ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದು ಬಂದ ಅಮೃತಬಿಂದು !
‘ಪ್ರಸ್ತುತ ನಡೆಯುತ್ತಿರುವ ವಿಶೇಷ ಭಕ್ತಿಸತ್ಸಂಗ ಸರಣಿಯ ಅಂತರ್ಗತ, ಸಾಧನೆಯ ಪಂಚಸೂತ್ರಗಳಲ್ಲಿನ ಮೂರನೇ ಸೂತ್ರವಾದ ‘ಸ್ವೀಕರಿಸುವುದು’ ಈ ವಿಷಯದ ಬಗ್ಗೆ ಗುರುಕೃಪೆಯಿಂದ ಸಾಧಕರಿಗೆ ಮಾರ್ಗದರ್ಶನ ಲಭಿಸುತ್ತಿದೆ. ಪಂಚಸೂತ್ರಗಳಲ್ಲಿ ‘ಸ್ವೀಕರಿಸುವುದು’ ಇದು ಅತ್ಯಂತ ಮಹತ್ವಪೂರ್ಣ ಸೂತ್ರವಾಗಿದೆ. ಸ್ವೀಕರಿಸುವುದು ಇದರ ಮೂರು ಮುಖ್ಯ ಪ್ರಕಾರಗಳಿವೆ. ೧. ನಮ್ಮನ್ನು ನಾವು ಸ್ವೀಕರಿಸುವುದು, ೨. ಇತರರನ್ನು ಸ್ವೀಕರಿಸುವುದು ಮತ್ತು ೩. ಪರಿಸ್ಥಿತಿಯನ್ನು ಸ್ವೀಕರಿಸುವುದು. ಈ ವಾರ ನಾವು ‘ನಮ್ಮನ್ನು ನಾವು ಸ್ವೀಕರಿಸುವುದು’ ಎಂಬ ಮೊದಲ ಆಯಾಮದ ಬಗೆಗಿನ ವಿಶ್ಲೇಷಣೆಯನ್ನು ತಿಳಿದುಕೊಳ್ಳೋಣ.
ಈ ಹಿಂದಿನ ಲೇಖನ ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/183084.html
೧. ತಮ್ಮ ಶಾರೀರಿಕ ಸ್ಥಿತಿಯನ್ನು ಸ್ವೀಕರಿಸದಿರುವಲ್ಲಿನ ಅಯೋಗ್ಯ ಮಾನಸಿಕತೆ !
ಅ. ಯಾವುದಾದರೂ ಕಾಯಿಲೆಯಾದಾಗ ದೇಹದ ಇತರ ಒಳ್ಳೆಯ ವಿಷಯಗಳನ್ನು ದುರ್ಲಕ್ಷ್ಯಿಸಿ ಕೇವಲ ಆ ಒಂದು ಕಾಯಿಲೆಯ ಮೇಲೆಯೇ ಗಮನವನ್ನು ಹರಿಸಲಾಗುತ್ತದೆ. ಅದರಿಂದ ಮನಸ್ಸು ಸ್ವೀಕರಿಸುವ ಸ್ಥಿತಿಯಲ್ಲಿರದೇ ದುಃಖಿಯಾಗುತ್ತದೆ.
ಆ. ಶಾರೀರಿಕ ತೊಂದರೆ ಆಗುತ್ತಿರುವಾಗ ‘ನಾನು ಪೂರ್ಣ ಗುಣಮುಖನಾದಾಗ ಸೇವೆ ಮತ್ತು ಸಾಧನೆಯನ್ನು ಮಾಡಬಲ್ಲೆ ಅಥವಾ ಆನಂದಿಯಾಗಿರಬಲ್ಲೆ’ ಎಂದು ಸಾಧಕರಿಗೆ ಅನಿಸುತ್ತದೆ. ಅವರಿಂದ ‘ವರ್ತಮಾನ ಸ್ಥಿತಿಯನ್ನು ಸ್ವೀಕರಿಸಿ ಅದರಲ್ಲಿ ಏನು ಮಾಡಲು ಸಾಧ್ಯ ?’, ಎಂಬ ವಿಚಾರ ಆಗುವುದಿಲ್ಲ.
ಇ. ಕೆಲವು ಸಾಧಕರು ತಮ್ಮ ಶಾರೀರಿಕ ತೊಂದರೆಗಳ ಬಗ್ಗೆಯೇ ಹೆಚ್ಚು ಹೇಳುತ್ತಾರೆ ಅಥವಾ ಸೇವೆ ಮತ್ತು ಸಾಧನೆ ಆಗದಿರುವುದಕ್ಕೆ ಶಾರೀರಿಕ ತೊಂದರೆಗಳ ಕಾರಣವನ್ನೇ ಮುಂದಿಡುತ್ತಾರೆ. ಕೆಲವು ಬಾರಿ ಶಾರೀರಿಕ ತೊಂದರೆಗಳಿಂದ ಉಂಟಾದ ಮನಸ್ಸಿನ ಅಸ್ವಸ್ಥತೆಯು ಸಾಧಕರ ಮುಖದ ಮೇಲೆ ಸಹ ಕಾಣಿಸುತ್ತದೆ.
ಈ. ಕೆಲವು ವ್ಯಕ್ತಿಗಳಿಗೆ ಅನಾರೋಗ್ಯದಿಂದ ಸಂಪೂರ್ಣ ಪರಾವಲಂಬಿಗಳಾಗಬೇಕಾಗುತ್ತದೆ. ಆಗ ಅವರಿಗೆ ಇತರರ ಸಹಾಯ ಪಡೆಯಲು ಕೀಳರಿಮೆ ಅನಿಸುತ್ತದೆ ಅಥವಾ ತಮ್ಮ ಸ್ವಂತದ ಪ್ರತಿಷ್ಠೆ (ಅಹಂ) ಇರುವುದರಿಂದ ಅನೇಕ ಬಾರಿ ಕಾಯಿಲೆಯಿಂದ ಗುಣಮುಖರಾಗಲು ಆವಶ್ಯಕವಿರುವ ಕ್ರಮಗಳನ್ನು ಕೈಗೊಳ್ಳುವುದನ್ನೂ ಅವರು ತಪ್ಪಿಸುತ್ತಾರೆ.
ಉ. ಕೆಲವು ಬಾರಿ ಶರೀರದ ಯಾವುದಾದರೊಂದು ಸಣ್ಣ ಕೊರತೆಯಿಂದ ಅಥವಾ ಬದಲಾವಣೆಯಿಂದ ಕೀಳರಿಮೆ ಅನಿಸುತ್ತದೆ, ಉದಾ. ಮುಖದ ಮೇಲಿನ ಕಲೆಗಳು, ಕೂದಲುಗಳು ಬೇಗನೆ ಬಿಳಿಯಾಗುವುದು, ತೂಕ ಅಥವಾ ಎತ್ತರ ಹೆಚ್ಚು-ಕಡಿಮೆ ಇರುವುದು. ಇವುಗಳಿಂದ ‘ಜನರು ನನ್ನನ್ನು ನೋಡಿ ಏನು ವಿಚಾರ ಮಾಡುತ್ತಿರಬಹುದು ?’ ಎಂಬ ಪ್ರತಿಷ್ಠೆಯ ವಿಚಾರವು ಮನಸ್ಸಿನಲ್ಲಿರುತ್ತದೆ ಮತ್ತು ಇತರರೊಂದಿಗೆ ತುಲನೆ ಮಾಡಲಾಗುತ್ತದೆ. ಅದರಿಂದ ಎಲ್ಲರೊಂದಿಗೆ ಬೆರೆಯುವಾಗ ಸಹಜತೆ ಅಥವಾ ಆತ್ಮವಿಶ್ವಾಸ ಇರುವುದಿಲ್ಲ.
೨. ಮೇಲಿನ ಅಯೋಗ್ಯ ವಿಚಾರಗಳಿಗೆ ಯೋಗ್ಯ ದೃಷ್ಟಿಕೋನ !
೨ ಅ. ‘ಶಾರೀರಿಕಮಿತಿಯನ್ನು ಸ್ವೀಕರಿಸುವುದು’ ಅಂದರೆ ಇರುವ ಸ್ಥಿತಿಯಲ್ಲಿಯೇ ಆನಂದದಿಂದ ಬದುಕುವ ಮಾರ್ಗವನ್ನು ಹುಡುಕುವುದು ! : ಮೇಲಿನ ಅಯೋಗ್ಯ ವಿಚಾರಗಳನ್ನು ತಡೆಯಲು ತಮ್ಮ ದೇಹದ ಕಡೆಗೆ, ಶಾರೀರಿಕ ರೋಗಗಳ ಕಡೆಗೆ ತಟಸ್ಥರಾಗಿದ್ದು ನೋಡಬೇಕು. ‘ಈ ಕಾಯಿಲೆ ನನ್ನದಲ್ಲ, ಈ ದೇಹದ್ದಾಗಿದೆ. ದೇಹ ಮತ್ತು ನಾನು ಬೇರೆಯಾಗಿದ್ದೇವೆ.’ ಪ.ಪೂ. ಭಕ್ತರಾಜ ಮಹಾರಾಜರು ಹೇಳಿದ್ದಾರೆ, ‘ದೇಹವನ್ನು ಪ್ರಾರಬ್ಧದ ಮೇಲೆ ಬಿಡಿ | ಚಿತ್ತವನ್ನು ಚೈತನ್ಯದೊಂದಿಗೆ ಜೋಡಿಸಿ ||’. ನಮ್ಮ ರೋಗ ಅಥವಾ ಕಾಯಿಲೆಯನ್ನು ಪ್ರಾರಬ್ಧದ ಮೇಲೆಯೇ ಬಿಡಬೇಕು ಮತ್ತು ಮನಸ್ಸನ್ನು ಭಗವಂತನ ಚರಣಗಳಲ್ಲಿ ಅರ್ಪಿಸಬೇಕು’, ಈ ವಿಚಾರವನ್ನು ಒಂದು ವೇಳೆ ಅಂತರ್ಮನದಲ್ಲಿ ಬಿತ್ತಿದರೆ, ಶಾರೀರಿಕ ರೋಗಗಳಿಂದ ಮನಸ್ಸಿನ ಮೇಲೆ ಪರಿಣಾಮವಾಗದೇ ಮನಸ್ಸು ಯಾವಾಗಲೂ ಭಗವಂತನ ಸ್ಮರಣೆಯ ಆನಂದದಲ್ಲಿ ಮಗ್ನವಾಗಿರುತ್ತದೆ. ‘ಶಾರೀರಿಕ ಮಿತಿಯನ್ನು ಸ್ವೀಕರಿಸುವುದು’ ಎಂದರೆ ಸೋಲನ್ನು ಒಪ್ಪಿಕೊಳ್ಳುವುದಲ್ಲ, ಬದಲಾಗಿ ಇರುವ ಸ್ಥಿತಿಯಲ್ಲಿಯೇ ಆನಂದದಿಂದ ಬದುಕುವ ಮಾರ್ಗವನ್ನು ಶೋಧಿಸುವುದು.
೨ ಆ. ‘ರೋಗ ನಿವಾರಣೆಗಾಗಿ ಪ್ರಯತ್ನಿಸುವುದು’ ನಮ್ಮ ‘ಕ್ರಿಯಮಾಣ’ವಾಗಿದೆ ! : ಶಾರೀರಿಕ ರೋಗಕ್ಕಾಗಿ ಕೇವಲ ಹಣೆಬರಹವನ್ನು ದೂಷಿಸದೇ ‘ಆ ತೊಂದರೆಯನ್ನು ದೂರ ಮಾಡಲು ಅಥವಾ ಅದು ಸಹನೀಯವಾಗಲು ಯೋಗ್ಯ ಪಥ್ಯವನ್ನು ಪಾಲಿಸುವುದು ಮತ್ತು ಔಷಧೋಪಚಾರಗಳನ್ನು ಮಾಡುವುದು’, ಎಂಬ ‘ಯೋಗ್ಯ ಕ್ರಿಯಮಾಣ’ವನ್ನು ಬಳಸುವುದು ಭಗವಂತನಿಗೆ ಅಪೇಕ್ಷಿತವಿದೆ. ಅನೇಕ ಬಾರಿ ಬೇಕು-ಬೇಡಗಳು ಕಾರ್ಯನಿರತವಾಗಿರುವುದರಿಂದ ವೈದ್ಯರು ಹೇಳಿದ ಪಥ್ಯಗಳು ಪಾಲಿಸವುದಿಲ್ಲ ಅಥವಾ ಕೆಲವು ಔಷಧೋಪಚಾರಗಳನ್ನು ತಪ್ಪಿಸಲಾಗುತ್ತದೆ. ಆದ್ದರಿಂದ ತೊಂದರೆ ದೂರವಾಗಲು ವಿಳಂಬವಾಗುತ್ತದೆ. ಇಲ್ಲಿ ಸ್ವತಃ ತಮ್ಮ ಆರೋಗ್ಯಕ್ಕಾಗಿ ಮನಸ್ಸನ್ನು ನಿಯಂತ್ರಿಸಿ ಪಥ್ಯ ಮತ್ತು ಔಷಧೋಪಚಾರಗಳನ್ನು ಸ್ವೀಕರಿಸಬೇಕು. ‘ರೋಗ ನಿವಾರಣೆಗೆ ಪ್ರಯತ್ನಿಸುವುದು’ ನಮ್ಮ ‘ಕ್ರಿಯಮಾಣ’ವಾಗಿದೆ ಮತ್ತು ಆ ಕಾಯಿಲೆಯಲ್ಲಿಯೂ ಭಗವಂತನ ಸ್ಮರಣೆಯನ್ನಿಟ್ಟುಕೊಳ್ಳುವುದು’, ನಮ್ಮ ‘ಸಾಧನೆ’ಯಾಗಿದೆ’, ಇದನ್ನು ಗಮನದಲ್ಲಿಡಿ !
೨ ಇ. ಗುರುಸೇವೆಯಲ್ಲಿ ಸಾಧ್ಯವಿದ್ದಷ್ಟು ದೇಹವನ್ನು ಸವೆಸಿ ಪುಣ್ಯದ ಬಲವನ್ನು ಪ್ರಾಪ್ತಮಾಡಿಕೊಳ್ಳಿ ! : ಯಾವಾಗ ನಾವು ನಮ್ಮನ್ನು ‘ಹೇಗಿದ್ದೇವೆಯೋ ಹಾಗೆಯೇ’ ಸ್ವೀಕರಿಸಿ ಧ್ಯೇಯಪ್ರಾಪ್ತಿಗಾಗಿ ಅಪಾರ ಕಷ್ಟ ತೆಗೆದುಕೊಳ್ಳುತ್ತೇವೆಯೋ, ಆಗ ಆ ಸಂಘರ್ಷವು ತಪಶ್ಚರ್ಯದಲ್ಲಿ ರೂಪಾಂತರಗೊಳ್ಳುತ್ತದೆ. ದೇಹವು ಇರುವ ವರೆಗೆ ದೇಹಪ್ರಾರಬ್ಧ ಮತ್ತು ಅದರಿಂದಾಗಿ ಒಂದಿಲ್ಲೊಂದು ತೊಂದರೆ ಇದ್ದೇ ಇರುತ್ತದೆ; ಆದರೆ ಇರುವ ಸ್ಥಿತಿಯಲ್ಲಿಯೇ ಸಾಧ್ಯವಿರುವ ಸೇವೆ ಮತ್ತು ಸಾಧನೆಯ ಪ್ರಯತ್ನಗಳನ್ನು ಮಾಡುವುದರಿಂದ ನಮಗೆ ಅದರಿಂದ ಶಕ್ತಿ ಸಿಗುತ್ತದೆ. ಸಾಧ್ಯವಿರುವುದನ್ನು ಮತ್ತು ಸಾಧ್ಯವಿರುವಷ್ಟು ಮಾಡಿದ ಗುರುಸೇವೆಯಲ್ಲಿ ದೇಹವನ್ನು ಸವೆಸಿದರೂ, ಅದರ ಪುಣ್ಯಬಲವು ನಮಗೆ ಖಂಡಿತವಾಗಿಯೂ ಸಿಗುತ್ತದೆ. ಈ ಪುಣ್ಯಬಲವು ಶಾರೀರಿಕ ತೊಂದರೆಗಳನ್ನು ಭೋಗಿಸುವಾಗ ನಮ್ಮ ಜೊತೆಗಿರುತ್ತದೆ ಮತ್ತು ಆ ತೊಂದರೆಯು ಸಹನೀಯವಾಗಲು ಸಹಾಯ ಮಾಡುತ್ತದೆ.
ಸಾಧಕರೇ, ದೇಹಕ್ಕೆ ಮಿತಿ ಇದ್ದರೂ, ಮನಸ್ಸು ಗರುಡನಂತೆ ಎತ್ತರಕ್ಕೆ ಹಾರುವಂತಿರಬೇಕು. ಶಾರೀರಿಕ ತೊಂದರೆಗಳಲ್ಲಿಯೂ ‘ಮನಸ್ಸಿನ ಸ್ಥಿರತೆ’ ಮತ್ತು ‘ಭಗವಂತನ ಮೇಲಿನ ದೃಢ ಶ್ರದ್ಧೆ’, ಇದೇ ನಿಜವಾದ ಸಂಪತ್ತು. ‘ನಮ್ಮನ್ನು ನಾವು ಅಂತಃಕರಣ ಪೂರ್ವಕವಾಗಿ ಸ್ವೀಕರಿಸುವುದು ಮತ್ತು ಸ್ವತಃ ಈಶ್ವರನಿಗೆ ಅಪೇಕ್ಷಿತ ರೀತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು’, ಇದು ಭಗವತ್ಪ್ರಾಪ್ತಿಯ ಎಲ್ಲಕ್ಕಿಂತ ಹತ್ತಿರದ ಮತ್ತು ಖಚಿತವಾದ ಮಾರ್ಗವಾಗಿದೆ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ) (೨೩.೪.೨೦೨೬)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !