ಚೀನಾದ ಜಲನೀತಿ ದಕ್ಷಿಣ ಏಷ್ಯಾವನ್ನು ಮರುಭೂಮಿಯಾಗಿಸಬಹುದು !

ಚೀನಾದ ೧೫೦ ಕೋಟಿ ಜನಸಂಖ್ಯೆಯಿಂದಾಗಿ ನೀರಿನ ಅಗತ್ಯತೆ ತೀವ್ರಗೊಳ್ಳುತ್ತಿದೆ. ಹೀಗಾಗಿ ಚೀನಾ ಜಲ ಯೋಜನೆಗಳನ್ನು ತೀವ್ರಗೊಳಿಸುತ್ತಿದೆ. ಇತ್ತೀಚೆಗೆ, ಭಾರತ-ಚೀನಾ ಗಡಿಯಲ್ಲಿರುವ ಟಿಬೆಟ್‌ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಿದ್ದಾರೆ. ಇದು ಭಾರತಕ್ಕೆ ಅಪಾಯದ ಗಂಟೆಯಾಗಿದೆ. ಬ್ರಹ್ಮಪುತ್ರ ನದಿಗೆ ಬೃಹತ್‌ ಅಣೆಕಟ್ಟು ನಿರ್ಮಿಸುವ ಚೀನಾದ ಯೋಜನೆ ಭಾರತದ ವಿರುದ್ಧ ಅಘೋಷಿತ ಜಲ ಯುದ್ಧವಾಗಿದೆ. ಇದರಿಂದ ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಲಿದೆ. ಚೀನಾ ಈಗ ಭಾರತವನ್ನು ಜಲಬಂಧನಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದೆ. ಇದರಿಂದ ಭಾರತ-ಚೀನಾ ನಡುವಿನ ಜಲ ವಿವಾದ ಸಂಘರ್ಷದ ರೂಪ ಪಡೆಯುವ ಸಾಧ್ಯತೆಯಿದೆ.

೧. ಚೀನಾದ ನೀರಿನ ಸ್ಥಿತಿ ಮತ್ತು ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸಲು ಕಾರಣ

ಏಷ್ಯಾ ಖಂಡದ ಮಹಾಶಕ್ತಿಯಾಗಿರುವ ಚೀನಾ ಅನೇಕ ಅರ್ಥಗಳಲ್ಲಿ ವೈಶಿಷ್ಯಪೂರ್ಣ ದೇಶವಾಗಿದೆ. ವಿಶ್ವದಲ್ಲಿ ಚೀನಾ ೧೯ ದೇಶಗಳೊಂದಿಗೆ ವಿವಾದಗಳನ್ನು ಹೊಂದಿದೆ. ಅದೇ ರೀತಿ, ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳು ಚೀನಾದಲ್ಲಿವೆ. ಈ ಸಂಖ್ಯೆ ೮೬ ಸಾವಿರಗಳಷ್ಟಿದೆ. ಮತ್ತೊಂದೆಡೆ, ಅಮೆರಿಕಾದಲ್ಲಿ ಅಣೆಕಟ್ಟುಗಳ ಸಂಖ್ಯೆ ೫ ಸಾವಿರ ೫೦೦; ಆದರೆ ಭಾರತದಲ್ಲಿ ಅದಕ್ಕಿಂತಲೂ ಕಡಿಮೆ ಅಣೆಕಟ್ಟುಗಳಿವೆ. ಚೀನಾದಲ್ಲಿರುವ ಅಣೆಕಟ್ಟುಗಳಲ್ಲಿ ೩೦ ಸಾವಿರ ಅಣೆಕಟ್ಟುಗಳು ೧೫ ಮೀಟರ್‌ ಎತ್ತರವನ್ನು ಹೊಂದಿವೆ. ಇವುಗಳನ್ನು ‘ಅತಿ ದೊಡ್ಡ ಅಣೆಕಟ್ಟುಗಳು’ ಎಂದು ಕರೆಯಲಾಗುತ್ತದೆ. ಈ ಅಣೆಕಟ್ಟುಗಳ ಮೂಲಕ ಚೀನಾ ತನ್ನ ದೇಶದಲ್ಲಿ ಹರಿಯುವ ನದಿಗಳ ಮೇಲೆ ನಿಯಂತ್ರಣ ಸಾಧಿಸಿದೆ. ಏಶಿಯಾ ಖಂಡದಲ್ಲಿ ನೆಲದ ಮೇಲಿನ ನೀರಿನ ಸಂಗ್ರಹ ಸಾಮರ್ಥ್ಯವೂ ಚೀನಾದಲ್ಲಿ ಅತಿ ಹೆಚ್ಚಿದ್ದು, ಅದನ್ನು ಚೀನಾ ಬಳಸಿಕೊಳ್ಳುತ್ತಿದೆ. ಚೀನಾ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರನ್ನು ಏಕೆ ಸಂಗ್ರಹಿಸುತ್ತಿದೆ ? ಎಂದು ಅನೇಕ ದೇಶಗಳಿಗೆ ಪ್ರಶ್ನೆ ಬರುತ್ತದೆ; ಆದರೆ ಇದರ ಹಿಂದೆ ಚೀನಾದ ಜನಸಂಖ್ಯೆ ಮತ್ತು ಭೌಗೋಲಿಕ ರಚನೆ ಕಾರಣವಾಗಿದೆ. ಚೀನಾದಲ್ಲಿ ಅತಿ ಹೆಚ್ಚು ನದಿಗಳು ದಕ್ಷಿಣ ಭಾಗದಲ್ಲಿವೆ ಮತ್ತು ಚೀನಾದ ಉತ್ತರ ಭಾಗದಲ್ಲಿ ಒಟ್ಟು ೮ ಪ್ರಾಂತ್ಯಗಳಿವೆ. ಅಲ್ಲಿ ಸುಮಾರು ಚೀನಾದ ಶೇ. ೪೦ ರಷ್ಟು ಜನಸಂಖ್ಯೆ ವಾಸಿಸುತ್ತದೆ. ಶೇ. ೩೮ ರಷ್ಟು ಕೃಷಿ ಇದೇ ಭಾಗದಲ್ಲಿ ನಡೆಯುತ್ತದೆ. ಸುಮಾರು ಶೇ. ೫೦ ಕ್ಕಿಂತ ಹೆಚ್ಚು ಕೈಗಾರಿಕೆಗಳು ಇದೇ ಭಾಗದಲ್ಲಿವೆ. ಪೂರ್ವ ಭಾಗದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ; ಆದರೆ ನೀರಿನ ಪ್ರಮಾಣ ಮಾತ್ರ ದಕ್ಷಿಣದಲ್ಲಿದೆ. ಆದ್ದರಿಂದ ದಕ್ಷಿಣದ ನೀರನ್ನು ತಿರುಗಿಸಿ ವಸತಿ ಪ್ರದೇಶಗಳಿಗೆ ಹೇಗೆ ತರುವುದು ಎಂಬ ಪ್ರಶ್ನೆ ಅಲ್ಲಿ ಯಾವಾಗಲೂ ಇರುತ್ತದೆ. ಇದರಿಂದ ಚೀನಾ ಜಲ ಯೋಜನೆಗಳನ್ನು ತೀವ್ರಗೊಳಿಸಬೇಕಾಗಿದೆ.

ಬ್ರಹ್ಮಪುತ್ರ ನದಿಯ ಅಣೆಕಟ್ಟಿನ ಜಲವಿದ್ಯುತ್‌ ಯೋಜನೆಗೆ ೨೩೭ ಶತಕೋಟಿ ಡಾಲರ್‌ಗಳನ್ನು (೨೦ ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಮೀಸಲಿಡಲಾಗಿದೆ. ಚೀನಾದ ಈ ಯೋಜನೆ ಭಾರತದ ವಿರುದ್ಧ ಅಘೋಷಿತ ಜಲ ಯುದ್ಧವೇ ಆಗಿದೆ. ಇದರಿಂದ ಈಶಾನ್ಯ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಲಿದೆ. ಇದರ ಪರಿಣಾಮವಾಗಿ, ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ವಿವಾದದ ಜೊತೆಗೆ ನದಿ ನೀರು ಹಂಚಿಕೆಯ ಪ್ರಶ್ನೆಯು ಮತ್ತೆ ಮುನ್ನೆಲೆಗೆ ಬಂದಿದೆ. ಚೀನಾ ಇದುವರೆಗೆ ಬ್ರಹ್ಮಪುತ್ರ ನದಿಗೆ ಒಟ್ಟು ೮ ಅಣೆಕಟ್ಟುಗಳನ್ನು ನಿರ್ಮಿಸಿದೆ ಮತ್ತು ಇನ್ನೂ ೧೨ ಅಣೆಕಟ್ಟುಗಳ ಕೆಲಸವನ್ನು ಪ್ರಾರಂಭಿಸಿದೆ, ಅಂದರೆ ಚೀನಾ ಒಟ್ಟು ೨೦ ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದೆ; ಆದರೆ ಭಾರತ-ಚೀನಾ ಗಡಿಯಲ್ಲಿನ ಈ ಬೃಹತ್‌ ಅಣೆಕಟ್ಟು ಕಾರ್ಯರೂಪಕ್ಕೆ ಬಂದರೆ ಭಾರತ ಮತ್ತು ಬಾಂಗ್ಲಾದೇಶಕ್ಕೆ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಲಿದೆ ಮತ್ತು ಪ್ರತಿಯಾಗಿ ಕೃಷಿಯ ಮೇಲೂ ಪರಿಣಾಮ ಬೀರಲಿದೆ.

೨. ಚೀನಾದ ಪೂರ್ವ ಭಾಗದ ನೀರಿನ ಅಗತ್ಯವನ್ನು ಪೂರೈಸುವ ಪ್ರಯತ್ನ

ಉತ್ತರ ನದಿಗಳ ಮೇಲಿನ ಅಣೆಕಟ್ಟುಗಳು ಸಾಕಾಗದ ಕಾರಣ, ಚೀನಾ ಈಗ ದಕ್ಷಿಣದ ನದಿಗಳತ್ತ ಗಮನ ಹರಿಸಿದೆ. ಟಿಬೆಟ್‌ ಪ್ರಸ್ಥಭೂಮಿಯಿಂದ ಹುಟ್ಟಿಕೊಂಡು ದಕ್ಷಿಣ ಭಾಗದ ನೇಪಾಳ, ಭಾರತ, ಬಾಂಗ್ಲಾದೇಶ, ಥೈಲ್ಯಾಂಡ್, ಮ್ಯಾನ್ಮಾರ್‌ ಮುಂತಾದ ದೇಶಗಳಿಗೆ ಹರಿಯುವ ನದಿಗಳ ನೀರನ್ನು ತಿರುಗಿಸಲು ಚೀನಾ ಪ್ರಯತ್ನಿಸುತ್ತಿದೆ. ಈ ನೀರನ್ನು ತಿರುಗಿಸುವ ಮೂಲಕ ಚೀನಾ ಪೂರ್ವ ಭಾಗದ ನೀರಿನ ಅಗತ್ಯವನ್ನು ಪೂರೈಸಲು ಪ್ರಯತ್ನಿಸುತ್ತಿದೆ. ವಾಸ್ತವವಾಗಿ, ಚೀನಾ ಇದನ್ನು ೧೯೫೦ ರ ದಶಕದಲ್ಲಿಯೇ ಪ್ರಾರಂಭಿಸಿದೆ. ಚೀನಾ ಕಳೆದ ೭೪ ವರ್ಷಗಳಲ್ಲಿ ಅನೇಕ ದೊಡ್ಡ ಕಾಲುವೆಗಳನ್ನು ನಿರ್ಮಿಸಿದೆ. ಈ ಕಾಲುವೆಗಳಲ್ಲಿ ಒಂದಕ್ಕೆ ಚೀನಾ ೧೦೦ ಶತಕೋಟಿ ಡಾಲರ್‌ (೮೫ ಸಾವಿರ ಕೋಟಿ ರೂಪಾಯಿ) ಖರ್ಚು ಮಾಡಿದೆ. ‘ಸೌತ್‌ ನಾರ್ತ್ ವಾಟರ್‌ ಟ್ರಾನ್ಸಪೋರ್ಟ್ ಕ್ಯಾನಲ್’ ಎಂದು ಕರೆಯಲ್ಪಡುವ ಈ ಕಾಲುವೆಯ ಕೆಲಸವನ್ನು ಚೀನಾ ೧೯೫೨ ರಲ್ಲಿ ಪ್ರಾರಂಭಿಸಿತು ಮತ್ತು ೨೦೧೪ ರಲ್ಲಿ ಅದು ಪೂರ್ಣಗೊಂಡಿತು; ಆದರೆ ಅದರಿಂದಲೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಆದ್ದರಿಂದ ಅವರು ದಕ್ಷಿಣ ಭಾಗದ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.

೩. ಚೀನಾದಲ್ಲಿ ನೀರಿನ ಕೇಂದ್ರ ಸರಕಾರದ ಅಡಿಯಲ್ಲಿ !

ಚೀನಾದ ಸಂವಿಧಾನದಲ್ಲಿ ನೀರಿನ ಸಮಸ್ಯೆಯು ಕೇಂದ್ರ ಸರಕಾರದ ಅಧೀನಕ್ಕೆ ಬರುತ್ತದೆ. ಆದ್ದರಿಂದ, ಅಲ್ಲಿ ಅಣೆಕಟ್ಟುಗಳ ನಿರ್ಮಾಣ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತದೆ ಮತ್ತು ಅಲ್ಲಿ ಏಕಸ್ವಾಮ್ಯ ಇರುವುದರಿಂದ ಅಣೆಕಟ್ಟುಗಳ ನಿರ್ಮಾಣಕ್ಕೆ ವಿರೋಧದ ಪ್ರಶ್ನೆ ಹೆಚ್ಚಾಗಿ ಬರುವುದಿಲ್ಲ. ಆದ್ದರಿಂದಲೇ ಚೀನಾ ದಲ್ಲಿ ಬೃಹತ್‌ ಅಣೆಕಟ್ಟು ಯೋಜನೆಗಳು ಕಡಿಮೆ ಸಮಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಭಾರತದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ನಮ್ಮ ದೇಶದಲ್ಲಿ ನೀರು ರಾಜ್ಯ ಪಟ್ಟಿಯ ವಿಷಯ ವಾಗಿದೆ. ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಾಗ, ಅದಕ್ಕೆ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತದೆ. ಇದರ ಪರಿಣಾಮದಿಂದ, ಭಾರತದಲ್ಲಿ ಭೂಮಿಯ ಮೇಲೆ ನೀರು ಸಂಗ್ರಹಿಸುವ ಸಾಮರ್ಥ್ಯ ಬಹಳ ಕಡಿಮೆ ಇವೆ. ಸಹಜವಾಗಿ ಭಾರತವು ಭವಿಷ್ಯದಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ೨೦೩೦ ರ ವೇಳೆಗೆ ಭಾರತದಲ್ಲಿ ದೊಡ್ಡ ಪ್ರಮಾಣದ ನೀರಿನ ಬಿಕ್ಕಟ್ಟು ಎದುರಾಗುವ ಭಯ ಕೆಲವು ಅಂತರರಾಷ್ಟ್ರೀಯ ವರದಿಗಳಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನದಿ ನೀರನ್ನು ಸರಿಯಾಗಿ ನಿಭಾಯಿಸುವುದು ಆವಶ್ಯಕ ವಾಗಿದೆ. ಭಾರತದಲ್ಲಿ ನದಿಗಳೇ ನೀರಿನ ಮುಖ್ಯ ಮೂಲವಾಗಿವೆ. ಟಿಬೆಟ್‌ನಿಂದ ಚೀನಾ ಮೂಲಕ ಭಾರತಕ್ಕೆ ಬರುವ ಬ್ರಹ್ಮಪುತ್ರ, ಸಿಂಧೂ, ಸತ್ಲಜ್‌ ಮತ್ತು ಕೋಸಿ ಈ ನಾಲ್ಕು ನದಿಗಳ ನೀರನ್ನು ತಡೆಯಲು ಪ್ರಯತ್ನಿಸುತ್ತಿದೆ. ನೀರು ಹಂಚಿಕೆಯ ವಿಷಯದಲ್ಲಿ ಚೀನಾ ಯಾವುದೇ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ೧೯೯೭ ರಲ್ಲಿ ವಿಶ್ವಸಂಸ್ಥೆಯು ನೀಡಿದ ನಿರ್ಣಯಕ್ಕನುಸಾರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹರಿಯುವ ನದಿಗಳ ನೀರು ಹಂಚಿಕೆಯ ಕುರಿತು ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳು ಆಗುತ್ತವೆ.

ಅದರಲ್ಲಿ ನೀರಿನ ಹಂಚಿಕೆಯನ್ನು ಹೇಗೆ ಮಾಡಬೇಕು ಎಂಬುದರ ನೀತಿಯನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ ಅಣೆಕಟ್ಟು ನಿರ್ಮಿಸ ಬೇಕಾದರೆ, ಅದರ ಎತ್ತರ, ಸಂಗ್ರಹ ಸಾಮರ್ಥ್ಯ ಎಷ್ಟಿರಬೇಕು ? ನೀರು ಎಷ್ಟು ಇದೆ ? ಇತ್ಯಾದಿ ವಿಷಯಗಳು ಸೇರಿವೆ.

೪. ಚೀನಾದಲ್ಲಿ ಯಾವುದೇ ನೀರಿನ ಒಪ್ಪಂದಗಳೇ ಇಲ್ಲ !

ಟಿಬೆಟ್‌ ಅನ್ನು ವಿಶ್ವದ ‘ಜಲ ಛಾವಣಿ’ (ವಾಟರ್‌ ರೂಫ್) ಎಂದು ಕರೆಯಲಾಗುತ್ತದೆ. ಟಿಬೆಟ್‌ನಿಂದ ದೊಡ್ಡ ನದಿಗಳು ಹುಟ್ಟಿಕೊಂಡು ಎತ್ತರದಿಂದ ಭಾರತ, ಬಾಂಗ್ಲಾದೇಶ, ನೇಪಾಳ ಮುಂತಾದ ತಗ್ಗು ಪ್ರದೇಶಗಳತ್ತ ಹರಿಯುತ್ತವೆ. ಇಂತಹ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ನದಿಗಳ ನೀರಿನ ಅಂಕಿಅಂಶಗಳನ್ನು ಇತರ ದೇಶಗಳಿಗೆ ಹೇಳುವುದು ಆವಶ್ಯಕ; ಆದರೆ ಚೀನಾ ಮಾತ್ರ ನೀರು ವಿಭಜನೆಯಾಗಬಾರದು ಎಂದು ಇತರ ದೇಶಗಳೊಂದಿಗೆ ಯಾವುದೇ ನೀರು ಹಂಚಿಕೆ ಒಪ್ಪಂದಗಳನ್ನು ಮಾಡಿಕೊಂಡಿಲ್ಲ. ಭಾರತ ಮಾತ್ರವಲ್ಲ, ತನ್ನ ಮಿತ್ರರಾಷ್ಟ್ರವಾದ ಪಾಕಿಸ್ತಾನ ಅಥವಾ ಬಾಂಗ್ಲಾದೇಶದೊಂದಿಗೂ ಚೀನಾ ಒಪ್ಪಂದ ಮಾಡಿಕೊಂಡಿಲ್ಲ. ನೇಪಾಳದಲ್ಲಿ ಪ್ರಸ್ತುತ ಚೀನಾ-ಪರ ಸರಕಾರವಿದ್ದರೂ, ಚೀನಾ ಈ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ಆದ್ದರಿಂದ, ಚೀನಾ ನೀರು ಹಂಚಿಕೆಯ ವಿಷಯದಲ್ಲಿ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದೆ. ಚೀನಾ ಮೆಕಾಂಗ್‌ ನದಿಗೂ ಅಣೆಕಟ್ಟುಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಈ ನದಿಯು ಚೀನಾದಿಂದ ಮ್ಯಾನ್ಮಾರ್‌ ಮೂಲಕ ಥೈಲ್ಯಾಂಡ್‌ಗೆ ಹರಿಯುತ್ತದೆ.

೫. ಚೀನಾಕ್ಕೆ ನೀರಿನ ಮೇಲೆ ನಿಯಂತ್ರಣ ಬೇಕಾಗಿದೆ !

೨೦೫೦ ರ ನಂತರ ವಿಶ್ವದ ತೈಲ ಸಂಗ್ರಹಗಳು ಕಡಿಮೆಯಾಗುತ್ತವೆ ಎಂದು ಅಮೆರಿಕಾಗೆ ಸಂಪೂರ್ಣ ಮಾಹಿತಿಯಿರು ವುದರಿಂದ, ಅದು ತನ್ನ ತೈಲ ಸಂಗ್ರಹಗಳನ್ನು ರಕ್ಷಿಸುತ್ತದೆ, ಹಾಗೆಯೇ ಪಶ್ಚಿಮ ಏಶಿಯಾದಲ್ಲಿ ತೈಲವನ್ನು ಉತ್ಪಾದಿಸಿ ಅದನ್ನು ಬಳಸುವುದು ಅಮೆರಿಕಾದ ನಡೆಯಾಗಲಿದೆ. ಈ ತೈಲ ಸಂಗ್ರಹಗಳು ಖಾಲಿಯಾದಾಗ, ಅತಿ ಹೆಚ್ಚು ತೈಲ ಸಂಗ್ರಹಗಳನ್ನು ಹೊಂದಿರುವ ದೇಶ ಅಮೆರಿಕಾವೇ ಆಗಿರುತ್ತದೆ. ಆಗ ಮತ್ತೆ ತೈಲದ ಮೂಲಕ ವಿಶ್ವದ ಮೇಲೆ ಅಧಿಪತ್ಯ ಸಾಧಿಸುವುದು ಅಮೆರಿಕಾದ ಉದ್ದೇಶವಾಗಿದೆ. ಹಾಗೆಯೇ ಚೀನಾ ಕೂಡ ಮಾಡಲು ಬಯಸಿದೆ. ನೀರಿನ ವಿಷಯದಲ್ಲಿ ಚೀನಾ ವಿಶ್ವದ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸಲು ಬಯಸಿದೆ. ೨೦೫೦ ರ ವೇಳೆಗೆ ಏಷ್ಯಾ ಖಂಡದಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ ಎಂದು ಚೀನಾಕ್ಕೆ ತಿಳಿದಿದೆ. ಆಗ ಕುಡಿಯುವ ನೀರಿನ ಅತಿ ಹೆಚ್ಚು ಸಂಗ್ರಹ ಚೀನಾದಲ್ಲಿಯೇ ಇರುತ್ತವೆ. ಅದರ ಮೂಲಕ ಚೀನಾ ಮಹಾಶಕ್ತಿಯಾಗಲು ಬಯಸುತ್ತದೆ; ಅದಕ್ಕಾಗಿಯೇ ಚೀನಾ ದೊಡ್ಡ ಪ್ರಮಾಣದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಭಾರತ, ನೇಪಾಳದಂತಹ ದೇಶಗಳ ಮೇಲೆ ಇದರ ನಕಾರಾತ್ಮಕ ಪರಿಣಾಮಗಳಾಗಲಿವೆ. ಅದಕ್ಕಾಗಿ ಭಾರತವು ಎಚ್ಚರಿಕೆ ವಹಿಸಬೇಕು. ಚೀನಾದ ಅಣೆಕಟ್ಟುಗಳ ಸಂಖ್ಯೆ ಲಭ್ಯವಿರುವ ಮಾಹಿತಿಗಿಂತಲೂ ಹೆಚ್ಚು ಇರಬಹುದು; ಏಕೆಂದರೆ ಈ ಅಣೆಕಟ್ಟುಗಳು ಕಣಿವೆಗಳಲ್ಲಿವೆ. ಇಂದು ಚೀನಾ ಕೈಗೆತ್ತಿಕೊಂಡಿರುವ ಅಣೆಕಟ್ಟು ಯೋಜನೆಗಳು ಮತ್ತು ಪ್ರಸ್ತಾವಿತ ಯೋಜನೆಗಳನ್ನು ಪರಿಗಣಿಸಿದರೆ, ಮುಂಬರುವ ದಿನಗಳಲ್ಲಿ ಇಡೀ ದಕ್ಷಿಣ ಏಷ್ಯಾ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೇಪಾಳವೂ ಕಳವಳ ವ್ಯಕ್ತಪಡಿಸಿದೆ. ದಕ್ಷಿಣ ಏಷ್ಯಾದಲ್ಲಿ ನೀರಿನ ತುರ್ತು ಪರಿಸ್ಥಿತಿ ಉಂಟಾದರೆ ಯುದ್ಧದ ಭೀತಿ ಹೆಚ್ಚಾಗುತ್ತದೆ.

ಈ ಆಕ್ರಮಣಕಾರಿ ನೀತಿಯನ್ನು ಮುರಿಯಲು, ಹಿತಾಸಕ್ತಿ ಹೊಂದಿದ ಮತ್ತು ತುರ್ತು ಪರಿಸ್ಥಿತಿಯನ್ನು ಎದುರಿಸಬೇಕಾದ ದೇಶಗಳು ಒಗ್ಗೂಡಿ ವಿಶ್ವಸಂಸ್ಥೆಯ ಸಹಾಯದಿಂದ ಚೀನಾದ ಮೇಲೆ ಒತ್ತಡ ಹೇರಬೇಕು. ಇದಕ್ಕಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ಸಹಾಯವನ್ನೂ ಪಡೆಯಬಹುದು, ಹಾಗೆಯೇ ‘ಜಿ ೨೦’ ಯಂತಹ ಸಂಘಟನೆಗಳಲ್ಲಿಯೂ ನೀರಿನ ಸಮಸ್ಯೆಯನ್ನು ಎತ್ತಬೇಕು. ಇಂದಿಗೂ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಮಸ್ಯೆಯನ್ನು ಏಕೆ ಮಂಡಿಸುತ್ತಿಲ್ಲ ? ಎಂಬ ಪ್ರಶ್ನೆ ಬರುತ್ತದೆ. ‘ಜ್ಞಾನಪೀಠ’ ಪ್ರಶಸ್ತಿ ವಿಜೇತ ಅಮಿತಾವ ಘೋಷ್ ಅವರು ತಮ್ಮ ಒಂದು ಪುಸ್ತಕದಲ್ಲಿ ‘ನೀರಿನ ವಿಷಯದಲ್ಲಿ ಜಗತ್ತು ಏಕೆ ಇಷ್ಟು ನಿರ್ಲಕ್ಷ್ಯದಿಂದಿದೆ ?’ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ‘ನೀರಿನಿಂದ ಮಹಾಯುದ್ಧ, ರಕ್ತಪಾತ ಸಂಭವಿಸುವ ಸಾಧ್ಯತೆಯಿರುವಾಗ ನೀರು ಅಂತಾರಾಷ್ಟ್ರೀಯ ಒಪ್ಪಂದದ ಭಾಗವಾಗಲು ಏಕೆ ಸಾಧ್ಯವಿಲ್ಲ ?’ ಎಂದು ಅವರು ಕೇಳಿದ್ದಾರೆ ಮತ್ತು ಅದು ಸಮಂಜಸವಾಗಿದೆ. ಭಾರತವು ‘ಜಿ20’ ಯಲ್ಲಿ ಕಪ್ಪುಹಣದ ವಿಷಯವನ್ನು ಪ್ರಸ್ತಾಪಿಸಿದೆ. ಆರ್ಥಿಕ ಅಕ್ರಮಗಳನ್ನು ಎಸಗಿ ಇತರ ದೇಶಗಳಿಗೆ ಪಲಾಯನ ಮಾಡುವವರಿಗೆ ಕಡಿವಾಣ ಹಾಕಲು ೨೦ ನೇ ‘ಜಿ20’ ಶೃಂಗಸಭೆಯಲ್ಲಿ ಅಂತಾರಾಷ್ಟ್ರೀಯ ಒಪ್ಪಂದವನ್ನು ಮಾಡಿಕೊಳ್ಳುವ ನಿಲುವನ್ನು ಭಾರತ ಮಂಡಿಸಿದೆ. ಈಗ ಮುಂದಿನ ‘ಜಿ20’ ಶೃಂಗಸಭೆಯಲ್ಲಿ ಚೀನಾ ನಿರ್ಮಿಸುತ್ತಿರುವ ಅಣೆಕಟ್ಟುಗಳ ಸಮಸ್ಯೆಯನ್ನು ಪ್ರಮುಖವಾಗಿ ಮಂಡಿಸಬೇಕು. ಚೀನಾ ಕುಡಿಯುವ ನೀರಿನ ವಿಷಯದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವ ರೀತಿಯನ್ನು ಗಮನಿಸಿ ಕಾಲಕ್ಕನುಗುಣವಾಗಿ ಚೀನಾದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ದಕ್ಷಿಣ ಏಷ್ಯಾ ದಲ್ಲಿ ಮರುಭೂಮಿಯಂತಹ ಸ್ಥಿತಿ ಉಂಟಾಗಲು ಹೆಚ್ಚು ಸಮಯ ಬೇಕಾಗದು.

ಪ್ರವಾಹಕ್ಕೆ ಚೀನಾ ದೇಶವೇ ಕಾರಣ !

ಬ್ರಹ್ಮಪುತ್ರ ನದಿಯು ಟಿಬೆಟ್‌ ಪ್ರಸ್ಥಭೂಮಿಯಿಂದ ಹುಟ್ಟುತ್ತದೆ. ಕೈಲಾಸ ಪರ್ವತದಿಂದ ಇದು ಅರುಣಾಚಲ ಪ್ರದೇಶದ ಮೂಲಕ ಭಾರತಕ್ಕೆ ಬರುತ್ತದೆ ಮತ್ತು ಅಲ್ಲಿಂದ ಆಸ್ಸಾಂ ಮೂಲಕ ಬಾಂಗ್ಲಾದೇಶಕ್ಕೆ ಹೋಗುತ್ತದೆ. ಅಲ್ಲಿ ಅದು ಬಂಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರ ನದಿಯ ನೀರಿನ ಮೇಲೆ ಭಾರತದ ಈಶಾನ್ಯ ರಾಜ್ಯಗಳು ಮತ್ತು ಬಾಂಗ್ಲಾದೇಶದ ದೊಡ್ಡ ಪ್ರಮಾಣದ ಕೃಷಿ ಅವಲಂಬಿಸಿದೆ. ೧೦ ಕೋಟಿ ಜನರ ಜೀವನೋಪಾಯ ಈ ನದಿಯನ್ನು ಅವಲಂಬಿಸಿದೆ. ಆಸ್ಸಾಂನ ಚಹಾ ತೋಟಗಳು ಬ್ರಹ್ಮಪುತ್ರ ನದಿಯ ನೀರಿನಿಂದಲೇ ಬೆಳೆಯುತ್ತವೆ. ಬಾಂಗ್ಲಾದೇಶದ ಸೆಣಬು ಕೃಷಿ ಬ್ರಹ್ಮಪುತ್ರ ನದಿಯ ನೀರಿನಿಂದಲೇ ನಡೆಯುತ್ತದೆ.

ವಾಸ್ತವದಲ್ಲಿ, ಚೀನಾ ಭಾರತದೊಂದಿಗೆ ಮಾಡಿಕೊಂಡಿದ್ದ ಒಂದು ಒಪ್ಪಂದದ ಪ್ರಕಾರ, ಮಳೆಗಾಲದಲ್ಲಿ ಬ್ರಹ್ಮಪುತ್ರ ನದಿಯ ನೀರಿನ ಮಟ್ಟವನ್ನು ತಿಳಿಸಲು ಒಪ್ಪಿಕೊಂಡಿತ್ತು; ಆದರೆ ೨೦೧೭ ರಲ್ಲಿ ಡೋಕ್ಲಾಮ್‌ ವಿವಾದ ಉಲ್ಬಣಗೊಂಡಾಗ, ಭಾರತವು ತೆಗೆದುಕೊಂಡ ಕಠಿಣ ನಿಲುವಿಗೆ ಪ್ರತೀಕಾರವಾಗಿ ಚೀನಾ ಈ ಅಂಕಿಅಂಶಗಳನ್ನು ನೀಡಲಿಲ್ಲ. ಈ ಅಂಕಿಅಂಶಗಳಿಂದ ಬ್ರಹ್ಮಪುತ್ರ ನದಿಗೆ ಪ್ರವಾಹ ಬರುವ ಸಾಧ್ಯತೆಯಿದ್ದರೆ, ಭಾರತವು ಆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು; ಆದರೆ ಭಾರತಕ್ಕೆ ತೊಂದರೆ ನೀಡಲು ಚೀನಾ ೨೦೧೭ ರ ಮಳೆಗಾಲದಲ್ಲಿ ಈ ಮಾಹಿತಿಯನ್ನು ನೀಡಲಿಲ್ಲ. ಇದರ ಪರಿಣಾಮವಾಗಿ ಆಸ್ಸಾಂ ಪ್ರವಾಹಕ್ಕೆ ಸಿಲುಕಿತು. ಆ ಪ್ರವಾಹದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಅದಕ್ಕೆ ಎಲ್ಲ ರೀತಿಯಿಂದಲೂ ಚೀನಾ ದೇಶವೇ ಕಾರಣವಾಗಿದೆ.

– ಡಾ. ಶೈಲೇಂದ್ರ ದೇವಳಾಣಕರ, ವಿದೇಶಾಂಗ ನೀತಿ ವಿಶ್ಲೇμÀಕರು, ಪುಣೆ. (೧೩.೬.೨೦೨೫)