ಈ ವರ್ಷದ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ದೇಶದಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನಾವು ನೀರಿನ ಅಭಾವವೆಂದು ಹೇಳುತ್ತಿದ್ದರೂ, ನೀರಿನ ಅಭಾವವು ನಿಜವಾದ ಸಮಸ್ಯೆಯಾಗಿರದೆ ಅದರ ಅವಶ್ಯಕತೆ ಮತ್ತು ಉಪಲಬ್ಧತೆಯ ಸಮಸ್ಯೆಯಾಗಿದೆ. ಪೃಥ್ವಿಯಲ್ಲಿ ನೀರಿನ ಮೇಲಿನ ಅತಿಕ್ರಮಣ, ಅದರ ಮಾಲಿನ್ಯ ಹಾಗೂ ಶೋಷಣೆ ಹೆಚ್ಚಾಗಿದೆ. ಜಗತ್ತಿನಾದ್ಯಂತ ಎಷ್ಟು ಭೂಜಲ ಉಪಯೋಗವಾಗುತ್ತದೆಯೋ, ಅದರ ಶೇ. ೨೫ ರಷ್ಟು ಉಪಯೋಗ ಕೇವಲ ಭಾರತದಲ್ಲಿ ಆಗುತ್ತದೆ. ಈ ವಿಷಯದಲ್ಲಿ ಚೀನಾ ಮತ್ತು ಅಮೇರಿಕಾವನ್ನು ಭಾರತವು ಹಿಂದಿಕ್ಕಿದೆ. ದೇಶದಲ್ಲಿ ಸುಮಾರು ಶೇ. ೭೯ ರಷ್ಟು ಮನೆಗಳಿಗೆ ಕುಡಿಯುವ ನೀರಿನ ನಳ್ಳಿ ತಲುಪಿಲ್ಲ. ಅನೇಕ ಪ್ರದೇಶಗಳಲ್ಲಿ ಜನರು ನೀರನ್ನು ಖರೀದಿಸಬೇಕಾಗುತ್ತಿದೆ. ದೇಶದಲ್ಲಿ ಕಲುಷಿತ ನೀರಿನಿಂದಾಗಿ ಪ್ರತಿವರ್ಷ ಸುಮಾರು ೨ ಲಕ್ಷ ಜನರು ಸಾವನ್ನಪ್ಪುತ್ತಾರೆ ಹಾಗೂ ಸಾವಿರಾರು ಜನರು ಕಾಯಿಲೆಗೆ ತುತ್ತಾಗುತ್ತಾರೆ. ನೀರಿನ ಅಭಾವವು ವ್ಯಕ್ತಿಯನ್ನು ಬಡತನದ ದುಷ್ಟಚಕ್ರದೊಳಗೆ ತಳ್ಳುತ್ತದೆ ಹಾಗೂ ಸಮಾಜದಲ್ಲಿ ವೈಷಮ್ಯವನ್ನು ಹೆಚ್ಚಿಸುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದ ಜನರಿಗೆ ನೀರಿಗಾಗಿ ಇನ್ನೂ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲ. ಇದರ ಪರಿಣಾಮ ಅವರ ಆರೋಗ್ಯದ ಮೇಲಾಗುತ್ತದೆ ಹಾಗೂ ಅವರು ಈ ದುಷ್ಟಚಕ್ರದಲ್ಲಿ ಸಿಲುಕುತ್ತಾ ಹೋಗುತ್ತಾರೆ. ನೀರಿನ ಅಭಾವದಿಂದಾಗಿ ಸಂಪೂರ್ಣ ಜಗತ್ತಿನಲ್ಲಿ ವಲಸೆ ಹೋಗುವ ಪ್ರಮಾಣ ಹೆಚ್ಚುತ್ತಿದೆ. ನೀರಿನ ಅಭಾವದಿಂದ ಮೂರನೇ ಜಾಗತಿಕ ‘ಜಲಯುದ್ಧ’ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾವು ಒಂದೆಡೆ ನೀರನ್ನು ಜಾಗರೂಕತೆಯಿಂದ ಉಪಯೋಗಿಸಬೇಕು ಹಾಗೂ ಇನ್ನೊಂದೆಡೆ ನೀರಿನ ಸಂವರ್ಧನೆ ಮಾಡಿ ಅದರ ಮೇಲಿನ ಸಾಮುದಾಯಿಕ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನೀರಿನ ಮೇಲಿನ ಜನರ ಅಧಿಕಾರದ ಮೇಲೆ ದೊಡ್ಡ ಉದ್ಯೋಗಗಳಿಂದ ಅತೀ ಹೆಚ್ಚು ಅಪಾಯವಿದೆ ಹಾಗೂ ಇದೇ ಎಲ್ಲಕ್ಕಿಂತ ದೊಡ್ಡ ಸವಾಲಾಗಿದೆ.
ನಿಯೋಜನೆ ಕೇವಲ ಕಾಗದಪತ್ರಗಳಲ್ಲಿ !
ಬೆಂಗಳೂರಿನಲ್ಲಿ ನೀರಿನ ಸಂಕಟ ತೀವ್ರವಾಗಿದ್ದು ಇದರಿಂದ ಜನರ ಪ್ರತಿದಿನದ ನೀರಿನ ಅವಶ್ಯಕತೆಗೆ ಮಿತಿ ಬರುತ್ತಿದೆ. ಇಲ್ಲಿನ ಐಟಿ ಕಂಪನಿಗಳಿಗೆ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದ ಕೆಲಸ ಮಾಡುವುದು) ಈ ಪದ್ಧತಿಯನ್ನು ಆರಂಭಿಸಬೇಕೆಂದು ಸೂಚನೆ ನೀಡಲಾಗಿದೆ. ಸರಕಾರದಿಂದ ಅಗ್ಗದ ದರದಲ್ಲಿ ನೀರನ್ನು ಖರೀದಿಸಿ ಅದನ್ನು ಶುದ್ಧಗೊಳಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಹಾಗೂ ಸಾಮಾನ್ಯ ಜನರು ಕೂಡ ಈ ನೀರನ್ನು ಖರೀದಿಸಿ ಕುಡಿಯುತ್ತಿದ್ದಾರೆ. ತೀವ್ರ ಬೇಸಿಗೆಯಿಂದಾಗಿ ನೀರಿನ ಉಪಯೋಗ ಹೆಚ್ಚಾಗಿರುವುದು ಅದರ ಕಾರಣವಾದರೂ, ದೇಶದಲ್ಲಿನ ಎಲ್ಲ ಪ್ರಾಂತಗಳಲ್ಲಿ ಇದುವರೆಗೂ ಪ್ರತಿಯೊಬ್ಬರ ಹಕ್ಕಿನ ನೀರು ಕೂಡ ಸಿಗುವುದಿಲ್ಲ. ಮೂಲತಃ ನೀರಿನ ಉಪಯೋಗದ ವಿಷಯದಲ್ಲಿ ಆಡಳಿತದವರು ನಗರ ಮತ್ತು ಗ್ರಾಮೀಣ ಹೀಗೆ ಭೇದಭಾವ ಮಾಡಿ ಅದರಲ್ಲಿ ನಗರಗಳಿಗೆ ಸವಲತ್ತು ನೀಡಿದರು. ನಗರಗಳಲ್ಲಿ ಪ್ರತಿದಿನ ಪ್ರತಿಯೊಬ್ಬರಿಗೆ ೧೫೦ ಲೀಟರ್ ನೀರನ್ನು ಪೂರೈಸಬೇಕು, ಎಂದು ಅಪೇಕ್ಷೆ ಮಾಡುವಾಗ ಗ್ರಾಮೀಣ ಭಾಗದಲ್ಲಿ ಮಾತ್ರ ಈ ಪ್ರಮಾಣವನ್ನು ೧೩೫ ಲೀಟರ್ ಮಾಡಿದರು. ಇಷ್ಟು ನೀರು ಕೂಡ ಪ್ರತಿಯೊಬ್ಬರಿಗೂ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಾನವನ ಉಪಯೋಗದಷ್ಟೇ ಕೃಷಿ, ಉದ್ಯೋಗ ಹಾಗೂ ಜಾನುವಾರುಗಳಿಗಾಗಿ ಆವಶ್ಯಕವಿರುವ ನೀರಿನ ಸಮಸ್ಯೆ ಇನ್ನೂ ಹೆಚ್ಚು ಗಂಭೀರವಾಗುತ್ತಿರುವಾಗ ನೀರಿನ ಉಪಯೋಗದ ನಿಯೋಜನೆಯು ಕಾಗದಪತ್ರಗಳಲ್ಲಿ ಮಾತ್ರ ಇರುವುದು ಕಾಣಿಸುತ್ತಿದೆ. ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಮಾಡುವಾಗ ಕಲುಷಿತ ನೀರನ್ನು ಪುನಃ ಉಪಯೋಗಿಸುವಂತಹ ಯೋಜನೆಯನ್ನು ಕಡ್ಡಾಯಗೊಳಿಸುವ ವ್ಯವಸ್ಥೆ ಮಾಡಬೇಕು. ಜಗತ್ತಿನ ಜನಸಂಖ್ಯೆಯ ಶೇ. ೧೭.೫ ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ; ಆದರೆ ಪೃಥ್ವಿಯ ಮೇಲಿನ ಶುದ್ಧ ನೀರಿನ ಶೇ. ೪ ರಷ್ಟು ಸ್ರೋತವು ಮಾತ್ರ ಭಾರತದಲ್ಲಿದೆ. ಇತ್ತೀಚೆಗೆ ಜನರ ಉತ್ಪನ್ನ ಎಷ್ಟು ವೇಗದಲ್ಲಿ ಹೆಚ್ಚಾಗಿದೆಯೋ, ಅಷ್ಟೇ ವೇಗದಲ್ಲಿ ನೀರಿನ ಬೇಡಿಕೆಯೂ ಹೆಚ್ಚಾಗಿದೆ. ಜನರು ವಾತಾನುಕೂಲಯಂತ್ರ, ಫ್ರಿಡ್ಜ್, ಬಟ್ಟೆ ಒಗೆಯುವ ಯಂತ್ರದಂತಹ ಉಪಕರಣಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ದೇಶದಲ್ಲಿನ ವಿದ್ಯುತ್ತಿನ ಅವಶ್ಯಕತೆಯಲ್ಲಿ ಶೇ. ೬೫ ರಷ್ಟು ವಿದ್ಯುತ್ ಉಷ್ಣಊರ್ಜಾ ಯೋಜನೆಗಳಿಂದ ಬರುತ್ತದೆ. ಅದರಲ್ಲಿ ನೀರಿನ ಉಪಯೋಗ ಅತೀ ಹೆಚ್ಚು ಇರುತ್ತದೆ. ವಿದ್ಯುತ್ತಿನ ಉಪಯೋಗ ಹೆಚ್ಚಾದರೆ, ಅದರ ಉತ್ಪಾದನೆಗಾಗಿ ಕುಡಿಯುವ ನೀರಿನ ಬೇಡಿಕೆಯೂ ಅಷ್ಟೇ ಹೆಚ್ಚಾಗುತ್ತದೆ. ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕವ್ಯವಸ್ಥೆಯುಳ್ಳ ದೇಶವಾಗಿದೆ. ಕೆಲವೇ ವರ್ಷಗಳಲ್ಲಿ ದೇಶವನ್ನು ಮೂರನೇ ಕ್ರಮಾಂಕದ ಅರ್ಥವ್ಯವಸ್ಥೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ; ಆದರೆ ಅದರ ಜೊತೆಯಲ್ಲಿಯೇ ಭಾರತ ಜಗತ್ತಿನ ಮೂರನೇ ವಾಯುಮಾಲಿನ್ಯ ದೇಶವೆಂದು ಮುಂದೆ ಬಂದಿದೆ, ಇದು ಚಿಂತೆಯನ್ನು ಹೆಚ್ಚಿಸುವ ವಿಷಯವಾಗಿದೆ.
ಸ್ವಿಝರ್‌ಲ್ಯಾಂಡ್‌ನಲ್ಲಿನ ‘ಐಕ್ಯುಎಆರ್’ ಈ ಸಂಸ್ಥೆ ಮಾಡಿದ ಸಮೀಕ್ಷೆಯ ಒಂದು ವರದಿ ಇತ್ತೀಚೆಗಷ್ಟೆ ಬೆಳಕಿಗೆ ಬಂದಿದೆ. ೧೩೪ ದೇಶಗಳಲ್ಲಿನ ವಾತಾವರಣದ ಅಭ್ಯಾಸ ಮಾಡಿದ ನಂತರ ಈ ಸಂಸ್ಥೆ ಮಾಡಿದ ನಿಷ್ಕರ್ಷವು ಐದನೇ ಆರ್ಥಿಕ ಕ್ರಮಾಂಕವನ್ನು ತಲುಪುವ ನಿಟ್ಟಿನಲ್ಲಿ ಬಾಧೆಯನ್ನುಂಟು ಮಾಡಬಹುದು. ವಾಯುಮಾಲಿನ್ಯದಲ್ಲಿ ೧೩೪ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿ, ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿ ಮತ್ತು ಭಾರತ ಮೂರನೇ ಸ್ಥಾನದಲ್ಲಿದೆ. ಈ ವಿಷಯವು ಚಿಂತೆಯನ್ನು ಹೆಚ್ಚಿಸುವುದಾಗಿದೆ. ಒಂದು ವಿಕಸಿತ ದೇಶವೆಂದು ತನ್ನನ್ನು ಪರಿಚಯಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ, ಅದೇ ರೀತಿ ದೇಶವನ್ನು ಮಾಲಿನ್ಯಮುಕ್ತಗೊಳಿಸುವುದೂ ಎಲ್ಲಕ್ಕಿಂತ ದೊಡ್ಡ ಹಾಗೂ ಕಠಿಣ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಮಾಡಬೇಕಾದ ನಿಯೋಜನೆಗಳು ಸಿದ್ಧವಿದ್ದರೂ, ಅವುಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಅನೇಕ ಅಡಚಣೆಗಳು ಬರುತ್ತಿವೆ ಹಾಗೂ ಅದಕ್ಕಾಗಿ ಸರಕಾರದ ಜೊತೆಗೇನೆ ದೇಶದ ನಾಗರಿಕರೂ ಹೊಣೆಯಾಗಿದ್ದಾರೆ. ವಾಯುಮಾಲಿನ್ಯದಲ್ಲಿ ದೇಶದ ೧೪೦ ಕೋಟಿ ಜನರ ಜೀವನ ಸಂಕಟಕ್ಕೀಡಾಗಿರುವಾಗ ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿದೆ. ಮಾಲಿನ್ಯ ಹೆಚ್ಚಾಗಲು ಕಾರಣವೇನು ? ಎಂಬುದು ನಮಗೆ ಅರಿವಾಗಿಯೂ ನಾವು ಆವಶ್ಯಕ ಉಪಾಯವನ್ನು ಕೈಗೊಳ್ಳದಿದ್ದರೆ, ಈಶ್ವರ ಕೂಡ ನಮ್ಮನ್ನು ರಕ್ಷಿಸುವುದಿಲ್ಲ. ದೇಶದ ವಿಕಾಸ ಆಗಲೇ ಬೇಕು.
ಪರಿಸರದ ಸಮತೋಲನ ಅಸ್ತವ್ಯಸ್ತ !
ಭಾರತವೂ ಸ್ವಿಝರ್‌ಲ್ಯಾಂಡ್‌ನಂತಹ ಸ್ವಚ್ಛ, ಸುಂದರ ಹಚ್ಚಹಸಿರು ಹಾಗೂ ಮಾಲಿನ್ಯಮುಕ್ತ ದೇಶ ಆಗಬೇಕು ಎಂಬುದರ ಕಡೆಗೆ ನಮ್ಮ ಗಮನವಿರಬೇಕು. ವಾಯುಮಾಲಿನ್ಯದ ಮೂಲ ಕಾರಣವಾಗಿರುವ ಧೂಳನ್ನು ಹೇಗೆ ನಿಯಂತ್ರಿಸಬಹುದು, ಎಂಬುದರ ಕಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ. ಎಲ್ಲವನ್ನೂ ಸರಕಾರದ ಮೇಲೆ ಹೊರಿಸುವುದಲ್ಲ, ವೃಕ್ಷಾರೋಪಣ, ಅದನ್ನು ಉಳಿಸುವುದು, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಪರಮ ಕರ್ತವ್ಯವಾಗಿದೆ. ಇನ್ನೊಂದು ಕಡೆಯಲ್ಲಿ ಗಾಳಿಯನ್ನು ಕೂಡ ಚೀಲದಲ್ಲಿ ತುಂಬಿಸಿ ಮಾರಾಟ ಮಾಡುವ ವ್ಯವಹಾರ ಆರಂಭವಾಗಿದೆ. ಸರ್ವಪ್ರಥಮ ಕೆನಡಾದಲ್ಲಿ ಶುದ್ಧ ಗಾಳಿಯನ್ನು ಚೀಲದಲ್ಲಿ ತುಂಬಿಸುವ ಪ್ರಯೋಗ ಯಶಸ್ವಿಯಾಯಿತು. ಈ ಗಾಳಿಯ ಚೀಲಗಳನ್ನು ಚೀನಾದಲ್ಲಿ ಮಾರಾಟ ಮಾಡಲಾಯಿತು. ಚೀನಾದಲ್ಲಿ ಇಂದು ಕೂಡ ಗಾಳಿಯ ಚೀಲಗಳಿಗೆ ತುಂಬಾ ಬೇಡಿಕೆಯಿದೆ. ಒಂದು ಚೀಲದ ಗಾಳಿ ೬೦ ಸೆಕೆಂಡ್‌ನಲ್ಲಿ ಖರ್ಚಾಗುತ್ತದೆ ಹಾಗೂ ಈ ೬೦ ಸೆಕೆಂಡ್ ಸಾಕಾಗುವ ಗಾಳಿಯ ಬೆಲೆ ೮೦೦ ರೂಪಾಯಿ ! ಭಾರತದಲ್ಲಿಯೂ ಹಿಮಾಲಯದಲ್ಲಿನ ಗಾಳಿಯನ್ನು ಚೀಲದಲ್ಲಿ ತುಂಬಿಸಿ ಅದನ್ನು ಮಾರಾಟ ಮಾಡುವ ಪ್ರಯತ್ನ ಆರಂಭವಾಗಿದೆ. ದೆಹಲಿಯಂತಹ ದೊಡ್ಡ ನಗರಗಳಲ್ಲಿ ಶುದ್ಧ ಗಾಳಿ ಸಿಗಬೇಕೆಂದು ಮನೆಮನೆಗಳಲ್ಲಿ ‘ಏರ್ ಪ್ಯೂರಿಫಾಯರ್’ ಅಳವಡಿಸಲಾಗಿದೆ. ಈ ಸ್ಥಿತಿ ಬರಲು ಕಾರಣವೇನು ? ಎಂಬುದರ ವಿಚಾರ ಮಾಡಿ ಭಾರತ ಮಾಲಿನ್ಯವನ್ನು ತಡೆಗಟ್ಟಲು ಕಠಿಣ ಹೆಜ್ಜೆಯನ್ನಿಡುವ ಅವಶ್ಯಕತೆಯಿದೆ !