ಶ್ರೀ ಲಕ್ಷ್ಮೀದೇವಿಯು ಯಾರ ಮನೆಯಲ್ಲಿ ನೆಲೆಸುತ್ತಾಳೆ ?

ಒಂದು ದಿನ ಧರ್ಮರಾಜ ಯುಧಿಷ್ಠರನು ಪಿತಾಮಹ ಭೀಷ್ಮರಿಗೆ, “ಪಿತಾಮಹ ! ಏನು ಮಾಡಿದರೆ ಮನುಷ್ಯನು ದುಃಖವಿಲ್ಲದೇ ಜೀವಿಸಬಹುದು ? ಯಾವ ಉಪಾಯದಿಂದ, ‘ಓರ್ವ ಮನುಷ್ಯನು ದುಃಖದಲ್ಲಿರುವನು ಅಥವಾ ಸುಖದಲ್ಲಿರುವನು ?’ ಎಂದು ತಿಳಿಯಬಹುದು. ಯಾರ ಭವಿಷ್ಯ ಉಜ್ವಲವಾಗುವುದು ಮತ್ತು ಯಾರದು ಪತನವಾಗುವುದು ? ಎಂದು ಹೇಗೆ ತಿಳಿಯುವುದು” ಎಂದು ಕೇಳಿದನು. ಅದಕ್ಕೆ ಪಿತಾಮಹ ಭೀಷ್ಮರು, ‘ಪುತ್ರನೇ ಈ ಬಗ್ಗೆ ನಿನಗೆ ಒಂದು ಪ್ರಾಚೀನ ಕಥೆ ಹೇಳುತ್ತೇನೆ’ ಎಂದರು.

ಒಮ್ಮೆ ಇಂದ್ರ ಮತ್ತು ವರುಣರು ಒಂದು ನದಿಯ ಹತ್ತಿರದಿಂದ ಸಾಗುತ್ತಿದ್ದರು. ಅವರು ಸೂರ್ಯನ ಮೊದಲ ಕಿರಣ ಹೊರಹೊಮ್ಮುವ ಮೊದಲೇ ನದಿಯ ದಡವನ್ನು ತಲುಪಿದರು ಮತ್ತು ಅವರು, ದೇವರ್ಷಿ ನಾರದರೂ ಅಲ್ಲಿಗೆ ಬಂದಿರುವುದನ್ನು ನೋಡಿದರು. ದೇವರ್ಷಿ ನಾರದರು ನದಿಯಲ್ಲಿ ಸ್ನಾನ ಮಾಡಿ ಮೌನದಿಂದ ಜಪ ಮಾಡುತ್ತಾ ಸೂರ್ಯನಾರಾಯಣನಿಗೆ ಅರ್ಘ್ಯ ನೀಡಿದರು. ಅಷ್ಟರಲ್ಲೇ ಸೂರ್ಯನಾರಾಯಣನ ಕೋಮಲ ಕಿರಣಗಳು ಭೂಮಿಯ ಮೇಲೆ ಬೀಳತೊಡಗಿದವು ಮತ್ತು ಒಂದು ಕಮಲದ ಮೇಲೆ ಅದ್ಭುತವಾದ ಬೆಳಕು ಹರಡಿತು. ಇಂದ್ರ ಮತ್ತು ನಾರದರು ಆ ಬೆಳಕಿನ ಕಿರಣಗಳತ್ತ ಹತ್ತಿರದಿಂದ ನೋಡಿದರು, ಅದರಲ್ಲಿ ಮಾತೆ ಲಕ್ಷ್ಮೀ ಪ್ರತ್ಯಕ್ಷಳಾಗಿದ್ದಳು. ಇಬ್ಬರೂ ಮಾತೆ ಲಕ್ಷ್ಮೀಗೆ ನಮ್ರತೆಯಿಂದ ನಮಸ್ಕರಿಸಿ, “ಮಾತೆ ! ಸಮುದ್ರ ಮಂಥನದ ನಂತರ ತಾವು ಪ್ರತ್ಯಕ್ಷರಾಗಿದ್ದಿರಿ. ಜನರು ಎಲ್ಲೆಡೆ ನಿಮ್ಮನ್ನು ಪೂಜಿಸುತ್ತಾರೆ. ಹೇ ಮಾತೇಶ್ವರಿ ! ತಾವು ಯಾರ ಮೇಲೆ ಪ್ರಸನ್ನರಾಗುವಿರಿ ? ತಾವು ಯಾರ ಮನೆಯಲ್ಲಿ ಸ್ಥಿರವಾಗಿ ಉಳಿಯುವಿರಿ ? ಮತ್ತು ತಾವು ಯಾರ ಮನೆಯಿಂದ ಹೋಗುವಿರಿ ? ತಮ್ಮ ಸಂಪತ್ತಿನಿಂದ ಯಾರನ್ನು ಮರುಳು ಮಾಡಿ ಸಂಸಾರದಲ್ಲಿ ದಾರಿ ತಪ್ಪಿಸುವಿರಿ ? ಮತ್ತು ಯಾರನ್ನು ನಿಜವಾದ ಸಂಪತ್ತಾದ ಭಗವಾನ ನಾರಾಯಣನೊಂದಿಗೆ ಭೇಟಿ ಮಾಡಿಸುವಿರಿ ? ಎಂಬುದನ್ನು ಹೇಳಬೇಕು” ಎಂದು ಕೇಳಿದರು.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಲಕ್ಷ್ಮೀದೇವಿಯು ಹೇಳಿದಳು, ‘ದೇವರ್ಷಿ ನಾರದರೇ ಮತ್ತು ದೇವೇಂದ್ರ ! ನೀವಿಬ್ಬರೂ ಜನರ ಕಲ್ಯಾಣಕ್ಕಾಗಿ, ಮಾನವ-ಸಮಾಜದ ಹಿತಕ್ಕಾಗಿ ಈ ಪ್ರಶ್ನೆ ಕೇಳಿದ್ದೀರಿ. ಆದುದರಿಂದ ಕೇಳಿ. ಮೊದಲು ನಾನು ರಾಕ್ಷಸರ ಬಳಿ ಇರುತ್ತಿದ್ದೆನು; ಏಕೆಂದರೆ ಅವರು ಪುರುಷಾರ್ಥಿಗಳಾಗಿದ್ದರು, ಸತ್ಯವನ್ನು ನುಡಿಯುತ್ತಿದ್ದರು, ವಚನಬದ್ಧರಾಗಿದ್ದರು, ಕರ್ತವ್ಯಪಾಲಕರಾಗಿದ್ದರು. ಅತಿಥಿಸತ್ಕಾರ ಮಾಡುತ್ತಿದ್ದರು. ಸಜ್ಜನರನ್ನು ಗೌರವಿಸುತ್ತಿದ್ದರು ಮತ್ತು ದುಷ್ಟರೊಂದಿಗೆ ಯುದ್ಧ ಮಾಡುತ್ತಿದ್ದರು. ಯಾವಾಗ ಅವರ ಸದ್ಗುಣಗಳು ದುರ್ಗುಣಗಳಲ್ಲಿ ಬದಲಾಗತೊಡಗಿದವೋ, ಅಂದಿನಿಂದ ನಾನು ನಿಮ್ಮ ಹತ್ತಿರ ದೇವಲೋಕಕ್ಕೆ ಬರತೊಡಗಿದೆನು.ತಿಳುವಳಿಕೆಯುಳ್ಳವರು ಉದ್ಯೋಗ ಮಾಡಿ ನನ್ನನ್ನು ಪ್ರಾಪ್ತಮಾಡಿಕೊಳ್ಳುತ್ತಾರೆ. ದಾನ ಮಾಡುವ ಮೂಲಕ ನನ್ನನ್ನು ವಿಸ್ತರಿಸುತ್ತಾರೆ. ಸಂಯಮದಿಂದ ನನ್ನನ್ನು ಸ್ಥಿರಗೊಳಿಸುತ್ತಾರೆ ಮತ್ತು ಸತ್ಕರ್ಮಗಳನ್ನು ಮಾಡಲು ನನ್ನನ್ನು ಬಳಸಿಕೊಂಡು ಭಗವಂತನ ಪ್ರಾಪ್ತಿಗಾಗಿ ಪ್ರಯತ್ನಿಸುತ್ತಾರೆ. ಸೂರ್ಯೋದಯವಾಗುವ ಮೊದಲು ಎದ್ದು ಸ್ನಾನವನ್ನು ಮಾಡುವವರು, ಸತ್ಯವನ್ನು ನುಡಿಯುವವರು, ತಮ್ಮ ಮಾತುಗಳಿಗೆ ತಕ್ಕಂತೆ ನಡೆದುಕೊಳ್ಳುವವರು, ಪುರುಷಾರ್ಥಿಗಳು, ಕರ್ತವ್ಯಪಾಲನೆ ಸರಿಯಾಗಿ ಮಾಡುವವರು, ಕಾರಣವಿಲ್ಲದೇ ಯಾರನ್ನೂ ದಂಡಿಸದಿರುವವರು, ಎಲ್ಲಿ ಉದ್ಯೋಗ, ಸಾಹಸ, ಧೈರ್ಯ ಮತ್ತು ಬುದ್ಧಿಯ ವಿಕಾಸವಾಗುತ್ತದೆಯೋ ಮತ್ತು ಭಗವದ್ ಪ್ರಾಪ್ತಿಗಾಗಿ ಪ್ರಯತ್ನವಾಗುತ್ತದೆಯೋ, ಅಲ್ಲಿ ನಾನು ವಾಸಿಸುತ್ತೇನೆ. ಸರಳ ಸ್ವಭಾವದ, ದೃಢವಾದ ಭಕ್ತಿಯನ್ನು ಮಾಡುವ, ಮೃದು ಮಾತಿನ, ನಮ್ರತೆಯ, ವಿವೇಕವುಳ್ಳ, ತತ್ಪರತೆ ಈ ಸದ್ಗುಣಗಳು ಯಾವ ಮನೆಯ ವ್ಯಕ್ತಿಗಳಲ್ಲಿವೆಯೋ, ನಾನು ಅಲ್ಲಿ ವಾಸಿಸುತ್ತೇನೆ’.

ಬೆಳಗ್ಗೆ ಕಸ ಗುಡಿಸಿ ಮನೆಯನ್ನು ಸ್ವಚ್ಛವಾಗಿಡುವವರ, ದೇವಭಕ್ತರ, ಸತ್ಯವಚನಿಗಳ, ಈಶ್ವರನಿಗೆ ಇಷ್ಟವಾಗುವಂತೆ ವರ್ತಿಸುವ ಮತ್ತು ಇತರರಿಗೆ ಆನಂದ ನೀಡುವ ಜನರ ಮನೆಯಲ್ಲಿಯೇ ಇರಲು ದೇವಿಗೆ ಇಷ್ಟವಾಗುತ್ತದೆ. ನನ್ನನ್ನು ಸ್ಥಿರವಾಗಿಟ್ಟುಕೊಳ್ಳಲು ಇಚ್ಛಿಸುವವರು ಎಂದಿಗೂ ರಾತ್ರಿ ಸಮಯದಲ್ಲಿ ಮನೆಯ ಕಸವನ್ನು ಗುಡಿಸಬಾರದು. ಯಾರ ಮನೆಯಲ್ಲಿ ಸದ್ಗುಣಶೀಲ, ಕರ್ತವ್ಯನಿಷ್ಠ, ಸಂಯಮಿ, ಧರ್ಮನಿಷ್ಠ, ದೇವಭಕ್ತ ಮತ್ತು ಕ್ಷಮಾಶೀಲ ಪುರುಷರು ಮತ್ತು ಸದ್ಗುಣಿ ಮತ್ತು ಪತಿವ್ರತಾ ಮಹಿಳೆಯರು ವಾಸಿಸುತ್ತಾರೆಯೋ, ಅಂತಹ ಮನೆಯಲ್ಲಿ ದೇವಿ ಲಕ್ಷ್ಮೀಯು ನೆಲೆಸುತ್ತಾಳೆ. ಪ್ರಸ್ತುತ ಧರ್ಮಪಾಲಿಸದ ಕಾರಣ ಎಲ್ಲೆಡೆ ಅನಾಚಾರ, ಅನೈತಿಕತೆ ಹೆಚ್ಚಾಗಿದೆ. ಇಂತಹ ಸ್ಥಿತಿಯಲ್ಲಿ ದೇವಿ ಲಕ್ಷ್ಮೀಯು ಆ ಮನೆಯಲ್ಲಿ ನೆಲೆಸಬಹುದೇ ? ಧರ್ಮಕ್ಕನುಸಾರ ಪಾಲಿಸುವುದು, ಧರ್ಮ ಮತ್ತು ರಾಷ್ಟ್ರ ಇವುಗಳ ಬಗ್ಗೆ ಜಾಗರೂಕರಾಗಿದ್ದು ದಕ್ಷತೆಯಿಂದ ಕರ್ತವ್ಯ ಪಾಲಿಸುವುದು ಇತ್ಯಾದಿಗಳಿಂದಲೇ ದೇವಿ ಲಕ್ಷ್ಮೀಯ ಕೃಪೆಯಾಗಿ ಮನೆಯಲ್ಲಿ ನೆಲೆಸುವಳು. – (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.