ಬೇಸಿಗೆಯ ತೊಂದರೆ ಆಗದಂತೆ ವಹಿಸಬೇಕಾದ ಮುನ್ನೆಚರಿಕೆ !

ಈಗ ಬೇಸಿಗೆ ಆರಂಭವಾಗಿದೆ. ಈ ಕಾಲದಲ್ಲಿ ಶರೀರದ ಉಷ್ಣತೆ ಹೆಚ್ಚಾಗುವುದು, ಬೆವರು ಸುರಿಯುವುದು, ಶಕ್ತಿ ಕಡಿಮೆ ಆಗುವುದು, ಆಯಾಸ ಅನಿಸುವುದು ಮುಂತಾದ ತೊಂದರೆಗಳಾಗುತ್ತವೆ. ಉಷ್ಣತೆ ಹೆಚ್ಚಿರುವುದರಿಂದ ವ್ಯಕ್ತಿ ಪ್ರಜ್ಞೆ ತಪ್ಪಿ (ಉಷ್ಣಾಘಾತವಾಗುವುದು) ಸಾವನ್ನಪ್ಪಿದ ಕೆಲವು ಉದಾಹರಣೆಗಳಿವೆ. ಬೇಸಿಗೆಯಲ್ಲಾಗುವ ವಿವಿಧ ಕಾಯಿಲೆಗಳಿಂದ ದೂರವಿರಲು ಕೆಳಗಿನ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

ವೈದ್ಯ (ಕು.) ಶರ್ವರಿ ಬಾಕರೆ

೧. ದಿನವಿಡೀ ಅವಶ್ಯಕತೆ ಇರುವಷ್ಟು ನೀರು ಅಥವಾ ತತ್ಸಮ ಪೇಯಗಳನ್ನು ಕುಡಿಯಬೇಕು. ಕಡು ಬಣ್ಣದ ಮೂತ್ರ ವಿಸರ್ಜನೆ ಆಗುತ್ತಿದ್ದರೆ ಹೆಚ್ಚು ನೀರು ಕುಡಿಯಬೇಕು. ನೀರು ಕುಡಿಯಲು ಬಾಯಾರಿಕೆ ಆಗುವ ತನಕ ಕಾಯಬಾರದು. ಫ್ರಿಡ್ಜ್‌ನ ನೀರು ಕುಡಿಯಬಾರದು. ಬೆಳಗ್ಗೆ ಮನೆಯಿಂದ ಹೊರಗೆ ಹೋಗುವ ಮೊದಲು ಒಂದು ಲೋಟ ನೀರು ಕುಡಿಯಬೇಕು. ಹೊರಗೆ ಹೋಗುವಾಗ ಜೊತೆಗೆ ನೀರಿನ ಬಾಟಲಿ ಇಟ್ಟುಕೊಳ್ಳಬೇಕು.

೨. ನೀರನ್ನು ಒಮ್ಮೆಲೇ ಗಟಗಟ ಕುಡಿಯದೆ ಸಾವಕಾಶವಾಗಿ ಕುಡಿಯ ಬೇಕು. ಬಿಸಿಲಿನಿಂದ ಬಂದ ತಕ್ಷಣ ನೀರು ಕುಡಿಯ ಬಾರದು, ೫ ರಿಂದ ೧೦ ನಿಮಿಷ ಶಾಂತ ಕುಳಿತು ನಂತರ ಕುಡಿಯಬೇಕು.

೩. ಸಕ್ಕರೆ ಇಲ್ಲದ ಪಾನೀಯ ಕುಡಿಯಬಹುದು, ಆದರೆ ಹೆಚ್ಚು ಸಕ್ಕರೆಯುಕ್ತ ಪಾನೀಯವು ಜೀರ್ಣಿಸಲು ಕಷ್ಟವಾಗುವುದರಿಂದ ಅದನ್ನು ಕುಡಿಯಬಾರದು. ಸಾಧ್ಯವಿದ್ದರೆ ಪ್ರತಿದಿನ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕ ಇರಬೇಕು. ಮಣ್ಣಿನ ಮಡಿಕೆಯಲ್ಲಿರುವ ತಂಪಾದ ನೀರಿನಿಂದ ತಯಾರಿಸಿರುವ ಪಾನಕ, ಗುಲಾಬಿ, ಪಾರಿಜಾತ ಮುಂತಾದ ಸುಗಂಧü ದ್ರವ್ಯ ಹಾಕಿರುವ ತಣ್ಣಗಿನ ನೀರು ಕುಡಿಯಬೇಕು.

೪. ಹೊರಗಿನ ಆಹಾರ ಪದಾರ್ಥ ಸೇವಿಸುವುದು ತಪ್ಪಿಸಬೇಕು. ಒಗರು, ಖಾರ, ಕಹಿ ಮತ್ತು ಹೆಚ್ಚು ಹುಳಿ ರುಚಿಯ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು.

೫. ಸಡಿಲ ಉಡುಪು, ತಿಳಿ ಬಣ್ಣದ ಮತ್ತು ಹಗುರವಾಗಿರುವ (ಸಾಧ್ಯವಾದಷ್ಟು ಹತ್ತಿಯ) ಬಟ್ಟೆ ಧರಿಸಬೇಕು.

೬. ಬಿಸಿಲು ಇರುವಾಗ ಮನೆಯಲ್ಲಿ ಅಥವಾ ನೆರಳು ಇರುವ ಜಾಗದಲ್ಲಿ ನಿಲ್ಲಬೇಕು.

೭. ಸಾಧ್ಯವಾದಷ್ಟು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೪ ಗಂಟೆಯ ವರೆಗಿನ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು. ಬಿಸಿಲಿನ ಶಾಖ ಆಗಬಾರದೆಂದು ಹೊರಗೆ ಹೋಗುವಾಗ ಕಣ್ಣಿಗೆ ಗಾಗಲ್‌ ಹಾಕಿ. ಛತ್ರಿ ಅಥವಾ ತಲೆಯ ಮೇಲೆ ನೆರಳು ಬರುವ ಹಾಗೆ ಟೊಪ್ಪಿ(ಹ್ಯಾಟ್) ಉಪಯೋಗಿಸಿ. ಟೊಪ್ಪಿ ಇಲ್ಲದಿದ್ದರೆ ಮೂಗು ಮತ್ತು ಕಿವಿಗಳಿಗೆ ದೊಡ್ಡ ಬಿಳಿಬಣ್ಣದ ಕರವಸ್ತ್ರವನ್ನು ಕಟ್ಟಿಕೊಳ್ಳಬೇಕು.

೮. ಕೆಲವರಿಗೆ ಅಧ್ಯಾತ್ಮ ಪ್ರಸಾರದ ಸೇವೆ ಅಥವಾ ಇತರ ಕಾರಣಗಳಿಂದ ಹೊರಗೆ ಹೋಗಬೇಕಾಗುತ್ತದೆ ಅಥವಾ ಪ್ರಯಾಣ ಮಾಡಬೇಕಾಗುತ್ತದೆ. ಬಿಸಿಲಿನ ಶಾಖದ ತೊಂದರೆ ಆಗಬಾರದು, ಎಂದು ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ತಮ್ಮ ಪರ್ಸಿನಲ್ಲಿ ಈರುಳ್ಳಿ ಇಟ್ಟುಕೊಳ್ಳಿ. ಈರುಳ್ಳಿಯು ಶರೀರದ ಉಷ್ಣತೆಯನ್ನು ಸೆಳೆಯುವುದರಿಂದ ೩-೪ ದಿನದಲ್ಲಿ ಅದು ಒಣಗುತ್ತದೆ. ಒಣಗಿರುವ ಈರುಳ್ಳಿ ಎಸೆದು ಹೊಸ ಈರುಳ್ಳಿ ಇಟ್ಟುಕೊಳ್ಳಿ.

೯. ವಾತಾವರಣವನ್ನು ತಂಪಾಗಿಡಲು ಕೂಲರ್‌ ಸೌಲಭ್ಯ ಇದ್ದರೆ ಅದನ್ನು ದಿನದಲ್ಲಿ ಕೆಲವು ಗಂಟೆ ಬಳಸಿ.

೧೦. ಜಾಗರಣೆ ಮಾಡುವುದರಿಂದ ದೇಹದಲ್ಲಿ ಪಿತ್ತ ಮತ್ತು ವಾತ. ಈ ದೋಷ ಹೆಚ್ಚಾಗುತ್ತದೆ. ಆದ್ದರಿಂದ ಅತಿ ಜಾಗರಣೆ ಮಾಡಬಾದರು. (ಎಲ್ಲಾ ಋತುಗಳಲ್ಲಿ ಈ ಕಾಳಜಿ ವಹಿಸುವ ಅಗತ್ಯವಿದೆ)

೧೧. ಈ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ಆಯಾಸ ಕೂಡ ಅನಿಸುತ್ತದೆ. ಆದ್ದರಿಂದ ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು.

೧೨. ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳು ಹಾಗೂ ೬೫ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮೇಲಿನ ಅಂಶಗಳ ಪ್ರಕಾರ ವಿಶೇಷ ಕಾಳಜಿ ವಹಿಸುವುದು ಅಗತ್ಯವಿದೆ.

– ವೈದ್ಯ (ಕು.) ಶರ್ವರಿ ಬಾಕರೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೩.೨೦೨೪)