ಕಳೆದ ಕೆಲವು ದಿನಗಳಿಂದ ನನಗೆ ಒಂದು ದೂರವಾಣಿಯಿಂದ ನನ್ನ ಸಂಚಾರಿವಾಣಿಗೆ (ಮೋಬೈಲ್‌ಗೆ) ಒಂದು ಕರೆ ಬರುತ್ತಿದೆ. ನಾನು ಆ ಕರೆಯನ್ನು ಸ್ವೀಕರಿಸಿದಾಗ, ‘ಆ ಕಡೆಯಿಂದ ‘ನಿಮ್ಮ ಫೆಡೆಕ್ಸ್ ಪಾರ್ಸೆಲ್ (ಫೆಡೆಕ್ಸ್ ಕುರಿಯರ್) ನಿಮ್ಮ ದಾರಿ ಕಾಯುತ್ತಿದೆ. ಅದನ್ನು ಸ್ವೀಕರಿಸಲು ಕೊಟ್ಟಿರುವ ಕ್ರಮಾಂಕವನ್ನು ಸಂಪರ್ಕಿಸಿರಿ’, ಎಂದು ಧ್ವನಿಮುದ್ರಿಸಿದ ಸಂದೇಶ ಬರುತ್ತದೆ. ಅನಂತರ ಈ ಹಗರಣ ಆರಂಭವಾಗುತ್ತದೆ.
ಅನಂತರ ‘ಫೆಡೆಕ್ಸ್ ಗ್ರಾಹಕ ಸೇವಾ ಕಕ್ಷೆ’ಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳುವ ಒಬ್ಬ ವ್ಯಕ್ತಿಯ ಕರೆ ಬರುತ್ತದೆ. ಆ ವ್ಯಕ್ತಿ ಸಂಚಾರಿವಾಣಿ ಕರೆಯನ್ನು ಸ್ವೀಕರಿಸುವವನಿಗೆ, ”ನಿಮ್ಮ ಆಧಾರಕಾರ್ಡ್ ಕ್ರಮಾಂಕವಿರುವ ಒಂದು ಪಾರ್ಸಲ್ ಬಂದಿದೆ ಹಾಗೂ ಅದರಲ್ಲಿ ಅನಧಿಕೃತ ವಸ್ತು ಇರುವುದರಿಂದ ಅದನ್ನು ಜಪ್ತಿ ಮಾಡಲಾಗಿದೆ (ವಶಪಡಿಸಿಕೊಳ್ಳಲಾಗಿದೆ).” ಪೀಡಿತ ವ್ಯಕ್ತಿಗೆ ಇಂತಹ ಯಾವುದೇ ಪಾರ್ಸೆಲ್‌ನ ಬಗ್ಗೆ ತಿಳಿಯದಿದ್ದರೂ ಕರೆ ಮಾಡುವ ವ್ಯಕ್ತಿ ಹೇಳುತ್ತಾನೆ, ”ಆ ಪಾರ್ಸೆಲ್ ಮುಂಬಯಿಯಿಂದ ಬಂದಿದ್ದು ಅದರಲ್ಲಿ ಅಮಲು ಪದಾರ್ಥ ಇರುವುದು ಕಂಡುಬಂದಿದೆ. ಸದ್ಯ ಆ ಪಾರ್ಸೆಲ್ ‘ಗಡಿಶುಲ್ಕ ಕಾರ್ಯಾಲಯ’ದಲ್ಲಿ ಸಿಲುಕಿಕೊಂಡಿದೆ.” ತನ್ನ ಆಧಾರ ಕಾರ್ಡ್‌ನ್ನು ಭಾರತದ ಹೊರಗೆ ಅಮಲು ಪದಾರ್ಥದ ಕಳ್ಳಸಾಗಾಟಕ್ಕಾಗಿ ಉಪಯೋಗಿಸಲಾಗುತ್ತಿದೆ’, ಎಂದು ತಿಳಿದು ಆ ವ್ಯಕ್ತಿ ಭಯಭೀತನಾಗಿ ಗೊಂದಲಕ್ಕೀಡಾಗುತ್ತಾನೆ. ‘ಈ ಪ್ರಕರಣ ಅತ್ಯಂತ ಗಂಭೀರವಾಗಿದೆ’, ಎನ್ನುವ ಹಾಗೆ ನಟಿಸುತ್ತಾ ‘ಈ ‘ಕಾಲ್’ (ಸಂಪರ್ಕ) ಮುಂಬಯಿ ಪೊಲೀಸರ ‘ಸೈಬರ್ ಸೆಲ್’ಗೆ (ಇಂಟರ್‌ನೆಟ್ ಮೂಲಕ ನಡೆಯುವ ಅಪರಾಧಗಳ ತನಿಖಾ ದಳ) ಒಪ್ಪಿಸುತ್ತೇವೆ’, ಎಂದು ಹೇಳುತ್ತಾನೆ. ಆಗ ಪೀಡಿತ ವ್ಯಕ್ತಿ ‘ನಾವು ಈ ವಿಷಯದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋಗುತ್ತಿದ್ದೇವೆ’, ಎಂದು ಹೇಳುತ್ತಾನೆ. ಆಗ ಆ ವ್ಯಕ್ತಿ ‘ಈ ಅಪರಾಧ ಮುಂಬಯಿಯಲ್ಲಿ ನಡೆದಿರುವುದರಿಂದ ಮುಂಬಯಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ದೂರು ದಾಖಲಿಸಲು ಮುಂಬಯಿಯಲ್ಲಿ ಯಾರನ್ನು ಸಂಪರ್ಕಿಸಬೇಕೆಂದು ಅವರು ಹೇಳುವರು’, ಎಂದು ಕೂಡ ಹೇಳುತ್ತಾನೆ. ಅನಂತರ ತನ್ನನ್ನು ಪೊಲೀಸ್ ಅಧಿಕಾರಿಯೆಂದು ಹೇಳಿಕೊಳ್ಳುವ ವ್ಯಕ್ತಿಯೊಂದಿಗೆ ಸಂಪರ್ಕ ಮಾಡಿಸಲಾಗುತ್ತದೆ. ಆ ತಥಾಕಥಿತ ಪೊಲೀಸ್ ಅಧಿಕಾರಿ ಪೀಡಿತ ವ್ಯಕ್ತಿಗೆ ಮುಂಬಯಿ ಅಪರಾಧ ತನಿಖಾ ವಿಭಾಗದ ಅಧಿಕೃತ ‘ಸ್ಕಾಯಿಪ್’ ಅಥವಾ ‘ವಾಟ್ಸಪ್’ ನಂಬರಿಗೆ ಹೋಗಲು ಹೇಳುತ್ತಾನೆ. ಇದರಿಂದ ಈ ಮುಗ್ಧ ವ್ಯಕ್ತಿ ಭಯಭೀತನಾಗಿ ಜಾಗರೂಕತೆ ವಹಿಸದೆ ಅವನು ಹೇಳುವುದನ್ನೆಲ್ಲವನ್ನೂ ಕೇಳುತ್ತಾನೆ. ಅನಂತರ ಆ ತಥಾಕಥಿತ ಪೊಲೀಸ್ ಅಧಿಕಾರಿ ಆ ಪೀಡಿತ ವ್ಯಕ್ತಿಗೆ ‘ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನ ತಪಾಸಣೆ ಮಾಡಲಿಕ್ಕಿದೆ’, ಎಂದು ಹೇಳಿ ಅವುಗಳ ಮಾಹಿತಿ ನೀಡಲು ಹೇಳುತ್ತಾನೆ ಹಾಗೂ ಅವನಿಗೆ ವಿಡಿಯೋ ಕಾಲ್’ ಮಾಡಲು ಹೇಳಿ ಆ ಸಮಯದಲ್ಲಿ ಕೋಣೆಯಲ್ಲಿ ಯಾರೂ ಇರಬಾರದು ಎಂದು ಹೇಳುತ್ತಾನೆ. ಈ ಸಂಪರ್ಕದ ಮೂಲಕ ಆ ಅಧಿಕಾರಿ ಪೀಡಿತ ವ್ಯಕ್ತಿಯ ಶರೀರದ ನಾಲ್ಕೂ ಬದಿಗಳಿಂದ ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದೇನೆ’, ಎಂದು ಹೇಳಿ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಹಾಗೆ ನಟಿಸುತ್ತಾನೆ. ಅನಂತರ ಆ ವ್ಯಕ್ತಿಗೆ ಕಾನೂನಿನ ಪರಿಣಾಮಗಳ ಭಯ ತೋರಿಸಿ ‘ಅನಧಿಕೃತ ವ್ಯವಹಾರದ ಅಪರಾಧ ದಾಖಲಾಗುವುದು’, ಎಂದು ಹೇಳಿ ಪೀಡಿತ ವ್ಯಕ್ತಿಯಿಂದ ಹಣ ಕೀಳುತ್ತಾನೆ ಹಾಗೂ ನಿಮ್ಮ ಹಣವನ್ನು ಹಿಂತಿರುಗಿಸಲಾಗುವುದು’, ಎಂದು ಆಶ್ವಾಸನೆ ನೀಡುತ್ತಾನೆ. ಅನಂತರ ಹಣ ಸಿಗುವುದಿಲ್ಲ. ಇಂತಹ ಹಗರಣದಿಂದ ಬೆಂಗಳೂರಿನಲ್ಲಿ ೫ ಕೋಟಿ ರೂಪಾಯಿಗಳ ಹಾನಿಯಾಗಿದೆ. ೨೦೨೩ ರಲ್ಲಿ ಪೊಲೀಸರು ಇಂತಹ ೧೬೩ ಪ್ರಕರಣಗಳಿಗೆ ಸಂಬಂಧಿಸಿದ ದೂರು ದಾಖಲಿಸಿಕೊಂಡಿದ್ದಾರೆ. ವಾಚಕರು ಇಂತಹ ಕರೆಗಳಿಂದ ಜಾಗರೂಕರಾಗಿರಬೇಕು.
– ಓರ್ವ ಧರ್ಮಪ್ರೇಮಿ.