ದಿಶಾ ಸಾಲಿಯಾನ್ ಅನುಮಾನಾಸ್ಪದ ಸಾವಿನ ಪ್ರಕರಣ; ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ ಆಡಳಿತ ಪಕ್ಷ !

ಮಹಾವಿಕಾಸ ಅಘಾಡಿಯ ಪ್ರಭಾವಿ ಸಚಿವರ ಕೈವಾಡವಿದೆ ಎಂದು ಶಾಸಕ ಅಮಿತ್ ಸಾಟಮ್ ಆರೋಪ

ದಿಶಾ ಸಲಿಯಾನ್ (ಎಡಬದಿಗೆ), ಅಮಿತ್ ಸಾಟಮ್ (ಬಲಬದಿಗೆ)

ಮುಂಬಯಿ ,ಮಾರ್ಚ್ 20 (ವಾರ್ತೆ.) – ದಿಶಾ ಸಲಿಯಾನ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ತಂದೆ ಸತೀಶ್ ಸಲಿಯಾನ್ ಆರೋಪಿಸಿದ್ದು ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಹಾವಿಕಾಸ ಅಘಾಡಿಯ ಪ್ರಭಾವಿ ಸಚಿವರೊಬ್ಬರು ಕೊಲೆಯ ಹಿಂದಿದ್ದಾರೆ, ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ಶಾಸಕ ಅಮಿತ್ ಸಾಟಮ್ ಮಾರ್ಚ್ 20 ರಂದು ವಿಧಾನಸಭೆಯಲ್ಲಿ ನಿಯಮಗಳ ಅಡಿಯಲ್ಲಿ ಒತ್ತಾಯಿಸಿದರು. ಸದನದಲ್ಲಿ ಬಿಜೆಪಿ ಮತ್ತು ಶಿವಸೇನೆಯ ಶಾಸಕರು ಸ್ಪೀಕರ್ ಸೀಟಿನ ಮುಂದೆ ಬಂದು ಆರೋಪಿಯ ಬಂಧನಕ್ಕೆ ಒತ್ತಾಯಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾದ ಕಾರಣ ಸ್ಪೀಕರ್ ರಾಹುಲ್ ನಾರ್ವೇಕರ್ 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.

ಸದನ ಮತ್ತೆ ಆರಂಭವಾದಾಗ ಸ್ಪೀಕರ್ ರಾಹುಲ್ ನಾರ್ವೇಕರ್ ಮುಖ್ಯ ಸೂಚನೆಯನ್ನು ನೀಡಿದರು; ಆದರೆ ಆಡಳಿತ ಪಕ್ಷದ ಶಾಸಕರು ದಿಶಾ ಸಲಿಯಾನ್ ಸಾವಿನ ತನಿಖೆಯ ವಿಷಯವನ್ನು ಮತ್ತೊಮ್ಮೆ ಎತ್ತಿದರು. ಈ ವೇಳೆ ಬಿಜೆಪಿ ಶಾಸಕ ಅಮಿತ್ ಸಾಟಮ್ ಮಾತನಾಡಿ, “ದಿಶಾ ಸಲಿಯಾನ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಡಿಸೆಂಬರ್ 2022 ರಂದು ವಿಶೇಷ ಪೊಲೀಸ್ ತಂಡವನ್ನು ನೇಮಿಸಲಾಯಿತು; ಆದರೆ ನಾಲ್ಕು ವರ್ಷಗಳಾದರೂ ಈ ತಂಡದ ವರದಿ ಇನ್ನೂ ಬಂದಿಲ್ಲ. ದಿಶಾ ಸಲಿಯಾನ್ ಸಾವಿನ ನಂತರ, ಮುಂಬಯಿನ ಆಗಿನ ಮೇಯರ್ ಅವರು ದಿಶಾ ಅವರ ಕುಟುಂಬದವರ ಮೇಲೆ ಒತ್ತಡ ಹೇರಿ ಮಾಧ್ಯಮಗಳ ಮುಂದೆ ಹೋಗದಂತೆ ತಡೆದರು. ದಿಶಾ ಸಲಿಯಾನ್ ಸಾವಿನಲ್ಲಿ ಮಹಾವಿಕಾಸ ಅಘಾಡಿ ಸರಕಾರದ ಸಚಿವರೊಬ್ಬರ ಕೈವಾಡ ಸಹ ಇದೆ ಎಂಬ ಅನುಮಾನವಿದೆ. ದಿಶಾಳ ತಂದೆ ಈ ಕೊಲೆಯ ಹಿಂದೆ ಆಕೆಯ 4 ಸ್ನೇಹಿತರು, ಸಚಿವರು ಮತ್ತು ಮುಂಬಯಿನ ಆಗಿನ ಮೇಯರ್ ಇರಬಹುದೆಂದು ಹೇಳಿದ್ದರು. ಈ ಎಲ್ಲರನ್ನೂ ವಿಶೇಷ ಪೊಲೀಸ್ ತಂಡದಿಂದ ತನಿಖೆ ನಡೆಸಬೇಕು” ಎಂದು ಅಮಿತ್ ಸಾಟಮ್ ಆಗ್ರಹಿಸಿದರು.

ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಸುಪ್ರೀಂ ಕೋರ್ಟ್ ನ ಒಂದು ತೀರ್ಪಿನ ಪ್ರಕಾರ, ಇಂತಹ ಗಂಭೀರ ಪ್ರಕರಣಗಳಲ್ಲಿ ತನಿಖೆಗಾಗಿ ಆರೋಪಿಗಳನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.

ನ್ಯಾಯಾಲಯಕ್ಕೆ ಯೋಗ್ಯ ಸಹಕಾರ ನೀಡುವೆವು ! – ಯೋಗೇಶ್ ಕದಮ, ಗೃಹ ಖಾತೆ ರಾಜ್ಯ ಸಚಿವರು (ನಗರ)

ದಿಶಾ ಸಲಿಯಾನ್ ಅವರ ತಂದೆ ನ್ಯಾಯಾಲಯಕ್ಕೆ ಹೋಗಿದ್ದು, ಈ ಪ್ರಕರಣದಲ್ಲಿ ಸರಕಾರವನ್ನು ಕಕ್ಷಿದಾರನ್ನಾಗಿ ಮಾಡಿದೆ. ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷವಿದ್ದರೂ ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ನ್ಯಾಯಾಲಯಕ್ಕೆ ಯೋಗ್ಯ ಸಹಕಾರ ನೀಡುವೆವು ಎಂದು ಹೇಳಿದರು.