ಇನ್ನು ‘ಕ್ರೆಡಿಟ್‌ಕಾರ್ಡ್ ಪೇಮೆಂಟ್ ನೆಟ್‌ವರ್ಕ್ ಪ್ರೊವೈಡರ‍್ಸಗಳ ಏಕಸ್ವಾಮ್ಯಕ್ಕೆ ಪೂರ್ಣವಿರಾಮ !

ದೇಶದಲ್ಲಿ ‘ಕ್ರೆಡಿಟ್‌ಕಾರ್ಡ್’ಗಳನ್ನು ವಿತರಣೆ ಮಾಡುವ ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ ಬ್ಯಾಂಕ್ ಇತ್ತೀಚೆಗೆ ಒಂದು ಹೊಸ ನಿಯಮವನ್ನು ಘೋಷಿಸಿದೆ. ಈ ಲೇಖನದ ಮೂಲಕ ನಾವು ಅದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಲಿಕ್ಕಿದ್ದೇವೆ.

ಟಿಪ್ಪಣಿ : ೧. ‘ಕ್ರೆಡಿಟ್ ಕಾರ್ಡ್, ಅಂದರೆ ಬ್ಯಾಂಕ್ ಖಾತೆದಾರನಿಗೆ ಆತನ ಖಾತೆಯಿಂದ ಒಂದು ನಿರ್ದಿಷ್ಟ ಮೊತ್ತದವರೆಗೆ ಹಣ ಪಡೆಯಲು ಅನುಮತಿ ನೀಡುತ್ತದೆ. ಅದರ ಮೂಲಕ ಖಾತೆದಾರನು ವಿವಿಧ ವಸ್ತುಗಳನ್ನು ಖರೀದಿಸಿ ಅವುಗಳ ಬಿಲ್ ಅನ್ನು ತಿಂಗಳಿಗೊಮ್ಮೆ ತುಂಬಿಸಬಹುದು.

೨. ನೆಟ್‌ವರ್ಕ್ ಪ್ರೊವೈಡರ್, ಅಂದರೆ ಹೊರಗಿನಿಂದ ಹಣ ಪೂರೈಸುವ ಕಂಪನಿ.

ಶ್ರೀ. ಅನಿಕೇತ ವಿಲಾಸ ಶೇಟೆ

೧. ರಿಸರ್ವ ಬ್ಯಾಂಕ್ ಯಾವ ನಿಯಮವನ್ನು ಬದಲಾಯಿಸಿತು ? ಮತ್ತು ಅದರಿಂದ ಗ್ರಾಹಕರಿಗೆ ಆಗುವ ಲಾಭ ಯಾವುದು ?

‘ಕ್ರೆಡಿಟ್ ಕಾರ್ಡ್’ಗಳನ್ನು ನೀಡುವ ಬ್ಯಾಂಕ್‌ಗಳು ನಿರ್ದಿಷ್ಟ ‘ಕಾರ್ಡ್ ನೆಟ್‌ವರ್ಕ್ ಪ್ರೊವೈಡರ‍್ಸ್’ರೊಂದಿಗೆ ಉದಾ. ‘ವಿಸಾ’ (VISA), ಮಾಸ್ಟರ್ ಕಾರ್ಡ್ (MASTER CARD), ‘ರುಪೆ’ (RUPAY), ‘ಡಿನರ‍್ಸ್ ಕ್ಲಬ್’ (DINERS CLUB) ಮತ್ತು ಅಮೇರಿಕನ್ ಎಕ್ಸ್‌ಪ್ರೆಸ್ (AMERICAN EXPRESS) ಈ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಸಂಬಂಧಪಟ್ಟ ಬ್ಯಾಂಕ್‌ಗಳ ಗ್ರಾಹಕರಿಗೆ ‘ಕ್ರೆಡಿಟ್ ಕಾರ್ಡ್’ ತೆಗೆದುಕೊಳ್ಳುವಾಗ ಆ ಬ್ಯಾಂಕ್ ಯಾವ ‘ಕಾರ್ಡ್ ನೆಟ್‌ವರ್ಕ್ ಪ್ರೊವೈಡರ‍್ಸ್’ನೊಂದಿಗೆ ಒಪ್ಪಂದ ಮಾಡಿಕೊಂಡಿದೆಯೋ, ಅದೇ ಕಾರ್ಡ್ ತೆಗೆದುಕೊಳ್ಳ ಬೇಕಾಗುತ್ತಿತ್ತು. ಇಲ್ಲಿ ಗ್ರಾಹಕನಿಗೆ ಪರ್ಯಾಯವಿರಲಿಲ್ಲ. ಈಗ ರಿಸರ್ವ ಬ್ಯಾಂಕ್ ಎಲ್ಲ ಬ್ಯಾಂಕ್‌ಗಳಿಗೆ ಒಂದಕ್ಕಿಂತ ಹೆಚ್ಚು ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಹಾಗೂ ಗ್ರಾಹಕರಿಗೆ ಕಾರ್ಡ್ ತೆಗೆದುಕೊಳ್ಳುವಾಗ ‘ನೆಟ್‌ವರ್ಕ್ ಪ್ರೊವೈಡರ್’ಅನ್ನು ಆರಿಸುವ ಸೌಲಭ್ಯ ನೀಡುವ ಸೂಚನೆಯನ್ನು ಜ್ಯಾರಿ ಮಾಡಿದೆ. ಆದ್ದರಿಂದ ಬ್ಯಾಂಕ್ ಮತ್ತು ‘ನೆಟ್‌ವರ್ಕ್ ಪ್ರೊವೈಡರ್ಸ್’ಗಳ ಸರ್ವಾಧಿಕಾರಶಾಹಿಗೆ ಕಡಿವಾಣ ಬೀಳಲಿಕ್ಕಿದೆ.

ಇದುವರೆಗೆ ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳು ಹೆಚ್ಚೆಚ್ಚು ಕಾರ್ಡ್ ಗಳನ್ನು ವಿತರಣೆ ಮಾಡಲು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಪ್ರೋತ್ಸಾಹ ಭತ್ತೆ (ಇನ್ಸೆಂಟಿವ್) ನೀಡುತ್ತಿದ್ದವು, ಅದು ಇನ್ನು ಮುಂದೆ ಇರುವುದಿಲ್ಲ. ಈಗ ಗ್ರಾಹಕರಿಗೆ ‘ನೆಟ್‌ವರ್ಕ್ ಪ್ರೊವೈಡರ‍್ಸ್’ಗಳನ್ನು ಆರಿಸುವ ಅಧಿಕಾರ ನೀಡಿರುವುದರಿಂದ ಈ ‘ಪ್ರೋತ್ಸಾಹ ಭತ್ತೆ’ಯನ್ನು ಬ್ಯಾಂಕಿಗೆ ಕೊಡದೆ ನೇರವಾಗಿ ಗ್ರಾಹಕರಿಗೆ ಕೊಡ ಬೇಕಾಗುತ್ತದೆ. (ಸ್ಪರ್ಧೆ ಹೆಚ್ಚಾಗಿರುವುದರಿಂದ ಗ್ರಾಹಕರನ್ನು ಗಳಿಸುವುದು ಹಾಗೂ ಅವರನ್ನು ಉಳಿಸಿಕೊಳ್ಳುವುದು, ಈಗ ‘ನೆಟ್‌ವರ್ಕ್ ಪ್ರೊವೈಡರ್’ಗಳ ಹೊಣೆಯಾಗುತ್ತದೆ.) ಈ ನಿಯಮ ಇಲ್ಲಿ ಅನ್ವಯವಾಗುತ್ತದೆ.

೨. ಖಾತೆದಾರನು ‘ನೆಟ್‌ವರ್ಕ್ ಪ್ರೊವೈಡರ್’ಅನ್ನು ಆರಿಸುವುದರಿಂದ ಅವನಿಗೆ ಮತ್ತು ದೇಶಕ್ಕಾಗುವ ಲಾಭ

ಈಗ ನಿಮಗೆ, ಯಾವ ‘ನೆಟ್‌ವರ್ಕ್ ಪ್ರೊವೈಡರ್’ ಇದ್ದರೆ ಏನು ಎಂಬ ಒಂದು ಪ್ರಶ್ನೆ ಬೀಳಬಹುದು ? ‘ವೀಸಾ’, ಮಾಸ್ಟರ್ ಕಾರ್ಡ್’, ‘ರುಪೇ’, ‘ಡಿನರ್ಸ್ ಕ್ಲಬ್’ ಮತ್ತು ‘ಅಮೇರಿಕನ್ ಎಕ್ಸ್‌ಪ್ರೆಸ್’ ಇವೆಲ್ಲವೂ ವಿದೇಶಿ ‘ನೆಟ್‌ವರ್ಕ್ ಪ್ರೊವೈಡರ್’ಗಳು ಆಗಿವೆ. ನಮ್ಮ ಪ್ರತಿಯೊಂದು ಕಾರ್ಡ್ ವ್ಯವಹಾರದಿಂದ ನಿರ್ದಿಷ್ಟ ಮೊತ್ತ (ನೆಟವರ್ಕ ಶುಲ್ಕ) ಆರ್ಥಿಕ ವ್ಯವಹಾರ ಶುಲ್ಕ (ಇಂಟರಚೇಂಜ ಫೀ) ಮತ್ತು ಪ್ರಕ್ರಿಯೆ ಫೀ (ಪ್ರೊಸೆಸ್ಸಿಂಗ್ ಫೀ) ರೂಪದಲ್ಲಿ ಈ ವಿದೇಶಿ ‘ನೆಟ್‌ವರ್ಕ್ ಪ್ರೊವೈಡರ್’ಗೆ ಸಿಗುತ್ತಿರುತ್ತದೆ. ಇಂದು ಭಾರತದಲ್ಲಿ ಸುಮಾರು ೧೦ ಕೋಟಿಗಳಷ್ಟು ಕ್ರೆಡಿಟ್ ಕಾರ್ಡ್‌ದಾರರಿದ್ದಾರೆ. ಇಷ್ಟೆಲ್ಲ ಕಾರ್ಡ್‌ಗಳಿಂದಾಗುವ ವ್ಯವಹಾರದ ಮತ್ತು ಅದರಿಂದ ಈ ವಿದೇಶಿ ‘ನೆಟ್‌ವರ್ಕ್ ಪ್ರೊವೈಡರ್’ಗಳಿಗೆ ಸಿಗುವ ಮೊತ್ತ ತುಂಬಾ (ಪ್ರತಿ ವ್ಯವಹಾರ ಅನುಕ್ರಮವಾಗಿ ಶೇ. ೦.೬ ರಿಂದ ೧.೫ ರಷ್ಟು) ದೊಡ್ಡದಾಗಿದೆ. ನಮ್ಮ ಹಣ, ನಮ್ಮ ದೇಶದಲ್ಲಿ ವ್ಯವಹಾರ ಮತ್ತು ಅದರಲ್ಲಿನ ಹಣ ಮಾತ್ರ ವಿದೇಶಿ ಕಂಪನಿಗಳಿಗೆ, ಇಷ್ಟರವರೆಗೆ ಇಂತಹ ಸ್ಥಿತಿ ಇತ್ತು. ಈಗ ಮಾತ್ರ ಇದನ್ನು ತಪ್ಪಿಸಬಹುದು. ಭಾರತದ ಹಣ ಭಾರತದಲ್ಲಿಯೆ ಉಳಿಯಲು ಸಾಧ್ಯವಿದೆ. ನಾವೆಲ್ಲರೂ ‘ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ’ (ಎನ್.ಪಿ.ಸಿ.ಐ.) ಪುರಸ್ಕೃತ ‘ರುಪೇ (RUPY) ಕಾರ್ಡ್’ಗೆ ಆಗ್ರಹಿಸಿ ‘ಮೇಕ್ ಇನ್ ಇಂಡಿಯಾ’ (ಭಾರತದಲ್ಲಿ ಉತ್ಪಾದನೆಯಾಗುವ ವಸ್ತು) ಈ ಚಳವಳಿಗೆ ಕೈಜೋಡಿಸಬಹುದು. ಅದರ ಪರಿಣಾಮವೆಂದು ‘ನೆಟ್‌ವರ್ಕ್ ಪ್ರೊವೈಡರ್’ಗಳ ನಡುವೆ ಸ್ಪರ್ಧೆ ಹೆಚ್ಚಾಗಲಿಕ್ಕಿದೆ ಹಾಗೂ ಅದರಿಂದ ‘ನೆಟ್‌ವರ್ಕ್ ಶುಲ್ಕ’ದಲ್ಲಿ ಕೂಡ ಸ್ಪರ್ಧೆ ನಡೆಯಬಹುದು. ಆಗ ಆ ಶುಲ್ಕವೂ ಕಡಿಮೆಯಾಗಬಹುದು ಹಾಗೂ ‘ಕ್ರೆಡಿಟ್ ಕಾರ್ಡ್’ನ ಹಣ ತಡವಾಗಿ (ಲೇಟ್ ಪೇಮೆಂಟ್) ತುಂಬಿಸಿದರೆ ಅದಕ್ಕೆ ಶೇ. ೩೬ ರಿಂದ ೪೨ ರಷ್ಟು ವಾರ್ಷಿಕ ಬಡ್ಡಿ ಹೇರಲಾಗುತ್ತದೆ, ಅದು ಕೂಡ ಈ ಸ್ಪರ್ಧೆಯಿಂದ ಕಡಿಮೆಯಾಗುವ ಸಾಧ್ಯತೆಯಿದೆ.

೩. ‘ನೆಟ್‌ವರ್ಕ್ ಪ್ರೊವೈಡರ್ಸ್’ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಅವಶ್ಯ ತೆಗೆದುಕೊಳ್ಳಿರಿ !

ಈ ಹೊಸ ಬದಲಾವಣೆ ಸಪ್ಟೆಂಬರ್ ೨೦೨೪ ರಿಂದ ಅನ್ವಯವಾಗಲಿಕ್ಕಿದೆ. ಇನ್ನು ಮುಂದೆ ಬ್ಯಾಂಕ್ ಹೊಸ ಕಾರ್ಡ್ ನೀಡುವಾಗ ಗ್ರಾಹಕನಿಗೆ ಯಾವ ‘ನೆಟ್‌ವರ್ಕ್ ಪ್ರೊವೈಡರ್’ನ ಕಾರ್ಡ್ ಬೇಕೆಂದು ಆಯ್ಕೆ ಮಾಡುವ ಪರ್ಯಾಯ ನೀಡುವುದು ಕಡ್ಡಾಯವಾಗುವುದು. ಸದ್ಯ ಇರುವ ಕಾರ್ಡ್ ಗ್ರಾಹಕರಿಗೆ ಅವರ ಕಾರ್ಡ್ ನವೀಕರಣಗೊಳಿಸುವಾಗ ಈ ಪರ್ಯಾಯ ಸಿಗುವುದು. ರಿಸರ್ವ ಬ್ಯಾಂಕ್‌ನ ಈ ನಿರ್ಣಯದಿಂದ ‘ಕ್ರೆಡಿಟ್ ಕಾರ್ಡ್’ಗಳ ‘ನೆಟ್‌ವರ್ಕ್ ಪ್ರೊವೈಡರ್’ಗಳ ಸರ್ವಾಧಿಕಾರಶಾಹಿಗೆ ಕಡಿವಾಣ ಬೀಳಲಿಕ್ಕಿದೆ. ಇನ್ನು ಮುಂದೆ ಹೊಸ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಅಥವಾ ಈಗ ಇರುವ ಕ್ರೆಡಿಟ್ ಕಾರ್ಡ್ ನವೀಕರಣಗೊಳಿಸುವಾಗ ‘ನೆಟ್‌ವರ್ಕ್ ಪ್ರೊವೈಡರ್’ಅನ್ನು ಆಯ್ಕೆ ಮಾಡುವ ಅವಕಾಶವನ್ನು ತಪ್ಪದೆ ಉಪಯೋಗಿಸಿರಿ.

– ಶ್ರೀ. ಅನಿಕೇತ ವಿಲಾಸ ಶೇಟೆ, ಪ್ರಮಾಣಪತ್ರಧಾರಕ ಆರ್ಥಿಕ ನಿಯೋಜಕ, ಚಿಂಚ್‌ವಡ, ಪುಣೆ (೧೩.೩.೨೦೨೪)