ಈಶಾನ್ಯ ಭಾರತದ ಸ್ಥಳೀಯ ಯುವ ಪೀಳಿಗೆಯನ್ನು ರಾಷ್ಟ್ರೀಯ ಮುಖ್ಯ ವಾಹಿನಿಗೆ ತರುತ್ತಿರುವ ಜಯವಂತ ಕೊಂಡವಿಲಕರ !

ಜಯವಂತ ಕೊಂಡವಿಲಕರ

‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಕಾರ್ಯನಿರ್ವಾಹಕರಾದ ಶ್ರೀ. ಜಯವಂತ ಕೊಂಡವಿಲಕರರವರು ತಮ್ಮ ಗುರು ಭಯ್ಯಾಜಿ ಕಾನೆಯವರ ಪ್ರೇರಣೆಯಿಂದ ಕಳೆದ 50 ವರ್ಷಗಳಿಂದ ಈಶಾನ್ಯ ಭಾರತದ ಗಡಿ ಪ್ರದೇಶಗಳಲ್ಲಿ ಶಿಕ್ಷಣದ ಮೂಲಕ ರಾಷ್ಟ್ರೀಯ ಏಕತೆಯ ಅರಿವನ್ನು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಭಾವನೆಯು ಮನುಷ್ಯನನ್ನು ಕಾರ್ಯಪ್ರವೃತ್ತಿಗೊಳಿಸುತ್ತದೆ. ಬುದ್ಧಿಯು ಕೇವಲ ದಿಕ್ಕನ್ನು ತೋರಿಸಬಹುದು; ಆದರೆ ದೇಶದ ಕುರಿತಾದ ಉತ್ಕಟ ಭಾವನೆಯೇ ಕಾರ್ಯಕರ್ತರಿಗೆ ನಿಜವಾದ ಅರ್ಥದಲ್ಲಿ ಶಕ್ತಿಯನ್ನು ಪ್ರದಾನಿಸುತ್ತದೆ. ಈಶಾನ್ಯ ಭಾರತದ ಗಡಿ ಪ್ರದೇಶವು ಧಾರ್ಮಿಕ ಒತ್ತಡ, ಪ್ರತ್ಯೇಕತಾವಾದ, ಮಾದಕ ದ್ರವ್ಯಗಳ ವ್ಯಾಪಾರ ಮತ್ತು ಭಯೋತ್ಪಾದನೆಯಂತಹ ಅನೇಕ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿರುವ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಸೂಕ್ಷ್ಮವಾಗಿ ಚಿಗುರಿಸಲು ರತ್ನಾಗಿರಿಯಿಂದ ಈಶಾನ್ಯ ಭಾರತಕ್ಕೆ ತೆರಳಿದ ಶಿಕ್ಷಕರಾದ ಭಯ್ಯಾಜಿ ಕಾನೆ ಮತ್ತು ಅವರ ಶಿಷ್ಯ ಜಯವಂತ ಕೊಂಡವಿಲಕರರವರ ಜೀವನ ಸಮರ್ಪಣೆಯ ಪಯಣವಿದು. ರಾಷ್ಟ್ರ ನಿರ್ಮಾಣದ ಬೀಜ ಆಳವಾಗಿ ಬೇರೂರಿದರೆ ಏನು ಸಾಧಿಸಬಹುದು ? ದೇಶದೊಂದಿಗೆ, ಭಾರತೀಯ ಸಂಸ್ಕೃತಿಯೊಂದಿಗೆ ಜನರನ್ನು ಮತ್ತು ಮಕ್ಕಳನ್ನು ಜೋಡಿಸುವ ಈ ವಿಚಾರವನ್ನು ಕಾರ್ಯರೂಪಕ್ಕೆ ತರುವಾಗ ಹಲವಾರು ಸವಾಲುಗಳು ಎದುರಾದರೂ ಜೀವದ ಹಂಗು ತೊರೆದು ಸೇವೆ ಮಾಡುವುದು ಹೇಗೆ ಎಂಬುದನ್ನು ಈ ಇಬ್ಬರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ.

1. ಜಯವಂತ ಕೊಂಡವಿಲಕರರವರ ಪರಿಚಯ ಮತ್ತು ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಸ್ಥಾಪನೆ

ಮಹಾರಾಷ್ಟ್ರದ ಭೂಮಿಪುತ್ರ ಮತ್ತು ಸ್ವಯಂಸೇವಕರಾದ ದಿವಂಗತ ಶಂಕರ ದಿನಕರ (ಭಯ್ಯಾಜಿ) ಕಾನೆ

ದ್ವಿತೀಯ ಸರಸಂಘಚಾಲಕರಾದ ಪೂ. ಗೋಳವಲ್ಕರ್ ಗುರೂಜಿಯವರಿಂದ ಸ್ಫೂರ್ತಿ ಪಡೆದು ಈಶಾನ್ಯ ಭಾರತದಲ್ಲಿ ರಾಷ್ಟ್ರೀಯತೆಯನ್ನು ನಿರ್ಮಿಸುವ ಮಹತ್ವದ ಕಾರ್ಯವನ್ನು ಕೈಗೊಂಡ ಮಹಾರಾಷ್ಟ್ರದ ಭೂಮಿಪುತ್ರ ಮತ್ತು ಸ್ವಯಂಸೇವಕರಾದ ದಿವಂಗತ ಶಂಕರ ದಿನಕರ (ಭಯ್ಯಾಜಿ) ಕಾನೆಯವರು ಕೊಂಕಣದ ಜಯವಂತ ಕೊಂಡವಿಲಕರ ಅವರೊಂದಿಗೆ 1972 ರಲ್ಲಿ ಈ ಕಾರ್ಯವನ್ನು ಪ್ರಾರಂಭಿಸಿದರು. ಅವರು 12 ನೇ ವಯಸ್ಸಿನಿಂದಲೇ ಮಣಿಪುರದಲ್ಲಿ ವಾಸಿಸುತ್ತಿದ್ದರು. ಕಳೆದ 50 ಕ್ಕೂ ಹೆಚ್ಚು ವರ್ಷಗಳಿಂದ ಅವರು ಈಶಾನ್ಯ ಭಾರತದ ಪ್ರತ್ಯೇಕತಾವಾದಿ ಶಕ್ತಿಗಳನ್ನು ತಡೆಯಲು ಸಕಾರಾತ್ಮಕ ಮತ್ತು ವಿಶಿಷ್ಟ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಈಶಾನ್ಯ ಭಾರತದ ಗಡಿ ಪ್ರದೇಶದ ಅಧ್ಯಯನ ಮಾಡಿದಾಗ, ಅಲ್ಲಿನ ಪರಿಸ್ಥಿತಿ ಎಷ್ಟು ಸಂಕೀರ್ಣ ಮತ್ತು ಚಿಂತಾಜನಕವಾಗಿದೆ ಎಂಬುದು ತಿಳಿಯುತ್ತದೆ. ಭಾರತೀಯ ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಅಲ್ಲಿನ ಸ್ಥಳೀಯ ವನವಾಸಿಗಳಲ್ಲಿ ಪ್ರತ್ಯೇಕತೆಯ ಭಾವನೆ ಬೇರೂರಿತ್ತು. ಅಲ್ಲಿನ ಮೂಲ ಸ್ಥಳೀಯ ವನವಾಸಿಗಳ ವಿವಿಧ ಜಾತಿ-ಪಂಗಡಗಳಲ್ಲಿ ಕೆಲವು ವಿದೇಶಿ ಶಕ್ತಿಗಳು ಧಾರ್ಮಿಕ ಒತ್ತಡದ ತಂತ್ರಗಳನ್ನು ಬಳಸಿ ವ್ಯವಸ್ಥಿತವಾಗಿ ಒಡಕಿನ ಬೀಜಗಳನ್ನು ಬಿತ್ತಿದವು. ಇದರಿಂದಾಗಿ ಕೆಲವು ಘಾತಕ ಶಕ್ತಿಗಳು ಈಶಾನ್ಯ ಭಾರತವನ್ನು ಪ್ರವೇಶಿಸಿದವು. ಅಕ್ಟೋಬರ್ 1947 ರಲ್ಲಿ ಮಣಿಪುರ ಸಂಸ್ಥಾನವು ಭಾರತದಲ್ಲಿ ವಿಲೀನವಾಯಿತು; ಆದರೆ ಸ್ವತಂತ್ರ ಭಾರತದ 77 ವರ್ಷಗಳ ಇತಿಹಾಸದಲ್ಲಿ ಸುಮಾರು 66 ವರ್ಷಗಳ ಕಾಲ ಅಷ್ಟಲಕ್ಷ್ಮೀ ಪ್ರದೇಶದ, ವಿಶೇಷವಾಗಿ ಗಡಿ ಪ್ರದೇಶದ ಅಭಿವೃದ್ಧಿಯು ನಿರ್ಲಕ್ಷಿಸಲ್ಪಟ್ಟಿತು. ಕಳೆದ 11 ವರ್ಷಗಳಲ್ಲಿ ಖಂಡಿತವಾಗಿಯೂ ಈ ಚಿತ್ರಣ ಬದಲಾಗುತ್ತಿದೆ.
ಈ ಪ್ರದೇಶದಲ್ಲಿನ ಪ್ರತ್ಯೇಕತಾವಾದ, ಮಾದಕ ದ್ರವ್ಯಗಳು ಮತ್ತು ಧಾರ್ಮಿಕ ಒತ್ತಡದ ತಂತ್ರಗಳ ಮೂಲಕ ವಿದೇಶಿ ಶಕ್ತಿಗಳ ಹಸ್ತಕ್ಷೇಪದಂತಹ ಸಮಸ್ಯೆಗಳನ್ನು ಎದುರಿಸಬೇಕಾದರೆ, ಅಲ್ಲಿನ ವನವಾಸಿಗಳ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು, ಅವರಲ್ಲಿ ಸೂಕ್ಷ್ಮವಾಗಿ ಆತ್ಮೀಯತೆಯ ಭಾವನೆಯನ್ನು ಬೆಳೆಸಿ ಮತ್ತು ಯುವ ಪೀಳಿಗೆಯಲ್ಲಿ ಅಭಿವೃಧ್ಧ್ಯಾಭಿಮುಖ ಉಜ್ವಲ ಭವಿಷ್ಯವನ್ನು ರೂಪಿಸುವ ಕನಸುಗಳನ್ನು ನನಸಾಗಿಸುವ ಶಕ್ತಿಯನ್ನು ಪ್ರದಾನಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವುದು ಅವಶ್ಯಕವಾಗಿದೆ. ಇದಕ್ಕಾಗಿ ಸೇವಾಭಾವಿ ಸಂಸ್ಥೆಗಳು ಮತ್ತು ಸಮುದಾಯ ಮಟ್ಟದಲ್ಲಿ ಪ್ರಯತ್ನಿಸಬೇಕಾಗಬಹುದು. ಭಯ್ಯಾಜಿ ಕಾನೆ ಮತ್ತು ಜಯವಂತ ಕೊಂಡವಿಲಕರರವರ ಈ ಗುರು-ಶಿಷ್ಯ ಜೋಡಿಯು 1972 ರಿಂದ ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿಯೂ ಈ ಕಾರ್ಯವನ್ನು ಮುಂದುವರೆಸಿತು. ಈ ಕಾರ್ಯಕ್ಕೆ ಸಂಸ್ಥೆಯ ರೂಪ ನೀಡಲು 1986 ರಲ್ಲಿ ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1972 ರಿಂದ 2000ರ ಅವಧಿಯಲ್ಲಿ ಈಶಾನ್ಯ ಭಾರತದ ಗಡಿ ಪ್ರದೇಶದ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕಾಗಿ ಮಹಾರಾಷ್ಟ್ರಕ್ಕೆ ಕರೆತರಲಾಯಿತು. ಇಲ್ಲಿ ಶಿಕ್ಷಣ ಪಡೆಯುವಾಗ ದೊರೆತ ಆತ್ಮೀಯತೆ ಮತ್ತು ಮೌಲ್ಯಗಳ ಆಧಾರದ ಮೇಲೆ ಈಶಾನ್ಯ ಭಾರತದ ಈ ವನವಾಸಿ ವಿದ್ಯಾರ್ಥಿಗಳು ಮತ್ತೆ ತಮ್ಮ ಪ್ರದೇಶಕ್ಕೆ ತೆರಳಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಜೊತೆಗೆ ಭಾರತೀಯತೆಯ ವಿಚಾರಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು. ಪೂರ್ವಾಂಚಲ ವಸತಿಗೃಹಗಳ ಪರಿಕಲ್ಪನೆಗೆ ಈ ವಿಚಾರದಿಂದ ಆಕಾರ ದೊರೆಯಿತು.

ಮ್ಯಾನ್ಮಾರ್ ಗಡಿಯ ಸಮೀಪವಿರುವ ‘ಓಜಾ ಶಂಕರ ವಿದ್ಯಾಲಯ’

2. ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಉದ್ದೇಶ

1999 ರಲ್ಲಿ ಭಯ್ಯಾಜಿಯವರ ನಿಧನವಾಯಿತು. ‘ಶಿಕ್ಷಣದ ಮೂಲಕ ರಾಷ್ಟ್ರೀಯ ಏಕತೆ’ ಎಂಬ ಭಯ್ಯಾಜಿಯವರ ಕನಸನ್ನು ಇನ್ನಷ್ಟು ಶಕ್ತಿಯಿಂದ ಮುಂದುವರೆಸುವ ಸಂಕಲ್ಪವನ್ನು ಶ್ರೀ. ಜಯವಂತ ಕೊಂಡವಿಲಕರರವರು ಮಾಡಿದರು. ಮಣಿಪುರದ ಸಹೋದ್ಯೋಗಿಗಳ ಸಹಾಯದಿಂದ 2002 ರಲ್ಲಿ ಶ್ರೀ. ಕೊಂಡವಿಲಕರರವರು ತಮ್ಮ ಮಾರ್ಗದರ್ಶಕರಾದ ಭಯ್ಯಾಜಿ ಕಾನೆಯವರ ಸ್ಮರಣಾರ್ಥವಾಗಿ ಮ್ಯಾನ್ಮಾರ ಗಡಿಯ ಸಮೀಪವಿರುವ ಖರಾಸೋಮನಲ್ಲಿ ಮೊದಲ ‘ಓಜಾ ಶಂಕರ ವಿದ್ಯಾಲಯ’ವನ್ನು ಸ್ಥಾಪಿಸಿದರು. ಮುಂದೆ 2009 ರಲ್ಲಿ ತಮೆಲೊಂಗನಲ್ಲಿ ‘ಪೌ. ಶಂಕರ ಕಾನೆ ವಿದ್ಯಾಲಯ’ ಮತ್ತು 2015 ರಲ್ಲಿ ಚುರಾಚಾಂದಪುರದಲ್ಲಿ ‘ಪೂ. ಶಂಕರ ಕಾನೆ ವಿದ್ಯಾಲಯ’ವನ್ನು ಪ್ರಾರಂಭಿಸಿದರು. ಈಶಾನ್ಯ ಭಾರತದ ಗಡಿ ಪ್ರದೇಶದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಧಾರೆಗೆ ತರುವ ಕೆಲಸವನ್ನು ಭಯ್ಯಾಜಿ ಕಾನೆ ಮತ್ತು ಅವರ ನಂತರ ಶ್ರೀ. ಜಯವಂತ ಕೊಂಡವಿಲಕರರವರು ಮಾಡಿದರು. ಈಶಾನ್ಯ ಭಾರತದಲ್ಲಿ ಧಾರ್ಮಿಕ ಒತ್ತಡವನ್ನು ಹೆಚ್ಚಿಸಲು ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ವಿದೇಶಿ ಹಣಕಾಸು ನೆರವು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತದೆ. ಈ ಸಂಸ್ಥೆಗಳ ಮೂಲಕ ನಡೆಯುವ ಶಾಲೆಗಳು ಉಚಿತ ಶಿಕ್ಷಣವನ್ನು ನೀಡುತ್ತಿದ್ದವು; ಆದುದರಿಂದ ಭಯ್ಯಾಜಿ ಕಾನೆ ಮತ್ತು ಶ್ರೀ. ಜಯವಂತ ಕೊಂಡವಿಲಕರ ಅವರಿಗೂ ಪ್ರಾರಂಭದಲ್ಲಿ ಉಚಿತ ಶಿಕ್ಷಣವನ್ನು ನೀಡಿ ಅಲ್ಲಿನ ಯುವ ಪೀಳಿಗೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣದ ಆಸಕ್ತಿಯನ್ನು ಮೂಡಿಸಬೇಕಾಯಿತು. ಇದಕ್ಕೆ ಮೊದಲಿಗೆ ಅನೇಕ ಭಾರತ ವಿರೋಧಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಗುಂಪುಗಳಿಂದ ತೀವ್ರ ವಿರೋಧ ಉಂಟಾಯಿತು; ಆದರೆ ಸ್ಥಳೀಯರ ವಿಶ್ವಾಸದಿಂದ ಈ ಕಾರ್ಯ ಮುಂದುವರೆಯಿತು; ಆದರೆ ಇದು ಸಾಧ್ಯವಾಗಲು ಸುಮಾರು 40 ವರ್ಷಗಳನ್ನು ಅವರು ಸಮರ್ಪಿಸಬೇಕಾಯಿತು. ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಮೂಲಕ ಮಣಿಪುರದ ಗಡಿ ಪ್ರದೇಶದಲ್ಲಿ ಪ್ರಸ್ತುತ 3 ಶಾಲೆಗಳಲ್ಲಿ 400 ಕ್ಕೂ ಹೆಚ್ಚು ಸ್ಥಳೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

40 ಕ್ಕೂ ಹೆಚ್ಚು ವರ್ಷಗಳಿಂದ ಈಶಾನ್ಯ ಭಾರತದ ಗಡಿ ಪ್ರದೇಶದಲ್ಲಿ ರಾಷ್ಟ್ರೀಯ ಏಕತೆಯ ಕಾರ್ಯಕ್ಕಾಗಿ ಶ್ರೀ. ಜಯವಂತ ಕೊಂಡವಿಲಕರ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. 16 ಕ್ಕೂ ಹೆಚ್ಚು ಬಾರಿ ಪ್ರಾಣಕ್ಕೆ ಅಪಾಯ ತಂದೊಡ್ಡುವ ಸನ್ನಿವೇಶಗಳನ್ನು, ಭಯೋತ್ಪಾದಕ ಗುಂಪುಗಳನ್ನು, ಭೂಗತ ಗುಂಪುಗಳ ವಿರೋಧವನ್ನು ಅವರು ಸಮಯೋಚಿತವಾಗಿ ಅನೇಕ ಬಾರಿ ಧೈರ್ಯದಿಂದ ಎದುರಿಸಿದ್ದಾರೆ, ಬಹುಶಃ ಈ ದೈವೀಕಾರ್ಯಕ್ಕಾಗಿ ಅವರಿಗೆ ಪದೇ ಪದೇ ಪುನರ್ಜನ್ಮ ಸಿಕ್ಕಿದೆ ! ಈ ಎಲ್ಲಾ ಸನ್ನಿವೇಶಗಳನ್ನು ಅವರು ಕೇವಲ ಎದುರಿಸದೇ ಆ ಪ್ರದೇಶದಲ್ಲಿ ತಮ್ಮ ಮತ್ತು ಸಂಸ್ಥೆಯ ವಿಶ್ವಾಸಾರ್ಹತೆಯನ್ನು ನಿರ್ಮಿಸಿದರು. ಜಯವಂತಜೀಯವರ ಜೀವನ ಪಯಣವು ರೋಮಾಂಚಕ ಚಲನಚಿತ್ರಕ್ಕಿಂತ ಕಡಿಮೆಯಿಲ್ಲ.

3. ಈಶಾನ್ಯ ಭಾರತದ ಸ್ಥಳೀಯ ಯುವ ಪೀಳಿಗೆಯನ್ನು ರಾಷ್ಟ್ರೀಯ ಮುಖ್ಯ ವಾಹಿನಿಗೆ ತರುವುದೇ ನಿಜವಾದ ಪರಿಹಾರ !

ಶ್ರೀ. ಕೊಂಡವಿಲಕರರವರು, `ವಸುಧೈವ ಕುಟುಂಬಕಂ’ (ಸಂಪೂರ್ಣ ಭೂಮಿಯೇ ಒಂದು ಕುಟುಂಬ) ಈ ಮೌಲ್ಯಗಳ ಆಧಾರದ ಮೇಲೆ ಭಾರತವನ್ನು ಜಾಗತಿಕ ಮಹಾಶಕ್ತಿಯನ್ನಾಗಿ ಮಾಡುವ ಕನಸನ್ನು ನನಸಾಗಿಸಬೇಕಾದರೆ, ನಾಗರಿಕರ ಮನಸ್ಸಿನಲ್ಲಿ ಪ್ರಖರವಾದ ಐಕ್ಯತೆಯ ಜ್ಯೋತಿ ನಿರಂತರವಾಗಿ ಉರಿಯುತ್ತಿರಬೇಕು. 21 ನೇ ಶತಮಾನದ ಬದಲಾಗುತ್ತಿರುವ ಭೂ-ರಾಜಕೀಯ ಸಮೀಕರಣಗಳು ಮತ್ತು ಹಿಂದ್-ಪೆಸಿಫಿಕ್ ಪ್ರದೇಶದ ಹೆಚ್ಚುತ್ತಿರುವ ಮಹತ್ವವನ್ನು ಪರಿಗಣಿಸಿದರೆ ಈಶಾನ್ಯ ಭಾರತವು ಯುದ್ಧತಂತ್ರದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗುತ್ತದೆ. ಆದುದರಿಂದಲೇ ಅಲ್ಲಿನ ಸಮಸ್ಯೆಗಳ ಮೂಲಕ್ಕೆ ಹೋಗಿ ಕೆಲಸ ಮಾಡುವುದು ಅವಶ್ಯಕವಾಗಿದೆ. ಆದುದರಿಂದ ಈಶಾನ್ಯ ಭಾರತದ ಸ್ಥಳೀಯ ಯುವ ಪೀಳಿಗೆಯನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರುವುದೇ ನಿಜವಾದ ಪರಿಹಾರವಾಗಿದೆ’ ಎಂದು ಹೇಳಿದರು.

ಮಣಿಪುರ ಘಟನೆಯ ನಂತರ ದೇಶಾದ್ಯಂತ ನಡೆದ ಪ್ರತಿಭಟನೆಗಳು, ನಾಗಾ ಮತ್ತು ಮೈತೇಯಿ ಜನರ ನಡುವೆ ಮೀಸಲಾತಿಯ ಹೆಸರಿನಲ್ಲಿ ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿಸುವ ಪಿತೂರಿ, ಗಡಿಯಲ್ಲಿ ಭಯೋತ್ಪಾದಕರ ಅಫೀಮ್ (ಮಾದಕ ವಸ್ತು) ಕೃಷಿ, ಪದೇ ಪದೇ ನಡೆಯುವ ಹಿಂಸಾಚಾರ, ದೌರ್ಜನ್ಯಗಳು, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಸೇನಾಧಿಕಾರಿಗಳ ಹತ್ಯೆಗಳು, ಈ ಎಲ್ಲಾ ಸಂಗತಿಗಳಿಗೆ ವಿದೇಶಿ ಶಕ್ತಿಗಳ ಗುಪ್ತ ಬೆಂಬಲವನ್ನು ಗಮನಿಸಿದರೆ, ಮಣಿಪುರವು ಏಕೆ ನಿರಂತರವಾಗಿ ಹೊತ್ತಿ ಉರಿಯುತ್ತಿದೆ ಎಂಬುದು ಅರ್ಥವಾಗುತ್ತದೆ.

4. ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಕಾರ್ಯ

ಮಣಿಪುರ ರಾಜ್ಯದಲ್ಲಿರುವ ಈ ಶಾಲೆಗಳಲ್ಲದೆ, ಅಲ್ಲಿನ ಮಕ್ಕಳಿಗೆ ಮುಂದಿನ ಉನ್ನತ ಶಿಕ್ಷಣ ದೊರೆಯುವಂತೆ, ದೇಶದ ಮೂಲ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವಂತೆ ಮಾಡಲು ಮಹಾರಾಷ್ಟ್ರದಲ್ಲಿ ಅವರಿಗಾಗಿ ವಸತಿಗೃಹಗಳನ್ನು ಪ್ರಾರಂಭಿಸಲಾಗಿದೆ. ‘ಜ್ಞಾನಪ್ರಬೋಧಿನಿ’ ಮತ್ತು ‘ಜನಕಲ್ಯಾಣ ಸಮಿತಿ’ ಎಂಬ ಎರಡೂ ಪ್ರತಿಷ್ಠಿತ ಸಂಸ್ಥೆಗಳ ಉತ್ತಮ ಸಹಕಾರ ಈ ಕಾರ್ಯಕ್ಕೆ ಲಭಿಸಿದೆ. ಸಂಸ್ಥೆಗೆ ರಾಷ್ಟ್ರೀಯ ಏಕತೆಯೊಂದಿಗೆ ಸಾಮಾಜಿಕ ಸಾಮರಸ್ಯ, ಪೂರ್ವೋತ್ತರ ಗಡಿ ಪ್ರದೇಶದ ಶಾಶ್ವತ ಅಭಿವೃದ್ಧಿ ಮತ್ತು ಉತ್ತಮ ಸಾಧನೆಗಳನ್ನು ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಯುವ ಪೀಳಿಗೆಯನ್ನು ನಿರ್ಮಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.

ಮಣಿಪುರದಲ್ಲಿ ನಡೆಯುತ್ತಿರುವ ಮೂರೂ ಶಾಲೆಗಳನ್ನು ಸಬಲಗೊಳಿಸಿ, ಈಶಾನ್ಯ ಭಾರತದ ಗಡಿ ಪ್ರದೇಶಗಳ ವನವಾಸಿ ವಿದ್ಯಾರ್ಥಿಗಳಿಗೆ ತಮ್ಮ ಪ್ರದೇಶದಲ್ಲಿಯೇ ಮುಂದಿನ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ, ವನವಾಸಿಗಳಲ್ಲಿ ಸಾಂಸ್ಕೃತಿಕ ಸಂರಕ್ಷಣೆ ಮತ್ತು ಆಧುನಿಕತೆಯ ಸಮನ್ವಯವನ್ನು ಸಾಧಿಸಬೇಕಾದರೆ, ಈ ಮೂರು ಶಾಲೆಗಳ ಆಧುನೀಕರಣವು ಅವಶ್ಯಕವಾಗಿದೆ. ಪ್ರಸ್ತುತ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲ. ಅದರಂತೆ ಸಂಸ್ಥೆಯು ಕಾರ್ಯವಿಸ್ತರಣಾ ಯೋಜನೆಯನ್ನು ಸಿದ್ಧಪಡಿಸಿದೆ. ಭವಿಷ್ಯದಲ್ಲಿ ಪ್ರಸ್ತುತ ಸೌಲಭ್ಯಗಳನ್ನು ಆಧುನೀಕರಿಸಿ 10 ನೇ ತರಗತಿಯವರೆಗಿನ ತರಗತಿಗಳನ್ನು ಪ್ರಾರಂಭಿಸುವುದು, ಈಶಾನ್ಯ ಭಾರತದ ಗಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಶಾಲೆಗಳ ಜಾಲವನ್ನು ನಿರ್ಮಿಸುವುದು, ಭವಿಷ್ಯದ ಪಯಣದ ಬಗ್ಗೆ ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸುವುದು, ವೈಜ್ಞಾನಿಕ ಕುತೂಹಲವನ್ನು ಹುಟ್ಟುಹಾಕಲು ಸಂಚಾರಿ ಪ್ರಯೋಗಾಲಯಗಳ ಯೋಜನೆಯನ್ನು ಜಾರಿಗೆ ತರುವುದು, ಜೈವಿಕ ಮತ್ತು ಸಾಂಸ್ಕೃತಿಕ ಸಂಶೋಧನೆಯನ್ನು ಉತ್ತೇಜಿಸುವುದು, ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸುವುದು, ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದು, ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಮುಂತಾದ ವಿವಿಧ ಯೋಜನೆಗಳನ್ನು ಕೈಗೊಳ್ಳಬೇಕಾಗಿದೆ. ಇನ್ನೂ ಬಹಳ ದೂರ ಸಾಗಬೇಕಾಗಿದೆ. ಸ್ಥಳೀಯರ ಸಹಭಾಗಿತ್ವ ಮತ್ತು ದೇಶದ ಇತರ ಭಾಗಗಳ ನಾಗರಿಕರ ಈಶಾನ್ಯ ಭಾರತದ ಕಡೆಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿಸಿ ಆ ಪ್ರದೇಶದ ವನವಾಸಿಗಳ ಮನಸ್ಸಿನಲ್ಲಿ ಭಾರತೀಯತೆಯನ್ನು ಬೇರೂರಿಸಲು ತಮ್ಮ ಪಾಲಿನ ಕೊಡುಗೆ ನೀಡುವುದು ಭಯ್ಯಾಜಿ ಕಾನೆಯವರ ಕಾರ್ಯಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಶ್ರೀ. ಜಯವಂತ ಕೊಂಡವಿಲಕರರವರು ಹೇಳುವಂತೆ, ದಾರಿಯು ದೂರದ ಮತ್ತು ಕಠಿಣವಾಗಿದೆ; ಆದರೆ ಅದೇ ಏಕೈಕ ಮಾರ್ಗ ಮತ್ತು ಗುರಿ ಸಾಧನೆಯ ವೇಗದ ಮಾರ್ಗವಾಗಿದೆ. ರಾಷ್ಟ್ರೀಯತೆಯ ವಿಚಾರಗಳ ಪ್ರಖರ ಬೆಳಕೇ ಮುಂದಿನ ಮಾರ್ಗವನ್ನು ತೋರಿಸಬಲ್ಲದು, ಇದುವೇ ಸತ್ಯ!

ಕರೆ

‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ವಿಸ್ತರಣಾ ಕಾರ್ಯಕ್ಕೆ ನಿಧಿಯ ಅವಶ್ಯಕತೆಯಿದೆ. ಸಂಸ್ಥೆಯ ಕಾರ್ಯವು ಸಂಪೂರ್ಣವಾಗಿ ಸಾಮಾಜಿಕ ಬೆಂಬಲದ ಮೇಲೆ ನಿಂತಿದೆ. ಸಜ್ಜನ ಶಕ್ತಿಗಳ ಕೊಡುಗೆಯಿಂದ ಈ ಪವಿತ್ರ ಕಾರ್ಯವು ನಿರಂತರವಾಗಿ ಮುಂದುವರೆಯುವ ಸಲುವಾಗಿ ‘ವಿದ್ಯಾರ್ಥಿ ಪೋಷಕತ್ವ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ 15 ಸಾವಿರ ರೂಪಾಯಿಗಳನ್ನು ನೀಡಿ ಯಾವುದೇ ಆಸಕ್ತ ಸಜ್ಜನರು ರಾಷ್ಟ್ರೀಯ ಏಕತೆಯ ಈ ಕಾರ್ಯದಲ್ಲಿ ಕೊಡುಗೆ ನೀಡಬಹುದು. ಈಶಾನ್ಯ ಭಾರತವನ್ನು ರಾಷ್ಟ್ರೀಯ ಮುಖ್ಯ ವಾಹಿನಿಗೆ ತರಲು ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ಕ್ಕೆ ಉದಾರವಾಗಿ ಸಹಾಯ ಮಾಡಿ ಮತ್ತು ಪ್ರತಿಷ್ಠಾನದ ರಾಷ್ಟ್ರೀಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ,” ಎಂದು ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಕಾರ್ಯಕಾರಿ ನಿರ್ದೇಶಕ ಶ್ರೀ. ಜಯವಂತ ಕೊಂಡವಿಲಕರರವರು ಮನವಿ ಮಾಡುತ್ತಾರೆ.

ಅನುಭವಾಧಾರಿತ ಶಿಕ್ಷಣದ ಭಾಗವಾಗಿ ದೇಶದ ಮೂಲೆ ಮೂಲೆಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕನಿಷ್ಠ ಒಂದು ವರ್ಷದವರೆಗೆ ಯುವಕರು ಪೂರ್ವ ಗಡಿ ಪ್ರದೇಶದಲ್ಲಿ ಸೇವಾ ಕಾರ್ಯವನ್ನು ಮಾಡಿ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಇನ್ನಷ್ಟು ಸಬಲಗೊಳಿಸಬೇಕು. ಅಂತಹ ಆಸಕ್ತ ಯುವಕರು ‘ಪೂರ್ವ ಸೀಮಾ ವಿಕಾಸ ಪ್ರತಿಷ್ಠಾನ’ದ ಕಾರ್ಯದಲ್ಲಿ ಭಾಗವಹಿಸಲು ಬಯಸಿದರೆ, ಅವರು ಶ್ರೀ. ಜಯವಂತ ಕೊಂಡವಿಲಕರ (9619720212), ಶ್ರೀ. ಶ್ರೀಪಾದಜಿ ದಾಬಕ (9860095851) ಅಥವಾ ಪ್ರಾ. ಶ್ರುತಿ ಮೆಹ್ತಾ (9028950200) ರವರನ್ನು ಸಂಪರ್ಕಿಸಬಹುದು. ನಿಮಗೆ ಸದಾ ಸ್ವಾಗತವಿದೆ.

ಸಂಪಾದಕೀಯ ನಿಲುವು

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಸರದಾರರು ಮಾಡಿದ ತ್ಯಾಗವು ಸರ್ವೋಚ್ಛವಾಗಿದೆ, ಹಾಗೆಯೇ ಇಂದಿಗೂ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರ ರಕ್ಷಣೆಗಾಗಿ ‘ಸರದಾರ’ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮತ್ತು ಅವರ ಹಿಂದೂ ಧರ್ಮರಕ್ಷಣೆಯ ಹೋರಾಟದ ಕುರಿತ ಮಾಹಿತಿ ನೀಡುವ ‘ಹಿಂದುತ್ವದ ಸರದಾರರು’ ಎಂಬ ಮಾಲಿಕೆಯ ಮೂಲಕ ಇತರರಿಗೂ ಸ್ಫೂರ್ತಿ ದೊರೆಯಲಿದೆ. ಈ ಉದಾಹರಣೆಗಳಿಂದ ನಮ್ಮ ಮನಸ್ಸಿನ ಚಿಂತೆಗಳು ದೂರವಾಗಿ ಉತ್ಸಾಹ ನಿರ್ಮಾಣವಾಗುವುದು ! – ಸಂಪಾದಕರು