ನಾಗರಪಂಚಮಿ ಆಚರಣೆಯ ಹಿಂದಿನ ಶಾಸ್ತ್ರ

ತಿಥಿ

ಶ್ರಾವಣ ಶುಕ್ಲ ಪಕ್ಷ ಪಂಚಮಿ (೯.೮.೨೦೨೪)

ಇತಿಹಾಸ

ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು.

ನಾಗರಪಂಚಮಿ : ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರ ಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’ ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚ ಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.

ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವ

೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕನಿಷ್ಠ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ನಾಗರ ಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ.

ನಾಗನ ಪೂಜೆ ಮಾಡುವುದರ ಹಿಂದಿನ ಶಾಸ್ತ್ರ

ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.

ಪೂಜೆ

ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿ ಸೂಕ್ಷ್ಮ ದೈವೀ ಕಣಗಳು (ಚೈತನ್ಯಕಣಗಳು).

ಭಾವಾರ್ಥ : ‘ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರ ಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನ ವನ್ನಿಡಲು ಕಲಿಯುವುದಿರುತ್ತದೆ.’

ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.