‘ನಮ್ಮ ಪೂರ್ವಜರ ದೃಢ ಶ್ರದ್ಧೆ ಏನೆಂದರೆ, ಮಹರ್ಷಿ ವ್ಯಾಸರಂತಹ ವೇದಶಾಸ್ತ್ರಜ್ಞ, / ವೇದಮರ್ಮಜ್ಞ, ಬ್ರಹ್ಮಜ್ಞಾನಿ ಮತ್ತು ವಿಶ್ವಹಿತೈಷಿ ವ್ಯಕ್ತಿಯೇ ‘ಆದಿಗುರು ಆಗಲು ಸಾಧ್ಯ ಅಥವಾ ‘ಗುರು ಈ ಸಂಕಲ್ಪನೆಯ ಮೂರ್ತಿಸ್ವರೂಪವೆಂದರೆ ಮಹರ್ಷಿ ವ್ಯಾಸರು ! ಅವರ ಈ ಶ್ರದ್ಧೆ ಅಂಧಶ್ರದ್ಧೆಯಾಗಿರಲಿಲ್ಲ, ವ್ಯಾಸರ ಅತುಲನೀಯ ಸಾಮರ್ಥ್ಯ ಮತ್ತು ಸಾಮರ್ಥ್ಯವನ್ನು ಪ್ರತ್ಯಕ್ಷ ಅನುಭವಿಸಿದ ನಂತರದ ತರ್ಕಬದ್ಧ ಪ್ರತಿಕ್ರಿಯೆ ಅದಾಗಿತ್ತು. ಆದ್ದರಿಂದ ಅವರು ಆ ಎರಡರ ಸಮೀಕರಣ ಮಾಡಿದರು ಮತ್ತು ‘ವ್ಯಾಸಪೂರ್ಣಿಮೆ ಆಮೇಲೆ ‘ಗುರುಪೂರ್ಣಿಮೆ ಆಯಿತು. ಆ ದಿನ ಗುರುಗಳ ವಿಧಿಪೂರ್ವಕ ಪೂಜೆಯನ್ನು ಮಾಡುವ ಪದ್ಧತಿಯು ರೂಢಿಗೆ ಬಂತು; ಆದರೆ ಕಾಲದ ಪ್ರವಾಹದಲ್ಲಿ ಕೆಲವು ಶಬ್ದಗಳು ಅವುಗಳ ಸಾಂಸ್ಕೃತಿಕ ಮೌಲ್ಯವನ್ನೇ ಕಳೆದುಕೊಳ್ಳುತ್ತಿವೆ ! ‘ಗುರು ಈ ಶಬ್ದದ ಬಗ್ಗೆಯೂ ಹಾಗೆಯೆ ಆಗಿದೆ. ಇಂದು ‘ಗೂಗಲ್ ಗುರು ಅಥವಾ ‘ಅಚ್ಛೆ ಗುರು ಹೋ ಯಾರ್ !, ಇಂತಹ ಶಬ್ದಗಳು ಕಿವಿಯ ಮೇಲೆ ಬಿದ್ದಾಗ, ‘ಗುರು ಸಂಕಲ್ಪನೆಯ ಪುನರ್ವಿಚಾರ ಮಾಡುವ ಕಾಲ ಸಮೀಪಿಸಿದೆ ಎಂದು ಸ್ಪಷ್ಟವಾಗಿ ಅರಿವಾಗುತ್ತದೆ.
೧. ‘ಯಾರು ಜ್ಞಾನ ಕೊಡುತ್ತಾರೋ ಅವರೇ ಗುರು, ಗುರುಶಬ್ದದ ವ್ಯಾಪ್ತಿ ಇಷ್ಟಕ್ಕೇ ಸೀಮಿತವಾಗಿರದೆ ‘ಗುರು ಶಬ್ದಕ್ಕೆ ದಿವ್ಯ ವಲಯವಿದೆ
ಕೆಲವು ದಶಕಗಳ ಹಿಂದೆ ಶಾಲೆಯ ಶಿಕ್ಷಕರನ್ನು ‘ಗುರೂಜಿ ಎಂದು ಸಂಬೋಧಿಸುವ ರೂಢಿಯಿತ್ತು. ಅದರ ಹಿಂದೆಯೂ ‘ಯಾರ ಜ್ಞಾನ ಕೊಡುತ್ತಾರೋ, ಅವರೇ ಗುರು ಎಂಬ ವಿಚಾರಧಾರೆಯಿತ್ತು. ಅದ್ದರಿಂದಲೇ ಗುರುಪೂರ್ಣಿಮೆಯಂದು ಶಾಲೆ-ಮಹಾವಿದ್ಯಾಲಯಗಳಲ್ಲಿನ ಗುರುಜನರಿಗೆ ಪ್ರಣಾಮ ಮಾಡುವ (ಶೇ. ೨ ರಷ್ಟಾದರೂ) ಶ್ರದ್ಧೆಯುಳ್ಳ ಜನರು ಇಂದು ಕೂಡ ಕಂಡುಬರುತ್ತಾರೆ. ಅವರ ಮನಸ್ಸಿನಲ್ಲಿ ಮತ್ತು ‘ಗೂಗಲ್ಗೆ ಗುರು ಎನ್ನುವವರಲ್ಲಿಯೂ ಜ್ಞಾನ ನೀಡುವವರಿಗೆ ಗುರು ಅನ್ನಬೇಕು ಎಂಬ ಭಾವನೆಯೇ ಇರುತ್ತದೆ.
ವಾಸ್ತವದಲ್ಲಿ ಈ ವಿಚಾರಗಳು ಮೇಲ್ನೋಟಕ್ಕೆ ಆಕ್ಷೇಪಾರ್ಹವೆನಿಸುವುದಿಲ್ಲ, ಶಿಕ್ಷಕರ ಬಗ್ಗೆ ಗೌರವಭಾವ ಇರುವುದು ಯೋಗ್ಯವೇ ಆಗಿದೆ; ಆ ಶಿಕ್ಷಕ ರಕ್ತಮಾಂಸದ ಮನುಷ್ಯಪ್ರಾಣಿಯಾಗಿರಲಿ ಆಥವಾ ಯಂತ್ರಮಾನವ (ಗೂಗಲ್) ಇರಲಿ ! ಹೆಚ್ಚೆಂದರೆ ಇಂತಹವರನ್ನು ‘ದೀಕ್ಷಾಗುರು ಎನ್ನುವ ಬದಲು ‘ಶಿಕ್ಷಣಗುರು ಎಂದು ಹೇಳಿದರಾಯಿತು; ಆದರೆ, ನಮ್ಮ ಸಂಸ್ಕೃತಿಯಲ್ಲಿ ‘ಗುರು ಶಬ್ದದಲ್ಲಿರುವ ದಿವ್ಯ ವಲಯದೊಂದಿಗೆ ಇದು ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತದೆ ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
೨. ಶಿಕ್ಷಕ ಅಥವಾ ಅಧ್ಯಾಪಕ, ಆಚಾರ್ಯ ಮತ್ತು ಗುರು ಇವರಲ್ಲಿ ನಿಜವಾದ ವ್ಯತ್ಯಾಸವೇನು ?
ಅ. ಶಿಕ್ಷಕ ಅಥವಾ ಅಧ್ಯಾಪಕ : ತಮ್ಮ ಉದರಪೋಷಣೆಗಾಗಿ ಶಿಕ್ಷಣ ನೀಡುವವರು. ಇವರು ವಿದ್ಯಾದಾನ ಮಾಡುವುದಿಲ್ಲ, ಇವರು ವಿದ್ಯೆಯನ್ನು ಮಾರಾಟ ಮಾಡುತ್ತಾರೆ.
ಆ. ಆಚಾರ್ಯ : ವಿಷಯವನ್ನು ಕಲಿಸುತ್ತಾರೆ ಮತ್ತು ತಮ್ಮ ಆಚರಣೆಯಿಂದಲೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಾರೆ. ಪ್ರಾಮಾಣಿಕ, ನಿಷ್ಕಳಂಕ ಮತ್ತು ಚಾರಿತ್ರ್ಯದಂತಹ ಗುಣಗಳನ್ನೂ ಕಲಿಸುತ್ತಾರೆ.
ಇ. ಗುರು : ‘ಸ ಗುರುರ್ಯಃ ಕ್ರಿಯಾಃ ಕೃತ್ವಾ ವೇದಮಸ್ಮೈ ಪ್ರಯಚ್ಛತಿ | (ಯಾಜ್ಞವಲ್ಕ್ಯಸ್ಮೃತಿ, ಅಧ್ಯಾಯ ೧, ಶ್ಲೋಕ ೩೪), ಅಂದರೆ ‘ಯಾರು ಉಪನಯನಾದಿ ಸಂಸ್ಕಾರಗಳನ್ನು ಮಾಡಿ ನಂತರ ವೇದಗಳ ಜ್ಞಾನವನ್ನೂ ಕೊಡುತ್ತಾರೆಯೋ, ಅವರು ಗುರು. ಶಿಷ್ಯನಿಂದ ಗುರುಗಳಿಗೆ ಅಪೇಕ್ಷೆ ಏನಿರುತ್ತದೆಯೆಂದರೆ, ಇವನು ಒಬ್ಬ ಯೋಗ್ಯ ವ್ಯಕ್ತಿಯಾಗಬೇಕು. ಗುರುಗಳು ಹಣದ ರೂಪದಲ್ಲಿ ಪ್ರತ್ಯುಪಕಾರದ ಅಪೇಕ್ಷೆ ಇಡುವುದಿಲ್ಲ; ಆದ್ದರಿಂದ ಶಿಕ್ಷಕರಿಗೆ ‘ವಿದ್ಯಾರ್ಥಿ, ಗುರುಗಳಿಗೆ ‘ಶಿಷ್ಯ (ಅನುಶಾಸನದಲ್ಲಿರುವ) ಆಗಿರುತ್ತಾನೆ ಮತ್ತು ಅಚಾರ್ಯರ ‘ಛಾತ್ರ (ಛತ್ರ ಹಿಡಿದು ಗುರುಗಳ ಮತ್ತು ಸಮಾಜದ ಸೇವೆ ಮಾಡುವವನು) ಆಗಿರುತ್ತಾನೆ.
೩. ಪರಾ ಮತ್ತು ಅಪರಾ ವಿದ್ಯೆಗನುಸಾರ ಶಿಕ್ಷಕ, ಅಧ್ಯಾಪಕ, ಪ್ರಾಧ್ಯಾಪಕ ಮತ್ತು ಗುರು ಇವರಲ್ಲಿನ ವ್ಯತ್ಯಾಸ
ಐಹಿಕ ಜೀವನವನ್ನು ಸುಖಮಯಗೊಳಿಸಲು ‘ಅಪರಾ ವಿದ್ಯೆ ಮತ್ತು ಯಾವುದು ವೈಶ್ವಿಕ ಸತ್ಯದ ತಿಳುವಳಿಕೆಯಿಂದ ಬ್ರಹ್ಮಾನಂದವನ್ನುಗಳಿಸಿಕೊಡುತ್ತದೆಯೋ, ಅದು ‘ಪರಾವಿದ್ಯೆ. ಇಂದಿನ ಭಾಷೆಯಲ್ಲಿ ಹೇಳುವುದಾದರೆ, ವಿದ್ಯಾಪೀಠಗಳಲ್ಲಿ ಕಲಿಸುವ ವಿಷಯಗಳು ರಸಾಯನ, ಭೌತಿಕ ಶಾಸ್ತ್ರ ಇತ್ಯಾದಿ ವಿಜ್ಞಾನ ಶಾಖೆಯ, ಶರೀರವಿಜ್ಞಾನ ಇತ್ಯಾದಿ ಆಯುರ್ವೇದದ; ಗಣಿತ, ಅರ್ಥಶಾಸ್ತ್ರ ವಾಣಿಜ್ಯ ಶಾಖೆಯ ಅಥವಾ ಕಾವ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಇತ್ಯಾದಿ ವಿಷಯವೆಂದರೆ ‘ಅಪರಾ ವಿದ್ಯೆ, ಇಂತಹ ಅಪರಾ ವಿದ್ಯೆಯನ್ನು ನೀಡುವವರಿಗೆ ಶಿಕ್ಷಕ, ಅಧ್ಯಾಪಕ, ಪ್ರಾಧ್ಯಾಪಕರೆಂದು ಹೇಳಬಹುದು; ಆದರೆ ಗುರು ಎಂದರೆ ಯಾರಲ್ಲಿ ಗೂಢ ತತ್ತ್ವವನ್ನು ಬೋಧಿಸುವ ಸಾಮರ್ಥ್ಯವಿರುತ್ತದೆಯೋ, ಅವರು. ‘ಯೆ ಹೃದಯೀಚೆ ತೆ ಹೃದಯೀ ಘಾಲೂನ ಶಿಷ್ಯಾಚ್ಯಾಹೀ ಮನಾತ ‘ಆನಂದಾಚೆ ಡೋಹೀ ಆನಂದ ತರಂಗ ಉಮಲವೂ ಶಕೇಲ್; (ಈ ಹೃದಯದಲ್ಲಿರುವುದನ್ನು ಆ ಹೃದಯದೊಳಗೆ ಹಾಕಿ ಶಿಷ್ಯನ ಮನಸ್ಸಿನಲ್ಲಿಯೂ ಆನಂದದ ನದಿಯೊಳಗೆ ಆನಂದದ ತರಂಗ ಉಮ್ಮಳಿಸುವಂತೆ) ಆಮೇಲೆ ಅದರಿಂದ ಮಂಡಿಸಬಹುದಾದ ಸಮೀಕರಣ ಏನೆಂದರೆ,
ಅ. ಒಳ್ಳೆಯ ಶಿಕ್ಷಕ : ಪಾಠದ ವಿಷಯದಲ್ಲಿ ಉತ್ಕೃಷ್ಟ ಅಂಕಗಳನ್ನು ಕೊಡಿಸುವವರು
ಆ. ಒಳ್ಳೆಯ ಆಚಾರ್ಯ : ತಮ್ಮ ವರ್ತನೆಯಿಂದ ಸದಾಚರಣೆಯನ್ನು ಕಲಿಸುವವರ
ಇ. ಒಳ್ಳೆಯ ಗುರು : ನರನಿಂದ ನಾರಾಯಣನನ್ನಾಗಿ ಮಾಡುವ ಕ್ಷಮತೆ ಇರುವವರ
ಗುರುರ್ಬ್ರಹ್ಮ ಗುರುರ್ವಿಷ್ಣುಃ…, ಈ ಶ್ಲೋಕ ಬಹಳಷ್ಟು ಜನರಿಗೆ ಬಾಯಿಪಾಠವಿರುತ್ತದೆ. ಇಲ್ಲಿ ಗುರುಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ ಎಂದು ಹೇಳಲಾಗಿದೆ. ಇದು ಹೇಗೆ ? ಕಾರಣ ಸರಳವಾಗಿದೆ ! ತಂದೆ-ತಾಯಿಯರು ಕೇವಲ ನಮಗೆ ಜನ್ಮ ನೀಡಿದರು; ಆದರೆ ಯಾರು ಆ ದೇಹದಲ್ಲಿ ವ್ಯಕ್ತಿತ್ವವನ್ನು ಅರಳಿಸುವವರೇ ಗುರು ! ಆದ್ದರಿಂದ ಅವರೆ ಬ್ರಹ್ಮ. ಪರಾವಿದ್ಯೆಯ ಮಾರ್ಗ ಸುಲಭವಲ್ಲ. ಆ ಮಾರ್ಗದಲ್ಲಿನ ಅಡಚಣೆಗಳನ್ನು ತಮ್ಮ ಉಪದೇಶದಿಂದ ದೂರಗೊಳಿಸಿ ಅಧ್ಯಾತ್ಮಚಿಂತನೆಯನ್ನು ಸುಲಭಗೊಳಿಸುತ್ತಾನೆಂದು ಅವರು ಗುರು, ಪಾಲನಕರ್ತಾ ವಿಷ್ಣು ಮತ್ತು ಮನಸ್ಸಿನಲ್ಲಿನ ಷಡ್ವಿಕಾರಗಳನ್ನು ಸಂಹಾರ ಮಾಡುವವರು ಮಹೇಶ. ಮಹರ್ಷಿ ವ್ಯಾಸರು ವೇದವಿಭಜನೆಯ ಮೂಲಕ ಪುರಾಣ-ಲೇಖನದ ಮೂಲಕ ಈ ಮೂರೂ ಕಾರ್ಯಗಳನ್ನು ಮಾಡಿದರು; ಆದ್ದರಿಂದ ಅವರು ‘ಗುರು ಸಂಕಲ್ಪನೆಯ ಮಾನದಂಡ (ಐಕಾನ್) ಆದರು.
೪. ಗುರು ಮತ್ತು ಗುರುಜನ ಇದರಲ್ಲಿನ ವ್ಯತ್ಯಾಸ
ಹಾಗೆ ನೋಡಿದರೆ, ‘ಗುರು ಈ ಶಬ್ದಕ್ಕೆ ‘ದೊಡ್ಡದು (ವಯಸ್ಸಿನಲ್ಲಿ, ಆಕಾರದಲ್ಲಿ, ತೂಕದಲ್ಲಿ) ಹೀಗೂ ಅರ್ಥವಿದೆ. ಅದಕ್ಕನುಸಾರ ಹಿರಿಯರನ್ನು ‘ಗುರುಜನ ಎನ್ನಲಾಗುತ್ತದೆ. ಆಕಾರದಲ್ಲಿ ಎಲ್ಲಕ್ಕಿಂತ ದೊಡ್ಡದಾಗಿರುವ ಗ್ರಹಕ್ಕೆ ‘ಗುರು ಈ ಹೆಸರನ್ನು ನೀಡಲಾಗಿದೆ ಮತ್ತು ‘ಗುರುತತ್ತ್ವಾಕರ್ಷಣೆಯ ಸಿದ್ಧಾಂತದಲ್ಲಿನ ಗುರುತ್ವವು ತೂಕವನ್ನು ಅವಲಂಬಿಸಿರುತ್ತದೆ. ಈ ಶಬ್ದಕೋಶದ ಅರ್ಥಕ್ಕನುಸಾರ ಹಿರಿಯರಿಗೆ ‘ಗುರು ಎಂದು ಮನ್ನಣೆ ಕೊಡುವುದು ಯೋಗ್ಯವೇ ಆಗಿದೆ. ಕವಿ ಕಾಳಿದಾಸರೂ ಶಕುಂತಳೆಯನ್ನು ಅತ್ತೆಯ ಮನೆಗೆ ಕಳುಹಿಸುವಾಗ ಕಣ್ವಮುನಿಗಳ ಬಾಯಿಯಿಂದ ‘ಶುಶ್ರೂಷಸ್ವ ಗುರುನ್ (ಹಿರಿಯರ ಶುಶ್ರೂಷೆ ಮಾಡುತ್ತಾ ಇರು) ಎಂಬ ಆಶೀರ್ವಾದವಿದೆ. ಆದ್ದರಿಂದ ಹಿರಿಯರಾಗಿರುವ ಗುರುಜನರು ಮತ್ತು ಅಧ್ಯಾಪಕರು ಸದಾಕಾಲ ವಂದನೀಯರಾಗಿರುತ್ತಾರೆ; ಆದರೆ ಗುರುಪೂರ್ಣಿಮೆಯಂದು ಮಾತ್ರ ಸಶ್ರದ್ಧ ಅಂತಃಕರಣದಿಂದ ಪೂಜೆ ಮಾಡುವುದು ವ್ಯಾಸತುಲ್ಯ ವ್ಯಕ್ತಿಗಳದ್ದೇ.
೫. ಅವಧೂತರು (ಭಗವಾನ ದತ್ತ) ಮಾಡಿಕೊಂಡಿರುವ ೨೪ ಗುರುಗಳೂ ಗುರುಗಳೇ ಆಗಿದ್ದಾರೆಂದು ಅವರು ಸ್ವತಃ ಹೇಳಿದ್ದಾರೆ
ಶಾಲೆ-ಮಹಾವಿದ್ಯಾಲಯಗಳಲ್ಲಿನ ಅಧ್ಯಾಪಕರನ್ನು ಇಲ್ಲಿ ಪರಿಗಣಿಸುವುದಿಲ್ಲ, ಏಕೆಂದರೆ ಇಲ್ಲಿ ಅವರ ವಯಸ್ಸು, ಆಕಾರ ಮತ್ತು ತೂಕ ಇವುಗಳ ಸಂಬಂಧ ಬರುವುದಿಲ್ಲ. ಈಗ ಅವರಿಗೆ ‘ಟೀಚರ್ಸ್‌ಡೇಯ (ಶಿಕ್ಷಕ ದಿನದ) ವ್ಯವಸ್ಥೆಯೂ ಇದೆ. ಇಲ್ಲಿ ಯಾರಿಗಾದರೂ ಸಂದೇಹ ಬರಬಹುದು, ಏನೆಂದರೆ, ‘ಶ್ರೀಮದ್ಭಾಗವತದಲ್ಲಿ ಅವಧೂತರ ೨೪ ಗುರುಗಳನ್ನು ಹೇಳಲಾಗಿದೆ, ಅವರ ಸಹವಾಸ ಹೇಗೆ ಮಾಡುವುದು ?
‘ಎತೆ ಮೇ ಗುರವೋ ರಾಜನ್ ಚತುರ್ವಿಶತಿರಾಶ್ರಿತಾಃ | (ಶ್ರೀಮದ್ಭಾಗವತ, ಸ್ಕಂಧ ೧೧, ಅಧ್ಯಾಯ ೭, ಶ್ಲೋಕ ೩೫), ಅಂದರೆ ‘ಹೇ ರಾಜಾ, ನಾನು ಈ ೨೪ ಗುರುಗಳ ಆಶ್ರಯ ಪಡೆದಿದ್ದೇನೆ. ಈ ಶಬ್ದಗಳನ್ನು ಅವಧೂತರ ಬಾಯಿಯಿಂದ ಮಹರ್ಷಿ ವ್ಯಾಸರು ಹೇಳಿಸಿದರು, ಹೀಗಿರುವಾಗ ನಾವು ಕೂಡ ಅಧ್ಯಾಪಕರಿಗೆ ‘ಗುರು ಎಂದು ಎಕೆ ಹೇಳಬಾರದು ? ಎನ್ನುವ ವಿಚಾರ ಬರಬಹುದು. ಇದರ ಉತ್ತರ ಭಾಗವತದಲ್ಲಿಯೇ ಇದೆ. ವಸ್ತುತಃ ‘ಉದ್ಧರೇತ್ ಆತ್ಮನಾತ್ಮಾನಮ್ | ಅಂದರೆ ‘ತಮ್ಮನ್ನು ತಾವೇ ಉದ್ಧಾರ ಮಾಡಿಕೊಳ್ಳಲಿಕ್ಕಿರುತ್ತದೆ, ಅವಧೂತರು ತಾವೇ ‘ಗುರು ಆಗಿ ಯದುರಾಜನಿಗೆ ಈ ಉಪದೇಶವನ್ನು ಮಾಡಿದ್ದಾರೆ. ಪ್ರತಿಯೊಬ್ಬರ ಜೀವನಶೈಲಿಯ ನಿರೀಕ್ಷಣೆ ಮಾಡಿ ಅದರಿಂದ ತಾನು ಏನಾದರೂ ಕಲಿಯುವ ದೃಷ್ಟಿಯನ್ನು ಯದೂವಿಗೆ ನೀಡಲು ಆ ಪ್ರಸಂಗವಿದೆ. ಇಲ್ಲಿ ಪ್ರತ್ಯಕ್ಷ ಅವಧೂತರೆ ಗುರು ಆಗಿದ್ದಾರೆ.
೬. ‘ಗುರುವಿನ ವ್ಯಾಪ್ತಿ ಮತ್ತು ಲಕ್ಷಣಗಳು
ಗುರುಪೂರ್ಣಿಮೆಯ ದಿನ ಇಂತಹ ಆತ್ಮಜ್ಞಾನ ನೀಡುವ ಗುರುಗಳಿಗೆ ನಮನ ಮಾಡಬೇಕು.
ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿ
ದ್ವಂದಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷೀಭೂತಂ|
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
ಅರ್ಥ : ಬ್ರಹ್ಮರೂಪ, ಆನಂದರೂಪ, ಪರಮೋಚ್ಚ ಸುಖ ನೀಡುವ, ಕೇವಲ ಜ್ಞಾನಸ್ವರೂಪ, ದ್ವಂದ್ವರಹಿತ, ಆಕಾಶದಂತೆ (ನಿರಾಕಾರ), ‘ತತ್ತ್ವಮಸಿ ಈ ಮಹಾವಾಕ್ಯಗಳ ಗಮನ (ಯಾರನ್ನು ಉದ್ದೇಶಿಸಿ ಅದು ನೀನೇ ಆಗಿದ್ದೀಯ, ಎಂಬ ವೇದವಾಕ್ಯವಿದೆಯೋ ಅದು) ಒಂದೇ ಒಂದು, ನಿತ್ಯ, ಶುದ್ಧ, ಸ್ಥಿರ, ಸರ್ವಜ್ಞ, ಸರ್ವಸಾಕ್ಷಿ, ಭಾವಾತೀತ, ಗುಣಾತೀತನಾಗಿರುವ ಇಂತಹ ಸದ್ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.
ಈ ಶ್ಲೋಕದಲ್ಲಿನ ಜ್ಞಾನಮೂರ್ತಿ, ದ್ವಂದ್ವಾತೀತ, ಭಾವಾತೀತ ತ್ರಿಗುಣರಹಿತ ಮತ್ತು ಗಗನಸದೃಶ (ಸರ್ವವ್ಯಾಪಿ ಆಗಿದ್ದರೂ ನಿರ್ಲಿಪ್ತ) ಈ ವಿಶೇಷಣೆಯೇ ‘ಗುರುಗಳ ವ್ಯಾಪ್ತಿ ಮತ್ತು ಲಕ್ಷಣಗಳನ್ನು ಸ್ಪಷ್ಟಪಡಿಸುತ್ತವೆ. ಅಂತಹ ವ್ಯಾಸತುಲ್ಯ ಗುರುಗಳಿಗೆ ವಂದನೆ.
– ಡಾ. ಲೀನಾ ರಸ್ತೋಗಿ (ಆಧಾರ : ತ್ರೈಮಾಸಿಕ ‘ಪ್ರಜ್ಞಾಲೋಕ, ಜುಲೈ-ಸಪ್ಟೆಂಬರ ೨೦೨೩)