆಯ ಗಾತ್ರ ಸುಮಾರು ೪ ಟ್ರಿಲಿಯನ್‌ ಡಾಲರ್‌ (ಒಂದರ ಮುಂದೆ ೧೨ ಸೊನ್ನೆಗಳು) ಅಷ್ಟು ಇದೆ. ಈ ಹೋಲಿಕೆಯಲ್ಲಿ ಅಮೆರಿಕಾದೊಂದಿಗಿನ ವ್ಯಾಪಾರ ಕೇವಲ ಶೇ. ೨ ರಷ್ಟಿದೆ. ಆದ್ದರಿಂದ ಶೇ. ೫೦ ರಷ್ಟು ಟ್ಯಾರಿಫ್‌ ವಿಧಿಸುವುದರಿಂದ ಏನೋ ದೊಡ್ಡ ಆಕಾಶವೇ ಕಳಚಿ ಬೀಳಲಿದೆ ಎಂಬ ಸ್ಥಿತಿ ಇಲ್ಲ. ‘ಜೆಮ್ಸ್ ಅಂಡ್‌ ಜುವೆಲ್ಲರಿ’ಯಂತಹ ಕ್ಷೇತ್ರವನ್ನೇ ಪರಿಗಣಿಸಿದರೆ, ಭಾರತವು ಇಂಗ್ಲೆಂಡ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದರಿಂದ ಈ ಮಾರುಕಟ್ಟೆ ಮುಕ್ತವಾಗಿದೆ. ಇದರ ಹೊರತಾಗಿ, ಭಾರತವು ಯುನೈಟೆಡ್‌ ಅರಬ್‌ ಎಮಿರೇಟ್ಸ್ (ಯುಎಇ), ಆಸ್ಟ್ರೇಲಿಯಾ ಸೇರಿದಂತೆ ೧೩ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಮಧ್ಯ ಏಷ್ಯಾದ ದೇಶಗಳೊಂದಿಗೆ ಭಾರತಕ್ಕೆ ವ್ಯಾಪಾರ ಒಪ್ಪಂದಗಳಿವೆ. ಆದ್ದರಿಂದ ಭಾರತವು ಹೆಚ್ಚು ಚಿಂತಿಸುವ ಅಗತ್ಯವಿಲ್ಲದ ಸ್ಥಿತಿಯಿದೆ. ತದ್ವಿರುದ್ಧ ಭಾರತೀಯ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಿಸಿದ್ದರಿಂದ ಅಮೆರಿಕಾದ ನಾಗರಿಕರು ದುಬಾರಿ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬೇಕಾಗುತ್ತದೆ. ಇದರಿಂದ ಅಮೆರಿಕಾದಲ್ಲಿ ಟ್ರಂಪ್‌ ಬಗ್ಗೆ ಆಕ್ರೋಶ ಹೆಚ್ಚಾಗುವ ಸಾಧ್ಯತೆಯಿದೆ. ಈ ಪ್ರಕರಣದಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ, ಅದು ೧೯೯೦ ರ ದಶಕದಲ್ಲಿ ಬಂದ ಜಾಗತೀಕರಣದ ಯುಗದ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಣೆಯ ಗಾಳಿ ಬೀಸತೊಡಗಿತು; ಆದರೆ ವ್ಯಾಪಾರದ ಕ್ಷೇತ್ರದಲ್ಲಿ ಇಂದಿಗೂ ಸುಧಾರಣೆಗಳಾಗಿಲ್ಲ. ಟ್ರಂಪ್‌ ಅವರ ಟ್ಯಾರಿಫ್‌ ಅಸ್ತ್ರದ ನೆಪದಲ್ಲಿ ಈ ಕುರಿತು ಸಾಧಕ-ಬಾಧಕಗಳ ಚರ್ಚೆಯು ಪ್ರಾರಂಭವಾಗುವುದು ಅವಶ್ಯಕವಾಗಿದೆ.

೩. ಭಾರತ ಒತ್ತಡಕ್ಕೆ ಮಣಿಯುವುದಿಲ್ಲ !

ಏಪ್ರಿಲ್‌ನಲ್ಲಿ ಟ್ರಂಪ್‌ ಅವರು ಭಾರತದ ಮೇಲೆ ಟ್ಯಾರಿಫ್‌ ಅನ್ನು ಘೋಷಿಸಿದ್ದರು ಮತ್ತು ನಂತರ ೯೦ ದಿನಗಳ ಗಡುವನ್ನು ನೀಡಿದ್ದರು. ಈ ೯೦ ದಿನಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ಅಮೆರಿಕಾ ಪ್ರವಾಸ ಮಾಡಿದರು. ಎರಡೂ ದೇಶಗಳ ನಡುವೆ ೪ ಸುತ್ತಿನ ಚರ್ಚೆಗಳು ಸಹ ನಡೆದಿದ್ದವು. ಹೀಗಿರುವಾಗ ಟ್ರಂಪ್‌ ಅವರು ಶೇ. ೫೦ ರಷ್ಟು ಟ್ಯಾರಿಫ್ನ್ನು ಏಕೆ ಘೋಷಿಸಿದರು ? ಏಕೆಂದರೆ ಟ್ರಂಪ್‌ ಅವರು ಒತ್ತಡ ಹಾಕಿ ಭಾರತದಿಂದ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಲು ಬಯಸಿದ್ದಾರೆ. ಭಾರತ ಸರಕಾರ ‘ರೈತರು ಮತ್ತು ‘ಎಂಎಸ್ಎಂಇ’ಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಹಿತಾಸಕ್ತಿಗಳಿಗೆ ಧಕ್ಕೆ ಆಗಬಾರದು’ ಎಂಬ ನಿಲುವಿನಲ್ಲಿದೆ. ಕೃಷಿ ಕ್ಷೇತ್ರ ಮತ್ತು ಡೈರಿ ಉತ್ಪನ್ನಗಳು, ‘ಫಿಷರೀಸ್’ (ಮೀನು ಉತ್ಪಾದನೆ)ಗಳಲ್ಲಿ ಅಮೆರಿಕಾಕ್ಕೆ ಪ್ರವೇಶ ನೀಡಬಾರದು ಎಂಬ ದೃಢ ನಿಲುವಿನೊಂದಿಗೆ ಭಾರತವು ಮಾತುಕತೆ ನಡೆಸುತ್ತಿದೆ.

ಟ್ರಂಪ್‌ ಒಬ್ಬ ಪಳಗಿದ ಉದ್ಯಮಿ. ಕೆಲಸ ಮಾಡುವ ಅವರದ್ದೇ ಒಂದು ವಿಶಿಷ್ಟ ವಿಧಾನವಿದೆ. ಎದುರಾಳಿಯ ಮೇಲೆ ಅಪಾರ ಒತ್ತಡ ಹಾಕಿ, ಅವರನ್ನು ಚರ್ಚೆಗೆ ಸಿದ್ಧಪಡಿಸಿ, ತನ್ನ ಪಾಲಿಗೆ ಯಶಸ್ಸು ಗಳಿಸಿಕೊಳ್ಳುವುದು ಅವರ ಕಾರ್ಯವೈಖರಿ. ಅವರು ಲಾಭ ಇಲ್ಲದೆ ಬೇರೆ ಏನನ್ನೂ ಯೋಚಿಸುವುದಿಲ್ಲ. ಅವರಿಗೆ ಯಾರೂ ಮಿತ್ರರಿಲ್ಲ. ಅವರ ದೃಷ್ಟಿಯಲ್ಲಿ ಅಮೆರಿಕಾದ ಹಿತಾಸಕ್ತಿಗಳು ಅಗ್ರಸ್ಥಾನದಲ್ಲಿವೆ. ಮತದಾರರನ್ನು, ಅಮೆರಿಕಾದ ನಾಗರಿಕರನ್ನು ಸಂತೋಷಪಡಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಯೋಚನೆ ಅವರು ಮಾಡುವುದಿಲ್ಲ. ಟ್ರಂಪ್‌ ಅವರ ಘೋಷಣೆಗಳು ಹೆಚ್ಚಾಗಿ ಒತ್ತಡ ಹೇರುವುದಕ್ಕಾಗಿಯೇ ಇರುತ್ತವೆ. ಅದಕ್ಕಾಗಿಯೇ ಅವರು ನಿರ್ಭೀತಿಯಿಂದ ತಮ್ಮ ಮಾತನ್ನು ಬದಲಾಯಿಸುತ್ತಾರೆ.

೪. ಟ್ರಂಪ್‌ಗೆ ಹೊಡೆತ ಬೀಳುವುದು ಖಚಿತ…

ಕೊನೆಯ ವಿಷಯವೆಂದರೆ, ಟ್ಯಾರಿಫ್‌ಗೆ ಸಂಬಂಧಿಸಿದ ನೀತಿಯು ಅಮೆರಿಕಾದ ನೀತಿಯಲ್ಲ, ಬದಲಾಗಿ ಟ್ರಂಪ್‌ ಅವರ ಭಾರತಕ್ಕೆ ಸಂಬಂಧಿಸಿದ ನೀತಿಯಾಗಿದೆ. ಮುಂದಿನ ವರ್ಷ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಸಿದ್ಧತೆಗಳು ಪ್ರಾರಂಭವಾಗಲಿವೆ. ಈ ಚುನಾವಣೆಗಳಲ್ಲಿ ಟ್ರಂಪ್‌ಗೆ ಹೊಡೆತ ಬೀಳುವುದು ಖಚಿತ, ಹಾಗೆಯೇ ಅವರ ಅಧಿಕಾರಾವಧಿ ಮುಗಿಯಲಿದೆ ಅಥವಾ ಇದರಿಂದಾಗಿ ಭಾರತ-ಅಮೆರಿಕಾ ಸಂಬಂಧಗಳು ಶಾಶ್ವತವಾಗಿ ಹಾಳಾಗಲಿವೆ ಎಂಬ ಸ್ಥಿತಿ ಖಂಡಿತ ಇಲ್ಲ. ಇದು ಸಂಪೂರ್ಣವಾಗಿ ಟ್ರಂಪ್‌ ಅವರ ಒತ್ತಡದ ನೀತಿಯಾಗಿದೆ. ಇದರಿಂದ ಭಾರತಕ್ಕಿಂತ ಅಮೆರಿಕಾದ ಮೇಲೆ ಹೆಚ್ಚು ಪರಿಣಾಮ ಆಗಲಿದೆ.

೫. …ಇವರಿಂದಾಗಿ ಹೆಚ್ಚು ಕೋಪಗೊಂಡಿದ್ದಾರೆ !

ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್‌ ಅವರು ‘ಅಧಿಕಾರಕ್ಕೆ ಬಂದ ನಂತರ ರಷ್ಯಾ-ಉಕ್ರೇನ್‌ ಯುದ್ಧವನ್ನು ಕೆಲವೇ ಗಂಟೆಗಳಲ್ಲಿ ನಿಲ್ಲಿಸುತ್ತೇನೆ’ ಎಂದು ಗರ್ಜಿಸಿದ್ದರು; ಆದರೆ ಇಂದು ಪರಿಸ್ಥಿತಿ ಏನೆಂದರೆ, ಜೆಲೆನ್ಸ್ಕಿ ಸಹ ಅವರ ಮಾತು ಕೇಳಲು ಸಿದ್ಧರಿಲ್ಲ ಮತ್ತು ವ್ಲಾದಿಮಿರ್‌ ಪುತಿನ್‌ ಸಹ ಅವರ ಪ್ರಸ್ತಾವಗಳನ್ನು ತಿರಸ್ಕರಿಸಿದ್ದಾರೆ. ಇದರಿಂದ ಟ್ರಂಪ್‌ ಅವರ ಅಹಂಕಾರಕ್ಕೆ ಪೆಟ್ಟು ಬಿದ್ದಿದೆ. ಇದರ ಜೊತೆಗೆ, ಪ್ರಸ್ತುತ ಭಾರತವು ತನ್ನ ಒಟ್ಟು ಅಗತ್ಯದ ಶೇ. ೪೦ ರಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಪಡೆಯುತ್ತಿದೆ. ಅದಕ್ಕಾಗಿಯೇ ಈಗ ಅವರು ಟ್ಯಾರಿಫ್ನ್ನು ಘೋಷಿಸುವಾಗ ರಷ್ಯಾದಿಂದ ಆಗುವ ತೈಲ ಆಮದಿನ ವಿಷಯವನ್ನು ಮುಂದಿಟ್ಟು ಹೆಚ್ಚುವರಿ ದಂಡ ವಿಧಿಸುವ ಬೆದರಿಕೆಯನ್ನೂ ಹಾಕಿದ್ದಾರೆ. ಇದರಿಂದ ಅವರ ಕೋಪದ ಕಾರಣ ಹೊರಬರುತ್ತಿದೆ.

– ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ವಿಶ್ಲೇಷಕರು, ಪುಣೆ.