ಮುಳುಗಿದ ದುಬೈ

ದೇಶದಲ್ಲಿ ಪ್ರತಿ ವರ್ಷ ಮುಂಬಯಿ, ಬೆಂಗಳೂರಿ ನಂತಹ ಮಹಾನಗರಗಳಲ್ಲಿ ಧಾರಾಕಾರ ಮಳೆಯಿಂದಾಗಿ, ಅನೇಕ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗುವುದನ್ನು ನೋಡುತ್ತೇವೆ. ಇಂತಹ ಸಮಸ್ಯೆ ಉದ್ಭವಿಸಬಾರದು ಎಂದು ಅನೇಕ ವರ್ಷಗಳಿಂದ ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿರುತ್ತದೆ; ಆದರೆ ನಗರದ ಕೆಲವು ಪ್ರದೇಶಗಳ ಭೌಗೋಳಿಕ ಸ್ಥಿತಿ ಹೇಗಿದೆಯೆಂದರೆ, ಎಷ್ಟು ಪ್ರಯತ್ನಿಸಿದರೂ ಅಲ್ಲಿ ನೀರು ಸಂಗ್ರಹಗೊಳ್ಳದಂತೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಜಗತ್ತಿನ ಒಂದು ಸುವ್ಯವಸ್ಥಿತ ಮತ್ತು ಅತ್ಯಾಧುನಿಕ ನಗರ ದುಬೈಯಲ್ಲಿ ಏಪ್ರಿಲ್‌ ೧೬ ರಂದು ಸುರಿದ ಧಾರಾಕಾರ ಮಳೆಯಿಂದಾಗಿ ಸಂಪೂರ್ಣ ದುಬೈ ನಗರ ನೀರಿನಲ್ಲಿ ಮುಳುಗಿರುವ ದೃಶ್ಯವನ್ನು ಜಗತ್ತು ನೋಡಿದೆ. ಮುಂಬಯಿಯಲ್ಲಿ ಯಾವತ್ತೂ ವಿಮಾನನಿಲ್ದಾಣದಲ್ಲಿ ನೆರೆಹಾವಳಿಯ ಸ್ಥಿತಿ ಬರುವುದಿಲ್ಲ; ಆದರೆ ದುಬೈ ವಿಮಾನ ನಿಲ್ದಾಣದಲ್ಲಿ, ರನ್‌ ವೇ ಮೇಲೆ ಕೆಲವು ಅಡಿಗಳಷ್ಟು ನೀರು ತುಂಬಿತ್ತು. ರೈಲು, ಮೆಟ್ರೋ ಮತ್ತು ರಸ್ತೆಗಳು ಎಲ್ಲವೂ ಜಲಾವೃತ್ತವಾಗಿತ್ತು. ಇದರಿಂದ ಶಾಲೆಯನ್ನು ಮುಚ್ಚುವಂತೆ ಆಡಳಿತ ಆದೇಶ ನೀಡಬೇಕಾಯಿತು. ದುಬೈಯಲ್ಲಿ ಕೃತಕ ಮಳೆಯಿಂದಾಗಿ ಈ ಪರಿಸ್ಥಿತಿ ಉದ್ಭವಿಸಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಕೃತಿಗೆ ವಿರುದ್ಧ ಹೋಗಿ, ಕೃತಿಯನ್ನು ಮಾಡಿದ್ದರಿಂದ ಅಲ್ಲಿ ಈ ವಿಪತ್ತು ಎದುರಾಗಿತ್ತು. ಭಾರತದ ಮಹಾನಗರಗಳನ್ನು ದುಬೈನ ಅಭಿವೃದ್ಧಿ ಮತ್ತು ಸಮೃದ್ಧಿಗೆ ಹೋಲಿಸಲಾಗುವುದಿಲ್ಲ; ಆದರೆ ಮಳೆ ಬಂದ ರೀತಿ ಮತ್ತು ಅದರಿಂದ ಆಗಿರುವ ದುಬೈನ ಸ್ಥಿತಿಯನ್ನು ನೋಡಿದರೆ, ‘ನಮ್ಮ ಮಹಾನಗರಗಳು ಎಷ್ಟು ಪಟ್ಟು ಚೆನ್ನಾಗಿದೆ’ ಎಂದೇ ಭಾರತೀಯರ ಮನಸ್ಸಿನಲ್ಲಿ ವಿಚಾರ ಬಂದಿರಬಹುದು. ಇದರಲ್ಲಿ ಯಾವುದೇ ಸಂಶಯವಿಲ್ಲ. ‘ನಿಸರ್ಗದ ಮುಂದೆ ಎಲ್ಲ ಅತ್ಯಾಧುನಿಕ ಮತ್ತು ಸುಧಾರಿತ ಜ್ಞಾನ ಎಂದು ಕರೆಯಲ್ಪಡುವ ಎಲ್ಲವೂ ಎಷ್ಟು ಅಪೂರ್ಣವಾಗಿದೆ’ ಎಂದು ಗಮನಕ್ಕೆ ಬರುತ್ತದೆ.

ದುಬೈ ನಗರದಲ್ಲಿ ಮಾತ್ರವಲ್ಲ, ನ್ಯೂಯಾರ್ಕ್ ನಗರವೂ ಈ ಹಿಂದೆ ಧಾರಾಕಾರ ಮಳೆಯಿಂದ ಮುಳುಗಿ ಹೋಗಿರುವುದನ್ನು ಜಗತ್ತೇ ನೋಡಿದೆ. ‘ದುಬೈಯಲ್ಲಿ ಹೀಗೇನಾದರೂ ಆಗಬಹುದು ಮತ್ತು ಇಂತಹ ವಿಪತ್ತು ಎದುರಾಗಬಹುದು ?’ ಎನ್ನುವ ಕಲ್ಪನೆಯೂ ನಗರವನ್ನು ನಿರ್ಮಿಸಿರುವವರಿಗೆ ತಿಳಿದಿರಲಿಕ್ಕಿಲ್ಲ. ಈಗಲೂ ದುಬೈನ ಮಳೆಯಿಂದಾದ ಪರಿಸ್ಥಿತಿಯ ಬಗ್ಗೆ ಅಲ್ಲಿ ಅಭ್ಯಾಸ ನಡೆಸಿ, ಮತ್ತೆ ಅಂತಹ ಮಳೆ ಬಂದರೆ, ಪುನಃ ಅಂತಹ ಪರಿಸ್ಥಿತಿ ಬರದಂತೆ ಕ್ರಮಗಳನ್ನು ಕೈಗೊಳ್ಳಬಹುದು; ಆದರೆ ಅದನ್ನು ಪ್ರತ್ಯಕ್ಷವಾಗಿ ಎಷ್ಟರ ಮಟ್ಟಿಗೆ ಮಾಡಬಹುದು ? ಎಂದು ನೋಡಬೇಕಾಗಿದೆ. ಬಹುಮಹಡಿ ಕಟ್ಟಡಗಳು, ದೊಡ್ಡ ದೊಡ್ಡ ಸೇತುವೆಗಳು, ರೈಲುಮಾರ್ಗಗಳು ಮತ್ತು ಮೆಟ್ರೋ ಜಾಲಗಳನ್ನು ನಿರ್ಮಿಸಿರುವುದರಿಂದ, ಈಗ ಇವುಗಳ ರಚನೆಯಲ್ಲಿ ಬದಲಾವಣೆ ಮಾಡುವುದು ಕಠಿಣವಾಗುತ್ತದೆ ಎನ್ನುವುದು ಗಮನಕ್ಕೆ ಬರುತ್ತದೆ. ನಮ್ಮ ಕೆಲವು ನಗರಗಳಲ್ಲಿ ಕೊಳಚೆ ನೀರಿನ ಒಳಚರಂಡಿ ವ್ಯವಸ್ಥೆಯು ಬ್ರಿಟಿಷರ ಕಾಲದ್ದಾಗಿದೆ. ಇದರಲ್ಲಿ ಬದಲಾವಣೆ ಮಾಡುವ ಪ್ರಯತ್ನಗಳಿಗೆ ವಿವಿಧ ಕಟ್ಟಡ ಕಾಮಗಾರಿಗಳಿಂದ ಕಠಿಣವಾಗಿರುತ್ತಿರುವುದು ಆಡಳಿತದ ಗಮನಕ್ಕೆ ಬಂದಿದೆ. ಇದರಿಂದ ಪರಿಸ್ಥಿತಿಯನ್ನು ಬದಲಾವಣೆ ಮಾಡುವುದಕ್ಕಿಂತ ಅದನ್ನು ಎದುರಿಸಬಲ್ಲ ಪರಿಹಾರಗಳನ್ನು ಹುಡುಕಲು ಪ್ರತಿ ವರ್ಷವೂ ಪ್ರಯತ್ನಗಳನ್ನು ಮಾಡಲಾಗುತ್ತದೆ, ಅಂತಹ ಪ್ರಯತ್ನಗಳನ್ನು ದುಬೈನಲ್ಲಿ ಮಾಡಬೇಕಾಗುತ್ತದೆಯೆಂದು ಈಗ ಕಂಡು ಬರುತ್ತದೆ.

ವಿನಾಶ ಅನಿವಾರ್ಯ

ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಷಗಳಲ್ಲಿ, ಪ್ರಕೃತಿಯಲ್ಲಿ ಪ್ರಮುಖ ಬದಲಾವಣೆಯಾಗುತ್ತಿರುವುದು ಕಂಡುಬಂದಿದೆ. ಈ ಬದಲಾವಣೆಯೆಂದರೆ ಜಾಗತಿಕ ಮಟ್ಟದ ಮಾಲಿನ್ಯದಿಂದ ಉಂಟಾಗುವ ಜಲವಾಯು ಬದಲಾವಣೆಯ ಪರಿಣಾಮವಾಗಿದೆ. ಸೌದಿ ಅರೇಬಿಯಾದಲ್ಲಿ ನೆರೆಹಾವಳಿಯೊಂದಿಗೆ ಹಿಮಪಾತದ ಸೂಚನೆಗಳು ಈ ಹಿಂದೆಯೂ ಕಂಡುಬಂದಿವೆ. ಈಗಲೂ ಕೇವಲ ದುಬೈ ಮಾತ್ರವಲ್ಲ, ಶಾರ್ಜಾ, ಅಬುಧಾಬಿಯಲ್ಲಿಯೂ ಧಾರಾಕಾರ ಮಳೆಯಾಗಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ-ಅಫ್ಘಾನಿಸ್ತಾನ ದೇಶಗಳ ಗಡಿಯಲ್ಲಿ ನೆರೆಹಾವಳಿಯ ಸ್ಥಿತಿ ಉದ್ಭವಿಸಿ ಹಲವಾರು ಸಾವನ್ನಪ್ಪಿದ್ದರು. ಮರಳುಗಾಡಿನ ಸ್ಥಳದಲ್ಲಿ ಈ ರೀತಿ ಘಟಿಸುತ್ತದೆ ಎಂದು ಯಾರೂ ಕನಸಿನಲ್ಲಿಯೂ ವಿಚಾರ ಮಾಡಿರಲಿಕ್ಕಿಲ್ಲ. ಮರಳುಗಾಡಿನಲ್ಲಿ ಈ ಪರಿಸ್ಥಿತಿಯಿರುವಾಗ, ಯುರೋಪಿನಲ್ಲಿ ಕಳೆದ ಕೆಲವು ವಷಗಳಲ್ಲಿ ಶಾಖದ ಅಲೆಗಳು ಬರುತ್ತಿದೆ. ಅಲ್ಲಿ ಮರಳುಗಾಡಿನಂತಹ ಬಿಸಿಲನ್ನು ಸಹಿಸ ಬೇಕಾಗುತ್ತಿದೆ. ಭಾರತದಲ್ಲಿಯೂ ಹಿಂದಿನ ಚಳಿಗಾಲದಲ್ಲಿ ಕಾಶ್ಮೀರದಲ್ಲಿ ಹಿಮಪಾತವು ವಿಳಂಬವಾಗಿ ಬಿದ್ದಿತು. ಹೀಗೆ ಈ ಹಿಂದೆ ಯಾವತ್ತೂ ನಡೆದಿರಲಿಲ್ಲ. ಜಲವಾಯು ಪರಿವರ್ತನೆಯ ಮೇಲೆ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಕಳೆದ ಕೆಲವು ವಷಗಳಿಂದ ಜಾಗತಿಕ ಸ್ತರದಲ್ಲಿ ಪ್ರಯತ್ನಗಳು ನಡೆಯುತ್ತಿವೆ; ಆದರೆ ಅದಕ್ಕೆ ಯಶಸ್ಸು ಸಿಗುವುದರ ಬದಲಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಮತ್ತು ‘ಅದನ್ನು ಜಯಿಸಲು ಏನು ಮಾಡಬೇಕು ?’ ಎಂದು ತಿಳಿಸಿರುವಾಗ ಅದನ್ನು ಮಾಡುವುದು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ನೋಡಿದರೆ ಅಸಾಧ್ಯವಾಗಿದೆ. ಕರೋನಾ ಸಾಂಕ್ರಾಮಿಕ ಸಮಯ ದಲ್ಲಿ, ಜಗತ್ತಿನಾದ್ಯಂತ ಎಲ್ಲಾ ಸಾರಿಗೆ ಮತ್ತು ಸಂಸ್ಥೆಗಳು ಸ್ಥಗಿತಗೊಂಡವು. ಆ ಸಮಯದಲ್ಲಿ ವಾಯು ಮತ್ತು ಜಲ ಮಾಲಿನ್ಯದ ಪ್ರಮಾಣವು ತುಂಬಾ ಕಡಿಮೆಯಾಗಿತ್ತು. ಭಾರತದಲ್ಲಿ ಕಲುಷಿತಗೊಂಡ ಯಮುನಾ ನದಿಯು ಸ್ವಚ್ಛವಾಗಿ ಕಾಣಿಸ ಲಾರಂಭಿಸಿದರೆ, ಇಟಲಿಯ ಚಿಕ್ಕ ಚಿಕ್ಕ ಜಲಮಾರ್ಗಗಳಲ್ಲಿ ಮತ್ತೆ ಮೀನುಗಳು ಕಾಣಿಸತೊಡಗಿತು. ಅಂದರೆ ಸಾರಿಗೆ ಮತ್ತು ಉದ್ಯಮ ಗಳಿಂದ ಉಂಟಾಗುವ ಮಾಲಿನ್ಯ ಈ ಸ್ಥಿತಿಗೆ ಕಾರಣವಾಗಿದೆ ಎಂದು ಸ್ಪಷ್ಟವಾಗಿ ಕಂಡು ಬಂದಿದೆ. ಒಂದು ವೇಳೆ ಸಾರಿಗೆ ಮತ್ತು ಉದ್ಯಮಗಳನ್ನು ಕಾಯಂಸ್ವರೂಪಿ ನಿಲ್ಲಿಸಿದರೆ ಮಾತ್ರ ಪ್ರಕೃತಿಯ ಕೋಪದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು, ಇಲ್ಲದಿದ್ದರೆ ವಿನಾಶ ಖಚಿತ; ಆದರೆ ಹಾಗೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ.

ಧರ್ಮಾಚರಣೆ ಆವಶ್ಯಕ !

ಪ್ರಾಚೀನ ಕಾಲದಲ್ಲಿ ನೀರಿನ ಸೌಲಭ್ಯಗಳಿಂದಾಗಿ ಜನರು ನದಿ ತೀರದಲ್ಲಿ ವಾಸಿಸುತ್ತಿದ್ದರು; ಆದರೆ ಒಂದು ವೇಳೆ ಇದೇ ನದಿಗೆ ನೆರೆ ಬಂದರೆ ಜನರು ನಿರಾಶ್ರಿತರಾಗಬೇಕಾಗುತ್ತಿತ್ತು. ಸ್ಥಳಾಂತರಗೊಳ್ಳಲು ಅವಕಾಶ ಸಿಗದಿದ್ದರೆ, ಸಾವು ಅನಿವಾರ್ಯವಾಗಿತ್ತು. ಅನೇಕ ಸಂಸ್ಕ್ರತಿಗಳು ಹೀಗೆಯೇ ನಾಶವಾಗಿವೆ ಎನ್ನುತ್ತಾರೆ. ಸಿಂಧೂ ನದಿಯ ದಡದಲ್ಲಿ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ, ಅಲ್ಲಿನ ಪ್ರಾಚೀನ ಸಂಸ್ಕ್ರತಿ ನಾಶವಾಯಿತು. ಕೇವಲ ನೀರಿನಿಂದ ಮಾತ್ರವಲ್ಲ, ಭೂಕಂಪದಿಂದಲೂ ಸಂಸ್ಕ್ರತಿ ನಾಶವಾಗಿದೆ. ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿ ಕೈಗೊಳ್ಳುವ ಕೃತಿಗಳು ನಂತರ ವಿನಾಶಕ್ಕೆ ಕಾರಣವಾಗುತ್ತವೆ ಮತ್ತು ಅದರಿಂದ ಪಾಠ ವನ್ನು ಕಲಿಯಬೇಕು. ಪ್ರತಿಯೊಂದು ವಿಷಯದ ಉತ್ಪತ್ತಿ, ಸ್ಥಿತಿ ಮತ್ತು ಲಯವಿದೆ. ಲಯಕ್ಕೆ ಪಂಚಮಹಾಭೂತಗಳು ಕಾರಣವಾಗಿರಬಹುದು. ಇದರ ವಿಚಾರ ಮಾಡಿ ಅವುಗಳಿಗೆ ಶರಣಾಗುವುದು ಅವಶ್ಯಕವಾಗಿದೆ. ಪ್ರಕೃತಿಯು ಧರ್ಮದ ಅಧೀನ ದಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಅನೈತಿಕತೆ, ದುರ್ನಡತೆ, ಅಧರ್ಮಾಚರಣೆ ನಡೆಯುತ್ತಿದ್ದರೆ, ಪ್ರಕೃತಿ ಕೋಪಗೊಳ್ಳುತ್ತದೆ. ಒಂದು ವೇಳೆ ಧರ್ಮಾಚರಣೆಯಾಗುತ್ತಿದ್ದರೆ, ಪ್ರಕೃತಿ ಅನುಗುಣವಾಗಿರುತ್ತದೆ. ಇಂದು ಪ್ರಕೃತಿಯಲ್ಲಿ ಉಂಟಾಗಿರುವ ಅಸಮತೋಲನಕ್ಕೆ ಆಧ್ಯಾತ್ಮಿಕ ಮಟ್ಟದ ಅಧರ್ಮಾಚರಣೆಯೇ ಕಾರಣವಾಗಿದೆ. ಧರ್ಮ ಮತ್ತು ಅಧರ್ಮವನ್ನು ಪಂಥಗಳ ದೃಷ್ಟಿಯಿಂದ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಧರ್ಮವೆಂದರೆ ಯೋಗ್ಯ ವಿಚಾರ ಮತ್ತು ಯೋಗ್ಯ ಕೃತಿ ಎಂಬ ದೃಷ್ಟಿಯಿಂದ ನೋಡುವುದು ಆವಶ್ಯಕವಾಗಿದೆ. ಆಡಳಿತಾಧಿಕಾರಿಗಳು ಧರ್ಮಾಚರಣಿಗಳಾಗಿದ್ದರೆ, ರಾಜ್ಯದಲ್ಲಿ ಸುಖ ಮತ್ತು ಸಮೃದ್ಧಿ ಇರುತ್ತದೆ ಮತ್ತು ಪ್ರಕೃತಿಯೂ ಪೂರಕ ವಾಗಿರುತ್ತದೆ; ಏಕೆಂದರೆ ಧರ್ಮಾಚರಣೆ ಮಾಡುವ ರಾಜನಿದ್ದರೆ, ಪ್ರಜೆಗಳೂ ಹಾಗೆಯೇ ಇರುತ್ತಾರೆ, ಒಂದು ವೇಳೆ ರಾಜನು ಅಧರ್ಮಾಚರಣಿಯಾಗಿದ್ದರೆ, ಪ್ರಜೆಗಳೂ ಹಾಗೆಯೇ ಇರುತ್ತಾರೆ ಮತ್ತು ಎಲ್ಲೆಡೆ ಅನೈತಿಕತೆ ಹೆಚ್ಚಾಗುತ್ತದೆ ಮತ್ತು ಅದರ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಆದ್ದರಿಂದ ಭಾರತದ ವಿಚಾರ ಮಾಡಿದರೆ, ಬಹುಸಂಖ್ಯಾತ ಹಿಂದೂಗಳು ಧಾರ್ಮಿಕ ಆಚರಣೆಗಳನ್ನು ಮಾಡುವುದು ಆವಶ್ಯಕವಾಗಿದೆ. ಇದರಿಂದ ಪ್ರಕೃತಿಯು ಪೂರಕವಾಗಬಹುದು.