೧. ಅಪಘಾತಕ್ಕೀಡಾದವರು ನಷ್ಟಪರಿಹಾರ ಪಡೆದುಕೊಳ್ಳುವ ಬಗ್ಗೆ ‘ಮೋಟಾರು ವಾಹನ ಅಧಿನಿಯಮ’ದಲ್ಲಿರುವ ಏರ್ಪಾಡು
‘ಮೋಟಾರು ವಾಹನ ಅಧಿನಿಯಮ ೧೯೮೮’ (ಮೋಟಾರು ವೆಹಿಕಲ್ ಯಾಕ್ಟ್) ಇದನ್ನು ಕೇಂದ್ರ ಸರಕಾರವು ಆಮೂಲಾಗ್ರವಾಗಿ ಬದಲಾಯಿಸಿದೆ. ಕಲಮ್ ೧೬೧ ಕ್ಕನುಸಾರ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ಅಥವಾ ಅವಯವಗಳನ್ನು ಕಳೆದುಕೊಂಡರೆ ‘ಜನರಲ್ ಇನ್ಶೂರೆನ್ಸ್ ಕೌನ್ಸಿಲ್’ನ ಮೂಲಕ ಪರಿಹಾರ ಕೊಡಲಾಗುತ್ತದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಪ್ರತಿಯೊಬ್ಬರಿಗೆ ತಲಾ ೨ ಲಕ್ಷ ರೂಪಾಯಿ ಮತ್ತು ಗಂಭೀರ ಗಾಯವಾದರೆ ೫೦ ಸಾವಿರ ರೂಪಾಯಿ ನಷ್ಟಪರಿಹಾರವನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆಯೂ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ನಷ್ಟಪರಿಹಾರ ನೀಡುವ ಏರ್ಪಾಡು ಇತ್ತು; ಆದರೆ ಸರಕಾರಿ ವ್ಯವಸ್ಥೆಯ ಉದಾಸೀನತೆ ಹಾಗೂ ಪೊಲೀಸರ ಸೋಮಾರಿತನದಿಂದ ಈ
ಏರ್ಪಾಡಿನ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ‘ಮೋಟಾರು ವಾಹನ ಅಪಘಾತ ಅಧಿನಿಯಮ ೧೯೮೮’ ಕ್ಕನುಸಾರ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಂಭೀರ ಗಾಯವಾದರೆ ಸಂಬಂಧಪಟ್ಟವರ ವಾರಸುದಾರರು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ಈ ಕಾನೂನು ನೀಡಿರುವ ಅಧಿಕಾರವು ಸಮಯ ತೆಗೆದುಕೊಳ್ಳುವ, ದುಬಾರಿ ಖರ್ಚಿನ ಹಾಗೂ ತಕ್ಷಣ ಸಹಾಯ ಸಿಗದಿರುವುದು ಹೀಗಿತ್ತು. ಅದರಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಕೊಡಿಸಿದ ನಂತರ ವಕೀಲರಿಗೆ ದೊಡ್ಡ ಪ್ರಮಾಣದ ಶುಲ್ಕ ನೀಡಬೇಕಾಗುತ್ತಿತ್ತು, ಅದೇ ರೀತಿ ಖಟ್ಲೆಯ ನಿರ್ಣಯವಾಗಲು ೨-೩ ವರ್ಷಗಳು ತಗಲುತ್ತಿದ್ದವು. ನಂತರ ವಿಮಾ ಕಂಪನಿ ಅಥವಾ
ಆಪತ್ತಿಗೀಡಾದ ವ್ಯಕ್ತಿಯು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಿದ್ದರು. ೧೯೮೮ ರ ಕಾನೂನಿಗನುಸಾರ ‘ನೋ ಫಾಲ್ಟ್ ಲಾಯೇಬಿಲಿಟಿ’ (ಟಿಪ್ಪಣಿ) ಎಂದು ಮೃತರ ವಾರಸುದಾರರಿಗೆ ಅಥವಾ ಸಂತ್ರಸ್ತ ವ್ಯಕ್ತಿಗೆ ನಿರ್ದಿಷ್ಟ ಮೊತ್ತ ಸಿಗುತ್ತಿತ್ತು. ಅದರಲ್ಲಿ ನ್ಯಾಯವಾದಿಗಳ ಶುಲ್ಕವನ್ನು ಬಿಟ್ಟು ಸ್ವಲ್ಪ ಮೊತ್ತ ಅವರಿಗೆ ದೊರಕುತ್ತಿತ್ತು.
(ಟಿಪ್ಪಣಿ : ‘ನೋ ಫಾಲ್ಟ್ ಲಾಯೇಬಿಲಿಟಿ’ಯ ಅರ್ಥ – ಯಾರಿಂದಾಗಿ ಅಪರಾಧವಾಯಿತು ? ಯಾರು ಜವಾಬ್ದಾರರು ? ದೋಷ ಯಾರದ್ದು ? ಇಂತಹ ವಾದ ಮಾಡದೆ ಮೊಟ್ಟಮೊದಲು ಮೃತ ವ್ಯಕ್ತಿಯ ವಾರಸುದಾರರಿಗೆ ಅಥವಾ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ವ್ಯಕ್ತಿಗೆ ನಿರ್ದಿಷ್ಟ ಮೊತ್ತವನ್ನು ಕೊಡಬೇಕು. ನಂತರ ಸಾಕ್ಷಿಯ ಆಧಾರದಲ್ಲಿ ಖಟ್ಲೆಯ ನಿರ್ಣಯವಾದಾಗ ಈ ಮೊತ್ತವನ್ನು ಹೆಚ್ಚು ಕಡಿಮೆ (ಎಡ್ಜೆಸ್ಟ್) ಮಾಡಿ ಕೊಡಲಾಗುತ್ತದೆ.)
೨. ನ್ಯಾಯವಾದಿಗಳು ಮತ್ತು ವಿಮಾ ಕಂಪನಿಯ ಅಧಿಕಾರಿಗಳಿಂದ ಭ್ರಷ್ಟಾಚಾರ
ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಆಘಾತಕಾರಿ ಖಟ್ಲೆ ದಾಖಲಾಯಿತು. ಅದರಲ್ಲಿ ನ್ಯಾಯವಾದಿಗಳು ಮತ್ತು ವಿಮಾಕಂಪನಿಯ ಅಧಿಕಾರಿಗಳು ಅಪಘಾತವಾದ ನಂತರ ಸಂತ್ರಸ್ತ ಅಥವಾ ಮೃತ ವ್ಯಕ್ತಿಗಳ ನಕಲಿ ವಾರಸುದಾರರ ಹೆಸರುಗಳನ್ನು ನೀಡಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದರು. ಈ ವಿಷಯದಲ್ಲಿ ‘ಸರ್ವೋಚ್ಚ ನ್ಯಾಯಾಲಯವು ದೋಷಿಗಳ ವಿರುದ್ಧ ಕ್ರಿಮಿನಲ್ ಅಪರಾಧ ದಾಖಲಿಸಬೇಕು’, ಎಂದು ಆದೇಶ ನೀಡಿತ್ತು. ಯಾವುದೇ ಒಂದು ಯೋಜನೆಯಿಂದ ಲಾಭಗಳಿಸಿ ಕೊಡುವುದು ದೂರದ ಮಾತು; ಆ ಯೋಜನೆಯ ಆಧಾರದಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸುವಂತಹ ಗಂಭೀರ ಪ್ರಕರಣಗಳೂ ನಡೆಯುತ್ತವೆ. ಇದು ನಿಂದನೀಯವಾಗಿದೆ.
೩. ಅಪಘಾತಕ್ಕೀಡಾದವರ ವಾರಸುದಾರರಿಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ಮಾರ್ಗದರ್ಶಕ ತತ್ತ್ವಗಳ ಘೋಷಣೆ
ಎಸ್. ರಾಜಶೇಖರನ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಿದರು. ಈ ಪ್ರಕರಣದಲ್ಲಿ ಅಪಘಾತಕ್ಕೀಡಾದವರ ವಾರಸುದಾರರಿಗಾಗಿ ಸರ್ವೋಚ್ಚ ನ್ಯಾಯಾಲಯವು ಮತ್ತೊಮ್ಮೆ ಮಾರ್ಗದರ್ಶಕ ತತ್ತ್ವಗಳನ್ನು ಘೋಷಿಸಿತು. ಇದರಲ್ಲಿ ಸರ್ವೋಚ್ಚ ನ್ಯಾಯಾಲಯ ‘ಕಲಮ್ ೧೬೧ ಮತ್ತು ಮೋಟಾರು ವಾಹನ ಅಧಿನಿಯಮ ದುರುಸ್ತಿ ೨೦೨೨’ ರ ವಿಷಯದಲ್ಲಿ ಏನು ಹೇಳುತ್ತದೆ ಅಂದರೆ, ‘ಅಪಘಾತ ಆದನಂತರ ಪೊಲೀಸರು ತಕ್ಷಣ ಅಪರಾಧವನ್ನು ದಾಖಲಿಸಿಕೊಳ್ಳಬೇಕು, ಅದೇ ರೀತಿ ಕೇಂದ್ರ ಸರಕಾರದಿಂದ ಸಿಗುವ ನಷ್ಟಪರಿಹಾರದ ಮಾಹಿತಿಯನ್ನು ಸಂತ್ರಸ್ತರಿಗೆ ನೀಡಬೇಕು. ಅದಕ್ಕಾಗಿ ಸಂತ್ರಸ್ತರು ಕೇಂದ್ರೀಯ ಸಮಿತಿ ಅಥವಾ ಜಿಲ್ಲಾಸ್ತರದ ಸಮಿತಿಯ ಬಳಿ ಮನವಿ ಸಲ್ಲಿಸಬಹುದು. ಈ ಮನವಿ ಸಲ್ಲಿಸಿದ ನಂತರ ಸಮಿತಿ ಇದರಲ್ಲಿ ಸಂಪೂರ್ಣ ವಿಚಾರ ಮಾಡಿ ಮರಣಹೊಂದಿದ ವ್ಯಕ್ತಿಗೆ ೨ ಲಕ್ಷ ರೂಪಾಯಿ ಹಾಗೂ ಗಾಯಾಳುವಿಗೆ ೫೦ ಸಾವಿರ ರೂಪಾಯಿಗಳನ್ನು ತಕ್ಷಣ ಕೊಡಬೇಕು, ಈ ಹಣವನ್ನು ‘ಜನರಲ್ ಇನ್ಶುರೆನ್ಸ್ ಕೌನ್ಸಿಲ್’ ಸಂತ್ರಸ್ತ ವ್ಯಕ್ತಿಯ ಖಾತೆಗೆ ಜಮಾ ಮಾಡಲು ಆದೇಶ ನೀಡಬೇಕು.
೪. ಸರ್ವೋಚ್ಚ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಿದ ‘ಜನರಲ್ ಇನ್ಶುರೆನ್ಸ್ ಕೌನ್ಸಿಲ್’
ಈ ಪ್ರಕರಣದಲ್ಲಿ ಆಘಾತಕಾರಿ ಮಾಹಿತಿಯು ಹೊರ ಬಂದಿದೆ, ಅದೆಂದರೆ ‘ಹಿಟ್ ಎಂಡ್ ರನ್’ನ (ಅಪಘಾತ ಮಾಡಿ ಪಲಾಯನ ಮಾಡುವುದು) ಘಟನೆಗಳು ದಿನೇದಿನೇ ಹೆಚ್ಚುತ್ತಿವೆ. ೨೦೧೬ ರಲ್ಲಿ ೫೫ ಸಾವಿರದ ೯೪೨, ೨೦೧೭ ರಲ್ಲಿ ೬೫ ಸಾವಿರದ ೧೮೬, ೨೦೧೮ ರಲ್ಲಿ ೬೯ ಸಾವಿರದ ೮೨೨, ೨೦೧೯ ರಲ್ಲಿ ೬೯ ಸಾವಿರದ ೬೨೧, ೨೦೨೦ ರಲ್ಲಿ ೫೨ ಸಾವಿರದ ೪೪೮ ಘಟನೆಗಳು ನಡೆದವು. (ಕೊರೊನಾ ಕಾಲದಲ್ಲಿ ಪ್ರವಾಸಕ್ಕೆ ನಿರ್ಬಂಧವಿತ್ತು) ಹಾಗೂ ೨೦೨೧ ರಲ್ಲಿ ಅದರಲ್ಲಿ ೭ ಸಾವಿರ ಹೆಚ್ಚಾಯಿತು. ೨೦೨೨ ರಲ್ಲಿ ‘ಹಿಟ್ ಎಂಡ್ ರನ್’ನಲ್ಲಿ ೬೭ ಸಾವಿರಕ್ಕಿಂತಲೂ ಹೆಚ್ಚು ಅಪಘಾತಗಳಾದವು.
ಸರ್ವೋಚ್ಚ ನ್ಯಾಯಾಲಯದ ಮುಂದೆ ‘ಜನರಲ್ ಇನ್ಶುರೆನ್ಸ್ ಕೌನ್ಸಿಲ್’ನ ವರದಿಯನ್ನಿಡಲಾಯಿತು. ಅದಕ್ಕನುಸಾರ ಅಪಘಾತದ ನಂತರ ನಷ್ಟಪರಿಹಾರಕ್ಕಾಗಿ ೨೦೫ ಅರ್ಜಿಗಳು ೨ ವರ್ಷಗಳಲ್ಲಿ ಬಂದಿದ್ದವು, ಅವುಗಳಲ್ಲಿ ೯೫ ಅರ್ಜಿಗಳ ನಿರ್ಣಯವಾಗಿತ್ತು. ಈ ವಿಷಯದಲ್ಲಿ ಸಂಸತ್ತಿನಲ್ಲಿ ತಾರಾಂಕಿತ ಪ್ರಶ್ನೆ ಕೇಳಿದಾಗ ಮುಂದಿನಂತೆ ಹೇಳಲಾಯಿತು, ‘ಹಿಟ್ ಎಂಡ್ ರನ್’ ನಿಂದ ೬೬೦ ವ್ಯಕ್ತಿಗಳು ಸಾವನ್ನಪ್ಪಿದ್ದರು ಹಾಗೂ ೧೧೩ ಜನರಿಗೆ ಗಂಭೀರ ಗಾಯವಾಗಿತ್ತು ಹಾಗೂ ಕೇಂದ್ರ ಸರಕಾರ ಅಪಘಾತದಲ್ಲಿ ಮೃತಪಟ್ಟವರಿಗೆ ಅಥವಾ ಗಂಭೀರ ಗಾಯ ಗೊಂಡವರಿಗೆ ೧೮೪ ಲಕ್ಷ ರೂಪಾಯಿಗಳಷ್ಟು ಪರಿಹಾರ ವಿತರಿಸಿತು. ಅಪಘಾತದಲ್ಲಿ ಮೃತಪಟ್ಟವರು ಮತ್ತು ಗಂಭೀರ ಗಾಯಾಳುಗಳ ಪ್ರಮಾಣ ನೋಡಿದರೆ ಅದರ ಮುಂದೆ ಸಹಾಯದ ಮೊತ್ತ ಕಡಿಮೆಯಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ೧೬.೮.೨೦೨೩ ರಂದು ‘ಸ್ಟ್ಯಾಂಡಿಂಗ್ ಕಮಿಟಿ’ (ಕೇಂದ್ರ ಸ್ತರದ ಸಮಿತಿ) ದಾಖಲಿಸಿದ ವರದಿಯನ್ನು ಕೇಳಿತು. ಈ ವರದಿ ನ್ಯಾಯಾಲಯದ ಮುಂದೆ ಬಂದಾಗ ನ್ಯಾಯಾಲಯ ಹೇಳಿತು, ‘ಕಾನೂನು ಪ್ರಕಾರ ಸಂತ್ರಸ್ತರು ಅಥವಾ ಮೃತರಾದವರ ವಾರಸುದಾರರಿಗೆ ಯೋಜನೆಗನುಸಾರ ಸಹಾಯ ಸಿಗುತ್ತದೆ ಎಂಬ ವಿಷಯದಲ್ಲಿ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯಾಗುವ ಅವಶ್ಯಕತೆಯಿದೆ. ನ್ಯಾಯವಾದಿಗಳ ಸಹಾಯ ಪಡೆಯದೆ ಅಲ್ಲಿ ಮನವಿ ಸಲ್ಲಿಸ ಬಹುದು. ಈ ಮನವಿಗೆ ಜಿಲ್ಲಾಸ್ತರದ ಸಮಿತಿ ಹಾಗೂ ಕೇಂದ್ರಾಡಳಿತಗಳು ‘ಸ್ಟ್ಯಾಂಡಿಂಗ್ ಕಮಿಟಿ’ ನಿರ್ಣಯ ನೀಡುತ್ತವೆ.’
೫. ನಷ್ಟಪರಿಹಾರಕ್ಕಾಗಿ ಮನವಿ ಸಲ್ಲಿಸುವ ಸಮಯಮಿತಿಯನ್ನು ಹೆಚ್ಚಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ವಿನಂತಿ
ಈ ಸಲ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು ಮುಂದಿನಂತೆ ಹೇಳಿದರು, ಅನೇಕ ಬಾರಿ ಅಪಘಾತವಾದ ನಂತರ ಪೊಲೀಸರು ‘ಹಿಟ್ ಎಂಡ್ ರನ್’ನ ಪ್ರಕರಣ ಹೌದೋ, ಅಲ್ಲವೋ ? ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ. ಇದನ್ನು ಪೊಲೀಸರಿಗೆ ಕಡ್ಡಾಯಗೊಳಿಸಬೇಕು, ಅದೇ ರೀತಿ ಇದು ಕೇಂದ್ರ ಸರಕಾರದ ದೃಷ್ಟಿಯಲ್ಲಿ ‘ಹಿಟ್ ಎಂಡ್ ರನ್’ನ ಪ್ರಕರಣ ಎಂದು ಸ್ಪಷ್ಟ ವಾಗದಿದ್ದರೆ, ತನಿಖೆಯ ನಂತರ ನಿಗದಿತ ದಿನಗಳೊಳಗೆ ಅದನ್ನು ‘ಹಿಟ್ ಎಂಡ್ ರನ್’ನ ಪ್ರಕರಣವಾಗಿದೆ’, ಎಂದು ಘೋಷಿಸಬೇಕು ಹಾಗೂ ಅದಕ್ಕನುಸಾರ ಸಂತ್ರಸ್ತರಿಗೆ ನಷ್ಟಪರಿಹಾರ ಸಿಗಬೇಕು, ಎಂದು ಮನವಿ ಮಾಡಬಹುದು. ಈ ಹಿಂದೆ ಅಪಘಾತವಾದ ನಂತರ ೬ ತಿಂಗಳ ಒಳಗೆ ಮನವಿ ಸಲ್ಲಿಸಬೇಕೆಂದು ಯೋಜನೆ ಯಲ್ಲಿ ಉಲ್ಲೇಖವಿತ್ತು; ಆದರೆ ‘೧೨ ತಿಂಗಳಲ್ಲಿಯೂ ಸಂತ್ರಸ್ತ ವ್ಯಕ್ತಿಗೆ ಆವೇದನೆ ನೀಡಲು ಸಾಧ್ಯವಾಗಬೇಕು’, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿನಂತಿಸಲಾಯಿತು.
೬. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ
ಸರ್ವೋಚ್ಚ ನ್ಯಾಯಾಲಯವು ಹೇಳಿದಂತೆ, ‘ಸ್ಟ್ಯಾಂಡಿಗ್ ಕಮಿಟಿ’ಯು ‘ಜನರಲ್ ಇನ್ಶುರೆನ್ಸ್ ಕೌನ್ಸಿಲ್’ನಿಂದ ‘ಈ ಯೋಜನೆ ಹೇಗೆ ನಡೆಯುತ್ತಿದೆ ?’ ಎಂಬುದರ ವರದಿಯನ್ನು ಪ್ರತಿ ೩ ತಿಂಗಳಿಗೊಮ್ಮೆ ತರಿಸುತ್ತದೆ. ಅದು ಬಂದನಂತರ ಅದರಲ್ಲಿ ಸಂತ್ರಸ್ತರ ಸಹಾಯಕ್ಕೆ ಆವಶ್ಯಕವಿರುವ ಬದಲಾವಣೆ ಮಾಡಬೇಕು ಹಾಗೂ ಈ ‘ಸ್ಟ್ಯಾಂಡಿಂಗ್ ಕಮಿಟಿ’ ಜನರ ಹಿತಕ್ಕಾಗಿ ಕಾನೂನಿನಲ್ಲಿ ಆವಶ್ಯಕವಿರುವ ಬದಲಾವಣೆ ಮಾಡುವಂತೆ ಕೇಂದ್ರ ಸರಕಾರಕ್ಕೂ ಸೂಚಿಸಬೇಕು, ಉದಾ. ಅಪಘಾತ ಆಗಿರುವ ಸ್ಥಳದ ಪೊಲೀಸರು ಸಂತ್ರಸ್ತ ಅಥವಾ ‘ನ್ಯಾಯಾಂಗ ಕ್ಷೇತ್ರಕ್ಕನುಸಾರ ದಾವೆ ಹೂಡುವ ವಿಚಾರಣಾ ಅಧಿಕಾರಿ’ಗೆ ಅಥವಾ ಸಾವಿಗೀಡಾದವರ ವಾರಸುದಾರರಿಗೆ ಅಪಘಾತದÀ ಮಾಹಿತಿ ನೀಡುವರು. ಅಲ್ಲಿನ ಜವಾಬ್ದಾರ ಪೊಲೀಸ್ ಅಧಿಕಾರಿಯು ಯೋಜನೆಯ ಕಲಮ್ ೨೧ ಕ್ಕನುಸಾರ ಈ ಪ್ರತ್ಯಕ್ಷದರ್ಶಿ (ಎಫ್.ಐ.ಆರ್.) ವರದಿಯನ್ನು ದಾವೆ ಹೂಡುವ ವಿಚಾರಣಾ ಅಧಿಕಾರಿಗೆ ಕೊಡುವರು. ಅದರಲ್ಲಿ ಮೃತರ ವಾರಸುದಾರರ ಅಥವಾ ಸಂತ್ರಸ್ತರ ಹೆಸರನ್ನು ನಮೂದಿಸಿರುತ್ತದೆ. ಅನಂತರ ಅದನ್ನು ದಾವೆ ಹೂಡುವ ವಿಚಾರಣಾಧಿಕಾರಿಗೆ ವರ್ಗಾಯಿಸಲಾಗುತ್ತದೆ.
ಇಂತಹ ಅಪಘಾತದಲ್ಲಿ ಮಡಿದವರ ವಾರಸುದಾರರು ಅಥವಾ ಸಂತ್ರಸ್ತರು ಯೋಜನೆಗನುಸಾರ ಹಣ ಪಡೆಯಲು ಮನವಿ ಸಲ್ಲಿಸದಿದ್ದರೆ, ‘ಜಿಲ್ಲಾ ವಿಧಿ (ಕಾನೂನು) ಸೇವಾ ಪಾಧಿಕಾರ’ ಅವರಿಗೆ ಅಪಘಾತದ ವಿಷಯವನ್ನು ತಿಳಿಸಬೇಕು. ‘ಮೃತರಾದ ವ್ಯಕ್ತಿಯ ವಾರಸುದಾರರ ಹೆಸರುಗಳನ್ನು ಹಾಗೂ ಸಂತ್ರಸ್ತರ ಹೆಸರುಗಳನ್ನು ತಿಳಿಸಬೇಕು ಹಾಗೂ ಅವರಿಗೆ ತಕ್ಷಣ ಸಹಾಯ ಮಾಡಬೇಕು’, ಎಂದು ವಿನಂತಿಯನ್ನೂ ಮಾಡಬೇಕು.
ರಾಜ್ಯ ಸರಕಾರವೂ ಸಮಿತಿಗಳನ್ನು ನೇಮಕ ಮಾಡಬೇಕು ಹಾಗೂ ಜಿಲ್ಲಾ ಉಪಪೊಲೀಸ್ ಪ್ರಮುಖ ಹಾಗೂ ‘ಜಿಲ್ಲಾ ವಿಧಿ ಸೇವಾ ಪ್ರಾಧಿಕಾರ’ದ ಸಚಿವರ ಸಮಿತಿಯು ಪ್ರತಿ ೨ ತಿಂಗಳಿಗೊಮ್ಮೆ ನಡೆದ ಸಭೆಯ ವರದಿಯನ್ನು ಸರಕಾರಕ್ಕೆ ಕಳುಹಿಸಬೇಕು. ಅದೇ ರೀತಿ ಈ ನಿರ್ಣಯಪತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿಯನ್ನೂ ಕೊಡಬೇಕು. ಕೇಂದ್ರ ಸರಕಾರದ ಈ ಯೋಜನೆಯ ಲಾಭವನ್ನು ಸಂತ್ರಸ್ತರಿಗೆ ತಲಪಿಸಲು ಕೇಂದ್ರ, ರಾಜ್ಯ ಹಾಗೂ ಜಿಲ್ಲೆಗಳ ಸಮಿತಿಗಳು, ಪೊಲೀಸ್ ಠಾಣೆ ಹಾಗೂ ‘ಜಿಲ್ಲಾ ವಿಧಿ ಸೇವಾ ಪ್ರಾಧಿಕಾರ’ ಇವು ಒಟ್ಟಾಗಿ ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು ಹಾಗೂ ಅದರ ವರದಿಯನ್ನು ಕೇಂದ್ರ ಸರಕಾರಕ್ಕೆ ಕೊಡಬೇಕು ಹಾಗೂ ಈ ನಿರ್ಣಯಪತ್ರಕ್ಕನುಸಾರ ಕೇಂದ್ರ ಸರಕಾರ ಕಾನೂನಿನಲ್ಲಿ ಅಥವಾ ಈ ಯೋಜನೆಯಲ್ಲಿ ಆವಶ್ಯಕ ಬದಲಾವಣೆ ಮಾಡಬೇಕು’, ಎಂದು ಆದೇಶ ನೀಡಿತು.
‘ಇದರ ಜೊತೆಗೆ ಈ ಪ್ರಕರಣವನ್ನು ಪುನಃ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ತರಬೇಕು’, ಎಂದು ಹೇಳಲಾಯಿತು. ಈ ಮೂಲಕ ಇದರಲ್ಲಿನ ಪ್ರಗತಿಯು ನ್ಯಾಯಾಲಯದ ಮುಂದೆ ಬರಬಹುದು.
೭. ಕೇಂದ್ರ ಮತ್ತು ರಾಜ್ಯ ಸರಕಾರದ ಒಳ್ಳೆಯ ಯೋಜನೆಗಳ ವಿಷಯದಲ್ಲಿ ಜನಜಾಗೃತಿ ಆಗಬೇಕಾಗಿದೆ !
ವಾಸ್ತವಿಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಕಲ್ಯಾಣಕ್ಕಾಗಿ ಅನೇಕ ಒಳ್ಳೆಯ ಯೋಜನೆಗಳನ್ನು ಘೋಷಣೆ ಮಾಡುತ್ತವೆ. ಅದಕ್ಕಾಗಿ ತುಂಬಾ ಹಣವೂ ಖರ್ಚಾಗುತ್ತದೆ; ಆದರೆ ನಿರುತ್ಸಾಹಿ ಹಾಗೂ ಮೈಗಳ್ಳತನದ ವ್ಯವಸ್ಥೆ ಈ ವಿಷಯವನ್ನು ಜನರಿಗೆ ತಲುಪಿಸುವುದಿಲ್ಲ. ಆದ್ದರಿಂದ ಪ್ರತಿವರ್ಷ ನೂರಾರು ಅಪಘಾತಗಳಾಗುತ್ತಿದ್ದರೂ ಇಂತಹ ಯೋಜನೆಗಳಿಂದ ಸಂತ್ರಸ್ತರಿಗೆ ಲಾಭವಾಗುವುದಿಲ್ಲ. ಅನೇಕ ದಿನಗಳ ವರೆಗೆ ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತದೆ. ನಿಜವಾಗಿಯೂ ಈ ಯೋಜನೆಯ ಲಾಭ ಉಚಿತವಾಗಿ ಸಿಗಬೇಕು; ಆದರೆ ಅದು ಹಾಗೆ ಸಿಗುವುದಿಲ್ಲ. ಅದಕ್ಕಾಗಿ ಸರಕಾರಿ ನೌಕರರ ಮಾನಸಿಕತೆಯನ್ನು ಬದಲಾಯಿಸಬೇಕಾಗಿದೆ. ಇದರ ಜೊತೆಗೆ ಈ ಯೋಜನೆಯ ವಿಷಯದಲ್ಲಿ ಸಾಮಾಜಿಕ ಸಂಘಟನೆಗಳು ಕೂಡ ಜನಜಾಗೃತಿ ಮೂಡಿಸಬೇಕು.
ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಿತು. ಈಗ ನಿಜವಾದ ರಾಮರಾಜ್ಯವನ್ನು ಅಸ್ತಿತ್ವಕ್ಕೆ ಬರಲು ಸರಕಾರಿ ನೌಕರರ ಸಹಿತ ಎಲ್ಲರೂ ಪ್ರಯತ್ನಿಸುವುದು ಆವಶ್ಯವಾಗಿದೆ !’
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೨.೧.೨೦೨೪)