ಶಿವೋಪಾಸನೆಯ ವೈಶಿಷ್ಟ್ಯಗಳು ಮತ್ತು ಶಾಸ್ತ್ರ

ಶಿವಭಕ್ತರು ಮಹಾಶಿವರಾತ್ರಿಯಂದು ಶಿನವ ಉಪಾಸನೆಯನ್ನು ಶ್ರದ್ಧೆಯಿಂದ ಮಾಡುತ್ತಾರೆ. ಶಾಸ್ತçವನ್ನರಿತು ಶಿವೋಪಾಸನೆ ಮಾಡಿದರೆ ಉಪಾಸಕನ ಭಾವಭಕ್ತಿ ಹೆಚ್ಚಾಗಿ ಅವನಿಗೆ ಅಧಿಕಾಧಿಕ ಲಾಭವಾಗುತ್ತದೆ. ಶಿವೋಪಾಸನೆಯಲ್ಲಿ ಪ್ರತ್ಯಕ್ಷ ದೇವಸ್ಥಾನದಲ್ಲಿ ದರ್ಶನ ಪಡೆಯುವುದರಿಂದ ಹಿಡಿದು ಶಿವಪೂಜೆಯ ತನಕ ಅನೇಕ ಕೃತಿಗಳಿರುತ್ತವೆ. ಶಿವರಾತ್ರಿಯ ನಿಮಿತ್ತ ಶಿವನ ಉಪಾಸನೆಯ ವೈಶಿಷ್ಟ್ಯ ಮತ್ತು ಶಾಸ್ತ್ರಗಳನ್ನು ತಿಳಿದುಕೊಳ್ಳೋಣ.

ಶಿವಲಿಂಗದ ದರ್ಶನದ ಮೊದಲು ನಂದಿಯ ದರ್ಶನ

ಶಿವನ ದೇವಸ್ಥಾನದಲ್ಲಿರುವ ನಂದಿಯು ಶಿವನ ವಾಹನವಾಗಿದೆ. ಶಿವಲಿಂಗದ ದರ್ಶನ ಪಡೆಯುವ ಮುನ್ನ ನಂದಿಯ ದರ್ಶನ ಪಡೆಯಬೇಕು. ನಂದಿಯ ದರ್ಶನ ಪಡೆದರೆ ಸಾತ್ತ್ವಿಕತೆಯ ಪ್ರಮಾಣ ಹೆಚ್ಚಾಗಲು ಸಹಾಯವಾಗುತ್ತದೆ. ಇದರಿಂದ ವ್ಯಕ್ತಿಗೆ ಶಿವಲಿಂಗದಿಂದ ಹೊರ ಬೀಳುವ ಶಕ್ತಿಶಾಲಿ ಲಹರಿಗಳನ್ನು ಸಹಿಸಲು ಸಾಧ್ಯವಾಗುತ್ತದೆ. ಇದರಿಂದ ಅನಂತರ ಶಿವಲಿಂಗದ ದರ್ಶನವನ್ನು ಪಡೆಯುವಾಗ ಭಕ್ತನಿಗೆ ಶಿವನಿಂದ ಬರುವ ಶಕ್ತಿಶಾಲಿ ಲಹರಿಗಳನ್ನು ಸಹಿಸುವ ಕ್ಷಮತೆ ಪ್ರಾಪ್ತವಾಗುತ್ತದೆ, ಶಿವಲಿಂಗದ ದರ್ಶನವನ್ನು ಪಡೆಯುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಶಿವಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.
ಶಿವಾಲಯದಲ್ಲಿ ಲಿಂಗದ ಪೂಜೆಯನ್ನು ಮಾಡುವುದು

ಶಿವಾಲಯದಲ್ಲಿ ಶಿವಲಿಂಗದ ಪೂಜೆಯನ್ನು ಮಾಡುವಾಗ ಹರಿನಾಳದ ಸ್ರೋತದ ಎದುರಿಗೆ ಕುಳಿತುಕೊಳ್ಳಬಾರದು. ಇದರ ಕಾರಣವೆಂದರೆ ಶಿವನ ಲಹರಿಗಳು ಹರಿನಾಳದಿಂದ ಅಧಿಕ ಪ್ರಮಾಣ ದಲ್ಲಿ ಹೊರಸೂಸುತ್ತವೆ. ಹರಿನಾಳದ ಎದುರಿಗೆ ಕುಳಿತುಕೊಂಡರೆ ಶಿವನ ಶಕ್ತಿಶಾಲಿ ಲಹರಿಗಳು ನೇರವಾಗಿ ಮೈಮೇಲೆ ಬರುವುದರಿಂದ ಉಪಾಸಕನಿಗೆ ಆ ಲಹರಿಗಳಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಲಿಂಗದ ಪೂಜೆ ಮಾಡುವಾಗ ಲಿಂಗದ ಹತ್ತಿರ ಇತರ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಶಂಕರನ ಲಿಂಗಕ್ಕೆ ತಣ್ಣೀರು, ಹಾಲು ಅಥವಾ ಪಂಚಾಮೃತದಿಂದ ಸ್ನಾನ ಹಾಕುತ್ತಾರೆ.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ ?

ಶಿವನಿಗೆ ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿ ಪ್ರದಕ್ಷಿಣೆ ಇರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದ ವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರ ಎನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯ ವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯ ವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು. ಈ ನಿಯಮವು ಶಿವಲಿಂಗವು ಮಾನವನಿರ್ಮಿತವಾಗಿದ್ದರೆ ಅಥವಾ ಮಾನವ ಸ್ಥಾಪಿತ ವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ. ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲ ವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿ ಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.

(ಬುದ್ಧಿಪ್ರಾಮಾಣ್ಯವಾದಿಗಳಿಗೆ, ಹರಿನಾಳವನ್ನು ದಾಟುವಾಗ ನಮ್ಮ ಕಾಲುಗಳಲ್ಲಿನ ಕೊಳೆಯು ಅದರಲ್ಲಿ ಬಿದ್ದರೆ, ಆ ನೀರನ್ನು ತೀರ್ಥವೆಂದು ಸೇವಿಸುವ ಭಕ್ತರಿಗೆ ರೋಗಗಳು ಬರುತ್ತವೆ, ಆದುದರಿಂದ ಅದನ್ನು ದಾಟುವುದಿಲ್ಲವೆಂದು ಅನಿಸುತ್ತದೆ !)

(ಆಧಾರ : ಸನಾತನ ನಿರ್ಮಿತ ಗ್ರಂಥ `ಶಿವ’)