ಭಾರತೀಯ ಪರಂಪರೆಯಲ್ಲಿ ಶ್ರೀ ಗುರುಗಳ ವಿವಿಧ ರೂಪ, ಅವರ ಆಧ್ಯಾತ್ಮಿಕ ಮಹತ್ವ ಮತ್ತು ಗುರುತತ್ತ್ವದ ಗುಣಲಕ್ಷಣಗಳಿಂದ ಪರಿಪೂರ್ಣರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

9. ಮಾರ್ಗದರ್ಶಕ ಗುರು

ಯಾವ ಗುರುಗಳು ಶಿಷ್ಯನ ಅವಶ್ಯಕತೆಯನ್ನು ಅರಿತು, ವಿವಿಧ ರೂಪಗಳಲ್ಲಿ ಅಥವಾ ವಿವಿಧ ಪ್ರಸಂಗಗಳಲ್ಲಿ ಅವನಿಗೆ ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ಮಾಡುತ್ತಾರೆಯೋ, ಅವರಿಗೆ `ಮಾರ್ಗದರ್ಶಕ ಗುರು’ ಎನ್ನುತ್ತಾರೆ. ಅನೇಕ ಬಾರಿ ಕೆಲವು ಶಿಷ್ಯರಿಗೆ ಒಂದಕ್ಕಿಂತ ಹೆಚ್ಚು ಸಂತರು ಅಥವಾ ಗುರುಗಳ ದರ್ಶನ ಮತ್ತು ಮಾರ್ಗದರ್ಶನ ಲಭಿಸುತ್ತದೆ. ಇವರಲ್ಲಿ ಎಲ್ಲ ಸಂತರು ಅಥವಾ ಗುರುಗಳು ಅವರ ಮೋಕ್ಷ ಗುರುಗಳಾಗಿರದೆ, ಅವರು ಆ ಶಿಷ್ಯನಿಗೆ ಕೇವಲ ನಿರ್ದಿಷ್ಟ ವಿದ್ಯೆ ಅಥವಾ ಜ್ಞಾನವನ್ನು ನೀಡಲು ಅವರ ಜೀವನದಲ್ಲಿ ಬಂದಿರುತ್ತಾರೆ. ಆದ್ದರಿಂದ ಅವರಿಗೆ `ಮಾರ್ಗದರ್ಶಕ ಗುರು’ ಎಂದು ಸಂಬೋಧಿಸಲಾಗಿದೆ.

ಉದಾಹರಣೆ 1 – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಸಿಂಧುದುರ್ಗದ ಸಂತ ಪ.ಪೂ. ಭಾವು ಮಸೂರಕರ ಅವರಿಂದ ಸಂಖ್ಯಾಶಾಸ್ತ್ರ, ಪ.ಪೂ. ವಟಕರ ಮಹಾರಾಜರಿಂದ ವಿವಿಧ ರೀತಿಯ ಮುದ್ರೆಗಳು, ಪ.ಪೂ. ಡಬರಾಲವಾಲೆ ಬಾಬಾ ಅವರಿಂದ ಅನಿಷ್ಟ ಶಕ್ತಿಗಳ ತೊಂದರೆಗಳು ಮತ್ತು ಅವುಗಳ ಪರಿಹಾರಗಳ ಕುರಿತು ಮಾರ್ಗದರ್ಶನ ದೊರೆಯಿತು. ಹೀಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಪ.ಪೂ. ಭಕ್ತರಾಜ ಮಹಾರಾಜರು `ಮೋಕ್ಷಗುರುಗಳು’ ಆಗಿದ್ದರು ಹಾಗೂ ಅವರ ಜೀವನದಲ್ಲಿ ಬಂದ ವಿವಿಧ ಸಂತರು ಅವರ `ಮಾರ್ಗದರ್ಶಕ ಗುರು’ಗಳಾಗಿದ್ದರು.

10. ಸಮಷ್ಟಿ ಗುರು

ಯಾವ ಗುರುಗಳು ಶಿಷ್ಯಂದಿರಿಗೆ ಕೇವಲ ವ್ಯಷ್ಟಿ ಸ್ತರದಲ್ಲಿ ಮೋಕ್ಷಪ್ರಾಪ್ತಿಯ ಜೊತೆಗೆÉ, ಸಮಾಜದಲ್ಲಿ ಧರ್ಮ ಮತ್ತು ಅಧ್ಯಾತ್ಮವನ್ನು ಪ್ರಸಾರ ಮಾಡಿಸಿ ಸುರಾಜ್ಯ ತರಲು ಮಾರ್ಗದರ್ಶನ ಮಾಡುತ್ತಾರೋ, ಅವರಿಗೆ `ಸಮಷ್ಟಿ ಗುರು’ ಎನ್ನುತ್ತಾರೆ. `ಸಮಷ್ಟಿ ಗುರು’ ಎಂದರೆ `ಸಮಷ್ಟಿಯ ಕಲ್ಯಾಣ ಮಾಡುವವರು’ ಎಂದರ್ಥ ಉದಾ. ದತ್ತಾವತಾರಿ ಸಂತ ಶ್ರೀಪಾದ ಶ್ರೀವಲ್ಲಭ, ಸ್ವಾಮಿ ನೃಸಿಂಹ ಸರಸ್ವತಿ, ಸ್ವಾಮಿ ಸಮರ್ಥ ಇತ್ಯಾದಿ ಸಂತರು ಅನೇಕ ಕಡೆ ಸಂಚರಿಸಿ ಧರ್ಮಪ್ರಸಾರ ಮಾಡಿ ಪತಿತರನ್ನು ಉದ್ಧರಿಸಿದರು. ಹಾಗೆಯೇ ಅನೇಕರನ್ನು ಅನಿಷ್ಟ ಶಕ್ತಿಗಳ ತೊಂದರೆ
ಗಳಿಂದ ಮುಕ್ತಗೊಳಿಸಿದರು ಮತ್ತು ಅನೇಕರ ಪ್ರಾರಬ್ಧ ಭೋಗ ಗಳನ್ನು ಸಹನೀಯವಾಗುವಂತೆ ಮಾಡಿ ಅವರಿಗೆ ಮುಕ್ತಿ ನೀಡಿದರು.

ಸುಶ್ರೀ (ಕು.) ಮಧುರಾ ಭೋಸಲೆ

11. ಸದ್ಗುರು

ಯಾರು ನಿರಂತರವಾಗಿ ಸಚ್ಚಿದಾನಂದ ಸ್ಥಿತಿಯನ್ನು ಅನುಭವಿಸುತ್ತಾರೆಯೋ, ಅವರನ್ನು `ಸದ್ಗುರು’ಗಳು ಎನ್ನುತ್ತಾರೆ. ಸದ್ಗುರುಗಳು ಜಿಜ್ಞಾಸು, ಮುಮುಕ್ಷು, ಸಾಧಕ ಮತ್ತು ಶಿಷ್ಯರಿಗೆ ಮಾತ್ರವಲ್ಲ, ಸಂತರಿಗೂ ಸಾಧನೆಯ ವಿಷಯದಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎರಡೂ ಸ್ತರಗಳಲ್ಲಿ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಉದಾಹರಣೆಗೆ, ವೈಷ್ಣವ ಪಂಥದ ಸದ್ಗುರುಗಳಾದ ರಾಮಾನಂದಾಚಾರ್ಯರು ಸಂತ ಕಬೀರ, ಸಂತ ರವಿದಾಸ, ಸಂತ ಪೀಪಾಜಿ ಮುಂತಾದ ಅನೇಕ ಸಂತರಿಗೆ ಮಾರ್ಗದರ್ಶನ ಮಾಡಿ ಅವರನ್ನು ಸಂತ ಪದವಿಯನ್ನೂ ಮೀರಿಸಿ ಮುಂದಕ್ಕೆ ಕರೆದೊಯ್ದರು.

12. ಪರಾತ್ಪರ ಗುರು

ಪರಾತ್ಪರ ಗುರು ಪದವಿಯಲ್ಲಿರುವ ಗುರುಗಳು ವಿಶ್ವ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ಆದ್ದರಿಂದ ಅವರನ್ನು `ಪರಮಹಂಸ ಗುರು’ಗಳು ಎನ್ನುತ್ತಾರೆ. ಉದಾ, ಯೋಗಿ ಅರವಿಂದರು ಪರಾತ್ಪರ ಗುರುಗಳಾಗಿದ್ದರಿಂದ ಹಿಟ್ಲರ್ ಭಾರತದ ಮೇಲೆ ಆಕ್ರಮಣ ಮಾಡಲು ನಿರ್ಧರಿಸಿದಾಗ, ಯೋಗಿ ಅರವಿಂದರು ಹಿಟ್ಲರ್‍ನಲ್ಲಿದ್ದ ಅನಿಷ್ಟ ಶಕ್ತಿಯೊಂದಿಗೆ ಸೂಕ್ಷ್ಮದಲ್ಲಿ ಯುದ್ಧ ಮಾಡಿ ಅದನ್ನು ಸೋಲಿಸಿ ನಾಶಪಡಿಸಿದರು. ಇದರಿಂದ ಭಾರತವು ಹಿಟ್ಲರ್ ನ ಆಕ್ರಮಣದಿಂದ ರಕ್ಷಿಸಲ್ಪಟ್ಟಿತು. (ಉಲ್ಲೇಖ: `ಸರ್ಚ್ ಫಾರ್ ಲೈಟ್’ ಜಾಲತಾಣ)

13. ಮೋಕ್ಷ ಗುರು

ಒಬ್ಬ ಬಂಧಿಸ್ತ ವ್ಯಕ್ತಿ ಇನ್ನೊಬ್ಬ ಬಂಧಿಸ್ತ ವ್ಯಕ್ತಿಯನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ, ಅದೇ ರೀತಿ ಮೋಕ್ಷ ಪಡೆದಿಲ್ಲವನು ಇತರರಿಗೆ ಮೋಕ್ಷ ಪ್ರಾಪ್ತಿಯ ಮಾರ್ಗದರ್ಶನ ನೀಡಲು ಸಾಧ್ಯ ವಿಲ್ಲ. – ಸುಶ್ರೀ(ಕು) ಮಧುರಾ ಭೋಸಲೆ

ಇದರರ್ಥ ಯಾರು ಸ್ವತಃ ಮೋಕ್ಷವನ್ನು ಪಡೆದಿರುತ್ತಾರೋ, ಅವರು ಮಾತ್ರ ಇತರರಿಗೆ ಮೋಕ್ಷವನ್ನು ನೀಡಬಲ್ಲರು. ಇಂತಹ ಆಧ್ಯಾತ್ಮಿಕ ಅಧಿಕಾರಿ ವ್ಯಕ್ತಿಯನ್ನು `ಮೋಕ್ಷಗುರು’ ಎಂದು ಗೌರವದಿಂದ ಸಂಬೋಧಿಸಲಾಗುತ್ತದೆ. ಉದಾಹರಣೆಗೆ, `ಸಾಂದೀಪನಿ ಋಷಿಗಳು ತಮ್ಮ ಶಿಷ್ಯರಾದ ಅರುಣಿ, ಸಂದೀಪಕ ಮತ್ತು ಉಪಮನ್ಯು ಅವರ ಕಠಿಣ ಪರೀಕ್ಷೆ ಮಾಡಿ ಅವರಿಗೆ ಆತ್ಮಜ್ಞಾನವನ್ನು ನೀಡಿ ಮೋಕ್ಷಕ್ಕೆ ಕರೆದೊಯ್ದರು’ ಎಂದು ಗುರುಚರಿತ್ರೆಯಲ್ಲಿ ಉಲ್ಲೇಖವಿದೆ. ಪರೀಕ್ಷಿತ ರಾಜನು ಶೃಂಗಿ ಋಷಿಗಳ ತಂದೆಗೆ ಅಪಮಾನ ಮಾಡಿದುದರಿಂದ ಶೃಂಗಿ ಋಷಿಗಳು ಅವನಿಗೆ `ಏಳು ದಿನಗಳ ನಂತರ ತಕ್ಷಕ ಸರ್ಪ ಕಚ್ಚಿ ಮರಣ ಹೊಂದುವನು’ ಎಂದು ಶಾಪ ನೀಡುತ್ತಾರೆ. ಮಹರ್ಷಿ ವ್ಯಾಸರ ಪುತ್ರ ಶುಕದೇವರು ರಾಜಾ ಪರೀಕ್ಷಿತನ `ಮೋಕ್ಷ ಗುರು’ಗಳಾಗಿದ್ದರು. ಆದ್ದರಿಂದ ಶ್ರವಣ ಭಕ್ತಿಯ ಮೂರ್ತ ರೂಪವಾದ ಪರೀಕ್ಷಿತ ರಾಜನಿಗೆ ಪರಮಜ್ಞಾನಿ ಶುಕದೇವರಿಂದ ಸತತ ಏಳು ದಿನಗಳ ಕಾಲ ಶ್ರೀಮದ್ಭಾಗವತದ ಜ್ಞಾನ ಲಭಿಸಿತು ಮತ್ತು 7 ನೇ ದಿನ ಪರೀಕ್ಷಿತ ರಾಜನಿಗೆ ಸರ್ಪ ಕಚ್ಚಿ ಮರಣ ಹೊಂದಿದಾಗ ಅವನಿಗೆ ಮೋಕ್ಷ ಪ್ರಾಪ್ತವಾಯಿತು.

14. ಅವತಾರಿ ಗುರು

ಯಾವಾಗ ಭಗವಂತನ ದೇವತಾರೂಪಿ ತತ್ತ್ವವು ಪೃಥ್ವಿಯ ಮೇಲೆ ಅವತರಿಸಿ ಸಮಾಜದ ಕಲ್ಯಾಣಕ್ಕಾಗಿ ಅಥವಾ ಧರ್ಮ ಸಂಸ್ಥಾಪನೆಗಾಗಿ ಕಾರ್ಯನಿರ್ವಹಿಸಿದಾಗ, ಅಂತಹ ಗುರುಗಳಿಗೆ `ಅವತಾರಿ ಗುರು’ ಎಂದು ಕರೆಯಲಾಗುತ್ತದೆ.

14 ಅ. ವ್ಯಷ್ಟಿ ಅವತಾರಿ ಗುರು : ಸಂತ ತುಳಸೀದಾಸರು ಹನುಮಂತನ ತತ್ತ್ವವಿರುವ ವಾಲ್ಮೀಕಿ ಋಷಿಗಳ ಅವತಾರ ವಾಗಿದ್ದರು. ಆದ್ದರಿಂದ ವಾಲ್ಮೀಕಿ ಋಷಿಗಳು ತ್ರೇತಾಯುಗದಲ್ಲಿ `ರಾಮಾಯಣ’ ಮತ್ತು ಕಲಿಯುಗದಲ್ಲಿ ಸಂತ ತುಳಸೀದಾಸರ ರೂಪದಲ್ಲಿ `ರಾಮಚರಿತಮಾನಸ’ ಗ್ರಂಥವನ್ನು ಬರೆದರು. ರಾಧೆಯ ಅವತಾರವಾಗಿದ್ದ ನವದ್ವೀಪದ ಸಂತ ಚೈತನ್ಯ ಮಹಾಪ್ರಭುಗಳು ಕೃಷ್ಣಭಕ್ತಿಯನ್ನು ಪ್ರಸಾರ ಮಾಡಿ ಅನೇಕ ಜೀವಗಳನ್ನು ಉದ್ಧರಿಸಿದರು. ಶ್ರೀವಿಷ್ಣುವಿನ ಅಂಶಾವತಾರವಾದ ಸಂತ ಸ್ವಾಮಿ ನಾರಾಯಣರೂ ಭಗವದ್ಭಕ್ತಿಯನ್ನು ಪ್ರಸಾರ ಮಾಡಿ ಸಮಾಜ ಜೀವನವನ್ನು ಸುಖಮಯಗೊಳಿಸಿ ಅನೇಕ ಪತಿತರ ಉದ್ಧಾರ ಮಾಡಿದರು.

14 ಆ. ಸಮಷ್ಟಿ ಅವತಾರಿ ಗುರು : ಪ್ರಜೆಗಳಿಗೆ ಸ್ವರಾಜ್ಯ ಮತ್ತು ಸುರಾಜ್ಯದ ಸುಖವನ್ನು ಅನುಭವಿಸಲು ಸಾಧ್ಯವಾಗಬೇಕೆಂದು ಸಮರ್ಥ ರಾಮದಾಸ ಸ್ವಾಮಿಗಳು ತಮ್ಮ ಪರಮ ಶಿಷ್ಯ ಛತ್ರಪತಿ ಶಿವಾಜಿ ಮಹಾರಾಜರಿಗೆ `ಕ್ಷಾತ್ರಧರ್ಮ’ ಮತ್ತು `ರಾಜಧರ್ಮ’ ಪಾಲನೆಯ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅದೇ ರೀತಿ ಆರ್ಯ ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಮಾರ್ಗದರ್ಶನ ಮಾಡಿ ಭಾರತದಲ್ಲಿ ವಿಭಜಿತವಾಗಿದ್ದ ವಿವಿಧ ರಾಜ್ಯಗಳನ್ನು ಸಂಘಟಿಸಿ ಭಾರತದಲ್ಲಿ ಏಕಛತ್ರವಿರುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದ್ದರು. ಅದೇ ರೀತಿ ವಿದ್ಯಾರಣ್ಯ ಸ್ವಾಮಿಗಳು ಹರಿಹರ ಮತ್ತು ಬುಕ್ಕರಾಯರಿಗೆ ಮಾರ್ಗದರ್ಶನ ಮಾಡಿ ದಕ್ಷಿಣ ಭಾರತದಲ್ಲಿ `ವಿಜಯನಗರ ಸಾಮ್ರಾಜ್ಯರೂಪಿ ಹಿಂದೂ ರಾಷ್ಟ್ರವನ್ನು’ ಸ್ಥಾಪಿಸಿದ್ದರು.

15. ಗುರುತತ್ತ್ವ್ವದ ಎಲ್ಲ ಗುಣಲಕ್ಷಣಗಳಿಂದ ಪರಿಪೂರ್ಣರಾದ `ಪರಮ ಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಹಿಂದೂ ರಾಷ್ಟ್ರದ ಪ್ರವರ್ತಕರಾಗಿರುವ ಮತ್ತು ಅಧ್ವರ್ಯು (‘ಅಧ್ವರ’ ಎಂದರೆ ಯಜ್ಞ. `ಅಧ್ವರ್ಯು’ ಎಂದರೆ ಯಜ್ಞವನ್ನು ಮಾಡುವ ಪ್ರಮುಖ ಋತ್ವಿಜ (ಅಂದರೆ ಪುರೋಹಿತ)) ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಲ್ಲಿ ಇಲ್ಲಿಯವರೆಗೆ ಉಲ್ಲೇಖಿಸಲಾದ ಎಲ್ಲ ರೀತಿಯ ಗುರುಗಳ ಎಲ್ಲ ದೈವೀ ಲಕ್ಷಣಗಳು ಕಂಡುಬರುತ್ತವೆ. ಈ ರೀತಿ ಪರಿಪೂರ್ಣ ಗುರುವಾಗಿರುವ ವಿಭೂತಿ, ಅಂದರೆ `ಪರಮಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ. ಆದ್ದರಿಂದ ಅವರು ಪರಿಪೂರ್ಣ ಗುರುಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ಪದವು ಅಧ್ಯಾತ್ಮದಲ್ಲಿ ಸರ್ವೋಚ್ಚ ಮತ್ತು ಪರಮೋಚ್ಚ ಸ್ತರದ ಪದವಿ ಆಗಿದೆ. ಈ ಪದವಿಯಲ್ಲಿ ಕೇವಲ ಎಲ್ಲ ಗುರುಗಳ ಗುಣಲಕ್ಷಣಗಳನ್ನು ಮತ್ತು ಶ್ರೀರಾಮ ಹಾಗೂ ಶ್ರೀಕೃಷ್ಣನಂತೆ ಪರಿಪೂರ್ಣ ಅವತಾರಿ ತತ್ತ್ವವಿರುವ ಗುರುಗಳು ಮಾತ್ರ ವಿರಾಜಮಾನರಾಗಬಹುದು.

– ಸುಶ್ರೀ(ಕು.) ಮಧುರಾ ಭೋಸಲೆ (ಸೂಕ್ಷ್ಮದಿಂದ ಪಡೆದ ಜ್ಞಾನ) (ಆಧ್ಯಾತ್ಮಿಕ ಮಟ್ಟ ಶೇ. 65), ಸನಾತನ ಆಶ್ರಮ, ರಾಮನಾಥಿ, ಗೋವಾ. (20.4.2023)

ಇದರ ಹಿಂದಿನ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/147813.html

ಅದರ ಹಿಂದಿನ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/146824.html