ಗುರು-ಶಿಷ್ಯ ಪರಂಪರೆ ಗಂಗಾ ಪ್ರವಾಹದಂತೆ ಅತ್ಯಂತ ಪ್ರಾಚೀನ

ವೈದಿಕ ಕಾಲದಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿರುವ ಋಷಿಮುನಿಗಳ ಪರಂಪರೆಯ ಕೊನೆಯ ಕೊಂಡಿ ಎಂದರೆ ‘ಗುರು’ ! ಮೊದಲಿನಿಂದಲೂ ನಡೆದುಕೊಂಡು ಬಂದ ಜ್ಞಾನದ ಜ್ಯೋತಿಯನ್ನು ಅದು ಸದಾ ಬೆಳಗುತ್ತದೆ ಮತ್ತು ನಂತರ ಇದೇ ಸಂದೇಶವನ್ನು ಅನಂತ ಕಾಲದ ವರೆಗೆ ಮುಂದಕ್ಕೆ ಕೊಂಡೊಯ್ಯಲು ತಮ್ಮ ಯೋಗ್ಯ ಶಿಷ್ಯನ ಕೈಗೆ ಈ ಜ್ಯೋತಿಯನ್ನು ಒಪ್ಪಿಸುತ್ತಾರೆ. ಈ ಗುರು-ಶಿಷ್ಯ ಪರಂಪರೆ ಗಂಗಾ ಪ್ರವಾಹದಂತೆ ಅತಿ ಪ್ರಾಚೀನವಾಗಿದೆ. ಗಂಗಾ ನದಿಯ ನೀರು ಬದಲಾಗುತ್ತದೆ; ಆದರೆ ಪ್ರವಾಹ ಮಾತ್ರ ಅದೇ ಇರುತ್ತದೆ. ಹಾಗೆಯೇ ಈ ಪರಂಪರೆಯಲ್ಲಿ ಗುರುಗಳು ಬದಲಾಗುತ್ತಾರೆ, ಆದರೆ ಜ್ಞಾನ ಮಾತ್ರ ಅದೇ ಉಳಿಯುತ್ತದೆ. ಗುರು ಮೂರ್ತಿಯಲ್ಲ, ಆದರ್ಶವಾಗಿದೆ. ಗುರು ವ್ಯಕ್ತಿಯಲ್ಲ, ಶಕ್ತಿಯಾಗಿದೆ. ಗುರುಪೂಜೆ ಎಂದರೆ ವ್ಯಕ್ತಿಪೂಜೆಯಲ್ಲ, ಗುರು-ಶಿಷ್ಯ ಪರಂಪರೆಯ ಪೂಜೆಯಾಗಿದೆ.

ಶ್ರೀ ಗುರು ಎಂದರೆ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದೊಯ್ಯುವ ಶಕ್ತಿ !

ನಮ್ಮ ಹೃದಯದಲ್ಲಿನ ಅಂತರಾತ್ಮದೊಂದಿಗಿನ ನಮ್ಮ ಸಂಬಂಧವೆಂದರೆ ಶರೀರ, ಮನಸ್ಸು ಮತ್ತು ಬುದ್ಧಿಯ ಮಿತಿಗಳನ್ನು ಮೀರಿದ ಶ್ರೀ ಗುರುಗಳೊಂದಿಗೆ ಸ್ಥಾಪಿತವಾದ ನಮ್ಮ ಸಂಬಂಧವಾಗಿದೆ. ಯಾವ ಅಜ್ಞಾನದ ಪರದೆಯಿಂದ ನಾನು ಸದಾ ನನ್ನಿಂದ ದೂರ ಅಲೆದಾಡುತ್ತೇನೋ, ಆ ಅಜ್ಞಾನವನ್ನು ನಾಶಪಡಿಸಿ, ನನಗೆ ಆತ್ಮದರ್ಶನ ಮಾಡಿಸುವಾತನೇ ಗುರು ವಾಗಿದ್ದಾನೆ. ಗುರುಕೃಪೆಯ ಉಷ್ಣತೆಯಿಂದ ವಾಸನೆಗಳ ಕವಚಗಳು ನಿಧಾನವಾಗಿ ಕರಗುತ್ತವೆ ಮತ್ತು ಕೊನೆಗೆ ಉಳಿಯುವುದೇ ನಮ್ಮದೇ ಸಚ್ಚಿದಾನಂದ ಸ್ವರೂಪ. ಸದ್ಗುರುಗಳ ಸಂಗದಿಂದ ಬುದ್ಧಿಯಲ್ಲಿ ವೈರಾಗ್ಯದ ಗರ್ಭ ತಯಾರಾಗುತ್ತದೆ. ಬ್ರಹ್ಮವಿದ್ಯೆಯ ಬಯಕೆಗಳು ಉಂಟಾಗುತ್ತವೆ. ಆತ್ಮಜ್ಞಾನವೇ ಸದ್ಗುರುಗಳ ಕೊಡುಗೆಯಾಗಿದೆ. ಗುರುಗಳು ಸಾಧಕನನ್ನು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದುಕೊಂಡು ಹೋಗುತ್ತಾರೆ. ‘ಅಭಯ’ ಇದು ಸದ್ಗುರುಗಳ ಇನ್ನೊಂದು ಕೊಡುಗೆ ! ಸತ್ಯದ ಜ್ಞಾನವಾದರೆ, ಶರೀರ ಪಂಚಭೂತಗಳಲ್ಲಿ ಲೀನವಾಗುವ, ಅಂದರೆ ಸಾವಿನ ಭಯವಿರುವುದಿಲ್ಲ.’

ಏಕನಾಥೀ ಭಾಗವತದಲ್ಲಿ (ಅಧ್ಯಾಯ ೧೨, ಶ್ಲೋಕ ೨೬೦) ಮುಂದಿನಂತೆ ಹೇಳಲಾಗಿದೆ ‘ನನಗೆ ಪ್ರೀತಿಯಿಂದ ಶರಣಾದರೆ, ಕಾಲವೂ ನಿನ್ನ ಕಾಲಿಗೆ ಬೀಳುತ್ತದೆ. ಆಗ ಸಂಸಾರದ ಭಯವೆಲ್ಲಿಹುದು ? ನಿನ್ನ ಕಡೆಗೆ ಕೆಟ್ಟ ದೃಷ್ಟಿಯಿಂದ ನೋಡಲು ಯಾರಿಗೆ ಧೈರ್ಯವಿದೆ ?

– ಶ್ರೀ. ದಾಮೋದರ ದತ್ತಾತ್ರೇಯ ಕುಲಕರ್ಣಿ (ಕೃಪೆ : ಮಾಸಿಕ ‘ಜೀವನ ವಿಕಾಸ’)