ಠಾಣೆ, ಮಾರ್ಚ್ ೧೦ (ವಾರ್ತಾ) – ಛತ್ರಪತಿ ಶಿವಾಜಿ ಮಹಾರಾಜರ ವಿಚಾರ, ಧೋರಣೆ, ಪರಾಕ್ರಮ ಮತ್ತು ತೇಜೋಮಯ ಇತಿಹಾಸವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಲು, ಭಿವಂಡಿಯ ಮರಾಡೆ ಪಾಡಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ದೇವಾಲಯವನ್ನು ನಿರ್ಮಿಸಲಾಗಿದೆ. ಕೋಟೆ-ದುರ್ಗಗಳ ಮಾದರಿಯಲ್ಲಿ ದೇಶದ ವಿವಿಧ ದೇವಾಲಯಗಳ ಶೈಲಿಗಳ ಪ್ರಭಾವವನ್ನು ಹೊಂದಿರುವ ಈ ದೇವಾಲಯದ ವಿಸ್ತೀರ್ಣ ಎರಡೂವರೆ ಸಾವಿರ ಚದರ ಅಡಿಗಳಾಗಿದ್ದು, ಕೋಟೆಯ ಗೋಡೆ ಐದು ಸಾವಿರ ಚದರ ಅಡಿಗಳಷ್ಟಿದೆ. ಈ ದೇವಾಲಯ ನಾಲ್ಕು ಎಕರೆ ಜಾಗದಲ್ಲಿ ವಿಸ್ತರಿಸಿದೆ. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ತಿಥಿಯಂತೆ, ಮಾರ್ಚ್ ೧೪ ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಂದ ದೇವಾಲಯದ ಲೋಕಾರ್ಪಣೆ ಸಮಾರಂಭ ನಡೆಯಲಿದೆ.
೧. ‘ಶಿವಕ್ರಾಂತಿ ಪ್ರತಿಷ್ಠಾನ ಟ್ರಸ್ಟ್’ ಸಂಸ್ಥೆಯ ಸಂಸ್ಥಾಪಕ-ಅಧ್ಯಕ್ಷ ಮತ್ತು ಮುಖ್ಯ ಟ್ರಸ್ಟಿ ಡಾ. ರಾಜು ಚೌಧರಿ ಅವರಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ.
೨. ದೇವಾಲಯಕ್ಕೆ ಸುಮಾರು ೭ ರಿಂದ ೮ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ಕೆಲವು ಖರ್ಚುಗಳನ್ನು ಪ್ರತಿಷ್ಠಾನದ ವತಿಯಿಂದ ಮತ್ತು ಕೆಲವು ಖರ್ಚುಗಳನ್ನು ಸಾರ್ವಜನಿಕ ದೇಣಿಗೆಯಿಂದ ಮಾಡಲಾಗಿದೆ. ಹ.ಭ.ಪ. ಡಾ. ಕೈಲಾಸ್ ಮಹಾರಾಜ ನಿಚಿತೆ ಅವರ ಮಾರ್ಗದರ್ಶನದಲ್ಲಿ ಈ ದೇವಾಲಯದ ರೂಪರೇಷೆಗಳನ್ನು ಮಾಡಲಾಗಿದ್ದು, ಇಂಜಿನಿಯರ್ ಮತ್ತು ವಾಸ್ತುಶಿಲ್ಪಿ ವಿಜಯಕುಮಾರ್ ಪಾಟೀಲ್ ಅವರು ದೇವಾಲಯದ ನಿರ್ಮಾಣ ಮಾಡಿದ್ದಾರೆ.
೩. ಮಾರ್ಚ್ ೧೪ ರಿಂದ ಮಾರ್ಚ್ ೧೭ ರವರೆಗೆ, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ಪ್ರಾಣ ಪ್ರತಿಷ್ಠೆ, ಆಧ್ಯಾತ್ಮಿಕ ದಿನ, ಸಾಂಸ್ಕೃತಿಕ ದಿನ ಮತ್ತು ಐತಿಹಾಸಿಕ ದಿನದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
೪. ದೇವಾಲಯದ ಪ್ರವೇಶದ್ವಾರದ ಎತ್ತರ ೪೨ ಅಡಿಗಳಾಗಿದ್ದು, ದೇವಾಲಯದ ಮೇಲೆ ಒಟ್ಟು ೫ ಗೋಪುರಗಳಿವೆ. ಗರ್ಭಗುಡಿಯ ಬಳಿ ೪೨ ಅಡಿಗಳ ಸಭಾ ಮಂಟಪ ಹಾಗೂ ೪ ಮೂಲೆಗಳಲ್ಲಿ ದುಂಡಗಿನ ಬುರುಜುಗಳಿದ್ದು, ಕಾವಲು ಮಾರ್ಗವನ್ನು ನಿರ್ಮಿಸಲಾಗಿದೆ. ಕೋಟೆಯ ಗೋಡೆಯ ಒಳಗೆ ೩೬ ವಿಭಾಗಗಳಿದ್ದು, ಅದರ ಮೇಲೆ ಭವ್ಯವಾದ ಶಿಲ್ಪಗಳನ್ನು ನಿರ್ಮಿಸಲಾಗಿದೆ. ಇದರ ಮೂಲಕ ಇತಿಹಾಸದ ದರ್ಶನ ಮಾಡಿಸಲಾಗಿದೆ.
೫. ದೇವಾಲಯದ ಎಲ್ಲಾ ಕಂಬಗಳು ಕೆತ್ತನೆಯನ್ನು ಹೊಂದಿದ್ದು, ಅವುಗಳ ಮೇಲೆ ಮೆಹರಬ್ ಕಮಾನುಗಳಿವೆ. ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಆರೂವರೆ ಅಡಿಗಳಾಗಿದ್ದು, ಅಯೋಧ್ಯೆಯ ಶ್ರೀರಾಮನ ಮೂರ್ತಿಯನ್ನು ಕೆತ್ತಿದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಕೆತ್ತಲ್ಪಟ್ಟಿದೆ.