ದಕ್ಷಿಣ ಭಾರತದಲ್ಲಿ ದಸರಾ, ಶರನ್ನವರಾತ್ರಿಯ ಪೂಜೆಯನ್ನು ವಿಜಯನಗರದ ಅರಸು ಕೃಷ್ಣದೇವರಾಯನ ಕಾಲದಲ್ಲಿ ವೈಭವೀಕರಣ ಮಾಡಿದಂತೆ ಕಂಡು ಬರುತ್ತದೆ. ವಿಜಯನಗರದ ಪತನದ ನಂತರ ‘ರಾಜ ಒಡೆಯರ’ ಕಾಲದಿಂದ ಮೈಸೂರು ದಸರೆಯು ಪ್ರಸಿದ್ಧಿಯನ್ನು ಹೊಂದಿದೆ. ನಾಡಹಬ್ಬ ದಸರಾವನ್ನು ಮೈಸೂರು ಅರಮನೆಯಲ್ಲಿ ಅತ್ಯಂತ ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಶಾಸ್ತ್ರ ಗ್ರಂಥಗಳ ಆಧಾರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಆಶ್ವಯುಜ ಶುಕ್ಲ ಪಾಡ್ಯದಿಂದ ವಿಜಯದಶಮಿ ವರೆಗೆ ನಡೆಯುತ್ತವೆ. ಅದರ ಕಿರು ಮಾಹಿತಿ.
ಒಂಬತ್ತು ದಿನವೂ ಹಗಲು-ರಾತ್ರಿ ಪುರಾಣಗಳ ಪಠಣ ಮತ್ತು ಪಾರಾಯಣವು ನಡೆಯುತ್ತದೆ. ಮಹಾರಾಜರು ಪ್ರತಿದಿನ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ. ಪ್ರತಿದಿನ ಜಟ್ಟಿಗಳ ಮಲ್ಲಯುದ್ಧ, ಸೈನಿಕರ ಕವಾಯಿತು, ಬಾಣ-ಬಿರುಸುಗಳ ಪ್ರದರ್ಶನ, ವಿವಿಧ ಕಲಾಪ್ರಕಾರಗಳ ನೃತ್ಯ, ಗಾಯನ, ಜಾನಪದ ಕಾರ್ಯಕ್ರಮ ಮುಂತಾದವುಗಳನ್ನು ಒಡೆಯರು ಅವಲೋಕಿಸುತ್ತಾರೆ. ಏಳನೆಯ ದಿನ ಅರಮನೆಯ ಒಳ ಆವರಣದಲ್ಲಿ ಮಹಾರಾಜರಿಂದ ಸರಸ್ವತಿ ಪೂಜೆ ನಡೆಯುತ್ತದೆ. ಎಂಟನೆಯ ದಿನವನ್ನು ಕಾಲರಾತ್ರಿ ಎಂದು ಕರೆಯುತ್ತಾರೆ. ಆ ರಾತ್ರಿ ಪಾರಂಪರಿಕವಾಗಿ ಬಂದಿರುವ ಪದ್ಧತಿಯಂತೆ ಮಹಿಷಾಸುರ ಮರ್ದನ ಕಾರ್ಯಕ್ರಮವು ಆಚರಿಸಲ್ಪಡುತ್ತದೆ. ಒಂಬತ್ತನೆಯ ದಿನ ಮಹಾನವಮಿ ಆಯುಧ ಗಳು ಮತ್ತು ವಿವಿಧ ಉಪಕರಣಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಪಟ್ಟದ ಆನೆ, ಕುದುರೆ, ಹಸುಗಳ ಪೂಜೆ ಮಾಡಲಾಗುತ್ತದೆ. ಆ ದಿನ ಮಹಾರಾಜರಿಂದ ಮಹಾಲಕ್ಷ್ಮಿಯ ಪೂಜೆ ಮತ್ತು ಚಂಡಿಕಾಹೋಮ ನಡೆಯುತ್ತದೆ. ಅನಂತರ ಕಂಕಣ ವಿಸರ್ಜನೆ ಆಗುತ್ತದೆ. ಹತ್ತನೆಯ ದಿನ ಅಂದರೆ ವಿಜಯದಶಮಿಯಂದು ಬೆಳಗ್ಗೆ ಪಟ್ಟದ ಕತ್ತಿಗೆ ಪೂಜೆ ಸಲ್ಲಿಸಿ ಅದನ್ನು ಪಲ್ಲಕಿಯಲ್ಲಿ ಇರಿಸಿ ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಪಟ್ಟದ ಕುದುರೆಯ ಮೇಲೆ ಕುಳಿತ ಮಹಾರಾಜರು ಈ ಮೆರವಣಿಗೆಯಲ್ಲಿ ಸ್ವಲ್ಪ ದೂರ ಭಾಗವಹಿಸಿ ನಂತರ ಅರಮನೆಗೆ ಹಿಂದಿರುಗುತ್ತಾರೆ. ಮಧ್ಯಾಹ್ನದ ನಂತರ ವೈಭವೋಪೇತ ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ಹೋಗಿ ಅಲ್ಲಿರುವ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ, ಅರಮನೆಯ ವಂಶಾವಳಿಯನ್ನು ಶ್ರವಣ ಮಾಡಿ, ನೆರೆದ ಗಣ್ಯರಿಗೆ ಬನ್ನಿ ಮರದ ಎಲೆಗಳನ್ನು ನೀಡಿ ಗೌರವಿಸಿ ಅರಮನೆಗೆ ಹಿಂದಿರುಗುತ್ತಾರೆ.