ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ

ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಗೋಪುರ

ಸಮುದ್ರಮಟ್ಟದಿಂದ ೮೦೦ ಮೀ. ಎತ್ತರದಲ್ಲಿರುವ ಈ ಊರು ಮೈಸೂರಿಗೆ ೧೫ ಮೈಲು, ಚಾಮರಾಜ ನಗರಕ್ಕೆ ೩೦ ಮೈಲು, ಗುಂಡ್ಲುಪೇಟೆಗೆ ೨೮ ಮೈಲು, ದೂರದಲ್ಲಿ ೪ ಊರುಗಳ ಮಧ್ಯದಲ್ಲಿ ಕಪಿಲಾ ಕೌಂಡಿನಿ ನದಿಗಳ ದಡದಲ್ಲಿದೆ. ಇದು ಪರಮ ಪವಿತ್ರ ಕ್ಷೇತ್ರವು ಸಾಧು ಸತ್ಪುರುಷರ ಕ್ಷೇತ್ರವು ಆಗಿದೆ.

ವಿವಿಧ ಹೆಸರುಗಳು

* ಇದು ಪೂರ್ವದಲ್ಲಿ ದಂಡಕಾರಣ್ಯವಾಗಿದ್ದು, ನಂತರ ಶ್ರೀ ಶ್ರೀಕಂಠೇಶ್ವರನು ಕೇಶಿ ರಾಕ್ಷಸನನ್ನು ಸಂಹರಿಸಿದಾಗ ಅವನ ದೇಹದ ವಿಷವು ಭೂಮಿಯಲ್ಲಿ ವ್ಯಾಪಿಸಿದ ಕಾರಣ ಗರಳಪುರಿ ಕ್ಷೇತ್ರವೆಂದು ಹೆಸರು ಪಡೆದಿದೆ.

* ಗೋಪ್ಯವಾಗಿದ್ದ ಶಿವಲಿಂಗವು ಪರಶುರಾಮರಿಂದ ಭೂಲೋಕಕ್ಕೆ ಪ್ರಕಟವಾಗಿದ್ದರಿಂದ ಪರಶುರಾಮ ಕ್ಷೇತ್ರವೆಂತಲೂ ಪರಿಗಣಿಸಲ್ಪಟ್ಟಿದೆ.

* ಇಂದ್ರ ಮತ್ತು ಅಹಲ್ಯೆಗೆ ಶಾಪಕೊಟ್ಟ ದೋಷ ಪರಿಹಾರಕ್ಕಾಗಿ ಶಿವನ ಅಪ್ಪಣೆಯಂತೆ ಗೌತಮ ಋಷಿಗಳು ಈ ಕ್ಷೇತ್ರದಲ್ಲಿ ಶಿವನ ಕುರಿತು ತಪಸ್ಸು ಮಾಡಿದ ಸ್ಥಳ

* ಶಿವನು ಪ್ರತ್ಯಕ್ಷನಾಗಿ ಇಲ್ಲಿ ಮಹೋತ್ಸವ (ರಥೋತ್ಸವ)ವನ್ನು ಆಚರಿಸಲು ನಿರ್ದೇಶಿಸಿದ ಕಾರಣ ಇಲ್ಲಿ ಮೀನ ಮಾಸದಲ್ಲಿ ಉತ್ತರಾ ನಕ್ಷತ್ರದಲ್ಲಿ ರಥೋತ್ಸವವನ್ನು ಆಚರಿಸಿ ಶಿವಲಿಂಗವನ್ನು ಪೂಜೆ ಮಾಡುತ್ತಾ ಇರುವ ಕಾರಣ ಗೌತಮ ಕ್ಷೇತ್ರವೆಂದು ಪ್ರಸಿದ್ಧವಾಗಿದೆ

* ಕಪಿಲಾ ಮತ್ತು ಕೌಂಡಿನ್ಯ ನದಿಗಳು ಸಂಗಮ ಆಗುವುದರಿಂದ ಸಂಗಮಕ್ಷೇತ್ರವೆಂದು ಈಗ ನಂಜನಗೂಡು ಎಂಬ ನಾಮಾಂಕಿತದಿಂದ ಜಗತ್ ಪ್ರಖ್ಯಾತಿಯನ್ನು ಹೊಂದಿದೆ.