ಸೆಪ್ಟೆಂಬರ್ ೧೮ ರಂದು ಆರಂಭವಾಗುವ ಪಿತೃಪಕ್ಷದ ನಿಮಿತ್ತ …
ಮೃತ ಪೂರ್ವಜರಿಗೆ ಮುಂದಿನ ಗತಿ ಸಿಗಬೇಕೆಂದು, ಶ್ರಾದ್ಧವಿಧಿ ಮಾಡಲು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಶ್ರಾದ್ಧ ಮಾಡದಿದ್ದರೆ ಯಾವ ದೋಷಗಳು ಬರುತ್ತವೆ, ಎಂಬುದರ ವರ್ಣನೆಯೂ ವಿವಿಧ ಧರ್ಮಗ್ರಂಥಗಳಲ್ಲಿ ಬಂದಿವೆ.
೧. ಸ್ಕಂದ ಪುರಾಣ
ಮರಣ ಹೊಂದಿದ ತಿಥಿಯ ಶ್ರಾದ್ಧದ ಹೊರತು ಎಷ್ಟೇ ಬೆಲೆಬಾಳುವ ಪದಾರ್ಥಗಳಿದ್ದರೂ, ಪಿತೃರು ಅವುಗಳನ್ನು ಗ್ರಹಣ ಮಾಡಲಾರರು. ಮಂತ್ರವಿಲ್ಲದೆ ನೀಡಿದ ಅನ್ನನೀರು ಪಿತೃರಿಗೆ ಸಿಗುವುದಿಲ್ಲ.’ (ಆಧಾರ : ಸ್ಕಂದ ಪುರಾಣ, ಮಾಹೇಶ್ವರಿ ಖಂಡ, ಕುಮಾರಿಕಾ ಖಂಡ, ಅಧ್ಯಾಯ ೩೫/೩೬)
೨. ಋಗ್ವೇದ
ತ್ವಮಗ್ನ ಈಳಿತೋ ಜಾತವೇದೋವಾಙ್ಢವ್ಯನಿ ಸುರಭಿಣಿ ಕೃತ್ವೀ |
ಪ್ರಾದಾಃ ಪಿತೃಭ್ಯಃ ಸ್ವಧಯಾ ತೆ ಅಕ್ಷನ್ನದ್ಧಿ ತ್ವಂ ದೇವ ಪ್ರಯತಾ ಹರ್ವಿಂಷಿ ||
– ಋಗ್ವೇದ, ಮಂಡಲ ೧೦, ಸೂಕ್ತ ೧೫, ಋಚಾ ೧೨.
ಅರ್ಥ : ಹೇ ಸರ್ವಜ್ಞ ಅಗ್ನಿದೇವಾ, ನಾವು ನಿನ್ನನ್ನು ಸ್ತುತಿಸುತ್ತೇವೆ, ನೀನು ನಾವು ಕೊಡುವ ಈ ಹವನೀಯ ದ್ರವ್ಯಗಳನ್ನು ಸುಗಂಧಿತಗೊಳಿಸಿ ನಮ್ಮ ಪಿತೃರಿಗೆ ತಲುಪಿಸು. ಸ್ವಧಾ ಎಂದು ನೀಡಿದ ಹವನೀಯ ದ್ರವ್ಯಗಳನ್ನು ನಮ್ಮ ಪಿತೃರು ಭಕ್ಷಿಸಲಿ. ಹೇ ದೇವಾ, ನೀನು ಕೂಡ ನಾವು ಪ್ರಯತ್ನಪೂರ್ವಕ ಅರ್ಪಿಸಿದ ಈ ಹವಿರ್ಭಾಗವನ್ನು ಭಕ್ಷಣೆ ಮಾಡು.
೩. ಕೂರ್ಮಪುರಾಣ
ಅಮಾವಾಸ್ಯಾದಿನೇ ಪ್ರಾಪ್ತೇ ಗೃಹದ್ವಾರಂ ಸಮಾಶ್ರಿತಾಃ |
ವಾಯುಭೂತಾಃ ಪ್ರಪಶ್ಯನ್ತಿ ಶ್ರಾದ್ಧಂ ವೈ ಪಿತರೋ ನೃಣಾಮ್ ||
ಯಾವದಸ್ತಮಯಂ ಭಾನೋಃ ಕ್ಷುತ್ಪಿಪಾಸಾಸಮಾಕುಲಾಃ |
ತತಶ್ಚಾಸ್ತಙ್ಗತೆ ಭಾನೌ ನಿರಾಶಾದುಃಖಸಂಯುತಾಃ ||
ನಿಃಶ್ವಸ್ಯ ಸುಚಿರಂ ಯಾಂತಿ ಗರ್ಹಯನ್ತಃ ಸ್ವವಂಶಜಮ್ |
ಜಲೇನಾಪಿ ಚ ನ ಶ್ರಾದ್ಧಂ ಶಾಕೇನಾಪಿ ಕರೋತಿ ಯಃ ||
ಅಮಾಯಾಂ ಪಿತರಸ್ತಸ್ಯ ಶಾಪಂ ದತ್ವಾ ಪ್ರಯಾನ್ತಿ ಚ ||
– ಕೂರ್ಮಪುರಾಣ
ಅರ್ಥ : (ಮೃತರಾಗಿ) ವಾಯುರೂಪ ಆಗಿರುವ ಪಿತೃರು (ಪೂರ್ವಜರು) ಅಮಾವಾಸ್ಯೆಯ ದಿನ ತಮ್ಮ ವಂಶಜರ ಮನೆಗೆ ಬಂದು ತಮಗೆ ಶ್ರಾದ್ಧ ಬಡಿಸಲಾಗುತ್ತದೆಯೆ ? ಎಂದು ನೋಡುತ್ತಾರೆ. ಸೂರ್ಯ ಮುಳುಗುವ ವರೆಗೆ ಹಸಿವೆ ಬಾಯಾರಿಕೆಯಿಂದ (ಅತೃಪ್ತ ವಾಸನೆಯಿಂದ) ವ್ಯಾಕುಲರಾಗಿರುವ ಪಿತೃರು ಶ್ರಾದ್ಧ ಸಿಗದಿರುವುದರಿಂದ ಸೂರ್ಯಾಸ್ತದ ನಂತರ ನಿರಾಶರಾಗುತ್ತಾರೆ ಹಾಗೂ ದುಃಖಿತರಾಗಿ ನಿಟ್ಟುಸಿರು ಬಿಟ್ಟು ತಮ್ಮ ವಂಶಜರಿಗೆ ಚಿರಕಾಲ ದೋಷ ನೀಡುತ್ತಾರೆ. ಇಂತಹ ಸಮಯದಲ್ಲಿ ಯಾರು ನೀರು ಅಥವಾ ಪಲ್ಯದಿಂದಲೂ ಶ್ರಾದ್ಧವನ್ನು ಬಡಿಸುವುದಿಲ್ಲವೋ, ಅವರಿಗೆ ಅವರ ಪಿತೃರು ಅಮಾವಾಸ್ಯೆಯಂದು ಶಾಪ ಕೊಟ್ಟು ಹೋಗುತ್ತಾರೆ.
೪. ಆದಿತ್ಯಪುರಾಣ
ನ ಸನ್ತಿ ಪಿತರಶ್ಚೇತಿ ಕೃತ್ವಾ ಮನಸಿ ವರ್ತತೆ |
ಶ್ರಾದ್ಧ ನ ಕುರುತೆ ಯಸ್ತು ತಸ್ಯ ರಕ್ತಂ ಪಿಬುನ್ತಿ ತೆ ||
– ಆದಿತ್ಯಪುರಾಣ
ಅರ್ಥ : ಸತ್ತ ನಂತರ ಪಿತೃರ (ಪಿತರ) ಅಸ್ತಿತ್ವ ಇರುವುದಿಲ್ಲ, ಎಂದು ವಿಚಾರ ಮಾಡಿ ಯಾರು ಶ್ರಾದ್ಧವನ್ನು ಮಾಡುವುದಿಲ್ಲವೋ, ಅವರ ಪಿತೃರು ಅವರ ರಕ್ತವನ್ನು ಕುಡಿಯುತ್ತಾರೆ.
ಇದರ ಆಧಾರದಿಂದ ಶ್ರಾದ್ಧಾದಿ ಕರ್ಮಗಳನ್ನು ಮಾಡದಿದ್ದರೆ ಪಿತೃರು ಕೋಪಿಸಿಕೊಳ್ಳುತ್ತಾರೆ ಹಾಗೂ ಅವರ ವಂಶಜರಿಗೆ ತೊಂದರೆಯಾಗುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. ಎಲ್ಲ ಭೌತಿಕ ಪ್ರಯತ್ನ ಮಾಡಿಯೂ ಯಾವಾಗ ಇಂತಹ ತೊಂದರೆಗಳು ದೂರವಾಗುವುದಿಲ್ಲವೋ, ಆಗ ಇದು ಪೂರ್ವಜರಿಂದ ಆಗುತ್ತಿದೆ, ಎಂದು ಅಂದಾಜಿಸಬಹುದು.
(ಆಧಾರ : ಗ್ರಂಥದ ಹೆಸರು : ಭಾರತೀಯ ಮಾನಸಶಾಸ್ತ್ರ ಅಥವಾ ಸಾರ್ಥ ಹಾಗೂ ಸವಿವರಣ ಪಾತಂಜಲ ಯೋಗದರ್ಶನ, ಲೇಖಕರು : ಯೋಗಾಚಾರ್ಯ ಕೃಷ್ಣಾಜೀ ಕೇಶವ ಕೋಲ್ಹಟ್ಕರ್, ಪ್ರಕಾಶಕರು : ಆದಿತ್ಯ ಪ್ರತಿಷ್ಠಾನ, ಪುಣೆ)