ವೈದಿಕ ರಕ್ಷಾಬಂಧನ ಉತ್ಸವ

೧. ವೈದಿಕ ರಕ್ಷಣಾ ಸೂತ್ರವನ್ನು (ರಾಖಿ) ತಯಾರಿಸುವ ಕೃತಿ

ಈ ರಾಖಿಯನ್ನು ತಯಾರಿಸಲು ಗರಿಕೆ, ಅಕ್ಷತೆ (ಅಕ್ಕಿ), ಕೇಸರಿ, ಚಂದನ ಮತ್ತು ಸಾಸಿವೆ ಕಾಳುಗಳು ಈ ೫ ವಸ್ತುಗಳ ಅವಶ್ಯಕತೆ ಇದೆ. ಈ ೫ ವಸ್ತುಗಳನ್ನು ರೇಷ್ಮೆ ಬಟ್ಟೆಯೊಳಗೆ ಒಟ್ಟಿಗೆ ಕಟ್ಟಬೇಕು ಅಥವಾ ಹೊಲಿಯಬೇಕು. ನಂತರ ಅದರಲ್ಲಿ ದಾರವನ್ನು ಸಿಕ್ಕಿಸಬೇಕು. ಈ ರೀತಿ ವೈದಿಕ ರಾಖಿ ತಯಾರಾಗುತ್ತದೆ.

೨. ವೈದಿಕ ರಕ್ಷಣಾ ಸೂತ್ರದಲ್ಲಿ ೫ ವಸ್ತುಗಳ ಮಹತ್ವ

ಅ. ಗರಿಕೆ : ಯಾವ ರೀತಿ ಗರಿಕೆಯ ಒಂದು ಚಿಗುರನ್ನು ನೆಟ್ಟ ನಂತರ ಅದು ವೇಗವಾಗಿ ಹರಡುತ್ತದೆಯೋ ಮತ್ತು ಸಾವಿರಾರು ಸಂಖ್ಯೆಯಲ್ಲಿ ಚಿಗುರೊಡೆಯುತ್ತದೆಯೋ ಅದೇ ರೀತಿ ನನ್ನ ಸಹೋದರನ ವಂಶ ಮತ್ತು ಅವನಲ್ಲಿರುವ ಸದ್ಗುಣಗಳ ವಿಕಾಸ ಶೀಘ್ರ ಗತಿಯಲ್ಲಾಗಲಿ. ಸದಾಚಾರ, ಮನಸ್ಸಿನ ಪಾವಿತ್ರ್ಯತೆ ವೇಗವಾಗಿ ಹೆಚ್ಚಾಗಲಿ. ಗಣೇಶನಿಗೆ ಗರಿಕೆಯು ಪ್ರಿಯವಾಗಿದೆ, ಅಂದರೆ ನಾವು ಯಾರಿಗೆ ರಾಖಿ ಕಟ್ಟುತ್ತಿರುವೆವೋ, ಅವರ ಜೀವನದಲ್ಲಿನ ಎಲ್ಲ ವಿಘ್ನಗಳ ನಾಶವಾಗಲಿ.

ಆ. ಅಕ್ಷತೆ : ಗುರುದೇವರ ಬಗೆಗಿನ ನಮ್ಮ ಶ್ರದ್ಧೆ ಎಂದಿಗೂ ಕಡಿಮೆಯಾಗದೇ ಅದು ನಿರಂತರವಾಗಿರಲಿ.

ಇ. ಕೇಸರಿ : ಕೇಸರಿಯು ತೇಜ ಪ್ರಕೃತಿಯದ್ದಾಗಿರುತ್ತದೆ, ಅಂದರೆ ನಾವು ಯಾರಿಗೆ ರಾಖಿಯನ್ನು ಕಟ್ಟುತ್ತಿರುವೆವೋ, ಅವರು ಇನ್ನಷ್ಟು ತೇಜಸ್ವಿಯಾಗಬೇಕು. ಅವರ ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಭಕ್ತಿಯ ತೇಜವು ಎಂದಿಗೂ ಕಡಿಮೆಯಾಗಬಾರದು.

ಈ. ಚಂದನ : ಚಂದನದ ಪ್ರಕೃತಿ ಶೀತಲವಾಗಿರುತ್ತದೆ ಮತ್ತು ಅದು ಸುಗಂಧ ನೀಡುತ್ತದೆ. ಅದೇ ರೀತಿ ಅವರ ಜೀವನದಲ್ಲಿನ ಶೀತಲತೆ ಉಳಿಯಲಿ. ಅವರಿಗೆ ಎಂದಿಗೂ ಮಾನಸಿಕ ಒತ್ತಡವಾಗದಿರಲಿ. ಹಾಗೆಯೇ ಅವರ ಜೀವನದಲ್ಲಿ ಪರೋಪಕಾರ, ಸದಾಚಾರ ಮತ್ತು ಸಂಯಮ ಇವುಗಳ ಸುಗಂಧ ಹರಡುತ್ತಿರಲಿ.

ಉ. ಸಾಸಿವೆ ಕಾಳುಗಳು : ಸಾಸಿವೆಯ ಪ್ರಕೃತಿಯು ತೀಕ್ಷ್ಣ ಇರುತ್ತದೆ, ಅಂದರೆ ಇದರಿಂದ ನಮ್ಮನ್ನೂ ಒಳಗೊಂಡಂತೆ ಸಮಾಜದ ಅನಿಷ್ಟಗಳನ್ನು ನಾಶ ಮಾಡಲು ನಾವೂ ತೀಕ್ಷ್ಣವಾಗಬೇಕು ಎಂಬ ಸಂಕೇತ ಕೊಡುತ್ತದೆ.

ಈ ರೀತಿ ಈ ೫ ವಸ್ತುಗಳಿಂದ ತಯಾರಾದ ಒಂದು ರಾಖಿಯನ್ನು ಮೊತ್ತಮೊದಲು ಭಗವಂತನಿಗೆ ಅರ್ಪಿಸಬೇಕು. ನಂತರ ಸಹೋದರಿಯರು ತಮ್ಮ ಸಹೋದರನಿಗೆ ಶುಭ ಸಂಕಲ್ಪ ಮಾಡಿ ರಾಖಿಯನ್ನು ಕಟ್ಟಬೇಕು. ನಾವು ಮಗ-ಮೊಮ್ಮಕ್ಕಳು ಮತ್ತು ನೆಂಟರೊಂದಿಗೆ ವರ್ಷವಿಡಿ ಸುಖವಾಗಿರುತ್ತೇವೆ.’

– ಸೌ. ಯೋಗಿತಾ ಯಂಶವಂತಸಿಂಹ ಪರದೇಶಿ (ಆಧಾರ : ಮಾಸಿಕ ‘ಕ್ಷಾತ್ರಧರ್ಮ’, ಜೂನ್‌ ೨೦೧೭)