ಪಂಜಾಬ್‌ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದಲ್ಲಿ ‘ಮುಸ್ಲಿಮ್‌ ವೈಯಕ್ತಿಕ ಕಾನೂನಿ’ಗನುಸಾರ ನಿರ್ಣಯ !

೧. ಅನುಮತಿ ಇಲ್ಲದೆ ಎರಡನೆ ವಿವಾಹವಾಗಿರುವುದರಿಂದ ಸೈನ್ಯದಲ್ಲಿ ಕಾರ್ಯನಿರತ ಸಿಬ್ಬಂದಿ ವಜಾ !

‘ಸೈನ್ಯದಲ್ಲಿದ್ದ ಒಬ್ಬ ಮುಸಲ್ಮಾನ ವ್ಯಕ್ತಿಯು ಅನುಮತಿ ಪಡೆಯದೆ ಎರಡನೇ ವಿವಾಹವಾದನು. ಅನಂತರ ಅವನ ವಿಚಾರಣೆ ನಡೆಸಿ ವಜಾಗೊಳಿಸಲಾಯಿತು. ಅದರ ವಿರುದ್ಧ ಅವನು ‘ಸಶಸ್ತ್ರ ಸೇನಾ ನ್ಯಾಯಾಧಿಕರಣ’ದಲ್ಲಿ (ಅರ್ಮ್‌ಡ್‌ ಫೋರ್ಸೆಸ್‌ ಟ್ರಿಬ್ಯೂನಲ್‌ನಲ್ಲಿ) ಅಪೀಲು ಮಾಡಿದನು. ಅಲ್ಲಿ ಅವನನ್ನು ನೌಕರಿಯಿಂದ ವಜಾ ಮಾಡಿದ ನಿರ್ಣಯವನ್ನು ಎತ್ತಿ ಹಿಡಿಯಲಾಯಿತು. ಅವನು ೨೦೦೫ ರಲ್ಲಿ ಸೈನ್ಯದಲ್ಲಿ ಸೇರ್ಪಡೆಯಾಗಿದ್ದನು. ಅನಂತರ ಅವನು ೨೦೦೯ ರಲ್ಲಿ ವಿವಾಹವಾಗಿ ಒಬ್ಬಳು ಮಗಳು ಜನಿಸಿದಳು. ಅನಂತರ ಅವನು ತನ್ನ ಮೊದಲ ಪತ್ನಿಗೆ ವಿಚ್ಛೇದನೆ ನೀಡಿದ್ದಾನೆಂದು ಹೇಳಲಾಗುತ್ತದೆ. ನಂತರ ಅವನು ಎರಡನೆ ವಿವಾಹವಾದನು. ನೌಕರಿಯಿಂದ ತೆಗೆದ ಕಾರಣಕ್ಕಾಗಿ ಅವನು ಪಂಜಾಬ್‌ ಹಾಗೂ ಹರ್ಯಾಣಾ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಿದನು. ಅಲ್ಲಿ ಅವನ ಯುಕ್ತಿವಾದ ಹೀಗಿತ್ತು, ‘ಮುಸಲ್ಮಾನ ವೈಯಕ್ತಿಕ ಕಾನೂನು ಪ್ರಕಾರ (‘ಮುಸ್ಲಿಮ್‌ ಪರ್ಸನಲ್‌ ಲಾ’ದ ಪ್ರಕಾರ) ಅವನು ೪ ಮಹಿಳೆಯರೊಂದಿಗೆ ವಿವಾಹವಾಗಬಹುದು. ೧೯೬೪ ರ ವಾಯುದಳದ ನಿಯಮಕ್ಕನುಸಾರ ಎರಡನೆ ವಿವಾಹವಾಗಲು ವಿಭಾಗದ ಅನುಮತಿ ಬೇಕಾಗುತ್ತದೆ, ಎಂಬುದು ತನಗೆ ತಿಳಿದಿರಲಿಲ್ಲ.’ ವಾಸ್ತವದಲ್ಲಿ ಕಾನೂನು ಪ್ರಕಾರ ಕಾನೂನಿನ ವಿಷಯದ ಅಜ್ಞಾನ ನ್ಯಾಯಾಲಯದಲ್ಲಿ ನಡೆಯುವುದಿಲ್ಲ. ಅವನು ಹೇಳುತ್ತಾನೆ, ‘ತನ್ನ ಇಬ್ಬರು ಪತ್ನಿಯರು, ವೃದ್ಧ ತಾಯಿ-ತಂದೆಯರ ಪಾಲನೆ ಪೋಷಣೆ, ಮನೆಯ ಕಂತು ಕಟ್ಟುವುದು ಇತ್ಯಾದಿ ಜವಾಬ್ದಾರಿಗಳಿವೆ. ಮೊದಲನೆ ಪತ್ನಿ ದೂರವಿರುವಾಗ ಇನ್ನೊಂದು ವಿವಾಹವಾದರೆ ಏನಾಗುತ್ತದೆ ?’

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ವಜಾ ಆದೇಶ ರದ್ದುಗೊಳಿಸಿದ ಪಂಜಾಬ್‌ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯ

ಆಶ್ಚರ್ಯದ ವಿಷಯವೆಂದರೆ, ಸೈನ್ಯದ ನಿಯಮಾವಳಿಯ ಕಲಮ್‌ ೫೭೯ ಕ್ಕನುಸಾರ ಮುಸಲ್ಮಾನ ಮತ್ತು ಗೋರ್ಖಾ ನೇಪಾಳಿಗಳು ಕೇಂದ್ರ ಸರಕಾರದ ಪೂರ್ವಾನುಮತಿಯಿಂದ ಎರಡನೆಯ ವಿವಾಹವಾಗಬಹುದು. ಅಂತಹ ಅನುಮತಿಯನ್ನು ಅವರು ಕೇಳಬಹುದು. ಅವನು ಮೊದಲ ಪತ್ನಿಗೆ ವಿಚ್ಛೇದನೆ ನೀಡಿದ್ದರೆ, ಅವನ ಪತ್ನಿ ಮಾನಸಿಕ ರೋಗಿ ಅಥವಾ ಅವಳು ಚಾರಿತ್ರ್ಯಹೀನಳೆಂದು ನ್ಯಾಯಾಲಯ ಘೋಷಿಸಿದ್ದರೆ, ಆಗ ಸರಕಾರ ಎರಡನೆಯ ವಿವಾಹಕ್ಕೆ ಅನುಮತಿ ನೀಡಬಹುದು. ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುವಾಗ ಮುಸಲ್ಮಾನ ವ್ಯಕ್ತಿ ವಿಳಂಬ ಮಾಡಿದ್ದನು ಹಾಗೂ ಅವನು ಎರಡನೆಯ ವಿವಾಹದ ಮೊದಲು ಕೇಂದ್ರ ಸರಕಾರದ ಅನುಮತಿ ಪಡೆದುಕೊಳ್ಳಲಿಲ್ಲ, ಎಂಬುದು ಸಿದ್ಧವಾಗಿತ್ತು. ಆದರೂ ಆಶ್ಚರ್ಯದ ಸಂಗತಿ ಏನೆಂದರೆ ಪಂಜಾಬ್‌ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ಅವನಿಗೆ ಕರುಣೆ ತೋರಿಸಿತು. ‘ಅವನು ಒಬ್ಬನೇ ಸಂಪಾದಿಸುವವನು ಹಾಗೂ ಅವನ ವರ್ತನೆ ಚೆನ್ನಾಗಿದೆ, ಸಂವಿಧಾನದ ಕಲಮ್‌ ೨೧ ಕ್ಕನುಸಾರ ನೌಕರಿ ಮಾಡಿ ಜೀವನ ನಡೆಸುವುದು, ಅವನ ಮೂಲಭೂತ ಹಕ್ಕಾಗಿದೆ’, ಎಂಬ ಕಾರಣ ನೀಡಿ ಅವನ ಅರ್ಜಿ ಸ್ವೀಕರಿಸಿ ವಜಾದ ಆದೇಶ ರದ್ದುಪಡಿಸಿತು.

೩. ಮುಸ್ಲಿಮ್‌ ವೈಯಕ್ತಿಕ ಕಾನೂನು ಪ್ರಕಾರ ನಿರ್ಣಯ

‘ಕೇಂದ್ರ ಸರಕಾರದ ಅನುಮತಿಯಿಲ್ಲದೆ ಹಾಗೂ ಮೊದಲ ಪತ್ನಿಗೆ ವಿಚ್ಛೇದನೆ ನೀಡದೆ ಸೈನ್ಯದಲ್ಲಿನ ವ್ಯಕ್ತಿಗೆ ಎರಡನೆ ವಿವಾಹವಾಗಲು ಸಾಧ್ಯವಿಲ್ಲ, ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಹಾಗೂ ವಿವಿಧ ಉಚ್ಚ ನ್ಯಾಯಾಲಯಗಳ ನಿರ್ಣಯಪತ್ರಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಿರುವಾಗ ಉಚ್ಚ ನ್ಯಾಯಾಲಯ ಹೀಗೆ ದಯೆ ತೋರಿಸುವುದು ಆಶ್ಚರ್ಯಕರವಾಗಿದೆ. ಅರ್ಜಿದಾರನು ಮುಸಲ್ಮಾನ ಎಂಬ ಒಂದೇ ಕಾರಣಕ್ಕಾಗಿ ಅವನ ಪರವಾಗಿ ಆದೇಶ ನೀಡುವುದು ಹಾಗೂ ಸಶಸ್ತ್ರ ಸೇನಾ ನ್ಯಾಯಾಧಿಕರಣ ನೀಡಿದ ವಜಾ ಆದೇಶವನ್ನು ರದ್ದು ಪಡಿಸುವುದು ಎಷ್ಟರಮಟ್ಟಿಗೆ ಯೋಗ್ಯ ? ಈ ಪ್ರಕರಣದಲ್ಲಿ ‘ಮುಸಲ್ಮಾನರಿಗೆ ಅವರ ವೈಯಕ್ತಿಕ ಕಾನೂನು ಒಂದಕ್ಕಿಂತ ಹೆಚ್ಚು ವಿವಾಹವಾಗಲು ಅನುಮತಿ ನೀಡುತ್ತದೆ’, ಎಂಬ ಆಧಾರ ನೀಡಿ ನ್ಯಾಯಾಲಯ ವಜಾದ ಆದೇಶವನ್ನು ರದ್ದುಪಡಿಸುತ್ತದೆ, ಎಂದು ಉಚ್ಚ ನ್ಯಾಯಾಲಯ ಹೇಳಿದೆ. ‘ಅವನ ಮೊದಲ ಪತ್ನಿ ಕೂಡ ಈ ವ್ಯಕ್ತಿಯ ಎರಡನೆಯ ವಿವಾಹದ ಬಗ್ಗೆ ಆಕ್ಷೇಪವೆತ್ತಿರಲಿಲ್ಲ; ಆದ್ದರಿಂದ ದಯೆ ತೋರಿಸುವುದು ಆವಶ್ಯಕ’, ಎಂದೂ ನ್ಯಾಯಾಲಯ ಹೇಳಿದೆ.

೪. ಜಾತ್ಯತೀತ ದೇಶದಲ್ಲಿ ಧರ್ಮಪಂಥಕ್ಕನುಸಾರ ಭೇದಭಾವ ಮಾಡುವುದು ಅಯೋಗ್ಯ !

ಕೇಂದ್ರ ಸರಕಾರದ ನಿಯಮಾವಳಿಯಲ್ಲಿ ಮುಸಲ್ಮಾನ ಅಥವಾ ಗೋರ್ಖಾ ನೇಪಾಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇಡುವುದು ಎಷ್ಟರಮಟ್ಟಿಗೆ ಯೋಗ್ಯವಾಗಿದೆ ? ‘ಭಾರತದಲ್ಲಿ ಸಮಾನ ನಾಗರಿಕ ಕಾನೂನು ಮಾಡಬೇಕು’, ಎಂದು ಭಾರತೀಯ ನಾಗರಿಕರ ಆಗ್ರಹವಿದೆ. ಅಲ್ಪಸಂಖ್ಯಾತರೆಂದು ಮುಸಲ್ಮಾನರನ್ನು ಓಲೈಸುವ ಈ ವಿಷಯದಲ್ಲಿ ಜನರಲ್ಲಿ ತೀವ್ರ ಸಂತಾಪವಿದೆ. ಅವರು ಬೇಕೆಂದಾಗ ‘ಮುಸ್ಲಿಮ್‌ ವೈಯಕ್ತಿಕ ಕಾನೂನಿನ ಶಸ್ತ್ರವನ್ನು ತೆಗೆಯತ್ತಾರೆ, ಆದರೆ ಅದನ್ನು ನ್ಯಾಯಾಲಯ ಉಪಯೋಗಿಸುವುದು ಅಯೋಗ್ಯವಾಗಿದೆ. ಇದು ಇತರ ಧರ್ಮದವರ ವಿಷಯದಲ್ಲಿ ನಡೆಯು ತ್ತಿದ್ದರೆ, ವಜಾದ ಕೃತಿಯನ್ನು ನ್ಯಾಯಾಲಯ ಯೋಗ್ಯ ವೆಂದು ಹೇಳುತ್ತಿತ್ತು. ಯಾರು ಸಂವಿಧಾನದ ಮೇಲೆ ವಿಶ್ವಾಸ ಇಡುತ್ತಾನೊ, ಅವನಿಗೆ ಜಾತಿ, ಪಂಥ ಹಾಗೂ ಧರ್ಮದ ಮೂಲಕ ಭೇದಭಾವ ಮಾಡಲು ಸಾಧ್ಯವಿಲ್ಲ, ಎಂದು ಅನಿಸುತ್ತದೆ. ಅವರಿಗೆ ಈ ನಿರ್ಣಯ ಆಘಾತಕಾರಿಯಾಗಿದೆ. ಆದ್ದರಿಂದ ತಕ್ಷಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಈ ನಿರ್ಣಯವನ್ನು ರದ್ದುಪಡಿಸುವುದು ಹಿತಕರವೆನಿಸುತ್ತದೆ. ಅದರ ಜೊತೆಗೆ ಕೇಂದ್ರ ಸರಕಾರ ಅದರ ‘ಸೇವಾ ನಿಯಮ’ (ಸರ್ವಿಸ್‌ ರೆಗ್ಯುಲೇಶನ್) ಬದಲಾಯಿಸುವ ಅವಶ್ಯಕತೆಯಿದೆ.

೫. ಮುಸ್ಲಿಮ್‌ ವೈಯಕ್ತಿಕ ಕಾನೂನಲ್ಲ, ಸಂವಿಧಾನಕ್ಕೆ ಅನುಸಾರ ನಿರ್ಣಯ ನೀಡಿದ ಕೇರಳ ಉಚ್ಚ ನ್ಯಾಯಾಲಯ !

ಕೇರಳದಲ್ಲಿನ ಒಂದು ಮಹಾವಿದ್ಯಾಲಯಕ್ಕೆ ಕೇರಳದ ಅಂದಿನ ಹಣಕಾಸುಮಂತ್ರಿ ಡಾ. ಥಾಮಸ್‌ ಆಯಝಾಕ್‌ ಇವರು ಭೇಟಿ ನೀಡಿದ್ದಾಗ ಅವರಿಗೆ ಪುಷ್ಪಗುಚ್ಛ ನೀಡಿ ಒಬ್ಬ ಮುಸಲ್ಮಾನ ಹುಡುಗಿ ಅವರೊಂದಿಗೆ ಹಸ್ತಲಾಘವ ಮಾಡಿದಳು. ಆಧುನಿಕ ಸಮಾಜದಲ್ಲಿ ಅದಕ್ಕೆ ಸುಶಿಕ್ಷಿತ ಅಥವಾ ಸುಸಂಸ್ಕೃತ ವೆನ್ನಲಾಗುತ್ತದೆ. ಇಲ್ಲಿ ಹಸ್ತಲಾಘವ ಮಾಡಿದವಳು ಮುಸ್ಲಿಮ್‌ ಎಂದು ಅವಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರವಾಯಿತು. ಅದರಲ್ಲಿ ‘ಅವಳು ಶರಿಯತ ಕಾನೂನಿನ ಉಲ್ಲಂಘಿಸಿ ಹಸ್ತಲಾಘವ ಮಾಡಿದಳು, ಅಂದರೆ ವ್ಯಭಿಚಾರ ಮಾಡಿದಳು’, ಎಂದೆಲ್ಲ ಆರೋಪಿಸ ಲಾಯಿತು. ಈ ಎಲ್ಲ ಘಟನೆಗಳಿಂದ ಅವಮಾನಿತಳಾದ ಆ ಹುಡುಗಿ ಅಬ್ದುಲ ನೌಶಾದ ಎಂಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿದಳು, ಈ ಪ್ರಕರಣದ ಖಟ್ಲೆ ನಡೆಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಮುಸಲ್ಮಾನ ಹುಡುಗಿಯನ್ನು ಅವಮಾನಿಸಿದವನು ಜಾಮೀನಿಗಾಗಿ ಕೇರಳ ಉಚ್ಚ ನ್ಯಾಯಾಲಯಕ್ಕೆ ಹೋದನು ಹಾಗೂ ಅವನ ವಿರುದ್ಧದ ಅಪರಾಧ ರದ್ದು ಪಡಿಸಲು ವಿನಂತಿಸಿದ.

ಇಲ್ಲಿ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಪಿ.ವಿ. ಉನ್ನಿಕೃಷ್ಣನ್‌ ಇವರು ನ್ಯಾಯಾಂಗ ನಿಯಮಕ್ಕನುಸಾರವ್ನೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಉಚ್ಚ ನ್ಯಾಯಾಲಯ ಸಂವಿಧಾನದ ಕಲಮ್‌ ೨೫ ರ ಆಧಾರದಲ್ಲಿ ಹೇಳಿದ ಅಂಶವೆಂದರೆ, ಪ್ರತಿಯೊಬ್ಬ ವ್ಯಕ್ತಿಗೂ ತನ್ನ ವಿಚಾರಶೈಲಿಗನುಸಾರ ವರ್ತಿಸುವ ಅಧಿಕಾರವಿದೆ. ಕೇವಲ ಕೈಕುಲುಕುವುದರಿಂದ ಇಸ್ಲಾಂಗೆ ಅವಮಾನ ಅಥವಾ ಶರಿಯತ ಕಾನೂನಿನ ಉಲ್ಲಂಘನೆಯಾಗಿದೆ, ಎನ್ನುವುದು ತಪ್ಪಾಗುತ್ತದೆ. ಹಸ್ತಲಾಘವವು ಶಿಷ್ಟಾಚಾರದ ಅಂಗವಾಗಿದೆ. ಈ ಘಟನೆಯನ್ನು ಇಸ್ಲಾಮ್‌ವಿರೋಧಿ ಎನ್ನಲಾಗುವುದಿಲ್ಲ. ಇದು ವೈಯಕ್ತಿಕ ವಿಷಯವಾಗಿದ್ದು ಇದನ್ನು ಇನ್ನೊಬ್ಬರ ಮೇಲೆ ಹೇರುವ ಹಾಗಿಲ್ಲ. ಎಂಬುದನ್ನು ಸ್ಪಷ್ಟ ಪಡಿಸಿ ನ್ಯಾಯಾಲಯ ಅವನ ಅರ್ಜಿಯನ್ನು ತಳ್ಳಿ ಹಾಕಿತು ಹಾಗೂ ಕ್ರಿಮಿನಲ್‌ ಅಪರಾಧವನ್ನು ದಾಖಲಿಸುವ ಪ್ರಕ್ರಿಯೆ ಯೋಗ್ಯವಾಗಿದೆಯೆಂದು ಹೇಳಿತು.

ಈ ಪ್ರಕರಣದಲ್ಲಿ ಭಾರತೀಯ ದಂಡಸಂಹಿತೆಯ ಕಲಮ್‌ ೧೫೩ ಮತ್ತು ಕೇರಳ ಪೊಲೀಸ್‌ ಕಾನೂನಿನ ಕಲಮ್‌ ೧೧೯ ಕ್ಕನ್ವಯ ಅಪರಾಧವನ್ನು ದಾಖಲಿಸಲಾಗಿತ್ತು. ಈ ಹಿಂದೆಯೂ ಕೇರಳ ಉಚ್ಚ ನ್ಯಾಯಾಲಯ ಎರಡನೆಯ ವಿವಾಹವಾಗುವುದು ಅಥವಾ ಅಪ್ರಾಪ್ತ ಹುಡುಗಿಯೊಂದಿಗೆ ವಿವಾಹವಾಗುವುದು ಅಪರಾಧವೆಂದು ನಿರ್ಣಯ ನೀಡಿತ್ತು. ಕೇರಳ ಉಚ್ಚ ನ್ಯಾಯಾಲಯ ‘ಭಾರತೀಯ ದಂಡ ಸಂಹಿತೆ ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ ಮತ್ತು ಭಾರತೀಯ ಸಂವಿಧಾನ ಈ ವಿಷಯ ಮುಸ್ಲಿಮ್‌ ವೈಯಕ್ತಿಕ ಕಾನೂನಿಗಿಂತ ಮೇಲಿದೆ’, ಎಂಬ ನಿಲುವನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಸೈನ್ಯದಲ್ಲಿನ ಮುಸಲ್ಮಾನ ಸಿಬ್ಬಂದಿ ವಿಷಯದಲ್ಲಿ ಪಂಜಾಬ್‌ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯ ನೀಡಿದ ನಿರ್ಣಯ ಕೇವಲ ಅಸಂಬದ್ಧ ಮಾತ್ರವಲ್ಲ, ಅದು ಕಾನೂನು ಬಾಹಿರ ಎಂದು ಅನಿಸಿದರೆ ಅದರಲ್ಲಿ ತಪ್ಪೇನಿದೆ. ನ್ಯಾಯಾಲಯದ ಆ ಬಗ್ಗೆ ಗಂಭೀರವಾಗಿ ವಿಚಾರ ಮಾಡುವುದು ಆವಶ್ಯಕವಾಗಿದೆ.

೬. ಕೇಂದ್ರ ಸರಕಾರ ತಕ್ಷಣ ಸಮಾನ ನಾಗರಿಕ ಕಾನೂನು ತರುವ ಅವಶ್ಯಕತೆಯಿದೆ

ಪಂಜಾಬ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ನೋಡುವಾಗ ಕೇಂದ್ರ ಸರಕಾರವು ತುರ್ತಾಗಿ ಸಮಾನ ನಾಗರಿಕ ಕಾನೂನು ತರುವುದು ಆವಶ್ಯಕ ವಾಗಿದೆ, ಎಂದೆನಿಸುತ್ತದೆ. ವಿವಾಹ, ಉದರ ಪೋಷಣೆ, ವಿಚ್ಛೇದನ, ಸಂತಾನ, ಸ್ಥಿರ-ಚರ ಆಸ್ತಿಯಲ್ಲಿನ ಪಾಲು ಇತ್ಯಾದಿ ವಿಷಯದಲ್ಲಿ ದೇಶದಲ್ಲಿ ಒಂದೇ ಕಾನೂನು ಇರಬೇಕು. ಇದರ ಜೊತೆಗೆ ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು ಮಾಡಿರುವ ಸೇವಾ ನಿಯಮಗಳಲ್ಲಿಯೂ ಸಮಾನ ನಾಗರಿಕ ಕಾನೂನು ಮಾಡಿರುವುದನ್ನು ಕಾಣಿಸಬೇಕು; ಏಕೆಂದರೆ ಇಂತಹ ಸೇವಾ ನಿಯಮಗಳಿಂದ ಧರ್ಮ ಹಾಗೂ ಪಂಥಗಳ ಆಧಾರದಲ್ಲಿ ಸೌಲಭ್ಯಗಳನ್ನು ಕೊಡುತ್ತಿದ್ದರೆ, ಅದು ಬೇರೆಯವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸಂಕ್ಷಿಪ್ತದಲ್ಲಿ ಸಮಾನ ನಾಗರಿಕ ಕಾನೂನು ಎಲ್ಲ ಕ್ಷೇತ್ರದಲ್ಲಿ ಆವಶ್ಯಕತೆಯಿದೆ. (೨೧.೧೦.೨೦೨೪)

|| ಶ್ರೀಕೃಷ್ಣಾರ್ಪಣಮಸ್ತು ||

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ