ಹಿಂದೂ ಧರ್ಮ, ದೇವಸ್ಥಾನಗಳ ರಕ್ಷಣೆ, ಇದರೊಂದಿಗೆ ‘ಲವ್‌ ಜಿಹಾದ್’ ವಿರುದ್ಧ ಹಾಗೂ ಜಾತಿಭೇದವನ್ನು ಅಳಿಸಲು ಸಕ್ರಿಯವಿರುವ ಪ್ರಖರ ವಾಗ್ಮಿ ಶ್ರೀ. ಚಕ್ರವರ್ತಿ ಸೂಲಿಬೆಲೆ !


ವಿಶೇಷ ಲೇಖನ !


ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಯೋಧರು ಮಾಡಿದ ತ್ಯಾಗ ಹೇಗೆ ಶ್ರೇಷ್ಠವಾಗಿದೆಯೋ, ಹಾಗೆಯೇ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಹಿಂದೂ ಧರ್ಮ ಮತ್ತು ರಾಷ್ಟ್ರ ರಕ್ಷಣೆಗಾಗಿ ‘ಧರ್ಮಯೋಧ’ರಾಗಿ ಕಾರ್ಯನಿರತರಾಗಿದ್ದಾರೆ. ಜಾತ್ಯತೀತ ಸರಕಾರ ಹಾಗೂ ಆಡಳಿತ ಮತ್ತು ಪೊಲೀಸರ ಕಿರುಕುಳವನ್ನು ಸಹಿಸಿಕೊಂಡು ಅವರು ನಿಃಸ್ವಾರ್ಥಭಾವದಿಂದ ಕೇವಲ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಹಗಲಿರುಳು ಸಂಘರ್ಷ ಮಾಡುತ್ತಿದ್ದಾರೆ. ಇಂದು ರಾಷ್ಟ್ರವಿರೋಧಿ ಶಕ್ತಿಗಳು ಜಾತ್ಯತೀತವಾದಿಗಳ ಬೆಂಬಲದಿಂದ ಬಲಿಷ್ಠರಾಗಿ ಹಿಂದೂವಿರೋಧಿ ಹಾಗೂ ರಾಷ್ಟ್ರವಿರೋಧಿ ಷಡ್ಯಂತ್ರಗಳನ್ನು ರಚಿಸುತ್ತಿರುವಾಗ ನಿಮ್ಮ ಮನಸ್ಸಿನಲ್ಲಿ ಭವಿಷ್ಯದಲ್ಲಿ ಹಿಂದೂಗಳ ಗತಿಯೇನು ?’, ಎನ್ನುವ ಚಿಂತೆ ಕಾಡುವುದು ನಿಜ. ಆಗ ಹಿಂದುತ್ವದ ಹಾಗೂ ರಾಷ್ಟ್ರದ ರಕ್ಷಣೆಗಾಗಿ ಹೋರಾಡುವ ಈ ಧರ್ಮಯೋಧರ ಸಂಘರ್ಷದ ಉದಾಹರಣೆಗಳನ್ನು ಓದಿದರೆ ನಿಮ್ಮ ಮನಸ್ಸಿನಲ್ಲಿರುವ ಚಿಂತೆ ದೂರವಾಗಿ ಉತ್ಸಾಹ ಮೂಡುವುದು ಖಚಿತ. ಅದಕ್ಕಾಗಿ ಇಂತಹ ಧರ್ಮಯೋಧರ ಮತ್ತು ಅವರ ಹಿಂದೂ ಧರ್ಮರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಯೋಧರು’ ಎಂಬ ಈ ಲೇಖನವನ್ನು ಆರಂಭಿಸಿದ್ದೇವೆ. ಇದರ ಮೂಲಕ ಭಾರತದಲ್ಲಿ ಸುರಾಜ್ಯ ನಿರ್ಮಾಣ ಮಾಡಲು ಪ್ರಯತ್ನಿಸುವವರ ಬಗ್ಗೆ ಎಲ್ಲರಿಗೂ ತಿಳಿಯುವುದು ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯ ಮಾಡಲು ಪ್ರೇರಣೆಯೂ ಸಿಗುವುದು ! – ಸಂಪಾದಕರು

ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ಕರ್ನಾಟಕದ ಖ್ಯಾತ ಚಿಂತಕರು, ಲೇಖಕರು ಮತ್ತು ಪ್ರಖರ ವಾಗ್ಮಿಯಾಗಿದ್ದಾರೆ. ಅವರು ತಮ್ಮ ದೇಶಪ್ರೇಮ, ಸಾಮಾಜಿಕ ಜಾಗರೂಕತೆ ಹಾಗೂ ಯುವಕರಿಗೆ ಪ್ರೇರಣೆ ನೀಡುವ ಕಾರ್ಯದಿಂದ ಕರ್ನಾಟಕದಲ್ಲಿ ಚಿರಪರಿಚಿತರಾಗಿದ್ದಾರೆ. ‘ಯುವ ಬ್ರಿಗೇಡ್’ ಈ ಸಂಸ್ಥೆಯ ಮೂಲಕ ಅವರು ಕಳೆದ ೧೦ ವರ್ಷಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಶ್ರೀ. ಚಕ್ರವರ್ತಿ ಸೂಲಿಬೆಲೆ

೧. ‘ಯುವಾ ಬ್ರಿಗೇಡ್’ ಸಂಘಟನೆಯ ಸ್ಥಾಪನೆ

ಅ. ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ‘ಯುವ ಬ್ರಿಗೇಡ್’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಜಾಗರೂಕತೆ ಹಾಗೂ ಸೇವಾಭಾವ ಮೂಡಿಸುತ್ತಿದ್ದಾರೆ. ಸಾವಿರಾರು ಯುವಕರು ಈ ಸಂಘಟನೆಯಲ್ಲಿ ಪಾಲ್ಗೊಂಡು ರಾಷ್ಟ್ರಸೇವೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸಂಘಟನೆಯು ನದಿಗಳ, ನೂರಾರು ಕಲ್ಯಾಣಿಗಳ ಪುನರುಜ್ಜೀವನ, ಪ್ರಾಚೀನ ಪಾಳುಬಿದ್ದ ದೇವಸ್ಥಾನಗಳ ಸ್ವಚ್ಛತೆ ಮಾಡುವುದು, ರಕ್ತದಾನ ಶಿಬಿರಗಳು ಮತ್ತು ಗ್ರಾಮಾಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿದೆ. ಅವರು ‘ನವಭಾರತ ನಿರ್ಮಾಣ ಅಭಿಯಾನ’ವನ್ನು ಆರಂಭಿಸಿ ದೇಶದ ವಿವಿಧ ಭಾಗಗಳಲ್ಲಿ ಯುವಜನತೆಗೆ ಪ್ರೇರಣೆಯನ್ನು ನೀಡುತ್ತಿದ್ದಾರೆ.

ಆ. ಅವರು ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರೇರಣೆ ಪಡೆದು ಅವರ ಬೋಧನೆಗಳನ್ನು ಆಧರಿಸಿದ ಅನೇಕ ಭಾಷಣಗಳನ್ನು ಮಾಡಿದ್ದಾರೆ. ಅವರು ಯುವಕರಿಗೆ ರಾಷ್ಟ್ರದ ಪ್ರಗತಿಗಾಗಿ ಕಾರ್ಯ ಮಾಡಲು ಕರೆ ನೀಡುತ್ತಾರೆ.

ಇ. ಯುವಕರಿಗೆ ಉದ್ಯೋಗದ ಬಗ್ಗೆ ಮಾರ್ಗದರ್ಶನ ನೀಡಲು ‘ಫಿಫ್ಥ್ ಪಿಲ್ಲರ್’ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಯುವಕರಿಗಾಗಿ ‘ಉದ್ಯೋಗ ಪರಿಷತ್ತು’ಗಳನ್ನು ಆಯೋಜಿಸಲಾಗುತ್ತಿದೆ.

೨. ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗರೂಕತೆ

ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಸಕ್ರಿಯರಾಗಿದ್ದು ಅವರು ರಾಷ್ಟ್ರ ಹಾಗೂ ಹಿಂದೂ ಧರ್ಮದ ವಿಚಾರಗಳನ್ನು ಜನರಿಗೆ ತಲುಪಿಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ಅವರ ಲೇಖನಗಳಿಂದ ಲಕ್ಷಾಂತರ ಜನರು ಪ್ರಭಾವಿತರಾಗಿದ್ದಾರೆ.

೩. ಅವರು ವಿವಿಧ ವಾರ್ತಾವಾಹಿನಿಗಳಲ್ಲಿನ ಚರ್ಚಾಕೂಟಗಳಲ್ಲಿ ಹಿಂದುತ್ವದ ಪರವಾಗಿ ಪ್ರಖರವಾಗಿ ಮಾತನಾಡುತ್ತಾರೆ. ಹಿಂದೂವಿರೋಧಿಗಳ ಷಡ್ಯಂತ್ರಗಳನ್ನು ಅವರು ಬಯಲಿಗೆಳೆದಿದ್ದಾರೆ.

೪. ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರಿಗೆ ಸಿಕ್ಕಿದ ಪ್ರಶಸ್ತಿಗಳು

ಅ. ‘ಯುವಾ ಬ್ರಿಗೇಡ್‌’ನ ಮೂಲಕ ಮಾಡಿದ ಸಾಮಾಜಿಕ ಕಾರ್ಯವನ್ನು ಅವಲೋಕಿಸಿ ಕರ್ನಾಟಕ ಸರಕಾರ ಅವರಿಗೆ ೨೦೨೨ ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿತ್ತು.

ಆ. ಮೈಸೂರಿನ ಸಾವರ್ಕರ್‌ ಪ್ರತಿಷ್ಠಾನ’ದಿಂದ ‘ವೀರ ಸಾವರ್ಕರ್‌ ಸನ್ಮಾನ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಗಿದೆ.

ಇ. ‘ಯುವಾ ಬ್ರಿಗೇಡ್‌’ನ ವಿವಿಧ ಸಾಮಾಜಿಕ ಕಾರ್ಯದ ಸನ್ಮಾನವೆಂದು ೨೦೧೮ ರಲ್ಲಿ ದೆಹಲಿಯಲ್ಲಿನ ‘ಚಾಣಕ್ಯ ವಾರ್ತಾ’ ಈ ಸಂಸ್ಥೆಯಿಂದ ಅವರಿಗೆ ‘ಚಾಣಕ್ಯ ಪ್ರಶಸ್ತಿ’ಯನ್ನು ನೀಡಲಾಗಿದೆ.

೫. ಪ್ರಧಾನಮಂತ್ರಿ ಮೋದಿಯವರಿಂದ ಯುವಾ ಬ್ರಿಗೇಡ್‌ನ ಕಾರ್ಯದ ಪ್ರಶಂಸೆ

ಶ್ರೀರಂಗಪಟ್ಟಣದಲ್ಲಿನ ೭೦೦ ವರ್ಷ ಪುರಾತನ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರವನ್ನು ಯುವಾ ಬ್ರಿಗೇಡ್‌ನ ಕಾರ್ಯಕರ್ತರು ೨ ತಿಂಗಳುಗಳಲ್ಲಿ ಪೂರ್ಣಗೊಳಿಸಿದರು. ಡಿಸೆಂಬರ್‌ ೨೦೨೦ ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನಕೀ ಬಾತ್’ ಈ ರೆಡಿಯೋ ಕಾರ್ಯಕ್ರಮದಲ್ಲಿ ವೀರಭದ್ರಸ್ವಾಮಿ ದೇವಸ್ಥಾನದ ಪುನರ್ನಿರ್ಮಾಣದ ವಿಷಯದಲ್ಲಿ ‘ಯುವಾ ಬ್ರಿಗೇಡ್‌’ನ ಕಾರ್ಯವನ್ನು ಶ್ಲಾಘಿಸಿದ್ದರು. ಅನಂತರ ೨೦೨೩ ಮತ್ತು ೨೦೨೪ ರಲ್ಲಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಯುವಾ ಬ್ರಿಗೇಡ್‌ನ ಇಬ್ಬರು ಕಾರ್ಯಕರ್ತರಿಗೆ ವಿಶೇಷ ಆಮಂತ್ರಣ ಸಿಕ್ಕಿತ್ತು.

೬. ‘ಯುವಾ ಶಕ್ತಿ’ಯ ಯೋಗದಾನ

ಶ್ರೀ. ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಯುವಾ ಬ್ರಿಗೇಡ್‌ ದೇಶದಾದ್ಯಂತ ಸಮಾಜ ಮತ್ತು ಧರ್ಮ ಜಾಗೃತಿಯ ಕಾರ್ಯವನ್ನು ಮಾಡುತ್ತಿದೆ. ಅವರು ಯುವಕರಲ್ಲಿ ರಾಷ್ಟ್ರಭಕ್ತಿ ಹಾಗೂ ಸೇವಾಭಾವ ನಿರ್ಮಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರವಾಗಿದೆ. ಅನೇಕ ದೇವಸ್ಥಾನಗಳ ಸಮೀಪದ ಕಲ್ಯಾಣಿಗಳು ಹಾಗೂ ಅನೇಕ ನದಿಗಳ ಸ್ವಚ್ಛತೆ ಮಾಡಿದ್ದಾರೆ. ಯುವಾ ಬ್ರಿಗೇಡ್‌ನ ಯುವಕರು ಹೊಸ ಪೀಳಿಗೆಯನ್ನು ಧರ್ಮದೊಂದಿಗೆ ಜೋಡಿಸಲು ಹಾಗೂ ‘ವಿಶ್ವಗುರು ಭಾರತ’ ಈ ಧ್ಯೇಯಕ್ಕಾಗಿ ‘ಯುವಾ ಬ್ರಿಗೇಡ್’ ತನ್ನ ಯೋಗದಾನ ನೀಡುತ್ತಿದೆ.

೭. ‘ಭಗಿನಿ ನಿವೇದಿತಾ ಪ್ರತಿಷ್ಠಾನ’ದ ಮೂಲಕ ‘ಲವ್‌ ಜಿಹಾದ್’ ವಿರೋಧಿ ಜಾಗೃತಿ ಅಭಿಯಾನ

‘ಭಗಿನಿ ನಿವೇದಿತಾ ಪ್ರತಿಷ್ಠಾನ’ದ ಮೂಲಕ ನೂರಾರು ಮಹಿಳೆಯರು ರಾಷ್ಟ್ರಜಾಗೃತಿಯ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ‘ಲವ್‌ ಜಿಹಾದ್‌’ನ ಭಯಾನಕತೆಯ ಬಗ್ಗೆ ಅನೇಕ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹಬ್ಬಗಳ ಮಹತ್ವವನ್ನು ವಿವರಿಸಿ ಹೇಳಲಾಗುತ್ತದೆ.

೮. ‘ಅಮೃತ ಕುಂಭ’ ವಿಭಾಗ

ಈ ವಿಭಾಗದ ಮೂಲಕ ಬುದ್ಧ, ಬಸವ, ಡಾ. ಅಂಬೇಡಕರ್‌ ಮತ್ತು ವೀರ ಸಾವರ್ಕರ್‌ ಇವರಂತಹ ಶ್ರೇಷ್ಠ ವ್ಯಕ್ತಿಗಳ ವಿಚಾರವನ್ನು ಜನರಿಗೆ ತಲುಪಿಸಲಾಗುತ್ತಿದೆ.

೯. ಲೇಖನ ಹಾಗೂ ಪ್ರಕಾಶನದ ಕಾರ್ಯ

ಚಕ್ರವರ್ತಿ ಸೂಲಿಬೆಲೆಯವರು ರಾಷ್ಟ್ರ ಹಾಗೂ ಹಿಂದೂ ಧರ್ಮದ ವಿಷಯದಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ‘ರೈಟ್‌ ಫ್ಯಾಕ್ಟ್‌’ ಸರಣಿಯ ಮೂಲಕ ಅವರು ಪ್ರತಿ ತಿಂಗಳು ಒಂದು ಪುಸ್ತಕವನ್ನು ಪ್ರಕಾಶನ ಮಾಡುತ್ತಾರೆ. ರಾಜ್ಯದ ಪ್ರಮುಖ ಪತ್ರಿಕೆಯಾದ ವಿಜಯವಾಣಿ ಪತ್ರಿಕೆಯಲ್ಲಿ ಪ್ರತಿವಾರ ವಿಶ್ವಗುರು ಶೀರ್ಷಿಕೆಯ ಅಡಿಯಲ್ಲಿ ರಾಷ್ಟ್ರ ಜಾಗೃತಿ ಮತ್ತು ಧರ್ಮ ಜಾಗೃತಿಯ ಲೇಖನವನ್ನು ಚಕ್ರವರ್ತಿ ಸೂಲಿಬೆಲೆಯವರು ಬರೆದಿದ್ದಾರೆ. ಅಷ್ಟೇ ಅಲ್ಲದೇ ಹೊಸ ದಿಗಂತ ಪತ್ರಿಕೆಯಲ್ಲಿ ಯುವ ಬರಹಗಾರರಿಗೆ ಮಾರ್ಗದರ್ಶನ ನೀಡಿ ರಾಷ್ಟ್ರ ಜಾಗೃತಿಯ ಕುರಿತಂತೆ ಅನೇಕ ಲೇಖನಗಳನ್ನು ಬರೆಸಿದ್ದಾರೆ.

೧೦. ಸ್ವರಾಜ್ಯ ಅಭಿಯಾನ ಹಾಗೂ ದೇವಸ್ಥಾನ ಪುನರುಜ್ಜೀವನ

ಅ. ಯುವಾ ಬ್ರಿಗೇಡ್‌ ತಂಡವು ಭಾರತಕ್ಕೆ ಸ್ವಾತಂತ್ರ್ಯ ದೊರೆತ ೭೫ ನೇ ವರ್ಷ ಸಂಭ್ರಮಕ್ಕೆ ನಿಮಿತ್ತ ‘ಸ್ವರಾಜ್ಯಕ್ಕೆ ‘ಮುಕ್ಕಾಲ್ನೂರು’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ೭೫ ಪುರಾತನ ದೇವಾಲಯಗಳನ್ನು ಸ್ವಚ್ಛ ಮಾಡುವ ಸಂಕಲ್ಪ ಮಾಡಿತ್ತು. ‘ಯುವಾ ಬ್ರಿಗೇಡ್’ ಕರ್ನಾಟಕದಲ್ಲಿನ ೧೫೦ ಕ್ಕಿಂತಲೂ ಹೆಚ್ಚು ದೇವಸ್ಥಾನಗಳನ್ನು ಒಂದೇ ದಿನದಲ್ಲಿ ಸ್ವಚ್ಛಗೊಳಿಸಿತ್ತು.

ಆ. ಗೋಸಾಯಿಘಾಟ್‌ ರಸ್ತೆಯಲ್ಲಿರುವ ಶ್ರೀರಾಮದೇವಸ್ಥಾನ ಜೀರ್ಣಾವಸ್ಥೆಯಲ್ಲಿತ್ತು. ಸ್ಥಳೀಯ ನಾಗರಿಕರ ಮನವಿಯಂತೆ ‘ಯುವಾ ಬ್ರಿಗೇಡ್’ ಅದನ್ನು ಜೀರ್ಣೋದ್ಧಾರ ಮಾಡಿತು. ಈ ದೇವಸ್ಥಾನದಲ್ಲಿ ಶ್ರೀರಾಮ, ವಿಭೀಷಣ ಮತ್ತು ಶಬರಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.


ಯುವಕರನ್ನು ರಾಷ್ಟ್ರ-ಧರ್ಮಕಾರ್ಯದಲ್ಲಿ ಜೋಡಿಸಿ ಕೃತಿಶೀಲರನ್ನಾಗಿ ಮಾಡಲು ‘ಯುವಾ ಬ್ರಿಗೇಡ್’ ಹಮ್ಮಿಕೊಂಡಿರುವ ವಿವಿಧ ಉಪಕ್ರಮಗಳು !

೧. ಯುವಕರಿಂದ ೨೫೦ ದೇವಸ್ಥಾನಗಳಲ್ಲಿನ ಕಲ್ಯಾಣಿ ಹಾಗೂ ನದಿಗಳನ್ನು ಸ್ವಚ್ಛಗೊಳಿಸಲಾಯಿತು !

ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ಯಾವುದು ಯುವಕರನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತದೆಯೊ, ಅಂತಹ ರಾಷ್ಟ್ರ ಪ್ರೇಮವೇ ಒಂದು ದೊಡ್ಡ ಮಾಧ್ಯಮವಾಗಿದೆ.’ ನಾವು ಇದಕ್ಕೆ ಸಂಬಂಧಿಸಿದ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಿದೆವು, ಅದರ ಹೆಸರು ‘ಜಾಗೋ ಭಾರತ’ ಅದರಲ್ಲಿ ನಾವು ಹಾಡುವವರು ಮತ್ತು ವ್ಯಾಖ್ಯಾನ ನೀಡುವವರನ್ನು ಒಗ್ಗೂಡಿಸಿ ಕರ್ನಾಟಕದಲ್ಲಿನ ಪ್ರತಿಯೊಂದು ಮಹಾವಿದ್ಯಾಲಯದಲ್ಲಿ ಒಂದು ಕಾರ್ಯಕ್ರಮವನ್ನು ಮಾಡಿದೆವು. ಇದರ ಪರಿಣಾಮವೇನಾಯಿತೆಂದರೆ, ಈ ಕಾರ್ಯಕ್ರಮವನ್ನು ನೋಡಿದ ಮಹಾವಿದ್ಯಾಲಯದಲ್ಲಿನ ಅನೇಕ ಯುವಕರು ನಮ್ಮತ್ತ ಬರಲು ಆರಂಭಿಸಿದರು. ಈ ಯುವಕರನ್ನು ಧರ್ಮಾಧಾರಿತ ಕಾರ್ಯದಲ್ಲಿ ಜೋಡಿಸಿಕೊಂಡೆವು. ಇಂತಹ ಯುವಕರಿಂದ ಕರ್ನಾಟಕದಲ್ಲಿನ ೨೫೦ ದೇವಸ್ಥಾನಗಳಲ್ಲಿನ ಜಲಾಶಯ ಅಥವಾ ಕೊಳಗಳನ್ನು ಸ್ವಚ್ಛ ಮಾಡಿಸಿಕೊಂಡೆವು.

೨. ಕರ್ನಾಟಕದ ೧೦ ನದಿಗಳನ್ನು ‘ಜಲಜೀವನ’ ಆಂದೋಲನದ ಮೂಲಕ ಸ್ವಚ್ಛಗೊಳಿಸಲಾಯಿತು !

ಕಾವೇರಿ ನದಿಯ ಸ್ವಚ್ಛತೆ ಮಾಡುತ್ತಿರುವ ‘ಯುವಾ ಬ್ರಿಗೇಡ್‌’ನ ಕಾರ್ಯಕರ್ತರು

ಎರಡನೆಯ ಹಂತದಲ್ಲಿ ನಾವು ನದಿಗಳ ಸ್ವಚ್ಛತೆ ಮಾಡಿದೆವು. ಆ ಕಾರ್ಯಕ್ಕೆ ‘ಜಲಜೀವನ’ ಎಂದು ಹೆಸರಿಟ್ಟೆವು. ನಾವು ಇಡೀ ಕರ್ನಾಟಕದಲ್ಲಿ ಇಂತಹ ೧೦ ನದಿಗಳ ಸ್ವಚ್ಛತೆ ಮಾಡಿದೆವು. ಮೊದಲು ನಮ್ಮ ಕಾರ್ಯಕರ್ತರು ಅಲ್ಲಿಗೆ ಹೋಗಿ ಸ್ಥಳೀಯ ಕಾರ್ಯಕರ್ತರ ಸಹಾಯ ಪಡೆಯುತ್ತಿದ್ದರು.

ನಮ್ಮ ಕಾರ್ಯಕರ್ತರು ನದಿಗೆ ಇಳಿದು ಜನರು ನದಿಗೆ ಎಸೆದಿರುವ ಕಸಕಡ್ಡಿಗಳನ್ನು ಸಂಗ್ರಹಿಸಿ ಹೊರಗೆ ಎಸೆಯುತ್ತಿದ್ದರು. ಈ ಕಾರ್ಯವನ್ನು ನೋಡಲು ಅಲ್ಲಿನ ಸ್ಥಳೀಯ ಯುವಕರು ಬರುತ್ತಿದ್ದರು. ಅವರು ನಮ್ಮ ಕಾರ್ಯವನ್ನು ನೋಡಿ ಹೀಗೆ ಹೇಳಿದರು. ”ಇನ್ನು ಪ್ರತಿ ವರ್ಷ ನಾವೇ ಈ ನದಿಯನ್ನು ಸ್ವಚ್ಛಗೊಳಿಸುವೆವು.” ಈ ರೀತಿ ‘ನಾವೆಲ್ಲ ಯುವಕರು ಒಟ್ಟಾಗಿ ಈ ನದಿಯನ್ನು ಸ್ವಚ್ಛವಾಗಿಡಬೇಕು’, ಎನ್ನುವ ಭಾವನೆ ಅವರ ಮನಸ್ಸಿನಲ್ಲಿ ಜಾಗೃತವಾಯಿತು. ನಾವು ಕೇವಲ ನದಿಯನ್ನು ಸ್ವಚ್ಛಗೊಳಿಸಿ ಹಿಂತಿರುಗುತ್ತಿರಲಿಲ್ಲ, ನದಿಯ ಸ್ವಚ್ಛತೆಯಾದ ನಂತರ ನಾವು ಆ ನದಿಗೆ ಆರತಿ ಮಾಡುತ್ತಿದ್ದೆವು. ಈ ಆರತಿ ಮಾಡುವಾಗ ನಾವು, ”ಕಾಶಿಯ ಗಂಗಾ ನದಿಯಲ್ಲಿ ಹೀಗೆಯೆ ಆರತಿಯಾಗುತ್ತದೆ, ನೀವು ಅದನ್ನು ನೋಡಿರಬಹುದು. ನಮ್ಮ ಮೈಸೂರಿನ ಸಮೀಪವಿರುವ ನಂಜನಗೂಡಿನಲ್ಲಿ ನಾವು ಪ್ರತಿವರ್ಷ ‘ಕಪಿಲಾ ಆರತಿ’ ಮಾಡುತ್ತಿದ್ದೇವೆ.” ಅಲ್ಲಿನ ಸ್ಥಳೀಯ ಕಾರ್ಯಕರ್ತರು ಮೊದಲು ನಮ್ಮ ಜೊತೆಗೆ ಕೂಡಿಕೊಂಡಿರಲಿಲ್ಲ, ಈಗ ಅವರೇ ಈ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ ಹಾಗೂ ಅವರೆ ಸ್ವಯಂಸ್ಫೂರ್ತಿಯಿಂದ ಅಲ್ಲಿನ ದೇವಸ್ಥಾನಗಳನ್ನು ಮತ್ತು ನದಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಅನಂತರ ಪ್ರತಿವರ್ಷ ಹೀಗೆ ಆರತಿ ಮಾಡಲು ಪ್ರಯತ್ನಿಸುತ್ತಾರೆ. ಈ ರೀತಿ ಕರ್ನಾಟಕದಲ್ಲಿ ಪ್ರತಿವರ್ಷ ೫ ಕ್ಕಿಂತಲೂ ಹೆಚ್ಚು ನದಿಗಳ ಸ್ವಚ್ಚತೆಯಾಗುತ್ತದೆ ಹಾಗೂ ಅಲ್ಲಿ ಆರತಿ ಮಾಡಲಾಗುತ್ತದೆ, ಇದು ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ.

೩. ದೇವಸ್ಥಾನಗಳ ಸ್ವಚ್ಛತೆ ಮಾಡುವುದು

ಬಹಳಷ್ಟು ಜನರು ಹೇಳುತ್ತಾರೆ, ”ಇಂತಿಂತಹ ದೇವಸ್ಥಾನ ಅಸ್ವಚ್ಛವಾಗಿದೆ, ಆ ಪರಿಸರ ತುಂಬಾ ಹೊಲಸಾಗಿದೆ.” ಅನಂತರ ನಾವು ಅಲ್ಲಿಗೆ ಹೋಗಿ ಆ ದೇವಸ್ಥಾನವನ್ನು ಸಂಪೂರ್ಣ ಸ್ವಚ್ಛ ಮಾಡಿ ಅಲ್ಲಿನ ಕಾರ್ಯಕರ್ತರಿಗೆ ಒಪ್ಪಿಸಿ ಹೇಳುತ್ತಿದ್ದೆವು. ”ಇನ್ನು ಮುಂದೆ ನೀವೆ ಈ ದೇವಸ್ಥಾನವನ್ನು ಸ್ವಚ್ಛವಾಗಿಡಬೇಕು. ಹಿಂದೂಗಳು ದೇವಸ್ಥಾನಗಳನ್ನು ಸ್ವಚ್ಛವಾಗಿಡುವುದಿಲ್ಲವೆಂದು ಯಾರಾದರೂ ಹೇಳಿದರೆ ಅವರಿಗೆ ನಮ್ಮ ದೇವಸ್ಥಾನಗಳು ಸ್ವಚ್ಛವಾಗಿವೆಯೆಂಬುದನ್ನು ತೋರಿಸಿ ನಮ್ಮ ಹೆಸರನ್ನು ಕೆಡಿಸಬೇಡಿ, ಎಂದು ಹೇಳೋಣ.” ಈ ರೀತಿ ದೇವಸ್ಥಾನಗಳ ಸ್ವಚ್ಛತೆಯಲ್ಲಿ ನಾವು ಯುವಕರನ್ನು ಸೇರಿಸಿಕೊಂಡ ನಂತರ ಆ ಎಲ್ಲ ಯುವಕರು ಮತ್ತು ದೇವಸ್ಥಾನದಲ್ಲಿನ ಸಿಬ್ಬಂದಿಗಳು ನಮ್ಮ ಜೊತೆಗೆ ಕೂಡಿಕೊಂಡರು. ಹೊಸ ಯುವಕರು ದೇವಸ್ಥಾನ ಸ್ವಚ್ಛತೆಯ ಮೂಲಕ ನಮ್ಮ ಜೊತೆಗೆ ಬಂದರು.

೪. ‘ವಿವೇಕ ಜ್ಯೋತಿ ಯಾತ್ರಾ ಅಭಿಯಾನ’ದ ಮೂಲಕ ಜಾತಿಭೇದವನ್ನು ಅಳಿಸುವ ಹಾಗೂ ‘ಪಾದಯಾತ್ರಾ ಅಭಿಯಾನ’ದ ಮೂಲಕ ಮತಾಂತರವನ್ನು ತಡೆಗಟ್ಟುವ ಪ್ರಯತ್ನ

ನಂತರ ನಾವು ವಿಚಾರ ಮಾಡಿದೆವು, ಜಾತಿಭೇದದ ಸರಪಳಿಯನ್ನು ತುಂಡು ಮಾಡಲಿಕ್ಕಿದ್ದರೆ, ಕೆಲವು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅನಂತರ ನಮಗೆ ಸಿಕ್ಕಿದ ಎಲ್ಲ ಕಾರ್ಯಕರ್ತರನ್ನು ಕೂಡಿಸಿಕೊಂಡು ನಾವು ಕರ್ನಾಟಕದಲ್ಲಿ ಒಂದು ಪಾದಯಾತ್ರೆ ನಡೆಸಿದೆವು. ತಮ್ಮ ತಮ್ಮ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಮತಾಂತರವಾಗುತ್ತದೊ, ಆ ಊರಿನಲ್ಲಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸೇರುತ್ತಾರೆ. ನಾವು ಹೊಸತಾಗಿ ಮತಾಂತರವಾಗಿರುವ ಜನರ ಮನೆಗೆ ಹೋಗಿ ಅವರನ್ನು ಭೇಟಿಯಾಗಲು ಆರಂಭಿಸಿದೆವು. ಅವರಲ್ಲಿ ವಿಶ್ವಾಸ ತುಂಬಿಸುತ್ತಿದ್ದೆವು. ‘ನೀವು ಈಗಲೂ ಹಿಂದೂಗಳೇ ಆಗಿದ್ದೀರಿ, ನಾವು ನಿಮ್ಮ ಜೊತೆಗಿದ್ದೇವೆ. ನೀವು ಮತಾಂತರವಾಗಬಾರದು.’ ಈಗ ನಾವು ನಮ್ಮ ಜೊತೆಗಿರುವವರನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ, ಅದಕ್ಕಾಗಿ ನಾವು ‘ಪಾದಯಾತ್ರೆ ಅಭಿಯಾನ’ ಆರಂಭಿಸಿದೆವು. ನಾವು ‘ವಿವೇಕ ಜ್ಯೋತಿ ಯಾತ್ರಾ ಅಭಿಯಾನ’ವೆಂದು ಹಿಂದುಳಿದ ವರ್ಗದ ಜನರ ಮನೆಗೆ ಹೋಗಿ ಅವರೊಂದಿಗೆ ಕುಳಿತು ಭೋಜನ ಮಾಡುತ್ತಿದ್ದೆವು, ಅವರೊಂದಿಗೆ ಭಜನೆ ಮಾಡುತ್ತಿದ್ದೆವು, ಈ ರೀತಿ ಅವರೊಂದಿಗೆ ಮಿಶ್ರಣವಾಗತೊಡಗಿದೆವು. ನಾವು ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡಿದೆವು.

೫. ‘ಲವ್‌ ಜಿಹಾದ್‌’ನ ವಿರುದ್ಧ ಮಾಡುತ್ತಿದ್ದ ಕಾರ್ಯ

ಇನ್ನು ಮುಂದೆ ನಾವು ‘ಲವ್‌ ಜಿಹಾದ್‌’ನ ವಿಷಯದಲ್ಲಿ ಏನಾದರೂ ಕಾರ್ಯ ಮಾಡೋಣ’, ಎನ್ನುವ ವಿಚಾರ ಮಾಡಿದೆವು. ‘ಲವ್‌ ಜಿಹಾದ್‌’ನ ವಿರುದ್ಧ ನಾವು ಭಿತ್ತಿಪತ್ರಗಳನ್ನು ತಯಾರಿಸಿದ್ದೇವೆ. ನಾವು ಬಹಳಷ್ಟು ಹಿಂದೂ ಯುವತಿಯರಿಗೆ ತರಬೇತಿ ನೀಡಿದೆವು ಹಾಗೂ ಎಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿದ್ದರೂ ಅಲ್ಲಿ ‘ಲವ್‌ ಜಿಹಾದ್‌’ಗೆ ಸಂಬಂಧಿಸಿದ ಪ್ರಬೋಧನೆ ಮಾಡಲು ಒಂದು ಪ್ರದರ್ಶನ ಇಡಲಾಗುತ್ತದೆ. ತರಬೇತಿ ಪಡೆದ ಯುವತಿಯರು ಈ ಪ್ರದರ್ಶನಕ್ಕೆ ಬರುವ ಮಹಿಳೆಯರಿಗೆ, ಹುಡುಗಿಯರಿಗೆ ಮತ್ತು ಪುರುಷರಿಗೆ ‘ಭಾರತದಲ್ಲಿ ಲವ್‌ ಜಿಹಾದ್‌ ಹೇಗೆ ನಡೆಯುತ್ತಿದೆ ? ನಾವು ಅದರಿಂದ ಹೇಗೆ ದೂರವಿರಬೇಕು ? ನಮ್ಮನ್ನು ನಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ?’, ಇತ್ಯಾದಿ ವಿಷಯದಲ್ಲಿ ಪ್ರಬೋಧನೆ ಮಾಡಲಾಗುತ್ತಿದೆ.