ಭಾರತೀಯ ಸಂಸ್ಕೃತಿಯ ಭವಿಷ್ಯ ಮತ್ತು ನಮ್ಮ ಶಿಕ್ಷಣಪದ್ಧತಿ !

ನಮ್ಮ ಇಂದಿನ ಶಿಕ್ಷಣಪದ್ಧತಿ ಆಂಗ್ಲ ಪದ್ಧತಿಗನುಸಾರವೇ ನಡೆಯುತ್ತಿದೆ. ಇಂದು ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ ಸ್ಥಳೀಯ ಭಾಷೆಯ ಶಾಲೆಗಳು ಪಾಳು ಬೀಳುತ್ತಿವೆ. ‘ವಾಸ್ತವದಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣ ತುಂಬಾ ಉತ್ತಮ ವಾಗಿರುತ್ತದೆ’, ಎಂದು ಎಲ್ಲ ವಿದ್ವಾಂಸರು ಮತ್ತು ಜ್ಞಾನಿಗಳು ಹೇಳುತ್ತಾ ಇರುತ್ತಾರೆ; ಆದರೆ ಅದರ ಕಡೆಗೆ ಯಾರೂ ಹೆಚ್ಚಿನ ಗಮನ ಹರಿಸುವುದಿಲ್ಲ.

ಪೂ. ಕಿರಣ ಫಾಟಕ್

೧. ಆಂಗ್ಲ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಕಲಿಸದಿರುವುದು

ನಮ್ಮ ಭಾರತೀಯರ ಮನಸ್ಸಿನಲ್ಲಿ ಆಂಗ್ಲರ ವರ್ಚಸ್ಸು ಇನ್ನೂ ಶಾಶ್ವತವಾಗಿ ಉಳಿದಿದೆ. ನಮಗೆ ಸ್ವಾತಂತ್ರ್ಯ ಲಭಿಸಿ ೭೭ ವರ್ಷಗಳು ಕಳೆದವು. ಆದರೂ ನಾವು ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ತಿಳಿಯುವಂತಹ ಶಿಕ್ಷಣವನ್ನು ನೀಡುತ್ತಿಲ್ಲ. ಅದಕ್ಕೆ ಬೇಕಾಗುವ ಯಾವುದೇ ಯೋಜನೆಯನ್ನು ಹಮ್ಮಿಕೊಳ್ಳಲು ಯಾವುದೇ ರಾಜಕೀಯ ಪಕ್ಷಗಳು ಮುಂದೆ ಬರುವುದಿಲ್ಲ. ನಮ್ಮ ಹಿಂದೂ ಹಬ್ಬಗಳು, ಉತ್ಸವ, ದೇವರು ಧರ್ಮ, ಶಾಸ್ತ್ರೀಯ ಸಂಗೀತ, ಆಯುರ್ವೇದ, ಯೋಗ ಇವೆಲ್ಲವೂ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಇದರ ಪ್ರತಿಬಿಂಬ ಯಾವುದೇ ಶಿಕ್ಷಣಪದ್ಧತಿಯಲ್ಲಿ ಕಾಣಿಸುವುದಿಲ್ಲ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ರಾಮ ಯಾರು ?, ಕೃಷ್ಣ ಯಾರು ? ಭೀಮಸೇನ ಜೋಶಿ ಯಾರು ? ಎಂಬುದು ಗೊತ್ತಿರುವುದಿಲ್ಲ. ಅವರಿಗೆ ಭಾರತೀಯ ಸಂಗೀತ, ವಾದನ, ನೃತ್ಯ, ಆಯುರ್ವೇದ, ಯೋಗ, ಹಬ್ಬಗಳು ಮತ್ತು ಸಂಸ್ಕೃತಿಯ ಬಗ್ಗೆ ಏನೂ ಗೊತ್ತಿರುವುದಿಲ್ಲ. ರಾಮಾಯಣ ಹಾಗೂ ಮಹಾಭಾರತದ ವಿಷಯದಲ್ಲಿ ಅವರಿಗೆ ಏನೂ ತಿಳಿಯುವುದಿಲ್ಲ. ವಿಮಾನ, ಶೂನ್ಯ, ಗುರುತ್ವಾಕರ್ಷಣೆಯನ್ನು ನಮ್ಮ ಭಾರತೀಯರು ಕಂಡುಹಿಡಿದರು ಎನ್ನುವ ವಿಷಯವನ್ನು ಅವರಿಗೆ ಕಲಿಸಲಾಗುತ್ತಿಲ್ಲ.

ಭಾಸ್ಕರಾಚಾರ್ಯರು ಅವರ ‘ಸಿದ್ಧಾಂತಶಿರೋಮಣಿ’ ಈ ಗ್ರಂಥದಲ್ಲಿ ‘ಪೃಥ್ವಿಯ ಗುರುತ್ವಾಕರ್ಷಣೆ’ಯ ವಿಷಯವನ್ನು ಬರೆದಿದ್ದಾರೆ, ‘ಪೃಥ್ವಿ ಆಕಾಶದಲ್ಲಿನ ಪದಾರ್ಥಗಳನ್ನು ವಿಶಿಷ್ಟ ಶಕ್ತಿಯಿಂದ ತನ್ನತ್ತ ಸೆಳೆದುಕೊಳ್ಳುತ್ತದೆ.’ ಅವರು ‘ಕಾರಣಕೌತೂಹಲ’ ಎಂಬ ಹೆಸರಿನ ಇನ್ನೊಂದು ಗ್ರಂಥವನ್ನೂ ಬರೆದಿದ್ದಾರೆ. ಅವರು ಆ ಕಾಲದ ಸುಪ್ರಸಿದ್ಧ ಗಣಿತಜ್ಞರಾಗಿದ್ದರು. ಬ್ರಹ್ಮಗುಪ್ತ ಎಂಬ ಹೆಸರಿನ ವಿದ್ವಾಂಸರು ಮತ್ತು ಗಣಿತಜ್ಞರು ಮೊಟ್ಟಮೊದಲು ಶೂನ್ಯ ಮತ್ತು ಅದರ ಸಿದ್ಧಾಂತವನ್ನು ಕಂಡುಹಿಡಿದರು. ರಾಮಾಯಣದಲ್ಲಿ ವಿಮಾನದ ಉಲ್ಲೇಖ ಕಂಡುಬರುತ್ತದೆ. ಸಂತಶಿರೋಮಣಿ ಜಗದ್ಗುರು ತುಕಾರಾಮ ಮಹಾರಾಜರನ್ನು ಕರೆದುಕೊಂಡು ಹೋಗಲು ಶ್ರೀವಿಷ್ಣುವು ವಿಮಾನದಲ್ಲಿ ಬಂದರು, ಎನ್ನುವ ಉಲ್ಲೇಖವಿದೆ.

೨. ಇಂದಿನ ವಿದ್ಯಾರ್ಥಿಗಳ ಸ್ಥಿತಿ

ಇಂದು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಅನೇಕ ವಿಷಯಗಳನ್ನು ಕಲಿಸುತ್ತಾರೆ; ಆದರೆ ‘ಆ ವಿಷಯಗಳಲ್ಲಿನ ಯಾವ ಜ್ಞಾನ ನಮ್ಮ ನಿತ್ಯ ಜೀವನಕ್ಕೆ ಉಪಯುಕ್ತವಿದೆ’, ಎಂಬುದು ಅವರಿಗೆ ತಿಳಿಯುವುದಿಲ್ಲ; ಆದ್ದರಿಂದ ಅವರು ಸಂಚಾರಿವಾಣಿಯ ಆಶ್ರಯ ಪಡೆಯುತ್ತಾರೆ. ಸಂಚಾರಿವಾಣಿಯಲ್ಲಿ ಅವರಿಗೆ ಅನೇಕ ವಿಷಯಗಳ ಆಳವಾದ ಜ್ಞಾನ ಸಿಗಬಹುದು: ಆದರೆ ಇದನ್ನು ಕೂಡ ಇಂದಿನ ಮಕ್ಕಳು ದುರ್ಲಕ್ಷಿಸುತ್ತಾರೆ, ಅವರು ಸಂಚಾರಿವಾಣಿಯಲ್ಲಿ ಗಂಟೆಗಟ್ಟಲೆ ಆಟ ಆಡುತ್ತಿರುತ್ತಾರೆ. ತಂದೆ-ತಾಯಿ ಇಬ್ಬರೂ ನೌಕರಿ ಮಾಡುತ್ತಿರುವುದರಿಂದ ಮಕ್ಕಳ ಸ್ವಭಾವ ಹೇಗಿದೆ ? ದಿನವಿಡೀ ಅವರು ಏನು ಮಾಡುತ್ತಾರೆ ?, ಎಂಬುದರ ಕಡೆಗೆ ಅವರ ಗಮನವಿರುವುದಿಲ್ಲ. ಇತ್ತೀಚೆಗೆ ಅಜ್ಜ-ಅಜ್ಜಿ ಕೂಡ ಮನೆಯಲ್ಲಿರುವುದಿಲ್ಲ. ಬಹುಶಃ ಅವರ ಮಕ್ಕಳಿಗೆ ಅವರಿಂದ ಅಡಚಣೆಯಾಗುತ್ತಿರಬಹುದು; ಆದ್ದರಿಂದ ಅವರನ್ನು ವೃದ್ಧಾಶ್ರಮದಲ್ಲಿಡಲಾಗುತ್ತದೆ. ಇದನ್ನು ಯಾರಾದರೂ ನಿಲ್ಲಿಸಬೇಕೆಂದು ನನಗನಿಸುತ್ತದೆ.

೩. ಆಂಗ್ಲ ಮಾಧ್ಯಮದ ಶಾಲೆಗಳು ಹಿಂದೂ ಧರ್ಮಗ್ರಂಥಗಳ ವಿಷಯದಲ್ಲಿ ಪ್ರಬೋಧನೆ ಹಾಗೂ ಮಕ್ಕಳಿಂದ ಸ್ತೋತ್ರಪಠಣ ಮಾಡಿಸಿಕೊಳ್ಳಬೇಕು !

ಆಂಗ್ಲ ಮಾಧ್ಯಮದ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಹಿಂದೂ ಧರ್ಮ, ದೇವರು, ಗ್ರಂಥಗಳ ವಿಷಯದಲ್ಲಿ ಶಿಕ್ಷಣ ನೀಡಬೇಕು. ಅದರ ಮೂಲಕ ಅವರ ಮನಸ್ಸಿನಲ್ಲಿ ಈ ಗ್ರಂಥಗಳ ಬಗ್ಗೆ ಕುತೂಹಲವಾದರೂ ಮೂಡಬೇಕು. ‘ದಾಸಬೋಧ’, ‘ಭಗವದ್ಗೀತೆ’, ಜಗದ್ಗುರು ಸಂತ ತುಕಾರಾಮ ಮಹಾರಾಜರ ‘ತುಕಾರಾಮ ಗಾಥಾ’, ಸಂತ ನಾಮದೇವ ಮಹಾರಾಜರ ‘ಗಾಥಾ’, ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರ ‘ಜ್ಞಾನೇಶ್ವರೀ’ ಈ ಎಲ್ಲ ಗ್ರಂಥಗಳ ಬಗ್ಗೆ ಎಲ್ಲ ಆಂಗ್ಲ ಮಾಧ್ಯಮಗಳಲ್ಲಿನ ಮಕ್ಕಳು ಅಜ್ಞಾನಿಗಳಾಗಿದ್ದಾರೆ.

‘ದಾಸಬೋಧ’ ಇದು ಎಷ್ಟು ಒಳ್ಳೆಯ ಗ್ರಂಥವಾಗಿದೆಯೆಂದರೆ, ಇದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇದರಲ್ಲಿನ ಕೆಲವು ಶ್ಲೋಕಗಳನ್ನು ನಿಯಮಿತವಾಗಿ ಮಕ್ಕಳಿಗೆ ಕಲಿಸಿದರೆ, ಮಕ್ಕಳು ಅದರತ್ತ ಆಕರ್ಷಿತರಾಗಬಹುದು. ತಾಯಿ-ತಂದೆಯರು ಪ್ರತಿದಿನ ಮಕ್ಕಳಿಂದ ‘ರಾಮರಕ್ಷಾ’ ಮತ್ತು ‘ಮಾರುತಿಸ್ತೋತ್ರ, ಇವುಗಳನ್ನು ಸಾಯಂಕಾಲ ಹೇಳಿಸಿಕೊಂಡರೆ ಅದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರವಾಗಬಹುದು.

೪. ಸಣ್ಣ ಮಕ್ಕಳಿಗೆ ಭಗವಾನ ಶ್ರೀಕೃಷ್ಣ ಮತ್ತು ಪ್ರಭು ಶ್ರೀರಾಮರ ಪರಿಚಯವಾಗಲು…

ಅನೇಕ ಸ್ಥಳಗಳಲ್ಲಿ ‘ಭಾಗವತ ಕಥೆ’ ನಡೆಯುತ್ತದೆ; ಆದರೆ ಅದಕ್ಕೆ ಎಷ್ಟು ಸಣ್ಣ ಮಕ್ಕಳು ಹೋಗುತ್ತಾರೆ, ಎಂಬುದನ್ನು ಕೂಡ ನಾವು ನೋಡಬೇಕು. ದೊಡ್ಡ ದೊಡ್ಡ ಸಂಸ್ಥೆ ಗಳು ಕೇವಲ ಸಣ್ಣ ಮಕ್ಕಳಿಗಾಗಿ ಭಾಗವತದ ವ್ಯಾಖ್ಯಾನಗಳನ್ನು ಆಯೋಜಿಸಬೇಕು, ಅಂದರೆ ಮಕ್ಕಳಿಗೆ ಭಗವಾನ ಶ್ರೀಕೃಷ್ಣನ ವಿಷಯದಲ್ಲಿ ಮಾಹಿತಿ ಸಹ ಸಿಗುವುದು.ರಾಮಾಯಣದಲ್ಲಿನ ರಾಮ ಯಾರು ?, ಮಾರುತಿ ಯಾರು ?, ಎಂಬುದು ಕೂಡ ಮಕ್ಕಳಿಗೆ ತಿಳಿಯಬೇಕು.

೫. …ಇಲ್ಲದಿದ್ದರೆ ಮುಂಬರುವ ಕಾಲ ಭಾರತೀಯ ಸಂಸ್ಕೃತಿಗೆ ಅಪಾಯವಾಗಿ ಪರಿಣಮಿಸಬಹುದು

ಭಾರತೀಯ ಸಂಸ್ಕೃತಿಯಲ್ಲಿರುವ ಮಂತ್ರಶಾಸ್ತ್ರ, ಸ್ತೋತ್ರಗಳು ಕೂಡ ಮಕ್ಕಳಿಗೆ ತಿಳಿಯಬೇಕು; ಏಕೆಂದರೆ ಈ ಮಂತ್ರಗಳಲ್ಲಿ ಸಾಮರ್ಥ್ಯವಿರುತ್ತದೆ. ಅದೇ ರೀತಿ ಅನೇಕ ಸ್ತೋತ್ರಗಳು ಕೂಡ ಎಷ್ಟು ಸರಳವಾಗಿವೆಯೆಂದರೆ, ೩-೪ ಸಲ ಪಠಿಸಿದಾಗ ಅವು ಬಾಯಿಪಾಠವಾಗುತ್ತವೆ. ಇಂದಿನ ಪೀಳಿಗೆ ಇದರಿಂದ ವಂಚಿಸಲ್ಪಟ್ಟರೆ, ಮುಂಬರುವ ಕಾಲ ಭಾರತೀಯ ಸಂಸ್ಕೃತಿಗೆ ಕೆಟ್ಟ ಕಾಲವೆನಿಸಬಹುದೆಂದು ನನಗನಿಸುತ್ತದೆ.

೬. ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ತಿಳಿಯಬೇಕಾದರೆ ಶಿಕ್ಷಣಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಯಾಗುವುದು ಅವಶ್ಯಕ !

ಇಂದು ಭಾರತೀಯ ಸಂಸ್ಕೃತಿ ಸಂಪೂರ್ಣ ವಿಶ್ವದಲ್ಲಿ ಜನಪ್ರಿಯವಾಗುತ್ತಿದೆ. ‘ಶಾಸ್ತ್ರೀಯ ಸಂಗೀತ’ವನ್ನು ಸಂಗೀತ ಉಪಚಾರಕ್ಕಾಗಿ ಆದರ್ಶವೆಂದು ಪರಿಗಣಿಸಲಾಗುತ್ತದೆ. ಇಂದು ವಿದೇಶಗಳ ಸಾವಿರಾರು ನಾಗರಿಕರು ಭಾರತೀಯ ಶಾಸ್ತ್ರೀಯ ಸಂಗೀತದ ಶಿಕ್ಷಣ ಪಡೆಯುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯವೂ ವಿದೇಶಗಳಲ್ಲಿ ಬೇರೂರುತ್ತಿದೆ. ಅಲ್ಲಿ ನಿಯಮಿತವಾಗಿ ಪ್ರಾಣಾಯಾಮ, ಯೋಗಾಸನಗಳನ್ನು ಮಾಡುತ್ತಾರೆ; ಆದರೆ ಭಾರತದಲ್ಲಿ ಮಾತ್ರ ಮಕ್ಕಳಿಗೆ ಇದರ ಬಗ್ಗೆ ಜ್ಞಾನವಿಲ್ಲ; ಏಕೆಂದರೆ ಅನೇಕ ಶಾಲೆಗಳಲ್ಲಿ ಈ ವಿಷಯಗಳನ್ನು ಕಲಿಸುವುದಿಲ್ಲ. ಅದಕ್ಕಾಗಿ ಕಲೆ ಹಾಗೂ ಯೋಗ ಶಿಕ್ಷಕರನ್ನು ನೇಮಿಸಬೇಕಾಗುತ್ತದೆ. ಇಂದು ಕೂಡ ಶಾಲೆಗಳಲ್ಲಿ ‘ಶಾರೀರಿಕ ತರಬೇತಿ’ಯ ಅವಧಿಯಲ್ಲಿ ಕವಾಯತು ಬಿಟ್ಟರೆ ಇತರ ಏನನ್ನೂ ಕಲಿಸುವುದಿಲ್ಲ. ಮಕ್ಕಳಿಗೂ

ಈ ಕವಾಯತು ಏಕೆ ಮಾಡಬೇಕು ?, ಅದರ ಮಹತ್ವವೇನು ? ಎಂಬುದು ತಿಳಿಯುವುದಿಲ್ಲ. ಆಡಳಿತದವರು ಈ ಎಲ್ಲ ವಿಷಯಗಳ ಬಗ್ಗೆ ಗಂಭೀರವಾಗಿ ವಿಚಾರ ಮಾಡಿ ಭಾರತೀಯ ಸಂಸ್ಕೃತಿಯನ್ನು ಗಮನಿಸಿ ಇಂದಿನ ನಿರುಪಯುಕ್ತ ಶಿಕ್ಷಣಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ಮಾಡುವುದೇ ರಾಷ್ಟ್ರಹಿತವೆನಿಸುವುದು.

– ಪೂ. ಕಿರಣ ಫಾಟಕ, ಶಾಸ್ತ್ರೀಯ ಗಾಯಕರು, ಡೊಂಬಿವಲಿ.