ಮಳೆಗಾಲದಲ್ಲಿ ಯಾವ ಕಾಳಜಿ ವಹಿಸಬೇಕು ? ಈ ಬಗೆಗಿನ ಲೇಖನ ವನ್ನು ಸನಾತನ ಪ್ರಭಾತದ ೨೫/೪೫ ನೇ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ; ಆದರೆ ಸದ್ಯದ ಪಚನ (ಜೀರ್ಣಕ್ರಿಯೆ) ಮತ್ತು ಗಂಟಲು ನೋವು, ಜ್ವರ, ಶೀತ ಈ ಕಾಯಿಲೆಗಳ ರೋಗಿಗಳನ್ನು ನೋಡಿದರೆ ಮುಂದಿನ ಕೆಲವು ನಿಯಮಗಳನ್ನು ಪಾಲಿಸಬೇಕು.
೧. ರಾತ್ರಿ ೮ ಗಂಟೆಯೊಳಗೆ ಭೋಜನ ಅಥವಾ ಹಗುರ ಆಹಾರ (ದೋಸೆ/ಸಣ್ಣ ಚಪಾತಿ (ಫುಲಕಾ)/ಕಾಯಿಪಲ್ಲೆ/ವಿವಿಧ ಅನ್ನದ ಪದಾರ್ಥಗಳು)ವನ್ನು ಸೇವಿಸಬೇಕು.
೨. ವಿಶೇಷವಾಗಿ ಪ್ರದೂಷಿತ ನಗರಗಳಲ್ಲಿ ವಾಸಿಸುವ ಮತ್ತು ವಾಹನಗಳಲ್ಲಿ ತಿರುಗಾಡುವ ಜನರು ಮುಖಪಟ್ಟಿ (‘ಮಾಸ್ಕ್’) ಮತ್ತು ‘ಶಿರಸ್ತ್ರಾಣ’ (ಹೆಲ್ಮೆಟ್)ವನ್ನು ಧರಿಸಬೇಕು.
೩. ಶುಂಠಿ ಅಥವಾ ಇತರ ಮಸಾಲೆಗಳನ್ನು ಹೆಚ್ಚು ಬಳಸಿ ತಯಾರಿಸಿದ ಕಷಾಯವನ್ನು ಅನೇಕ ಸಲ ಕುಡಿಯಬಾರದು.
೪. ಕೀಲುಗಳ ನೋವು, ಶೀತ ಇತ್ಯಾದಿ ಹೆಚ್ಚಾಗಬಾರದೆಂದು ವಾತಾನುಕೂಲಿತ ಕೋಣೆಯಲ್ಲಿ (‘ಎಸಿ’ಯಲ್ಲಿ) ಕೆಲಸ ಮಾಡುವುದು ಅನಿವಾರ್ಯವಾಗಿದ್ದರೆ ಕಿವಿಗಳಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟುಕೊಳ್ಳಬೇಕು, ಜ್ಯಾಕೇಟ್ ಅಥವಾ ಸ್ವೇಟರ್ ಧರಿಸಬೇಕು. ತಮಗೆ ಶೀತ ಅಥವಾ ಗಂಟಲುನೋವು ಇದ್ದರೆ ‘ಮಾಸ್ಕ್’ ಬಳಸಬೇಕು. ಇತರ ಜನರೊಂದಿಗೆ ಕೆಲಸ ಮಾಡುವಾಗ ದಿನದಲ್ಲಿ ಒಂದು ಬಾರಿಯಾದರೂ ಅರಿಶಿಣದ ಪುಡಿ ಹಾಕಿದ ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಬೇಕು (ಗಾರ್ಗಲ್).
೫. ಹಿರಿಯ ವ್ಯಕ್ತಿಗಳು ಮತ್ತು ಜೀರ್ಣಕ್ರಿಯೆ ಮಂದ ಇರುವವರು ಊಟ ಮಾಡುವಾಗ ಬೆಚ್ಚಗಿನ ನೀರು ಕುಡಿಯಬೇಕು.
೬. ಹೊಟ್ಟೆ ಸ್ವಚ್ಛವಾಗಿರಲು (ಸರಿಯಾಗಿ ಮಲವಿಸರ್ಜನೆಯಾಗಲು) ಪ್ರಯತ್ನಿಸಬೇಕು. ಅದಕ್ಕಾಗಿ ತ್ರಿಫಲಾ ಅಥವಾ ಖರೀದಿಸಿ ತಂದ ವಿವಿಧ ಪುಡಿ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳದೇ, ಹೊಟ್ಟೆಯಿಂದಮಲವು ಸಲೀಸಾಗಿ ಹೊರಗೆ ಬಾರದಿದ್ದರೆ, ಹಾಗೆಯೇ ಅಗ್ನಿಯನ್ನು ಉತ್ತಮವಾಗಿಡಲು ಹಗುರ ಆಹಾರ ಮತ್ತು ಸಾಧ್ಯವಾದಷ್ಟು ಆಹಾರದಲ್ಲಿ ಪಥ್ಯವನ್ನು ಪಾಲಿಸಬೇಕು. ಶೌಚವು ಕಲ್ಲಿನಂತೆ ಗಟ್ಟಿಯಾಗುತ್ತಿದ್ದರೆ ಒಣ ದ್ರಾಕ್ಷಿ, ಹಾಲು ಮತ್ತು ತುಪ್ಪವನ್ನು ತೆಗೆದುಕೊಳ್ಳಬೇಕು. ಇವುಗಳನ್ನು ತೆಗೆದುಕೊಂಡರೂ ಶೌಚ ವ್ಯವಸ್ಥಿತವಾಗಿ ಆಗದಿದ್ದರೆ ಅಥವಾ ಕಾಯಿಲೆ ಗುಣವಾಗದಿದ್ದರೆ ತಮ್ಮ ವೈದ್ಯರನ್ನು ಸಂಪರ್ಕಿಸಬೇಕು.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೯.೭.೨೦೨೪)