‘ಕೆಲವು ಸಾಧಕರು ಭೂತಕಾಲದಲ್ಲಿ ತಮ್ಮಿಂದಾದ ತಪ್ಪುಗಳ ಬಗ್ಗೆ ದುಃಖ ಪಡುತ್ತಾರೆ ಮತ್ತು ಮೇಲಿಂದ ಮೇಲೆ ಆ ತಪ್ಪುಗಳನ್ನು ಸ್ಮರಿಸಿ ದುಃಖಿತರಾಗುತ್ತಾರೆ. ‘ನನ್ನಿಂದ ಹೇಗೆ ಇಂತಹ ತಪ್ಪುಗಳಾದವು ?’, ‘ನಾನು ತಪ್ಪುಗಳಿಂದ ಏಕೆ ಕಲಿಯಲಿಲ್ಲ ?’ ಎಂಬಂತಹ ಪ್ರಶ್ನೆಗಳನ್ನು ಕೇಳಿ ತಮ್ಮನ್ನು ತಾವೇ ಹಿಂಸಿಸಿಕೊಳ್ಳುತ್ತಾರೆ.
ಬಹಳಷ್ಟು ಜನರ ಸಂದರ್ಭದಲ್ಲಿ ಏನು ಕಂಡು ಬರುತ್ತದೆಯೆಂದರೆ, ಅವರಿಗೆ ಜೀವನದಲ್ಲಿನ ಕೆಲವು ತೀರಾ ಸರಳವಾದ ಅಂಶಗಳೂ ಗಮನಕ್ಕೆ ಬರಲು ಜೀವನದ ಬಹಳಷ್ಟು ವರ್ಷಗಳು ತಗಲುತ್ತವೆ. ಕೆಲವು ಜನರ ವಯಸ್ಸು ಹೆಚ್ಚಾದರೂ, ಅವರಲ್ಲಿ ತಿಳುವಳಿಕೆ ಅಥವಾ ವಿವೇಕ ಅಷ್ಟೇ ಹೆಚ್ಚಾಗುತ್ತದೇ ಎಂದೇನಿಲ್ಲ. ಕೆಲವರ ಪ್ರಾರಬ್ಧದಲ್ಲಿಯೇ ಇಂತಹ ತಪ್ಪುಗಳು ಘಟಿಸಬೇಕು ಎಂಬ ಯೋಗವಿರುತ್ತದೆ.ಇದರಿಂದಾಗಿ ಅವರಿಂದ ಜೀವನದ ವಿವಿಧ ಹಂತಗಳಲ್ಲಿ ತಪ್ಪುಗಳಾಗುತ್ತಿರುತ್ತವೆ.
‘ಎಲ್ಲ ವಿಷಯಗಳು ಯಾವಾಗಲೂ ನಮ್ಮ ಗಮನಕ್ಕೆ ಬರುತ್ತವೆ ಎಂದೇನಿಲ್ಲ’, ಎಂಬುದನ್ನು ನಮಗೆ ಮೊತ್ತಮೊದಲು ಸ್ವೀಕರಿಸಲು ಸಾಧ್ಯವಾಗಬೇಕು. ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬಳಿಗೆ ಸೇವೆಯ ನಿಮಿತ್ತ ಹೋಗುತ್ತಿದ್ದೆನು. ಆಗ ಹೆಚ್ಚಿನ ಬಾರಿ ಅವರು ಆ ಸಮಯದಲ್ಲಿ ನಡೆದಿರುವ ಸೇವೆಗೆ ಸಂಬಂಧಿಸಿದಂತೆ ಏನಾದರೂ ಹೊಸದು ಹೊಳೆದರೆ, ಅವರು ನನಗೆ, ”ಈ ಸಾಮಾನ್ಯ ವಿಷಯವನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಮಯ ಬೇಕಾಯಿತಲ್ಲ !’’, ಎಂದು ಸಹಜವಾಗಿ ಹೇಳುತ್ತಿದ್ದರು.
ಭೂತಕಾಲದಲ್ಲಿ ಯಾವ ತಪ್ಪುಗಳು ಆದವೋ ಅವು ಆಗಿ ಹೋಗಿವೆ; ಆದರೆ ಈಗ ಅವುಗಳನ್ನು ಸುಧಾರಿಸುವುದು ಸಾಧ್ಯವಿದ್ದರೆ, ತತ್ಪರತೆಯಿಂದ ಸುಧಾರಣೆ ಮಾಡಿಕೊಳ್ಳಬೇಕು, ಉದಾ. ನಾವು ಯಾರಿಗಾದರೂ ಅಯೋಗ್ಯ ರೀತಿಯಲ್ಲಿ ಅಥವಾ ಅಪಶಬ್ದವನ್ನು ನುಡಿದಿದ್ದರೆ, ಅನೇಕ ದಿನಗಳ ನಂತರ ಅಥವಾ ವರ್ಷಗಳ ನಂತರವೇ ಆಗಲಿ; ನಾವು ಅವರಲ್ಲಿ ಕ್ಷಮೆ ಯಾಚಿಸಬಹುದು. ಇದರಿಂದ ಪಾಪಕ್ಷಾಲನೆಯಾಗಲು ಸಹಾಯವಾಗುತ್ತದೆ, ಪರಸ್ಪರರಲ್ಲಿನ ಸಂಬಂಧಗಳೂ ಉತ್ತಮವಾಗುತ್ತದೆ. ಹಿಂದಾದ ತಪ್ಪುಗಳು ಮತ್ತೊಮ್ಮೆ ಆಗಬಾರದೆಂದು, ತತ್ಪರತೆಯಿಂದ ಪ್ರಯತ್ನಿಸಬೇಕು, ಉದಾ. ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ’ಯನ್ನು ಚೆನ್ನಾಗಿ ನಡೆಸಬೇಕು. ಈ ರೀತಿಯ ಪ್ರಯತ್ನಗಳನ್ನು ಆರಂಭಿಸಿದರೆ ಮನಸ್ಸು ಸಕಾರಾತ್ಮಕ ವಾಗಿ ನಾವು ಆನಂದದಿಂದ ಇರಬಹುದು, ಹಾಗೆಯೇ, ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವೂ ಆಗುತ್ತದೆ.’
– (ಪೂ.) ಸಂದೀಪ ಆಳಶಿ (೧೫.೧.೨೦೨೪)