ಇಂದಿನ ಲೇಖನದಲ್ಲಿ ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಹೇಳುವವಳಿದ್ದೇನೆ. ಮಳೆಗಾಲವು ತೇವಾಂಶವನ್ನು ತರುವ ಮತ್ತು ಅದರಿಂದಾಗಿ ಅಗ್ನಿಯನ್ನು ಕಡಿಮೆ ಗೊಳಿಸುವಂತಹದ್ದಾಗಿದೆ. ಇದು ವಾತಪ್ರಕೋಪದ ಕಾಲವಾಗಿರುವುದರಿಂದ ಸಂಧಿವಾತ, ಶಾರೀರಿಕ ತೊಂದರೆಗಳು ಮತ್ತು ಕೀಲುಗಳ ಕಾಯಿಲೆ ಇಂತಹ ತೊಂದರೆಗಳು ಪ್ರಾರಂಭವಾಗುತ್ತವೆ. ಇವುಗಳೊಂದಿಗೆ ಇದೇ ಋತುವಿನಲ್ಲಿ ದೇಹವು ಪಿತ್ತವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಶರೀರದಲ್ಲಿನ ಅಗ್ನಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಮತ್ತು ವಾತ ಹೆಚ್ಚಾಗದಂತೆ ಕಾಳಜಿ ವಹಿಸುವುದು ಇವುಗಳ ಕಡೆಗೆ ಗಮನ ಕೊಟ್ಟರೆ ಮಳೆಗಾಲದಲ್ಲಿ ಆರೋಗ್ಯದಿಂದಿರಬಹುದು.
೧. ಏನೆಲ್ಲ ಕಾಳಜಿಯನ್ನು ವಹಿಸಬೇಕು ?
೧. ಪ್ರಾತರ್ವಿಧಿಯ ನಂತರ ದಿನವನ್ನು ಹಸಿ ಸುಂಠಿ (ಅಲಾ), ಒಣ ಸುಂಠಿ, ಗವತಿ ಚಹಾ ಹಾಕಿ ಮಾಡಿದ ಚಹಾದಿಂದ ಅಥವಾ ಕಶಾಯದಿಂದ ಪ್ರಾರಂಭಿಸಬೇಕು.
೨. ಹೊಟ್ಟೆಯನ್ನು ಸ್ವಚ್ಛಗೊಳಿಸುವುದರ ಕಡೆಗೆ ಗಮನವಿರಬೇಕು. ಹೊಟ್ಟೆ ಸ್ವಚ್ಛವಾದರೆ, ವಾತ ಹೆಚ್ಚಾಗುವುದಿಲ್ಲ ಮತ್ತು ಪಿತ್ತವು ಪ್ರಮಾಣದಲ್ಲಿರುತ್ತದೆ. ಮಳೆಗಾಲ ಪಿತ್ತವನ್ನು ಸಂಗ್ರಹಿಸುವ ಕಾಲವಾಗಿರುವುದರಿಂದ ಪಿತ್ತದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಹೊಟ್ಟೆಯನ್ನು ಸ್ವಚ್ಛವಾಗಿಡಲು ತ್ರಿಫಲ ಚೂರ್ಣ ಅಥವಾ ಯಾವುದೇ ಚೂರ್ಣ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳದೇ ಸಾಧ್ಯವಾದಷ್ಟು ಸ್ನಿಗ್ಧ ಅನುಲೋಮಕವನ್ನು ತೆಗೆದುಕೊಳ್ಳಬೇಕು, ಇದರಲ್ಲಿ ಹಾಲು-ತುಪ್ಪ / ಬಿಸಿ ನೀರು-ತುಪ್ಪ / ಕಡಿಮೆ ಪ್ರಮಾಣದಲ್ಲಿ ಔಡಲೆಣ್ಣೆಯನ್ನು ತೆಗೆದುಕೊಳ್ಳಬಹುದು. ಅದನ್ನು ಪ್ರತಿದಿನ ಮತ್ತು ಎಲ್ಲರೂ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ, ಕೇವಲ ಯಾರಿಗೆ ತೊಂದರೆ ಇದೆಯೋ, ಅವರು ತೆಗೆದುಕೊಳ್ಳಬೇಕು.
೩. ಮಳೆಗಾಲದಲ್ಲಿ ಅಗ್ನಿ ಮಂದ ಮತ್ತು ಹೊರಗೆ ತಂಪು ಇರುವುದರಿಂದ ‘ಸ್ಪೈಸಿ’ (ಉಪ್ಪು-ಖಾರದ ಪದಾರ್ಥಗಳು), ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇಂತಹ ಪದಾರ್ಥಗಳನ್ನು ಮಿತಿಮೀರಿ ತಿನ್ನಬಾರದು.
೪. ಊಟದಲ್ಲಿ ಬಿಸಿ ನೀರಿನಲ್ಲಿ ಕಲಸಿದ ಹಿಟ್ಟಿನಿಂದ ಮಾಡಿದ ರೊಟ್ಟಿ ಅಥವಾ ಬಹಳಷ್ಟು ತುಪ್ಪವನ್ನು ಹಾಕಿದ ಚಪಾತಿಯಿರಬೇಕು. ತೊಪ್ಪಲ ಪಲ್ಯ ಮತ್ತು ಉಸುಳಿಗಳನ್ನು ತಿನ್ನಬಾರದು. ಹಣ್ಣುತರಕಾರಿಗಳನ್ನು ತಿನ್ನಬೇಕು. ಹೆಸರುಕಾಳು, ಚೆನ್ನಂಗಿ ತಿನ್ನಬಹುದು.
೫. ಸಾಧ್ಯವಿದ್ದಷ್ಟು ಕೊಸಂಬರಿಯನ್ನು (ಸಲಾಡ್) ತಿನ್ನಬಾರದು. ತಿನ್ನುವುದಾದರೆ ತುಪ್ಪ-ಜೀರಿಗೆಯ ಒಗ್ಗರಣೆ ಕೊಟ್ಟು ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಮತ್ತು ಸಾಧ್ಯವಾದಷ್ಟು ಕೇವಲ ಮಧ್ಯಾಹ್ನದ ಊಟದಲ್ಲಿ ತಿನ್ನಬೇಕು.
೬. ರಾತ್ರಿಯ ಊಟದಲ್ಲಿ ಅನ್ನ-ಸಾರು ಅಥವಾ ಕಾಳುಮೆಣಸಿನ (ಕರಿಮೆಣಸು) ಪುಡಿಯನ್ನು ಹಾಕಿ ಮಾಡಿದ ಸೂಪ್ ತೆಗೆದುಕೊಳ್ಳಬಹುದು. ಊಟದ ಸಮಯವು ರಾತ್ರಿ ೮ ಗಂಟೆಯ ನಂತರ ಇದ್ದರೆ, ಚಪಾತಿಯನ್ನು ಕಡಿಮೆ ತಿನ್ನಬೇಕು. ರಾತ್ರಿ ಮಜ್ಜಿಗೆಯನ್ನು ಕುಡಿಯಬಾರದು. ಕುಡಿಯುವುದಿದ್ದರೆ ಮಜ್ಜಿಗೆಯಲ್ಲಿ ಹಸಿಸುಂಠಿಯನ್ನು ತುರಿದು ಹಾಕಬೇಕು ಮತ್ತು ಒಗ್ಗರಣೆಯನ್ನು ಹಾಕಿ ಕುಡಿಯಬೇಕು. ಹಗಲಿನಲ್ಲಿಯೂ ಮಜ್ಜಿಗೆ ಕುಡಿಯುವುದಾದರೆ ಜೀರಿಗೆ, ಕಾಳುಮೆಣಸಿನ ಪುಡಿಯನ್ನು ಹಾಕಿ ಕುಡಿಯಬೇಕು. ಮೊಸರನ್ನು ತಿನ್ನಲೇಬಾರದು.
೭. ಬಾಯಿಗೆ ರುಚಿ ಬರಲು ಮರಗು (ಪುದಿನಾ) – ಹಸಿಸುಂಠಿ ಚಟ್ನಿ, ಕಡಿಮೆ ಖಾರದ ಒಣಕೊಬ್ಬರಿ-ಬೆಳ್ಳುಳ್ಳಿ ಚಟ್ನಿ, ಕರಿಬೇವಿನ ಚಟ್ನಿ ಮತ್ತು ಹಸಿಕೊಬ್ಬರಿ ಚಟ್ನಿಯನ್ನು ತಿನ್ನಬೇಕು.
೮. ವ್ಯಾಯಾಮವನ್ನು ಕಡಿಮೆ ಮಾಡಬೇಕು. ಸಾಮಾನ್ಯವಾಗಿ ಕಂಕುಳದಲ್ಲಿ ಮತ್ತು ಹಣೆಯ ಮೇಲೆ ಸ್ವಲ್ಪ ಬೆವರು ಬಂದ ಕೂಡಲೇ ವ್ಯಾಯಾಮವನ್ನು ನಿಲ್ಲಿಸಬೇಕು. ಮಳೆಗಾಲದಲ್ಲಿ ಶಾರೀರಿಕ ಶಕ್ತಿ ಕಡಿಮೆ ಇರುವುದರಿಂದ ವ್ಯಾಯಾಮದಿಂದ ವಾತ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
೯. ಮೈಗೆ ಪ್ರತಿದಿನ ಎಣ್ಣೆಯನ್ನು ಹಚ್ಚಬೇಕು. ಉಗುರುಬೆಚ್ಚಗಿನ ಎಳ್ಳೆಣ್ಣೆ ಉತ್ತಮ.
೧೦. ಊಟ ಮಾಡಿದ ನಂತರ ಹೊಟ್ಟೆ ಜಡವಾಗುತ್ತಿದ್ದರೆ, ಹಸಿಸುಂಠಿಯ ಪಾಚಕ ಅಥವಾ ಶುಂಠಿ ಬೆಲ್ಲದ ಚಿಕ್ಕ ತುಂಡನ್ನು ಅಥವಾ ಶುಂಠಿ ಕಲ್ಲುಸಕ್ಕರೆಯನ್ನು ಕಲಸಿ ತಿನ್ನಬೇಕು.
೧೧. ಮನೆಯಲ್ಲಿಯೂ ಕಾಲುಚೀಲ ಧರಿಸಬೇಕು. ಕಿವಿ, ಎದೆ, ಕಾಲುಗಳನ್ನು ಚಳಿಯಿಂದ ರಕ್ಷಣೆ ಮಾಡಬೇಕು. ಮಳೆಗಾಲದಲ್ಲಿ ಸ್ಕೂಟಿಯಲ್ಲಿ ಓಡಾಡುತ್ತಿದ್ದರೆ, ಹಸಿಶುಂಠಿ, ಒಣಶುಂಠಿ ಅಥವಾ ಬಿಸಿ ನೀರನ್ನು ಕುಡಿಯಬೇಕು. ಕಾರಿನಲ್ಲಿ ಸಾಧ್ಯವಾದಷ್ಟು ಹಿಟರ್ ಹಾಕಿಡಬೇಕು.
೧೨. ಸದ್ಯದ ಕಾಲದಲ್ಲಿ ತಂಪು ಅಥವಾ ಒದ್ದೆಯಾದ ಮಾಸ್ಕ್‌ನ್ನು ಬಳಸಬಾರದು. ಹೊರಗಿನಿಂದ ಬಂದ ನಂತರ ಬಿಸಿ ನೀರನ್ನು ಕುಡಿಯಬೇಕು. ಒದ್ದೆಯಾದ ಕೂದಲುಗಳನ್ನು ತಕ್ಷಣ ಒಣಗಿಸಬೇಕು.
೧೩. ಆಯುರ್ವೇದಲ್ಲಿನ ಬಸ್ತಿ ಮತ್ತು ಅಭ್ಯಂಗ ಈ ಚಿಕಿತ್ಸೆಗಳು ಉಪಯುಕ್ತ.
೧೪. ಸಾಯಂಕಾಲ ಅವಶ್ಯವಾಗಿ ಧೂಪವನ್ನು ಹಾಕಬೇಕು.
ಈ ರೀತಿ ಉಷ್ಣ ಮತ್ತು ಸ್ನಿಗ್ಧ ಆಹಾರ-ವಿಹಾರವನ್ನಿಟ್ಟರೆ ಮಳೆಗಾಲದಲ್ಲಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.
೨. ಯಾವ ಪದಾರ್ಥಗಳನ್ನು ತಿನ್ನಬಹುದು ?
೧. ತಿಂಡಿ : ಉಪ್ಪಿಟ್ಟು, ಅಕ್ಕಿಹಿಟ್ಟಿನ ದೋಸೆ, ಥಾಲಿಪಿಟ್ಟು- ಬೆಣ್ಣೆ, ಅಂಬಲಿ, ದೋಸೆ, ಬೇಳೆ-ಅಕ್ಕಿಯ ಕಿಚಡಿ, ಕೆಲವೊಮ್ಮೆ ಅವಲಕ್ಕಿ, ಶಾವಿಗೆ ಉಪ್ಪಿಟ್ಟು; ಈರುಳ್ಳಿ, ಮೆಂತೆಸೊಪ್ಪು ಮತ್ತು ಕೊತ್ತಂಬರಿಸೊಪ್ಪು ಹಾಕಿ ಮಾಡಿದ ಥಾಲಿಪಿಟ್ಟು-ಬೆಣ್ಣೆ, ಗೋದಿರವೆಯ ಹುಗ್ಗಿ (ಪಾಯಸ) ಉಪ್ಪಿಟ್ಟು, ಶಿರಾ.
೨. ಊಟದಲ್ಲಿ : ಚಪಾತಿ, ಜೋಳ/ ಅಕ್ಕಿ ರೊಟ್ಟಿ, ಸಿಹಿ ಮಜ್ಜಿಗೆ, ಅನ್ನ, ಸಾರು (ಕೇವಲ ತೊವ್ವೆಯನ್ನು ತಿನ್ನಬಾರದು), ತುಪ್ಪ, ಪಲ್ಯ (ಹಾಲುಗುಂಬಳಕಾಯಿ, ಪಡವಲಕಾಯಿ, ಕೆಂಪು ಕುಂಬಳಕಾಯಿ, ಎಲ್ಲ ಹಣ್ಣುತರಕಾರಿಗಳು, ಹೆಸರುಕಾಳು, ಚೆನ್ನಂಗಿ, ಬೆಳ್ಳುಳ್ಳಿ, ಹಸಿಶುಂಠಿ, ಈರುಳ್ಳಿ).
೩. ರಾತ್ರಿಯ ಊಟ : ಅನ್ನ-ಸಾರು, ಹೆಸರುಬೇಳೆಯ ಕಿಚಡಿ, ಸೂಪ್-ಅನ್ನ, ಪುನರಪುಳಿಯ ಸಾರು-ಅನ್ನ, ಪರಾಟಾ ತುಪ್ಪ, ಚಟ್ನಿ, ೩-೪ ಪ್ರಕಾರದ ಹಿಟ್ಟುಗಳನ್ನು ಹಾಕಿ ಮಾಡಿದ ದೋಸೆ, ಬೆಣ್ಣೆ ರೊಟ್ಟಿ-ಪಲ್ಯ, ಥಾಲಿಪಿಟ್ಟು.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೧೪.೬.೨೦೨೪)
(ಸೌಜನ್ಯ : ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ ಇವರ ಫೇಸಬುಕ್‌ನಿಂದ)