ರೋಗಗಳು ಮತ್ತು ಪಥ್ಯಾಪಥ್ಯಗಳು

‘ಪಥ್ಯವನ್ನು ಪಾಲಿಸುವುದಿದ್ದರೆ, ಔಷಧಗಳ ಉಪಯೋಗ ಏನು ? ಅಥವಾ ಆಯುರ್ವೇದದ ಔಷಧಗಳನ್ನು ತೆಗೆದು ಕೊಳ್ಳುವುದಿದ್ದರೆ ತುಂಬಾ ಪಥ್ಯಗಳನ್ನು ಪಾಲಿಸಬೇಕಾಗುತ್ತದೆ, ಅದಕ್ಕಿಂತ ತೆಗೆದುಕೊಳ್ಳುವುದೇ ಬೇಡ ! ಔಷಧಗಳು ಕೇವಲ ಹೆಸರಿಗೇ ಇರುತ್ತವೆ, ಆಹಾರ ಮತ್ತು ಪಥ್ಯವನ್ನು ಪಾಲಿಸಿದರೆ ರೋಗಿಗೆ ಆರಾಮ ಆಗುವುದಾದರೆ ಔಷಧಗಳು ನಿಖರವಾಗಿ ಏನು ಮಾಡುತ್ತವೆ ?’, ಇಂತಹ ಪ್ರಶ್ನೆಗಳನ್ನು ಜನರು ವಿವಿಧ ಉದ್ದೇಶದಿಂದ ವಿವಿಧ ಮಾಧ್ಯಮಗಳಿಂದ ಅಥವಾ ಶುದ್ಧ ಕುತೂಹಲದಿಂದ ಕೇಳುತ್ತಿರುತ್ತಾರೆ. ಶಾಂತವಾಗಿ ವಿಚಾರ ಮಾಡಿ ದರೆ, ಈ ಎಲ್ಲ ಪ್ರಶ್ನೆಗಳ ಟೊಳ್ಳುತನ ಗಮನಕ್ಕೆ ಬರುತ್ತದೆ.

ಪಥ್ಯವನ್ನು ಪಾಲಿಸುವುದು ಮತ್ತು ಔಷಧಗಳನ್ನು ತೆಗೆದುಕೊಳ್ಳುವುದರ ಮಹತ್ವ !

ಯಾವುದಾದರೊಂದು ಕಾಯಿಲೆಯಲ್ಲಿ, ವಿಶೇಷವಾಗಿ ಹೊಟ್ಟೆಯ ತಕರಾರು ಇದ್ದಾಗ ಆ ವಿಶಿಷ್ಟ ಕಾಯಿಲೆ ಹೆಚ್ಚಾಗಬಾರದು ಅಥವಾ ನಮಗೆ ತೊಂದರೆಯಾಗಬಾರದೆಂದು ಔಷಧಗಳ ಪದ್ಧತಿ ಯಾವುದಾಗಿದ್ದರೂ ಔಷಧಗಳೊಂದಿಗೆ ಪಥ್ಯವನ್ನು ಪಾಲಿಸಲೇಬೇಕಾಗುತ್ತದೆ. ಯಾವುದಾದರೊಂದು ಜಾಗದಲ್ಲಿ ಗಾಯವಾಗಿದ್ದರೆ, ಅದಕ್ಕೆ ನಾವು ಉದ್ದೇಶಪೂರ್ವಕವಾಗಿ ಕೈ ಹಚ್ಚಿ ಅದನ್ನು ಹೆಚ್ಚಿಸುವುದಿಲ್ಲ. ಅದನ್ನು ಜೋಪಾನ ಮಾಡುತ್ತೇವೆ ಮತ್ತು ಅದಕ್ಕೆ ಗುಣವಾಗಲು ಸಮಯವನ್ನು ಕೊಡುತ್ತೇವೆ. ಅದೇ ರೀತಿ ಆ ರೋಗಗಳಿಗನುಸಾರ ಬಹಳಷ್ಟು ಅಲ್ಲ; ಆದರೆ ವಿಶಿಷ್ಟ ಪಥ್ಯವನ್ನು ಸ್ವಲ್ಪಕಾಲಾವಧಿಯವರೆಗೆ ಪಾಲಿಸುವುದು ಆವಶ್ಯಕವಾಗಿರುತ್ತದೆ. ಉದಾಹರಣೆಗೆ ಯಾವುದಾದರೊಂದು ಸ್ಥಳದಲ್ಲಿ ಕೆಲವು ಜನರು ಕಸವನ್ನು ಚೆಲ್ಲಲು ಪ್ರಾರಂಭಿಸುತ್ತಾರೆ. ಆ ಸ್ಥಳದಲ್ಲಿ ಆ ಕಸವು ಕ್ರಮೇಣ ಹೆಚ್ಚಾಗತೊಡಗುತ್ತದೆ. ಯಾವಾಗ ನಾವು ಅಲ್ಲಿನ ಕಸವನ್ನು ಸ್ವಚ್ಛ ಮಾಡಲು ಪ್ರಾರಂಭಿಸುತ್ತೇವೆಯೋ, ಆಗ ಹೊಸ ಕಸವನ್ನು ಅಲ್ಲಿ ಚೆಲ್ಲಬಾರದು ಎಂಬ ಕಾಳಜಿಯನ್ನು ವಹಿಸುತ್ತೇವೆ, ಇಲ್ಲದಿದ್ದರೆ ಈ ದುಷ್ಟಚಕ್ರದಲ್ಲಿ ಕಸವು ಎಂದಿಗೂ ಪೂರ್ಣ ಸ್ವಚ್ಛವಾಗಲಾರದು. ಶರೀರದಲ್ಲಿ ಪುನಃ ಈ ದೋಷ ಹೆಚ್ಚಾಗಿ ಕಾಯಿಲೆ ಆಗಬಾರದೆಂದು ಪಥ್ಯವನ್ನು ಪಾಲಿಸುವುದು ಆವಶ್ಯಕವಾಗಿರುತ್ತದೆ !

ಆಯುರ್ವೇದ ಔಷಧವೂ ಮೇಲೆ ಹೇಳಿದಂತೆ ಶರೀರದಲ್ಲಿನ ಅನಗತ್ಯ ಮತ್ತು ಇತರ ಬೇಡದ ಜಾಗದಲ್ಲಿ ಹೆಚ್ಚಾದ ದೋಷರೂಪಿ ಕಸವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತದೆ. ಔಷಧಗಳನ್ನು ತೆಗೆದುಕೊಂಡ ನಂತರ ತಕ್ಷಣ ಕಾಣಿಸಿಕೊಳ್ಳುವ ಗಮನೀಯ ವ್ಯತ್ಯಾಸವು, ಶರೀರದಲ್ಲಿ ಪುನಃ ಪುನಃ ಕಾಯಿಲೆಗಳು ಉದ್ಭವಿಸಬಾರದೆಂದು, ಪೂರಕ ವಾತಾವರಣವನ್ನು ನಿರ್ಮಿಸುತ್ತದೆ; ಅವಯವಗಳ ಜಾಗದಲ್ಲಿ ಪುನಃ ರೋಗ ಆಗಬಾರದು, ಎಂಬ ದೃಷ್ಟಿಯಿಂದ ಶಕ್ತಿಯನ್ನು ನೀಡುವುದು, ಈ ಎಲ್ಲ ರೀತಿಯಿಂದ ಆಯುರ್ವೇದ ಕೆಲಸವನ್ನು ಮಾಡುತ್ತದೆ. ಪಥ್ಯವು ಔಷಧಗಳ ಕೆಲಸ ಆಗುವವರೆಗೆ ಹೊಸ ದೋಷರೂಪಿ ಕಸವನ್ನು ಅಲ್ಲಿ ಸಂಗ್ರಹವಾಗಲು ಬಿಡುವುದಿಲ್ಲ. ದೋಷ ಮತ್ತು ರೋಗವು ಕಡಿಮೆ ಪ್ರಮಾಣದಲ್ಲಿದ್ದರೆ, ಕೇವಲ ಪಥ್ಯದಿಂದಲೂ ರೋಗಿಯು ವಾಸಿಯಾಗುತ್ತಾನೆ. ಅನಂತರ ಪ್ರತಿದಿನದ ದಿನಚರ್ಯೆ ಮತ್ತು ಋತುಚರ್ಯಗಳನ್ನು ತಕ್ಕಮಟ್ಟಿಗೆ ಪಾಲಿಸಿದರೆ, ಪುನಃ ಪುನಃ ಈ ರೀತಿ ಹೆಚ್ಚಾಗಿ ಉದ್ಭವಿಸುವುದಿಲ್ಲ.

ಉತ್ತಮ ವ್ಯಾಯಾಮ ಮತ್ತು ನಿಯಂತ್ರಿತ ತೂಕವಿದ್ದರೆ, ಎಂದಾದರೂ ಆಗುವ ಅಪಥ್ಯವನ್ನು ಸಹಿಸಿಕೊಳ್ಳುವ ಶರೀರದ ಕ್ಷಮತೆಯೂ ಉತ್ತಮವಾಗಿರುತ್ತದೆ. ಕೆಲವು ರೋಗಗಳ ಸ್ಥಿತಿಯನ್ನು ಹೊರತು ಪಡಿಸಿದರೆ ಅನೇಕ ರೋಗಗಳಲ್ಲಿ ಈ ರೀತಿಯಲ್ಲಿ ಔಷಧಗಳು ತಕ್ಷಣ ಮತ್ತು ಪಥ್ಯವು ಕೂಡಲೇ ಹಾಗೆಯೇ ದೀರ್ಘಕಾಲ ಕೆಲಸ ಮಾಡುತ್ತಿರುತ್ತವೆ. ಸದ್ಯದ ಬದಲಾವಣೆಯಾದ ಬೀಜಗಳು, ಸಿಂಪಡಣೆ ಮಾಡಿದ ತರಕಾರಿಗಳು, ಕಲುಷಿತ, ನೀರು ಇವುಗಳನ್ನು ನಿರ್ಬಂಧಿಸಲಾಗದಂತಹ ಅನಿವಾರ್ಯಕರ ಪರಿಸ್ಥಿತಿಯಲ್ಲಿ ನಮ್ಮ ಆಲಸ್ಯ ಮತ್ತು ಬೇಸರವು ಅದಕ್ಕೆ ಸೇರಿಕೊಳ್ಳದಿದ್ದರೆ ಔಷಧಗಳ ಕಾರ್ಯವೂ ಸುಲಭವಾಗುತ್ತದೆ.

– ವೈದ್ಯೆ ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ (ಆಧಾರ : ಫೇಸಬುಕ್)