ಧರ್ಮಸಂಸ್ಥಾಪಕ ಭಗವಾನ ಶ್ರೀಕೃಷ್ಣನ ಕುರಿತಾದ ಆಕ್ಷೇಪ ಮತ್ತು ಅದರ ಖಂಡನೆ

ಈಗ ಬುದ್ಧಿಪ್ರಾಮಾಣ್ಯವಾದಿ, ನಾಸ್ತಿಕರು ಮೊದಲಾದವರು ಹಿಂದೂಗಳ ಧರ್ಮಗ್ರಂಥಗಳನ್ನು ದೇವತೆಗಳನ್ನು ಮತ್ತು ಮಹಾಪುರುಷರನ್ನು ಟೀಕಿಸಿ ಹಿಂದೂಗಳ ಬುದ್ಧಿಭ್ರಮಣೆ ಮಾಡುತ್ತಾರೆ. ಇಂತಹ ಟೀಕೆಗಳನ್ನು ಯೋಗ್ಯವಾಗಿ ಖಂಡಿಸದೇ ಇದ್ದರೆ ಹಿಂದೂಗಳ ಶ್ರದ್ಧೆ ಡೋಲಾಯಮಾನವಾಗುತ್ತದೆ ಹಾಗೂ ಧರ್ಮಹಾನಿಯೂ ಆಗುತ್ತದೆ. ಅಯೋಗ್ಯ ಟೀಕೆಗಳಿಗೆ ತಡೆ ಹಾಕುವುದು ಇದು ಕೂಡ ಕಾಲಾನುಸಾರ ಅವಶ್ಯಕವಾಗಿರುವ ಧರ್ಮಪಾಲನೆಯೇ ಆಗಿದೆ. ಈ ಉದ್ದೇಶದಿಂದ ಈ ಲೇಖನದಲ್ಲಿ ಶ್ರೀಕೃಷ್ಣನ ಕುರಿತಾದ ಆಕ್ಷೇಪ ಮತ್ತು ಅದರ ಖಂಡನೆ ನೀಡಲಾಗಿದೆ. ಪ್ರತಿಯೊಬ್ಬರೂ ಇದನ್ನು ಅಭ್ಯಾಸಪೂರ್ವಕವಾಗಿ ಮನನ ಮಾಡಬೇಕು. ಭಗವಾನ ಶ್ರೀಕೃಷ್ಣನ ಕುರಿತಾದ ಟೀಕೆಗಳಿಗೆ ಆಕ್ಷೇಪ ಎಂಬ ಶೀರ್ಷಿಕೆಯನ್ನೂ ಮತ್ತು ಅದರ ನಂತರ ಆ ಅಯೋಗ್ಯ ವಿಚಾರಕ್ಕೆ ಪ್ರತಿವಾದವನ್ನು, ಆಕ್ಷೇಪದ ಖಂಡನೆ ಈ ಶೀರ್ಷಿಕೆ ಅಡಿಯಲ್ಲಿ ನೀಡಿದ್ದೇವೆ.

ಆಕ್ಷೇಪ ಕ್ರ. ೧

ಶ್ರೀಕೃಷ್ಣನು ದುರ್ಯೋಧನಾಧಿ ಕೌರವರ ಮೇಲೆ ದಯೆ ತೋರಲಿಲ್ಲ ! : ಶ್ರೀಕೃಷ್ಣನು ತನ್ನನ್ನು ಪರಮೇಶ್ವರನ ಅವತಾರ ಎಂದು ಹೇಳಿಕೊಳ್ಳುತ್ತಾನೆ. ಇಂತಹ ಅವತಾರಿಯು ಶಾಂತಿ ಸ್ಥಾಪಿಸುವ ಬದಲು ಅರ್ಜುನ ನಿಗೆ ಯುದ್ಧ ಮಾಡಲು ಪ್ರಚೋದಿಸಿದನು.ಅರ್ಜುನನಿಗೆ ಯುದ್ಧ ಮಾಡಬೇಕೆಂದು ಇರಲಿಲ್ಲ.
ಆದರೂ ಶ್ರೀಕೃಷ್ಣನು ಅವನ ಬುದ್ಧಿಭ್ರಮಣೆ ಮಾಡಿ ಅವನಿಗೆ ತನ್ನವರ ವಿರುದ್ಧ ಹೋರಾಡುವಂತೆ ಮಾಡಿದನು. ಈ ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಜೀವ ಕಳೆದುಕೊಂಡರು. ಅವರ ಪತ್ನಿಯರು ವಿಧವೆಯರಾದರು. ಇದೆಲ್ಲಾ ಮಾಡಿ ಕೂಡ ಅವನು ತನ್ನ ಹೆಸರು ಎಲ್ಲಿಯೂ ಬರದಂತೆ ನೋಡಿಕೊಂಡನು. ಅಹಿಂಸೆಯೇ ಪರಮ ಧರ್ಮವಾಗಿರುವ ಈ ದೇಶದ ಮಹಾನ ಪರಂಪರೆಯನ್ನು ಈ ಧೂರ್ತ ಮತ್ತು ಚಾಣಾಕ್ಷ ಶ್ರೀಕೃಷ್ಣನು ಮಣ್ಣು ಮುಕ್ಕಿಸಿದನು. ಭಾರತೀಯರ ಅಹಿಂಸಾಧರ್ಮಕ್ಕೆ ಇವನಿಂದಲೇ ನಿಜವಾದ ತೊಂದರೆ ಬಂದಿತು. ಅಹಿಂಸೆ ಎಂದರೆ ದಯೆ ತೋರಿಸುವುದು ! ಶ್ರೀಕೃಷ್ಣನು ದುರ್ಯೋಧನಾದಿ ಕೌರವರಿಗೆ ದಯೆ ತೋರಿಸಬೇಕಿತ್ತು.

ಆಕ್ಷೇಪದ ಖಂಡನೆ

ಅ. ಕೌರವರು ೫ ಗ್ರಾಮಗಳನ್ನು ಕೂಡ ಪಾಂಡವರಿಗೆ ನೀಡಲು ಒಪ್ಪಲಿಲ್ಲ ಆದ್ದರಿಂದ ಶ್ರೀಕೃಷ್ಣನು ಯುದ್ಧದ ನಿರ್ಣಯ ನೀಡಿದನು ! : ಭಾರತೀಯ ದಂಡಸಂಹಿತೆಯ ಕಲಂ ೩೦೦ ರಲ್ಲಿ ಕೊಲೆಯ ವ್ಯಾಖ್ಯೆಯಲ್ಲಿ ಇನ್ನೊಬ್ಬರನ್ನು ಕೊಲ್ಲುವುದು ಎಂದರೆ ಕೊಲೆ ಎಂದಷ್ಟೇ ಸ್ಥೂಲ ವಿಚಾರ ನೀಡಿಲ್ಲ, ಆತ್ಮರಕ್ಷಣೆಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯಾಗಿದ್ದರೆ ಅದು ಕೊಲೆ ಆಗುವುದಿಲ್ಲ ಎಂಬ ಸೂಕ್ಷ್ಮ ವಿಚಾರ ಕೂಡ ಮಾಡಿದೆ, ಇಂತಹ ಸೂಕ್ಷ್ಮದೃಷ್ಟಿಯಿಂದ ವಿಚಾರ ಮಾಡಿದರೆ ಗಮನಕ್ಕೆ ಬರುವ ಅಂಶವೆಂದರೆ, ಶ್ರೀಕೃಷ್ಣನು ನೀಡಿದ ಯುದ್ಧದ ನಿರ್ಣಯವು ಅಹಿಂಸೆಯ ವಿರುದ್ಧವಿರಲಿಲ್ಲ.
ಕೌರವರು ಪಾಂಡವರಿಗೆÉ ಪರಾಕಾಷ್ಠೆಯ ಅನ್ಯಾಯ ಮಾಡಿದ್ದರು. ಕಪಟದಿಂದ ಆಡಿದ ಜೂಜಾಟದಲ್ಲಿ ಪಾಂಡವರ ರಾಜ್ಯ ಕಸಿದುಕೊಂಡಿದ್ದರು. ಅವರು ೧೨ ವರ್ಷ ವನವಾಸ ಮತ್ತು ೧ ವರ್ಷ ವರ್ಷ ಅಜ್ಞಾತವಾಸ ಅನುಭವಿಸಬೇಕಾಯಿತು. ೧೩ ವರ್ಷಗಳ ನಂತರ ಅವರ ರಾಜ್ಯ ಹಿಂತಿರುಗಿಸಲು ಕೌರವರು ಒಪ್ಪಿದ್ದರು. ಆದರೆ ಪಾಂಡವರ ರಾಜ್ಯ ಹಿಂತಿರುಗಿಸಲು ಅವರು ನಿರಾಕರಿಸಿದರು. ಪರಸ್ಪರರಲ್ಲಿ ಹೊಂದಾಣಿಕೆ ಆಗ ಬೇಕೆಂದು ಶ್ರೀಕೃಷ್ಣನು ಸಂಧಾನ ನಡೆಸಿದನು. ಒಪ್ಪಂದದ ಸಮಯದಲ್ಲಿ ಶ್ರೀಕೃಷ್ಣನು ಕೌರವರು ಪಾಂಡವರಿಗೆ ಅವರ ಸಂಪೂರ್ಣ ರಾಜ್ಯ ನೀಡಲು ಸಿದ್ಧರಿರಲಿಲ್ಲ; ಹಾಗಾದರೆ ಐದು ಗ್ರಾಮವಾದರೂ ನೀಡಬೇಕೆಂಬ ಪ್ರಸ್ತಾವ ಮಂಡಿಸಿದನು. ಇದರ ಹಿಂದೆ ಯುದ್ಧ ತಡೆಗಟ್ಟುವ ಪ್ರಯತ್ನದ ಉದ್ದೇಶವೇ ಇತ್ತು. ಕೌರವರು ಈ ಪ್ರಸ್ತಾವವನ್ನು
ಕೂಡ ತಿರಸ್ಕರಿಸಿದರು ಮತ್ತು ಯುದ್ಧ ಇಲ್ಲದೆ ನಾವು ಪಾಂಡವರಿಗೆ ಐದು ಗ್ರಾಮವೇನು ಸೂಜಿಯ ತುದಿಯಷ್ಟು ಜಾಗ ಕೂಡ ನೀಡುವುದಿಲ್ಲ ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ನ್ಯಾಯ ಸ್ಥಾಪಿಸಲು ಯುದ್ಧ ಬಿಟ್ಟರೆ ಬೇರೆ ಪರಿಹಾರ ಇರಲಿಲ್ಲ ಆದ್ದರಿಂದ ಶ್ರೀಕೃಷ್ಣನು ಅರ್ಜುನನಿಗೆ ಯುದ್ಧದ ನಿರ್ಣಯ ನೀಡಿದನು.

ಆಕ್ಷೇಪ ಕ್ರ. ೨

ಕೃಷ್ಣನು ಅರ್ಜುನನಿಂದ ಅನ್ಯಾಯ ಮತ್ತು ಅನೈತಿಕತೆಯಿಂದ ಮಹಾತ್ಮಾ ಕರ್ಣನನ್ನು ವಧಿಸಿದನು. ಶ್ರೀಕೃಷ್ಣನು ಅತ್ಯಂತ ಕಪಟಿ ಯಾಗಿದ್ದನು. ನ್ಯಾಯ, ನೀತಿ ಮತ್ತು ಧರ್ಮ ಇದರ ಬಗ್ಗೆ ಅವನಿಗೆ ಕಾಳಜಿ ಇರಲಿಲ್ಲ. ಅವನ ಮನಸ್ಸಿನಲ್ಲಿ ಕರ್ಣನ ಬಗ್ಗೆ ದ್ವೇಷವಿತ್ತು. ಯುದ್ಧದ ಸಮಯದಲ್ಲಿ ಕರ್ಣನ ರಥ ಭೂಮಿಯಲ್ಲಿ ಹೂತುಹೋಗಿತ್ತು. ಕರ್ಣನು ರಥದ ಚಕ್ರವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದನು, ಆದರೂ ಶ್ರೀಕೃಷ್ಣನು ಅರ್ಜುನನಿಗೆ, ‘ಅರ್ಜುನ ನೀನು ಕರ್ಣನ ಮೇಲೆ ಬಾಣ ಪ್ರಯೋಗಿಸು. ಕರ್ಣನ ಮಾತಿಗೆ ಗಮನ ನೀಡಬೇಡ’ ಎಂದು ಹೇಳಿದನು. ಕರ್ಣನ ರಥದ ಚಕ್ರ ಭೂಮಿಯಲ್ಲಿ ಹುಗಿದಿರುವಾಗ ಅವನ ಮೇಲೆ ಬಾಣದ ಸುರಿಮಳೆ ಮಾಡಿಸಿ ಕರ್ಣನ ಹತ್ಯೆಯಲ್ಲಿ ಪರೋಕ್ಷವಾಗಿ ಸಹಭಾಗಿ ಆದ ಶ್ರೀಕೃಷ್ಣನು ಧರ್ಮಸಂಸ್ಥಾಪನೆಗಾಗಿ ಅವತರಿಸಿದ್ದನು ಎಂಬುದರ ಮೇಲೆ ವಿಶ್ವಾಸ ಹೇಗೆ ಇಡುವುದು ? ಅಧರ್ಮಿ ಶ್ರೀಕೃಷ್ಣನು ಮಹಾತ್ಮಾ ಕರ್ಣನನ್ನು ಮೋಸದಿಂದ ವಧಿಸಿದನು.

ಆಕ್ಷೇಪದ ಖಂಡನೆ

ಅ. ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ಎಳೆದೊಯ್ದು ವಿವಸ್ತ್ರಗೊಳಿಸುವ ಕಲ್ಪನೆ ಕರ್ಣನದ್ದೇ ಆಗಿತ್ತು ! : ಇಂದಿನ ಕಾಲದಲ್ಲಿ ಕರ್ಣನಿಗೆ ಮಹಾತ್ಮ ಎಂದು ಹೇಳುವ ಪ್ರಯತ್ನ ನಡೆಯುತ್ತಿದೆ. ಖಳನಾಯಕನನ್ನು ನಾಯಕನನ್ನಾಗಿಸುವ ಒಂದು ಚಾಳಿಯೇ ನಡೆಯುತ್ತಿದೆ. ಎಲ್ಲಾ ಸದ್ಗುಣಗಳನ್ನು ಒಟ್ಟಾಗಿ ಸೇರಿಸಿ ಅದರ ಸಾರ ತೆಗೆದು ಅದನ್ನು ಒಂದು ಅಚ್ಚಿನಲ್ಲಿ ಹಾಕಿದರೆ ಅದರಿಂದ ನಿರ್ಮಾಣವಾಗಿರುವ ಸದ್ಗುಣದ ಮೂರ್ತಿ ಎಂದರೆ ಕರ್ಣ ! ಎಂದು ಸಾರುವ ಕೆಲವು ಪುಸ್ತಕಗಳು ದೊರೆಯುತ್ತವೆ. ಕರ್ಣನನ್ನು ವೈಭವೀಕರಿಸುವವರು ಅವನ ಪರ ಒಳ್ಳೆಯ ರೀತಿಯಲ್ಲಿ ವಕೀಲಿ ಮಾಡಿದ್ದಾರೆ. ಆದರೆ ಮಹಾಭಾರತದ ಬಗ್ಗೆ ಅವರಿಂದ ಒಳ್ಳೆಯ ಅಧ್ಯಯನವಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಜೂಜಾಟದ ಸಮಯದಲ್ಲಿ ಧರ್ಮರಾಜನು ದ್ರೌಪದಿಯನ್ನು ಪಣಕ್ಕೆ ಇಟ್ಟನು ಮತ್ತು ಅವನು ಸೋತನು. ದ್ರೌಪದಿಯನ್ನು ಪಣಕ್ಕೆ ಇಟ್ಟ ತಕ್ಷಣ ಭೀಷ್ಮ, ದ್ರೋಣ, ಕೃಪ ಮತ್ತು ವಿದುರ ಇವರಂತಹ ಎಲ್ಲಾ ಸಜ್ಜನರು ಕೊರಗಿದರು. ಮಹಾಭಾರತದಲ್ಲಿ ವ್ಯಾಸರು ಇದರ ಬಗ್ಗೆ ಹೇಳಿರುವುದು, ಧಿಗ್ಧಿಗಿತ್ಯೇವ ವೃದ್ಧಾನಾಂ ಸಭ್ಯಾನಾಂ ನಿಃಸೃತಾ ಗಿರಃ ! (ಮಹಾಭಾರತ, ಪರ್ವ ೨, ಅಧ್ಯಾಯ ೫೮, ಶ್ಲೋಕ ೩೮) ಅಂದರೆ ಧಿಕ್ಕಾರ ! ಧಿಕ್ಕಾರ ! ಎಂಬ ಪದಗಳು ವೃದ್ಧ ಸಭಿಕರ ಬಾಯಿಂದ ಹೊರ ಬಂದವು. ಕರ್ಣನು ಮಾತ್ರ ಆನಂದಿತನಾಗಿದ್ದನು. ದ್ರೌಪದಿಯನ್ನು ತುಂಬಿರುವ ಸಭೆಯಲ್ಲಿ ಕರೆತಂದು ವಿವಸ್ತ್ರಗೊಳಿಸುವ ಕಲ್ಪನೆ ದುರ್ಯೋಧನನದ್ದು ಅಥವಾ ದುಶಾಸನನದ್ದಾಗಿರಲಿಲ್ಲ. ದ್ರೌಪದಿ ಏಕವಸ್ತ್ರದಲ್ಲಿರಲಿ ಅಥವಾ ವಿವಸ್ತ್ರಳಾಗಿರಲಿ ಆಕೆಯನ್ನು ಸಭೆಗೆ ಕರೆ ತರಲೇಬೇಕು ! ಎಂಬುದು ಕರ್ಣನ ಕಲ್ಪನೆಯಾಗಿತ್ತು. ದುಃಶಾಸನನು ರಜಸ್ವಲೆ ಯಾಗಿದ್ದ ಮತ್ತು ಏಕವಸ್ತ್ರದಲ್ಲಿರುವ ದ್ರೌಪದಿಯನ್ನು ರಾಜಸಭೆಗೆ ಕರೆ ತಂದನು, ಆಗ ಕರ್ಣನು ಕೂಗಿ ಹೇಳಿದನು, ಪಾಂಡವಾನಾಂ ಚ ವಾಸಾಂಸಿ ದ್ರೌಪದ್ಯಾಶ್ಚಾಪ್ಯೂಪಾಹರ ! (ಮಹಾಭಾರತ, ಪರ್ವ ೨, ಅಧ್ಯಾಯ ೬೧, ಶ್ಲೋಕ ೩೮) ಅಂದರೆ ಪಾಂಡವ ಮತ್ತು ದ್ರೌಪದಿ ಇವರಿಬ್ಬರ ವಸ್ತ್ರಗಳನ್ನು ಕಸಿದುಕೊಳ್ಳಿ. ದ್ರೌಪದಿಯನ್ನು ತುಂಬಿರುವ ಸಭೆಯಲ್ಲಿ ವಿವಸ್ತ್ರಗೊಳಿಸುವ ಕರ್ಣ ಮಹಾತ್ಮನಾಗಲು ಸಾಧ್ಯವಿದೆಯೇ ?

ಆ. ಕರ್ಣನು ತನಗಾಗಿ ಸಿದ್ಧಮಾಡಿಟ್ಟಿದ್ದ ಎರಡನೆಯ ರಥ ಉಪಯೋಗಿಸುವ ಬದಲು ಉದ್ದೇಶಪೂರ್ವಕವಾಗಿ ಭೂಮಿಯಲ್ಲಿ ಹುಗಿದಿದ್ದ ರಥಧ ಚಕ್ರ ತೆಗೆಯುವ ಪ್ರಯತ್ನ ನಡೆಸಿ ಸಮಯ ಮುಂದೂಡುತ್ತಿದ್ದನು ! : ಕರ್ಣನ ರಥದ ಚಕ್ರ ಭೂಮಿಯಲ್ಲಿ ಹುಗಿದಿತ್ತು. ಆಗ ಕರ್ಣನು ಅರ್ಜುನನಿಗೆ ಹೇಳಿದನು, ಸ್ವಲ್ಪ ಸಮಯ ನಿಲ್ಲು, ನಾನು ನನ್ನ ರಥದ ಚಕ್ರ ಹೊರತೆಗೆಯುತ್ತೇನೆ. ಆ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ, ಅರ್ಜುನ ಯುದ್ಧ ನಿಲ್ಲಿಸಬೇಡ, ಅದನ್ನು ಮುಂದುವರೆಸು. ಯುದ್ಧದ ಮೊದಲು ಕರ್ಣನು ದುರ್ಯೋಧನನಿಗೆ ಹೇಳಿದ್ದನು, ದುರ್ಯೋಧನ ಯುದ್ಧದ ಸರಿ ಸಮಯದಲ್ಲಿ ನನ್ನ ರಥದ ಚಕ್ರ ಭೂಮಿಯಲ್ಲಿ ಹುಗಿಯುವುದು, ಎಂದು ನನಗೆ ಶಾಪ ನೀಡಲಾಗಿದೆ. ಆದ್ದರಿಂದ ಅಂತಹ ಪ್ರಸಂಗ ಬಂದರೆ, ಉತ್ತಮವಾದ ಕುದುರೆಗಳನ್ನು ಜೋಡಿಸಿರುವ ಉತ್ಕೃಷ್ಟವಾದಂತಹ ರಥ ನನ್ನ ರಥದ ಹಿಂದೆ ಸಿದ್ಧವಿರಲಿ. ಕರ್ಣನ ಈ ಮನವಿ ಒಪ್ಪಿ ದುರ್ಯೋಧನನು ಅವನಿಗಾಗಿ ಪರ್ಯಾಯ ರಥದ ವ್ಯವಸ್ಥೆ ಮಾಡಿದ್ದನು. ಕರ್ಣನು ಅವನ ರಥದ ಚಕ್ರ ಭೂಮಿಯಿಂದ ಹೊರತೆಗೆಯುವ ಬದಲು ಅವನ ಇನ್ನೊಂದು ರಥವನ್ನೇಕೆ ಉಪಯೋಗಿಸಲಿಲ್ಲ ? ಆ ಕಾಲದಲ್ಲಿ ಯುದ್ಧದ ನಿಯಮಗಳ ಪ್ರಕಾರ ಸೂರ್ಯಾಸ್ತದ ನಂತರ ಯುದ್ಧ ನಿಲ್ಲಿಸಬೇಕಿತ್ತು. ಕರ್ಣನ ರಥದ ಚಕ್ರ ಹುಗಿದಿರುವಾಗ ಸೂರ್ಯಾಸ್ತದ ಸಮಯ ಸಮೀಪದಲ್ಲಿತ್ತು. ಅದನ್ನು ತಿಳಿದು ಬೇಕಂತಲೇ ಸಮಯ ಮುಂದೂಡಲು ಕರ್ಣನು ಇನ್ನೊಂದು ರಥವನ್ನು ಉಪಯೋಗಿಸಲಿಲ್ಲ. ಅವನು ರಥದ ಚಕ್ರ ಹೊರತೆಗೆಯುವ ಪ್ರಯತ್ನಿಸುತ್ತಿದ್ದನು. ನಡೆಯುತ್ತಿರುವ ಯುದ್ಧಸೀ ನೆಪದಿಂದ ನಿಲ್ಲಿಸುವುದು ಮತ್ತು ಮರುದಿನ ದಣಿವು ಆರಿಸಿಕೊಂಡು ಯುದ್ಧ ಮಾಡುವುದು ಇದು ಅವನ ಉದ್ದೇಶವಾಗಿತ್ತು. ಕರ್ಣನ ಈ ಕಪಟವು ಶ್ರೀಕೃಷ್ಣನಿಗೆ ತಿಳಿದಿತ್ತು, ಆದ್ದರಿಂದ ಶ್ರೀಕೃಷ್ಣನು ಅರ್ಜುನನಿಗೆ ಕರ್ಣನ ಜೊತೆ ಯುದ್ಧ ಮುಂದುವರಿಸು ಎಂದು ಆದೇಶ ನೀಡಿದನು. ಕರ್ಣನು ಪಾಂಡವರ ಜೊತೆಗೆ ನ್ಯಾಯ ಮತ್ತು ನೀತಿಯಿಂದ ವರ್ತಿಸಲಿಲ್ಲ. ಅನ್ಯಾಯ ಮತ್ತು ಅನೈತಿಕತೆಯಿಂದ ವರ್ತಿಸುವವರ ಜೊತೆಗೆ ನ್ಯಾಯ ಮತ್ತು ನೈತಿಕತೆಯಿಂದ ವರ್ತಿಸುವುದು ಸರಿಯಲ್ಲ. ತಕ್ಕ ಶಾಸ್ತಿ ಮಾಡುವ ನ್ಯಾಯದಿಂದ ಶ್ರೀಕೃಷ್ಣನು ವರ್ತಿಸಿದ ಮತ್ತು ಅವನು ಅರ್ಜುನನಿಗೂ ಹಾಗೆ ವರ್ತಿಸಲು ಹೇಳಿದನು.

– ಶ್ರೀ. ದುರ್ಗೇಶ ಪರುಳಕರ

ಆಕ್ಷೇಪ ಕ್ರ. ೩

ಶ್ರೀಕೃಷ್ಣನು ಗೀತೆಯಲ್ಲಿ ಜಾತಿಯ ಬಗ್ಗೆ ಅನಗತ್ಯ ಮಹತ್ವ ನೀಡಿದನು ! : ಶ್ರೀಕೃಷ್ಣನು ಜಗತ್ತಿನಲ್ಲಿ ಜಾತಿ ವ್ಯವಸ್ಥೆ ನಿರ್ಮಾಣ ಮಾಡಿ ಸಮಾಜ ದಲ್ಲಿ ಅರಾಜಕತೆಯನ್ನು ಪಸರಿಸಿದ ಮೊದಲ ವ್ಯಕ್ತಿಯಾಗಿದ್ದಾನೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ, ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಂ ! (ಶ್ರೀಮದ್‌ ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೧೩) ಎಂದರೆ ನಾನು ನಾಲ್ಕು ವರ್ಣದ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ) ಸಮೂಹ ನಿರ್ಮಿಸಿದ್ದೇನೆ. ಶ್ರೀಕೃಷ್ಣನ ಈ ಹೇಳಿಕೆಯಿಂದ ಅಸ್ಪೃಶ್ಯತೆಯ ಜನ್ಮವಾಯಿತು, ಇದನ್ನು ಮರೆಯಲು ಸಾಧ್ಯವಿಲ್ಲ. ಜಾತಿಯ ಬಗ್ಗೆ ಅನಗತ್ಯವಾಗಿ ಗೀತೆ ಮತ್ತು ಅದನ್ನು ಹೇಳುವ ಕೃಷ್ಣನನ್ನು ನಿರಾಕರಿಸಬೇಕು. ಮನುಷ್ಯ ಮನುಷ್ಯರಲ್ಲಿ ಒಡಕು ಮೂಡಿಸುವ ಶ್ರೀಕೃಷ್ಣನನ್ನು ಪೂಜನಿಯ ಎಂದು ಹೇಳಲಾಗದು.

ಆಕ್ಷೇಪದ ಖಂಡನೆ

ಅ. ಶ್ರೀಕೃಷ್ಣ ತಪ್ಪಿತಸ್ಥನಲ್ಲ, ಚಾತುರ್ವರ್ಣದ ಬಗ್ಗೆ ವಿಪರೀತ ಅರ್ಥ ಕಲ್ಪಿಸುವವರು ತಪ್ಪಿತಸ್ಥರಾಗಿದ್ದಾರೆ : ಸಮಾಜದಲ್ಲಿ ಅಸ್ಪೃಶ್ಯತೆಯನ್ನು ದೂರ ಮಾಡುವ ಮಹಾನ ಕಾರ್ಯ ಮಾಡಿರುವ ಸಮಾಜ ಸುಧಾರಕ ಸ್ವಾತಂತ್ರ್ಯವೀರ ಸಾವರಕರರು ಕೇಸರಿ ಪತ್ರಿಕೆಯಲ್ಲಿ ೨.೧೨.೧೯೩೦ ರಲ್ಲಿ ಸನಾತನ ಧರ್ಮ ಎಂದರೆ ಜಾತಿಭೇದವಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಒಂದು ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅವರು ಮುಂದಿನಂತೆ ಹೇಳಿದ್ದಾರೆ ಚಾತುರ್ವರ್ಣ ಎಂದರೆ ನಾಲ್ಕು ವರ್ಣಗಳು, ಇದನ್ನು ಗುಣಕರ್ಮ ವಿಭಾಗಶಃ ಎಂದು ಗೀತೆಯಲ್ಲಿ ಸ್ಪಷ್ಟ ಪಡಿಸಲಾಗಿದೆ, ಅಂದರೆ ಅದು ಜನ್ಮಜಾತವಲ್ಲ. ಅದರಲ್ಲಿ ಗುಣಕರ್ಮದ ಉಲ್ಲೇಖವಿದೆ. ವಂಶ ಪರಂಪರೆಯ ಸುಳಿವು ಕೂಡ ಇದರಲ್ಲಿ ಇಲ್ಲ. ಅಸ್ಪೃಶ್ಯತೆಯಿಂದ ಸಮಾಜದ ಧಾರಣೆ ಆಗುವುದಿಲ್ಲ. ಜನ್ಮನಾ ಜಾಯತೆ ಶೂದ್ರ ಸಂಸ್ಕಾರಾತ್‌ ದ್ವಿಜ ಉಚ್ಚತೆ ! (ಸ್ಕಂದ ಪುರಾಣ, ನಾಗರ ಖಂಡ, ಅಧ್ಯಾಯ ೨೩೯, ಶ್ಲೋಕ ೩೧) ಎಂದರೆ ಎಲ್ಲಾ ಮನುಷ್ಯರು ಜನ್ಮದಿಂದ ಶೂದ್ರನಾಗಿರುತ್ತಾರೆ. ಅವರ ಮೇಲೆ ಉಪನಯನಾದಿ ಸಂಸ್ಕಾರವಾದ ನಂತರ ಅವನನ್ನು ದ್ವಿಜ ಎನ್ನುತ್ತಾರೆ. ಚಾತುರ್ವರ್ಣದಿಂದ ಅಸ್ಪೃಶ್ಯತೆ ನಿರ್ಮಾಣವಾಗಿದೆ ಹೀಗೆ ಹೇಳುವುದು ಸತ್ಯಕ್ಕೆ ದೂರವಾಗಿದೆ. ನಾಲ್ಕು ವರ್ಣ ಅಸ್ತಿತ್ವದಲ್ಲಿ ಇದ್ದರೆ, ಹಾಗಾದರೆ ಅಸ್ಪೃಶ್ಯ ಎಂದು ಐದನೇ ವರ್ಣ ಹೇಗೆ ನಿರ್ಮಾಣವಾಯಿತು.

ಒಂದು ಪ್ರಾಚೀನ ವಚನವಿದೆ –

ಬ್ರಾಹ್ಮಣ ಕ್ಷತ್ರಿಯೋ ವೈಶಾಸ್ತ್ರಯೋ ವರ್ಣ ದ್ವಿಜಾತಯಃ
ಚತುರ್ಥ ಏಕಜಾತಿಸ್ತು ಶೂದ್ರೋ ನಾಸ್ತಿತು ಪಂಚಮಃ

– ಮನುಸ್ಮೃತಿ, ಅಧ್ಯಾಯ ೧೦, ಶ್ಲೋಕ ೪

ಅರ್ಥ : ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ಈ ಮೂರು ವರ್ಣ ದ್ವಿಜ ಎಂದರೆ ಎರಡು ಜನ್ಮ ಇರುವವರು (ಉಪನಯನಾದಿ ಸಂಸ್ಕಾರ ಇದು ಎರಡನೆಯ ಜನ್ಮ ಎಂದು ತಿಳಿಯಲಾಗಿದೆ) ಆಗಿದ್ದಾರೆ, ನಾಲ್ಕನೆಯ ಶೂದ್ರ ವರ್ಣ ಇದು ಒಂದೇ ಜನ್ಮ ಇರುವುದಾಗಿದೆ. ಇದನ್ನು ಬಿಟ್ಟರೆ ಐದನೇ ವರ್ಣವಿಲ್ಲ. ಇನ್ನೊಂದು ವಚನ ಹೀಗಿದೆ, ಕರ್ಮಕ್ರಿಯಾವಿಭೇದೇನೆ ಚಾತುರ್ವರ್ಣ್ಯ ಪ್ರತಿಷ್ಠಿತಂ ! ಎಂದರೆ ಕರ್ಮ ಕ್ರಿಯಾ ಭೇದದಿಂದ ನಾಲ್ಕು ವರ್ಣ ಸ್ಥಾಪಿತವಾಗಿದೆ. ಮನುಷ್ಯ ಯಾವ ಜಾತಿಯಲ್ಲಿ ಜನಿಸಿದನು ಎಂಬುದಕ್ಕೆ ಮಹತ್ವ ಇರುವುದಿಲ್ಲ ಅವನಲ್ಲಿ ಯಾವ ಗುಣ ಇದೆ ಎಂಬುದಕ್ಕೆ ಮಹತ್ವ ಇದೆ. ಚಾತುರ್ವರ್ಣದ ಬಗ್ಗೆ ವಿಪರೀತ ಅರ್ಥ ಹಾಕಿ ಯಾರು ಸಮಾಜದಲ್ಲಿ ಸ್ಪೃಶ್ಯ ಅಸ್ಪೃಶ್ಯತೆಯ ವಿವಾದ ನಿರ್ಮಿಸಿದ್ದಾರೆಯೋ, ದೋಷ ಅವರದ್ದಾಗಿದೆ. ಶ್ರೀಕೃಷ್ಣನು ಹೇಳಿದ್ದರಲ್ಲಿ ಏನೂ ದೋಷವಿಲ್ಲ.

ಆಕ್ಷೇಪ ಕ್ರ. ೪

ಶ್ರೀಕೃಷ್ಣ ಹದಿನಾರು ಸಾವಿರದ ೧೦೮ (೧೬,೧೦೮) ಸ್ತ್ರೀಯರಿಗೆ ಪತಿಯಾಗಿದ್ದನು ! ನರಕಾಸುರನು ಬಂಧಿಸಿದ್ದ ಎಲ್ಲಾ ಸ್ತ್ರೀಯರನ್ನು ಶ್ರೀಕೃಷ್ಣನು ಬಿಡುಗಡೆ ಮಾಡಿ ಅವರೆಲ್ಲರ ಜೊತೆ ವಿವಾಹ ಮಾಡಿಕೊಂಡಿದ್ದನು.

ಅಕ್ಷೇಪದ ಖಂಡನೆ

ಅ. ಪಾರಮಾರ್ಥಿಕ ಉತ್ತರ : ಅಥರ್ವವೇದದಲ್ಲಿ ಏನು ಹೇಳಲಾಗಿದೆಯೆಂದರೆ, ವೇದ ಮತ್ತು ಉಪನಿಷತ್ತು ಇವುಗಳಲ್ಲಿ ಯಾವ ಮಂತ್ರಗಳಿವೆ ಅವು ಪರಮಾತ್ಮನ ಸ್ತ್ರೀಯರಾಗಿದ್ದಾರೆ. ಋಗ್ವೇದದಲ್ಲಿ ೧೦೫೮೦, ಇತರ ವೇದಗಳಲ್ಲಿ ೪೩೪೮ ಮತ್ತು ಉಪನಿಷತ್ತುಗಳಲ್ಲಿ ೧೧೮೦ ಮಂತ್ರಗಳಿದ್ದು ಈ ಎಲ್ಲವನ್ನೂ ಒಟ್ಟಾಗಿ ಸೇರಿಸಿದರೆ ೧೬,೧೦೮ ಆಗುತ್ತದೆ. ಇವರೇ ಶ್ರೀಕೃಷ್ಣ ಪರಮಾತ್ಮನ ಸ್ತ್ರೀಯರಾಗಿದ್ದಾರೆ. ಇದು ಪಾರಮಾರ್ಥಿಕ ಉತ್ತರವಾಯಿತು.

ಆ. ಶ್ರೀಕೃಷ್ಣನು ತಂದೆಯ ಸ್ಥಾನ ಪಡೆದನು, ಪತಿಯ ಸ್ಥಾನವಲ್ಲ ! : ಮಹಾಭಾರತದಲ್ಲಿ ಶ್ರೀಕೃಷ್ಣನ ೧೬೧೦೮ ಸ್ತ್ರೀಯರ ಪತಿ ಎಂದು ಉಲ್ಲೇಖ ದೊರೆಯುತ್ತದೆ. ಪತಿ ಈ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥ ಇದೆ. ಒಂದು ಅರ್ಥ ಪತಿ ಹಾಗೂ ಇನ್ನೊಂದು ಅರ್ಥ ಪಾಲಕ ಎಂದಿದೆ. ಶ್ರೀಕೃಷ್ಣನು ನರಕಾಸುರನ ಸೆರೆಮನೆಯಲ್ಲಿ ಇರುವ ಸ್ತ್ರೀಯರನ್ನು ಬಿಡುಗಡೆಗೊಳಿಸಿದ ನಂತರ ಅವರ ಪೋಷಕರು ಅವರನ್ನು ಸ್ವೀಕರಿಸಲಿಲ್ಲ. ಆದ್ದರಿಂದ ಅವರೆಲ್ಲರೂ ಅನಾಥರಾದರು. ಯುವತಿಯರ ರಕ್ಷಣೆಯ ಜವಾಬ್ದಾರಿ ಅವರ ಪೋಷಕರ ಮೇಲೆ ಇರುತ್ತದೆ. ಈಗ ಈ ಜವಾಬ್ದಾರಿ ಶ್ರೀಕೃಷ್ಣನು ತೆಗೆದುಕೊಂಡನು. ಅವನು ಅವರ ತಂದೆಯ ಸ್ಥಾನ ಪಡೆದನು ಪತಿಯ ಸ್ಥಾನವಲ್ಲ. ನಾವು ಸಭಾಪತಿ, ರಾಷ್ಟ್ರಪತಿ ಎನ್ನುತ್ತೇವೆ. ಆಗ ಅವರು ಸಭೆ ಅಥವಾ ರಾಷ್ಟ್ರದ ಪತಿಯಾಗಿರದೇ ಪೋಷಕನಾಗಿರುತ್ತಾನೆ.

ಲೇಖಕರು : ಶ್ರೀ. ದುರ್ಗೇಶ ಜ. ಪರುಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ, ಮಹಾರಾಷ್ಟ್ರ