ಫೆಬ್ರವರಿ ೧ ರಂದು ನನಗೆ ವಾರಾಣಸಿಯ ಪ್ರಸಿದ್ಧ ಶ್ರೀ ಕಾಶಿವಿಶ್ವನಾಥ ಮಂದಿರಕ್ಕೆ ದರ್ಶನಕ್ಕೆ ಹೋಗುವ ಅವಕಾಶ ಸಿಕ್ಕಿತು. ಈ ಹಿಂದೆ ಸುಮಾರು ೧೫ ವರ್ಷಗಳ ಹಿಂದೆ ನಾನು ಶ್ರೀ ಕಾಶಿವಿಶ್ವೇಶ್ವರನ ದರ್ಶನ ಪಡೆದಿದ್ದೆನು. ಇತ್ತೀಚೆಗೆ ‘ಶ್ರೀ ಕಾಶಿವಿಶ್ವನಾಥ ಕಾರಿಡಾರ್’ ಅರ್ಥಾತ್ ಸುಸಜ್ಜಿತ ಮಾರ್ಗವನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಮಾರ್ಗವಾದ ನಂತರ ಅಲ್ಲಿಗೆ ನಾನು ಮೊದಲ ಬಾರಿಗೆ ಹೋಗಿದ್ದೆನು. ಆ ಸಮಯದಲ್ಲಿ ನನ್ನ ಗಮನಕ್ಕೆ ಬಂದ ಅಂಶಗಳನ್ನು ಮುಂದೆ ನೀಡುತ್ತಿದ್ದೇನೆ.
೧. ಮಂದಿರ ಪರಿಸರದ ಸಂಪೂರ್ಣ ಬದಲಾದ ಚಿತ್ರಣ !
ಈ ಮೊದಲು ಮಂದಿರಕ್ಕೆ ಹೋಗುವ ಮಾರ್ಗವು ಅತ್ಯಂತ ಇಕ್ಕಟ್ಟಿನದ್ದಾಗಿತ್ತು. ಅತ್ಯಂತ ಕಿರಿದಾದ ಮತ್ತು ಜನಸಂದಣಿ ತುಂಬಿದ್ದ ಈ ಮಾರ್ಗದಿಂದ ಹೋಗುವಾಗ ಭಕ್ತರಿಗೆ ಬಹಳ ತೊಂದರೆಯಾಗುತ್ತಿತ್ತು. ಈಗ ಇಲ್ಲಿ ಸುಸಜ್ಜಿತ ಮಾರ್ಗವನ್ನು ನಿರ್ಮಾಣ ಮಾಡಿದ ನಂತರ ಮಂದಿರ ಮತ್ತು ಮಂದಿರದ ಪರಿಸರದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಮಂದಿರದ ಪರಿಸರ ಬಹಳ ವಿಶಾಲವಾಗಿದೆ. ಇಲ್ಲಿಯ ಆಡಳಿತ ವ್ಯವಸ್ಥೆ ವ್ಯವಸ್ಥಿತವಾಗಿದೆ. ವಾರಾಣಸಿ ಸ್ವತಃ ಪ್ರಧಾನಮಂತ್ರಿಗಳ ಚುನಾವಣಾಕ್ಷೇತ್ರವಾಗಿದೆ. ಅವರೇ ಈ ಸುಸಜ್ಜಿತ ಮಾರ್ಗವನ್ನು ಡಿಸೆಂಬರ ೨೦೨೧ ರಲ್ಲಿ ಉದ್ಘಾಟಿಸಿದ್ದರು. ಈ ಮಂದಿರಕ್ಕೆ ಗಂಗಾ ನದಿಯ ದಡದ ಘಟ್ಟಗಳನ್ನು ಜೋಡಿಸಲಾಗಿದೆ. ಇದು ಈ ಸುಸಜ್ಜಿತ ಮಾರ್ಗದ ಪ್ರಮುಖ ವೈಶಿಷ್ಟವಾಗಿದೆ
೨. ಎರಡು ಸಾಲುಗಳಿಂದಾಗಿ ಭಕ್ತರಿಗೆ ಗೊಂದಲ
ನಾನು ಈ ಹಿಂದೆ ದರ್ಶನಕ್ಕೆ ಬಂದಿದ್ದರಿಂದ, ನನಗೆ ಆ ಸಮಯದ ಮಂದಿರ ನೆನಪಾಗುತ್ತಿತ್ತು. ಸಹಜವಾಗಿಯೇ ಅದರ ನೆನಪನ್ನು ಕಣ್ಣುಗಳ ಮುಂದೆ ಇಟ್ಟುಕೊಂಡು ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳಿಂದ ತಪಾಸಣೆಯನ್ನು ಮಾಡಿಸಿಕೊಂಡು ನಾನು ಮಂದಿರವನ್ನು ಪ್ರವೇಶಿಸಿದೆನು. ಆಗ ಎದುರಿಗೆ ನನಗೆ ದರ್ಶನಕ್ಕೆ ನಿಂತಿರುವ ೨ ಸಾಲುಗಳು ಕಾಣಿಸಿದವು. ನಾನು ಅದರಲ್ಲಿನ ಒಂದು ಸಾಲಿನಲ್ಲಿ ನಿಂತುಕೊಂಡೆನು. ಆದರೆ ಮರುಕ್ಷಣವೇ ಅನುಮಾನದಿಂದ ನಾನು ಸರಿಯಾದ ಸಾಲಿನಲ್ಲಿ ನಿಂತಿದ್ದೇನೆಯೇ ?’ ಎಂದು ನನ್ನ ಮುಂದೆ ನಿಂತಿದ್ದ ವ್ಯಕ್ತಿಗೆ ಎರಡೂ ಸಾಲುಗಳು ಎಲ್ಲಿಗೆ ಹೋಗುತ್ತವೆ ?’ ಎಂದು ಕೇಳಿದೆನು. ಆ ವ್ಯಕ್ತಿಗೂ ಸರಿಯಾಗಿ ಏನನ್ನೂ ಹೇಳಲು ಬರಲಿಲ್ಲ. ಆಗ ಇನ್ನೂ ಇಬ್ಬರನ್ನು ಕೇಳಿದೆನು. ಅವರಿಗೂ ಹೆಚ್ಚೇನೂ ಕಲ್ಪನೆಯಿರಲಿಲ್ಲ. ಆಗ ನಾನು ನನ್ನ ಅಂದಾಜಿನಂತೆ ನಾನು ನಿಂತಿದ್ದ ಸಾಲನ್ನು ಬಿಟ್ಟು ಮತ್ತೊಂದು ಸಾಲಿನಲ್ಲಿ ನಿಂತುಕೊಂಡೆನು. ಸ್ವಲ್ಪ ಸಮಯದ ಬಳಿಕ ಎರಡನೇಯ ಸಾಲೇ ಮುಖ್ಯ ಸಾಲಾಗಿರುವುದು ನನ್ನ ಗಮನಕ್ಕೆ ಬಂದಿತು. ಬಳಿಕ ನಾನು ಇತರ ಕೆಲವು ಭಕ್ತ್ತರಿಗೂ ಸಹಾಯ ಮಾಡುವ ಉದ್ದೇಶದಿಂದ ಹೇಳಿದೆನು. ಮೊದಲ ಸಾಲು ಅಲ್ಲಿಯ ನಂದಿಯ ದರ್ಶನ ಪಡೆಯಲು, ಎರಡನೇಯ ಸಾಲು ಮುಖ್ಯ ಮಂದಿರಕ್ಕೆ ಅಂದರೆ ಶ್ರೀ ಕಾಶಿವಿಶ್ವೇಶ್ವರನ ದರ್ಶನಕ್ಕಾಗಿ ಇತ್ತು. ಇದರಿಂದ ನನ್ನ ಗಮನಕ್ಕೆ ಬಂದುದೇನೆಂದರೆ, ನಾನು ಈ ಹಿಂದೆ ಬಂದಿದ್ದರೂ ನನಗೆ ಇಷ್ಟು ಗೊಂದಲ ವಾಗುತ್ತಿದ್ದರೆ, ಹೊಸದಾಗಿ ಮೊದಲ ಬಾರಿಗೆ ಬರುವ ಭಕ್ತರಿಗೆ ಎಷ್ಟು ಗೊಂದಲವಾಗಬಹುದು ? ಇದನ್ನು ನಾನು ಅಲ್ಲಿರುವ ಒಬ್ಬ ಅರ್ಚಕರಿಗೆ ಹೇಳಿದೆನು. ಅದಕ್ಕೆ ಅವರು ‘ನಿಮಗೆ ಮಾತ್ರವಲ್ಲ ಎಲ್ಲರಿಗೂ ಇದೇ ರೀತಿ ಗೊಂದಲವಾಗುತ್ತದೆ’ ಎಂದು ಹೇಳಿದರು. ಅದಕ್ಕೆ ನಾನು ಅವರಿಗೆ ‘ಹೀಗಿರುವಾಗ ನೀವು ಮಾರ್ಗದರ್ಶಕ ಫಲಕಗಳನ್ನು ಹಾಕಬಹುದಲ್ಲವೇ ?’ ಎಂದು ಕೇಳಿದೆನು. ಅದಕ್ಕೆ ಅವರು ಉತ್ಸುಕತೆಯನ್ನು ತೋರಿಸಲಿಲ್ಲ. ಇದರಿಂದ ಮಂದಿರದಲ್ಲಿ ಪ್ರವೇಶಿಸಿದ ಭಕ್ತರ ಅನುಕೂಲಕ್ಕಾಗಿ ವಿವಿಧ ಸ್ಥಳಗಳಲ್ಲಿ ‘ಅವರು ಮುಂದೆ ಹೇಗೆ ಹೋಗಬೇಕು ಮತ್ತು ಎಲ್ಲಿಗೆ ಹೋಗಬೇಕು ?’ ಎನ್ನುವ ಮಾರ್ಗದರ್ಶಕ ಫಲಕಗಳನ್ನು ಹಾಕಬೇಕು ಎಂದು ನನ್ನ ಗಮನಕ್ಕೆ ಬಂದಿತು.
೩. ಶ್ರೀ ಕಾಶಿವಿಶ್ವೇಶ್ವರನ ಪ್ರತ್ಯಕ್ಷ ದರ್ಶನ !
ಹೆಚ್ಚಾಗಿ ಜನಸಂದಣಿಯಿರುವ ದೇವಸ್ಥಾನಗಳಲ್ಲಿ ಭದ್ರತಾ ಸಿಬ್ಬಂದಿಯವರು ಭಕ್ತರನ್ನು ಮುಂದಕ್ಕೆ ತಳ್ಳುವುದನ್ನು ನಾವು ಅನೇಕ ಮಂದಿರಗಳಲ್ಲಿ ನೋಡಿದ್ದೇವೆ. ಆದರೆ ಶ್ರೀ ಕಾಶಿವಿಶ್ವೇಶ್ವರನ ದರ್ಶನವನ್ನು ಪಡೆಯುವಾಗ ಅಲ್ಲಿಯ ಭದ್ರತಾ ಸಿಬ್ಬಂದಿಯವರು ಭಕ್ತರಿಗೆ ಸಹಾಯ ಮಾಡುತ್ತಿದ್ದರು, ಇದನ್ನು ನೋಡಿ ಒಳ್ಳೆಯದೆನಿಸಿತು. ಅಲ್ಲಿ ನಿರಂತರವಾಗಿ ಮಂತ್ರೋಚ್ಚಾರಗಳ ನಾದ ಕೇಳಿಸುತ್ತಿತ್ತು. ಭಕ್ತರೂ ‘ಓಂ ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ’ ಎಂಬ ಜಯಘೋಷವನ್ನು ಮಾಡುತ್ತಿದ್ದರು. ಸಂಪೂರ್ಣ ವಾತಾವರಣವು ಅತ್ಯಂತ ಸಾತ್ತ್ವಿಕವಾಗಿತ್ತು. ಶ್ರೀ ಗುರುಗಳ ಕೃಪೆಯಿಂದ ಶ್ರೀ ಕಾಶಿವಿಶ್ವೇಶ್ವರನ ಭಾವಪೂರ್ಣ ದರ್ಶನವನ್ನು ಪಡೆಯಲು ಸಾಧ್ಯವಾಯಿತು.
೪. ಪರಿಸರದಲ್ಲಿ ಅನೇಕ ಮಂದಿರಗಳಿರುವುದರಿಂದ ಯೋಗ್ಯ ದರ್ಶನ ವ್ಯವಸ್ಥೆ ಬೇಕು !
ಈ ಮಂದಿರದ ಪರಿಸರದಲ್ಲಿ ಅನೇಕ ಚಿಕ್ಕ ಮಂದಿರಗಳಿವೆ. ಮುಖ್ಯ ಮಂದಿರದಲ್ಲಿ ದರ್ಶನ ಪಡೆದ ನಂತರ ‘ಈಗ ಮುಂದೆ ಯಾವ ಮಂದಿರಕ್ಕೆ ಹೋಗಿ ದರ್ಶನವನ್ನು ಪಡೆಯಬೇಕು ?’ ಎನ್ನುವ ಪ್ರಶ್ನೆ ಬಂದಿತು. ಪುನಃ ಒಬ್ಬ ವ್ಯಕ್ತಿಯನ್ನು ಕೇಳಿದೆನು. ಅವನು ವಿವರಿಸಿ ಹೇಳಿದನು. ಅದರಂತೆ, ಮುಂದೆ ಬೇರೆ ಬೇರೆ ಮಂದಿರಗಳಲ್ಲಿ ದರ್ಶನವನ್ನು ಪಡೆದೆನು. ಇದರಿಂದ ‘ಮುಖ್ಯ ಮಂದಿರದಲ್ಲಿ ದರ್ಶನ ಪಡೆದ ನಂತರ ಮುಂದಿನ ಯಾವ ಮಂದಿರದ ದರ್ಶನವನ್ನು ಭಕ್ತರು ಪಡೆಯಬೇಕು ?’ ಎನ್ನುವುದನ್ನು ಆಡಳಿತ ಮಂಡಳಿಯೇ ನಿರ್ಧರಿಸಿ, ಅದರಂತೆ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಬೇಕು. ಇದರಿಂದ ಭಕ್ತರಿಗೆ ಗೊಂದಲ ಆಗುವುದಿಲ್ಲ.
೫. ಶ್ರೀ ಅನ್ನಪೂರ್ಣಾದೇವಿಯ ಮಂದಿರದಲ್ಲಿ ದರ್ಶನವನ್ನು ಪಡೆದುಕೊಂಡು ಬಂದ ನಂತರ, ಭಕ್ತರು ಪುನಃ ತಪಾಸಣೆಗೆ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.
ಶ್ರೀ ಅನ್ನಪೂರ್ಣಾದೇವಿಯ ಮಂದಿರವು ಶ್ರೀ ಕಾಶಿವಿಶ್ವೇಶ್ವರ ದೇವಾಲಯದ ಪರಿಸರಕ್ಕೆ ತಗಲಿಕೊಂಡಿದೆ. ಶ್ರೀ ಕಾಶಿವಿಶ್ವೇಶ್ವರ ಮಂದಿರದ ಪರಿಸರದಲ್ಲಿರುವ ಇತರ ಮಂದಿರಗಳ ದರ್ಶನವನ್ನು ಪಡೆಯುವಾಗ ಭಕ್ತರು ಶ್ರೀ ಅನ್ನಪೂರ್ಣಾದೇವಿ ಮಂದಿರಕ್ಕೆ ಹೋಗುತ್ತಾರೆ. ಅಲ್ಲಿ ದರ್ಶನವನ್ನು ಪಡೆದುಕೊಂಡು ಬಂದ ಬಳಿಕ ಶ್ರೀ ಕಾಶಿವಿಶ್ವೇಶ್ವರ ಮಂದಿರವನ್ನು ಮರಳಿ ಪ್ರವೇಶಿಸುವ ಮೊದಲು ಪುನಃ ತಪಾಸಣೆಯ ಸಾಲಿನಲ್ಲಿ ನಿಂತುಕೊಂಡು ಸ್ವತಃ ತಪಾಸಣೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಭಕ್ತರ ಸಮಯ ಹಾಳಾಗುತ್ತದೆ. ಆದುದರಿಂದ ‘ಶ್ರೀ ಕಾಶೀವಿಶ್ವೇಶ್ವರ ಮಂದಿರದ ಪರಿಸರದಲ್ಲಿರುವ ಎಲ್ಲ ಮಂದಿರಗಳ ದರ್ಶವನ್ನು ಪಡೆದುಕೊಂಡ ಬಳಿಕ ಶ್ರೀ ಅನ್ನಪೂರ್ಣಾದೇವಿಯ ದರ್ಶನ ಪಡೆದು ಅಲ್ಲಿಂದಲೇ ಹೊರಗೆ ಹೋಗಲು ವ್ಯವಸ್ಥೆ ಮಾಡಿದರೆ, ಭಕ್ತರಿಗೆ ಬಹಳ ಅನುಕೂಲ ಮತ್ತು ಸಮಯವನ್ನು ಉಳಿಸಬಹುದು’, ಎಂದು ಅನಿಸುತ್ತದೆ. ಶ್ರೀ ಅನ್ನಪೂರ್ಣಾದೇವಿಯ ಮಂದಿರದಲ್ಲಿ ಮೊದಲು ದರ್ಶನ ಪಡೆದುಕೊಂಡು ನಂತರ ಶ್ರೀ ಕಾಶಿವಿಶ್ವೇಶ್ವರನ ದರ್ಶನ ಪಡೆಯುವ ವ್ಯವಸ್ಥೆಯನ್ನು ಮಾಡಿದರೆ, ಅದೂ ಕೂಡ ಆಗಬಹುದು’, ಎಂದೆನಿಸಿತು.
೬. ಮಂದಿರದ ಇತಿಹಾಸವು ಮುಂಭಾಗದಲ್ಲಿರಬೇಕು.
ಮಹಾದೇವನ ಯಾವುದೇ ಮಂದಿರದಲ್ಲಿ ಶಿವಲಿಂಗದ ಎದುರು ನಂದಿ ಇದ್ದೇ ಇರುತ್ತದೆ; ಆದರೆ ಈ ಮಂದಿರದ ಪರಿಸರಿಯಲ್ಲಿನ ನಂದಿ ಮಸೀದಿಯ ಗೋಡೆಯ ಕಡೆಗೆ ಮುಖ ಮಾಡಿದೆ. ಇದರಿಂದ ಈ ನಂದಿಯ ದರ್ಶನವನ್ನು ಪಡೆಯುವಾಗ ಮೊದಲ ಬಾರಿಗೆ ಬಂದಿರುವ ಭಕ್ತರಿಗೆ ಏನೂ ಗೊತ್ತಾಗುವುದಿಲ್ಲ ಅಥವಾ ಅವರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಸಂಶಯದ ನಿವಾರಣೆ ಮಾಡಲು ಅಲ್ಲಿ ಮಾರ್ಗದರ್ಶಕ(ಗೈಡ) ಇರಬೇಕು ಅಥವಾ ಆ ಸ್ಥಳದಲ್ಲಿ ಇತಿಹಾಸ ಬರೆದಿರುವ ಎಲ್ಲರಿಗೂ ಕಾಣಿಸುವಂತಹ ಫಲಕ ಇರಬೇಕು. ಕ್ರೂರಕರ್ಮಿ ಔರಂಗಜೇಬನು ಕಾಶಿಯ ಮಂದಿರವನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ಕಟ್ಟಿದನು. ಅದೇ ಇಂದಿನ ಜ್ಞಾನವಾಪಿ. ಆಗಿನ ಕಾಲದ ಮಂದಿರದ ಎದುರಿನ ನಂದಿ ಇದಾಗಿದೆ, ಎಂದು ಇಂದಿಗೂ ಅಲ್ಲಿಯ ಅನೇಕ ಜನರು ಹೇಳುತ್ತಾರೆ. ಇದರಿಂದ ‘ಭಕ್ತರಿಗೆ ಸತ್ಯ ಇತಿಹಾಸ ತಿಳಿಯಲು ಸಹಾಯವಾಗುತ್ತದೆ’, ಎಂದು ಅನಿಸುತ್ತದೆ.
೭. ಭಕ್ತರ ದರ್ಶನ ಸುಖಕರ ಆಗಬೇಕು !
ಭಕ್ತರು ಶ್ರೀ ಕಾಶಿವಿಶ್ವೇಶ್ವರನ ದರ್ಶನಕ್ಕಾಗಿ ಬಹಳ ದೂರದೂರದ ರಾಜ್ಯಗಳಿಂದ ಬರುತ್ತಾರೆ. ಸದ್ಯದ ವಿಶಾಲ ಮಂದಿರವನ್ನು ನೋಡಿ ಭಕ್ತರು ಸಮಾಧಾನವನ್ನು ವ್ಯಕ್ತ ಪಡಿಸುತ್ತಾರೆ. ಇದರೊಂದಿಗೆ ಮಂದಿರ ಆಡಳಿತ ಮಂಡಳಿಯು ಮೇಲಿನಂತೆ ಕೆಲವು ಬದಲಾವಣೆಗಳನ್ನು ಮಾಡಿ, ಭಕ್ತರಿಗಾಗಿ ಸಲಹೆಯ ಪುಸ್ತಕವನ್ನು ಇಟ್ಟರೆ, ಅದರಲ್ಲಿ ಭಕ್ತರು ತಮಗೆ ಗಮನಕ್ಕೆ ಬಂದಿರುವ ಕೊರತೆಗಳನ್ನು ನೋಂದಾಯಿಸಬಹುದು. ಇದರಿಂದ ಭಕ್ತರ ದರ್ಶನ ಸುಖಕರವಾಗಬಹುದು ಮತ್ತು ಸಾಕ್ಷಾತ್ ಭಗವಾನ ಶ್ರೀ ಮಹಾದೇವನ ದರ್ಶನದ ಅಮೂಲ್ಯ ಕ್ಷಣ ಸ್ವತಃ ಹೃದಯ ಮಂದಿರದಲ್ಲಿ ಶಾಶ್ವತವಾಗಿ ಕೆತ್ತಿಟ್ಟುಕೊಂಡು, ಅವರು ಆನಂದದಿಂದ ತಮ್ಮ ತಮ್ಮ ಮನೆಗೆ ಮರಳಬಹುದು.
– ಶ್ರೀ ನೀಲೇಶ ಕುಲಕರ್ಣಿ, ವಿಶೇಷ ಪ್ರತಿನಿಧಿ, ‘ಸನಾನತ ಪ್ರಭಾತ’ ದಿನಪತ್ರಿಕೆ (೧೩.೨.೨೦೨೪)