ಆದರ್ಶ ಈ ಭೂಮಿಯ ಮೇಲೆ ಏಕೈಕ ಆದರ್ಶನೆಂದರೆ ಪ್ರಭು ಶ್ರೀರಾಮ ! ಶ್ರೀರಾಮನು ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಸಖಾ, ಆದರ್ಶ ರಾಜ ಈ ರೀತಿ ಅನೇಕ ಆದರ್ಶಗಳನ್ನು ನಿರ್ಮಿಸಿದನು, ಅದರ ಜೊತೆಗೆ ಶ್ರೀರಾಮನು ಮಾಡಿದ ಕುಶಲ ಸಂಘಟನೆಯ ಕಾರ್ಯವೂ ಮಹತ್ವದ್ದಾಗಿದೆ. ಅನಿರೀಕ್ಷಿತವಾಗಿ ಉದ್ಭವಿಸಿದ ವನವಾಸ ಕಾಲದ ಕಠಿಣ ಪ್ರಸಂಗಗಳಲ್ಲಿಯೂ ಅಯೋಧ್ಯೆಯಿಂದ ಯಾವುದೇ ಸಹಾಯ ಪಡೆಯದೇ, ಸ್ವತಃ ಅರಣ್ಯದಲ್ಲಿನ ವಿವಿಧ ಪಂಗಡದ ವೀರರನ್ನು ಸಂಘಟಿಸಿ ಅಸುರರನ್ನು ನಿರ್ನಾಮ ಮಾಡಿ ಆ ಸಮಸ್ಯೆಗಳನ್ನು ನಿವಾರಿಸಿದನು. ವನವಾಸಕ್ಕೆ ಹೊರಡುವಾಗ ಶ್ರೀರಾಮ, ಸೀತಾಮಾತೆ ಮತ್ತು ಲಕ್ಷ್ಮಣ ಈ ಮೂವರೇ ಇದ್ದರು; ಆದರೆ ರಾವಣನನ್ನು ವಧಿಸಿ ಅಯೋಧ್ಯೆಗೆ ಹಿಂದಿರುಗಿ ಬರುವಾಗ ಅವರು ಲಂಕಾವಿಜಯದಲ್ಲಿ ಸಹಾಯ ಮಾಡಿದ ಸೇನೆಯ ಜೊತೆಗೆ ಬಂದರು. ಆದ್ದರಿಂದ ಹಿಂದೂ ಸಮಾಜದ ದೃಷ್ಟಿಯಲ್ಲಿ ಪ್ರಭು ಶ್ರೀರಾಮನ ಸಂಘಟನಾ ಕಾರ್ಯದ ಬಗ್ಗೆ ಅಧ್ಯಯನ ಮಾಡುವುದು ಮತ್ತು ಅದನ್ನು ಆಚರಣೆಯಲ್ಲಿ ತರುವುದು ಆವಶ್ಯಕವಾಗಿದೆ. ‘ಪ್ರಭು ಶ್ರೀರಾಮನ ಅಯೋಧ್ಯೆಯಲ್ಲಿನ ಮಂದಿರ ೫೦೦ ವರ್ಷಗಳಷ್ಟು ನಿರೀಕ್ಷೆಯ ನಂತರ ಸಿದ್ಧವಾಗುತ್ತಿದೆ’, ಇಂತಹ ಸುವರ್ಣಕ್ಷಣದ ಸಂದರ್ಭದಲ್ಲಿ ಹಿಂದೂಗಳು ಶ್ರೀರಾಮನ ಸಂಘಟನಾಕಾರ್ಯದ ಆದರ್ಶವನ್ನು ಅಂಗೀಕರಿಸಿದರೆ ಭಾರತದ ಇತರ ಆಕ್ರಮಿತ ಮಂದಿರಗಳು ಕೂಡ ಹಿಂದೂಗಳ ವಶವಾಗಲು ತಡವಾಗದು.
೧. ವನವಾಸದಲ್ಲಿ ಮಿತ್ರ ನಿಷಾದ ರಾಜನ ಸಹಾಯ ಹಾಗೂ ಅವನ ಬಗ್ಗೆ ಕೃತಜ್ಞತಾಭಾವ !
ಕೈಕೆಯಿ ಮಾತೆ ಕೇಳಿದ ವರದಾನ ಕ್ಕನುಸಾರ ಶ್ರೀರಾಮನು ವನವಾಸಕ್ಕೆ ಹೋಗಲು ಸಿದ್ಧನಾದನು. ಮಹರ್ಷಿ ವಸಿಷ್ಠರ ಗುರುಕುಲದಲ್ಲಿರುವಾಗ ಶ್ರೀರಾಮನಿಗೆ ಶೃಂಗವೇರಪುರದ ಆದಿವಾಸಿ ನಿಷಾದ ರಾಜ ಗುಹನೊಂದಿಗೆ ಅತ್ಯಂತ ಆತ್ಮೀಯ ಮೈತ್ರಿ ಇತ್ತು. ನಿಷಾದ ರಾಜನಿಗೆ ಶ್ರೀರಾಮನು ವನವಾಸಕ್ಕೆ ಹೊರಟಿರುವುದು ತಿಳಿದಾಗ ಅವನು ಪ್ರಭು ಶ್ರೀರಾಮನಿಗೆ ತನ್ನ ರಾಜ್ಯವನ್ನು ನೀಡಿ ಅಲ್ಲಿಯೇ ಉಳಿಯಬೇಕೆಂದು ವಿನಂತಿಸಿದನು; ಆದರೆ ಶ್ರೀರಾಮನು ವನವಾಸ ಪಾಲನೆಯ ಕರ್ತವ್ಯವನ್ನು ಹೇಳಿ ಈಗ ಯಾವುದೇ ನಗರ ಪ್ರವೇಶ ಮಾಡುವಂತಿಲ್ಲ ಎಂದು ಅವನ ರಾಜ್ಯವನ್ನು ಸ್ವೀಕರಿಸಲಿಲ್ಲ. ಅವನ ರಾಜ್ಯದ ವನದಲ್ಲಿ ವೃಕ್ಷಗಳ ಕೆಳಗೆ ಎಲೆಗಳ ಹಾಸಿಗೆ ಮಾಡಿ ಶ್ರೀರಾಮನು ವನವಾಸದ ಮೊದಲ ರಾತ್ರಿಯನ್ನು ಕಳೆದನು. ನಂತರ ಅದೇ ಸ್ಥಳದಲ್ಲಿ ಪ್ರಭು ಶ್ರೀರಾಮನು ರಾಜವಂಶದ ವಸ್ತ್ರಗಳನ್ನು ತ್ಯಜಿಸಿ ವನವಾಸದ ವಸ್ತ್ರಗಳನ್ನು ಧರಿಸಿದನÀÄ. ನಿಷಾದ ರಾಜನು ಭೋಯಿ ಕುಲದ ಕೇವಟರಾಜನನ್ನು ಕರೆದು ಅವನ ದೋಣಿಯ ಮೂಲಕ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರನ್ನು ಗಂಗಾನದಿಯನ್ನು ದಾಟಿಸಿದನು ಹಾಗೂ ತಾನು ಸ್ವತಃ ಅವರ ವನವಾಸದ ವ್ಯವಸ್ಥೆ ಮಾಡಲು ಜೊತೆಗೆ ಹೋದನು. ಅಲ್ಲಿಂದ ಪ್ರಯಾಗರಾಜದಲ್ಲಿನ ಭರದ್ವಾಜ ಮುನಿಗಳ ಆಶ್ರಮಕ್ಕೆ ಹೋಗಿ ಶ್ರೀರಾಮನು ವನವಾಸದಲ್ಲಿನ ನಿವಾಸದ ಬಗ್ಗೆ ವಿಚಾರಿಸಿದನು. ಆಗ ಭರದ್ವಾಜ ಮುನಿಗಳು ಯಮುನಾ ನದಿಯ ಆಚೆಗೆ ಚಿತ್ರಕೂಟ ಪರ್ವತದಲ್ಲಿ ವನವಾಸ ಕಾಲದಲ್ಲಿ ಉಳಿಯಲು ಹೇಳಿದರು. ಆಗ ಶ್ರೀರಾಮನು ಯಮುನಾ ನದಿಯನ್ನು ದಾಟಲು ಬಿದಿರಿನ ದೋಣಿಯನ್ನು ಸಿದ್ಧಪಡಿಸಿಕೊಡಬೇಕೆಂದು ನಿಷಾದ ರಾಜನಿಗೆ ಹೇಳಿದನು ಹಾಗೂ ಅವನಿಗೆ ತನ್ನ ರಾಜ್ಯಕ್ಕೆ ಹಿಂದಿರುಗಲು ಹೇಳಿದನು. ಅದಕ್ಕನುಸಾರ ನಿಷಾದ ರಾಜನು ಆಜ್ಞಾಪಾಲನೆ ಮಾಡಿದನು. ನಿಷಾದ ರಾಜನು ವನವಾಸದಲ್ಲಿ ಮಾಡಿದ ಸಹಾಯವನ್ನು ಪ್ರಭು ಶ್ರೀರಾಮನು ಮರೆಯಲಿಲ್ಲ. ಪ್ರಭು ಶ್ರೀರಾಮನು ಲಂಕೆಯನ್ನು ಜಯಿಸಿ ಹಿಂದಿರುಗುವಾಗ ಪುಷ್ಪಕ ವಿಮಾನವನ್ನು ನಿಲ್ಲಿಸಿ ನಿಷಾದ ರಾಜನನ್ನೂ ರಾಜ್ಯಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಜೊತೆಗೆ ಕರೆದುಕೊಂಡನು. ಅನಂತರವೂ ಅಶ್ವಮೇಧ ಯಜ್ಞದ ಸಮಯದಲ್ಲಿಯೂ ನಿಷಾದ
ರಾಜನನ್ನು ಆಮಂತ್ರಿಸಿ ಸನ್ಮಾನಿಸಿದನು. ಇದರಿಂದ ನಮಗೆ ಸಹಾಯ ಮಾಡುವವರ ವಿಷಯದಲ್ಲಿ ಕೃತಜ್ಞತಾಭಾವ ಹೇಗಿರಬೇಕು, ಎಂಬುದರ ಆದರ್ಶವನ್ನು ಪ್ರಭುಶ್ರೀರಾಮನು ಹಾಕಿಕೊಟ್ಟಿದ್ದಾನೆ.
೨. ಶ್ರೀರಾಮನ ವನವಾಸದಲ್ಲಿನ ಕಾರ್ಯ
ವನವಾಸ ಕಾಲದಲ್ಲಿ ಶ್ರೀರಾಮನು ಅತ್ರಿ, ಅಗಸ್ತಿ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳ ಆಶ್ರಮಗಳನ್ನು ರಾಕ್ಷಸರ ಉಪಟಳ ದಿಂದ ಶಾಶ್ವತವಾಗಿ ಮುಕ್ತಗೊಳಿಸಿದನು. ಈ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಅನೇಕ ರಾಕ್ಷಸರನ್ನು ವಧಿಸಿ ವನಗಳಲ್ಲಿನ ಜನಸಾಮಾನ್ಯರನ್ನು ಅಸುರರÀ ಭಯದಿಂದ ಮುಕ್ತಗೊಳಿಸಿದರು. ಪ್ರಭು ಶ್ರೀರಾಮನು ಸುಮಾರು ೧೨ ವರ್ಷಗಳ ವನವಾಸದಲ್ಲಿ ಈ ಕಾರ್ಯವನ್ನು ಮಾಡುತ್ತಿದ್ದನು. ಇದೇ ಅವಧಿಯಲ್ಲಿ ರಾಕ್ಷಸರ ವಧೆಯ ನಂತರ ವನವಾಸಿ ಸಮಾಜಕ್ಕೆ ಧನುಷ್ಯ-ಬಾಣ ನಡೆಸಲು ತರಬೇತಿ ನೀಡಿ ಶಸ್ತ್ರವಿದ್ಯೆಯನ್ನು ಕಲಿಸಿದನು. ಆದ್ದರಿಂದ ಇಂದಿಗೂ ಬಹಳಷ್ಟು ವನವಾಸಿಗಳು ಧನುಷ್ಯ-ಬಾಣ ಉಪಯೋಗಿಸುವುದು ಕಾಣಿಸುತ್ತದೆ. ಅವರಿಗೆ ಶ್ರೀರಾಮನು ಧರ್ಮ-ಪರಂಪರೆಯನ್ನು ಕಲಿಸಿದನು, ಆದ್ದರಿಂದ ನಮ್ಮಲ್ಲಿ ಇಂದು ವನದಲ್ಲಿಯೂ ರಾಜಪರಂಪರೆ ಕಾಣಿಸುತ್ತದೆ, ಅದೇ ರೀತಿ ಅವರ ರೀತಿನೀತಿಯಲ್ಲಿಯೂ ಸಮಾನತೆ ಕಾಣಿಸುತ್ತದೆ. ಈ ಕಾರ್ಯದಿಂದಾಗಿ ಶ್ರೀರಾಮನಿಗೆ ರಾವಣನ ವಿರುದ್ಧ ಯುದ್ಧ ಮಾಡಲು ವನದಲ್ಲಿನ ಸೈನ್ಯದಿಂದ ಸಹಜವಾಗಿ ಸಹಾಯ ಸಿಕ್ಕಿತು.
೩. ಸುಗ್ರೀವನಿಗೆ ಸಹಾಯ
ಕಿಷ್ಕಿಂಧಾ ನಗರದಲ್ಲಿ ವಾಲಿ ಎಂಬ ದೊಡ್ಡ ಪರಾಕ್ರಮಿ ರಾಜನಿದ್ದನು ಹಾಗೂ ಅವನಿಗೆ ಸಿಕ್ಕಿದ ಒಂದು ವರದಾನದಿಂದಾಗಿ ಆತನೊಂದಿಗೆ ಯುದ್ಧ ಮಾಡುವ ಶತ್ರುವಿನ ಅರ್ಧ ಬಲ ಅವನಿಗೆ ಸಿಗುತ್ತಿತ್ತು. ಆದ್ದರಿಂದ ಅವನು ಯುದ್ಧದಲ್ಲಿ ಸಹಜ ವಾಗಿ ಗೆಲ್ಲುತ್ತಿದ್ದನು. ಅವನು ದೇವತೆಗಳನ್ನೂ ಸೋಲಿಸಿದ ಮಹಾಪರಾಕ್ರಮಿ ರಾವಣನ ಕುತ್ತಿಗೆಯನ್ನು ತನ್ನ ಕಂಕುಳಲ್ಲಿ ಅದುಮಿಟ್ಟುಕೊಂಡು ಸಂಪೂರ್ಣ ವಿಶ್ವವನ್ನು ಪ್ರದಕ್ಷಿಣೆ ಹಾಕಿದ್ದನು. ಆದ್ದರಿಂದ ರಾವಣನು ಅವನ ಮುಂದೆ ಸೋಲೊಪ್ಪಿದ್ದನು. ಈ ವಾಲಿ ಒಂದು ಪ್ರಸಂಗದ ತಪ್ಪು ಅಭಿಪ್ರಾಯದಿಂದಾಗಿ ತನ್ನ ಸ್ವಂತ ತಮ್ಮನಾದ ಸುಗ್ರೀವನನ್ನೇ ರಾಜ್ಯದಿಂದ ಹೊರದಬ್ಬಿದ್ದನು ಹಾಗೂ ಅವನ ಪತ್ನಿಯನ್ನು ಅಂದರೆ ರೂಮಾಳನ್ನು ಬಲವಂತವಾಗಿ ತನ್ನಲ್ಲಿಟ್ಟುಕೊಂಡಿದ್ದನು. ಆದ್ದರಿಂದ ಸುಗ್ರೀವನು ಋಷ್ಯಮುಖ ಪರ್ವತದಲ್ಲಿ ಆಶ್ರಯ ಪಡೆದಿದ್ದನು.
ಇಲ್ಲಿ ಯುದ್ಧನೀತಿಯ ವಿಚಾರ ಮಾಡಿದರೆ, ಗಮನಕ್ಕೆ ಬರುವ ಅಂಶವೆಂದರೆ, ರಾವಣನು ಸೀತಾಹರಣ ಮಾಡಿದ್ದನು; ಆ ರಾವಣನನ್ನು ವಾಲಿ ಸಹಜವಾಗಿ ಸೋಲಿಸಿದ್ದನು. ಆದ್ದರಿಂದ ಶ್ರೀರಾಮನು ವಾಲಿಯ ಸಹಾಯ ಕೇಳುತ್ತಿದ್ದರೆ, ರಾವಣನು ಭಯಪಟ್ಟು ಸೀತೆಯನ್ನು ನೇರವಾಗಿ ಹಿಂದಿರುಗಿಸುತ್ತಿದ್ದನು. ಇಂತಹ ಸ್ಥಿತಿಯಲ್ಲಿಯೂ ಪ್ರಭು ಶ್ರೀರಾಮನು ಅನ್ಯಾಯಿ ವಾಲಿಯ ಸಹಾಯ ಪಡೆಯಲಿಲ್ಲ, ಅಂದರೆ ಸುಗ್ರೀವನ ಪತ್ನಿ ಯನ್ನು ಬಲವಂತವಾಗಿ ತನ್ನಲ್ಲಿಟ್ಟುಕೊಂಡಿರುವ ವಾಲಿಯ ವಿರುದ್ಧ ಹೋಗಿ ಅನ್ಯಾಯಕ್ಕೊಳಗಾದ ಸುಗ್ರೀವನ ಸಹಾಯಕ್ಕಾಗಿ ನಿಂತನು. ಪ್ರಭು ಶ್ರೀರಾಮನು ಪಾಪಿ ವಾಲಿಯನ್ನು ವಧಿಸಿ ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿಸಿ ಅವನಿಗೆ ಅವನ ಪತ್ನಿ ಯನ್ನು ಪುನಃ ಒಪ್ಪಿಸಿದನು ಮತ್ತು ಪರಾಕ್ರಮಿ ವಾಲಿಪುತ್ರ ಅಂಗದನನ್ನು ಕಿಷ್ಕಿಂಧೆಯ ರಾಜಕುಮಾರನನ್ನಾಗಿ ನೇಮಿಸಿ ಅವನನ್ನೂ ಜೊತೆಗೂಡಿಸಿಕೊಂಡನು.
೪. ಅಂಗದನ ಬುದ್ಧಿಕೌಶಲ್ಯದ ಉಪಯೋಗ
ರಾಜಕುಮಾರ ಅಂಗದನು ಸೀತೆಯ ಶೋಧದಲ್ಲಿ ವಾನರಸೇನೆಯ ನೇತೃತ್ವ ಮಾಡಿದನು. ಜಟಾಯುವಿನ ಸಹೋದರ ಸಂಪಾತಿಯಿಂದ ಸೀತೆ ಲಂಕೆಯಲ್ಲಿದ್ದಾಳೆಂದು ತಿಳಿದುಕೊಂಡು ಅಂಗದ ಸಮುದ್ರವನ್ನು ದಾಟಲು ಸಿದ್ಧನಾದನು; ಆದರೆ ಆಗ ಅವನು ಸಮೂಹದ ಮುಖಂಡನಾಗಿರುವುದರಿಂದ ಜಾಂಬವಂತನು ಅವನಿಗೆ ಹೋಗಲು ಬಿಡಲಿಲ್ಲ ಹಾಗೂ ಹನುಮಂತನು ಲಂಕೆಗೆ ಹೋದನು. ಹನುಮಂತನನ್ನು ಲಂಕೆಗೆ ಕಳುಹಿಸಿದ್ದರಿಂದ ಹನುಮಂತನು ಲಂಕೆಯಲ್ಲಿನ ಅಸುರರನ್ನೂ ನಾಶ ಮಾಡಿದನು; ಸೀತಾಮಾತೆಗೆ ಸಂದೇಶವನ್ನು ತಲುಪಿಸುವ ಕಾರ್ಯವನ್ನೂ ಮಾಡಿದನು. ಇದರ ಜೊತೆಗೆ ಲಂಕಾದಹನ ಮಾಡಿ ಅಸುರ ಸೈನಿಕರ ಮನಸ್ಸಿನಲ್ಲಿ ಭಯವನ್ನುಂಟು ಮಾಡಿ ದನು. ಆದ್ದರಿಂದ ಅನೇಕ ಲಾಭಗಳಾಯಿತು.
ಭಗವಾನ ಶ್ರೀರಾಮನಿಗೆ ಅಂಗದನ ಶೌರ್ಯ ಹಾಗೂ ಬುದ್ಧಿಶಕ್ತಿಯ ಮೇಲೆ ಸಂಪೂರ್ಣ ವಿಶ್ವಾಸವಿತ್ತು; ಆದ್ದರಿಂದಲೇ ಅವನು ರಾಜಕುಮಾರ ಅಂಗದನನ್ನು ‘ತನ್ನ ದೂತ’ನೆಂದು ರಾವಣನ ಭೇಟಿಗೆ ಕಳುಹಿಸಿ, ‘ರಾವಣನು ಸೀತೆಯನ್ನು ಗೌರವದಿಂದ ಹಿಂತಿರುಗಿಸಿದರೆ ತಾನು ರಾವಣನೊಂದಿಗೆ ಯುದ್ಧ ಮಾಡುವುದಿಲ್ಲ’, ಎಂದನು. ಅಂಗದ ಅಲ್ಲಿಗೆ ಹೋದಾಗ ರಾವಣನು ಭೇದಭಾವನ್ನು ಬಳಸಿಕೊಂಡು ಅಂಗದನಿಗೆ, ‘ವಾಲಿ ನನ್ನ ಮಿತ್ರನಾಗಿದ್ದನು, ಈ ರಾಮ-ಲಕ್ಷ್ಮಣರು ವಾಲಿಯನ್ನು ಕೊಂದಿ ದ್ದಾರೆ ಹಾಗೂ ಯಾರು ನಿನ್ನ ತಂದೆಯನ್ನು ಕೊಂದಿದ್ದಾರೋ, ಅವರ ಸಂದೇಶವಾಹಕನಾಗಿ ನೀನು ವರ್ತಿಸುತ್ತಿದ್ದೀಯ, ಇದು ದೊಡ್ಡ ನಾಚಿಕೆಗೇಡಿನ ವಿಷಯವಾಗಿದೆ.’ ಎಂದಾಗ ರಾಜಪುತ್ರ ಅಂಗದ ರಾವಣನನ್ನು ಗದರಿಸುತ್ತಾ ಹೇಳಿದನು, ‘ಮೂರ್ಖ ರಾವಣ, ನಿನ್ನ ಈ ಮಾತಿನಿಂದ ಶ್ರೀರಾಮನ ಮೇಲೆ ಭಕ್ತಿ ಇಲ್ಲದವರ ಮನಸ್ಸಿನಲ್ಲಿ ಸಂದೇಹ ಮೂಡಬಹುದು. ವಾಲಿಯು ತಾನು ಮಾಡಿದ ಅನ್ಯಾಯದ ಫಲ ಭೋಗಿಸಿದನು. ನೀನೂ ಕೆಲವೇ ದಿನಗಳಲ್ಲಿ ಯಮಲೋಕಕ್ಕೆ ಹೋಗಿ ನಿನ್ನ ಮಿತ್ರನನ್ನು ವಿಚಾರಿಸಿಕೊ.’ ಶ್ರೀರಾಮನ ದೂತನ ರೂಪದಲ್ಲಿದ್ದ ಮಹಾಬಲಿ ಅಂಗದನು ರಾವಣನಿಗೆ ಬುದ್ಧಿವಾದವನ್ನು ಹೇಳಲು ಬಹಳ ಪ್ರಯತ್ನಿಸಿದನು; ಆದರೆ ಅವನು ಯಶಸ್ವಿಯಾಗಲಿಲ್ಲ. ಅವನು ರಾವಣನ ಅಹಂಕಾರ ವನ್ನು ದೂರಗೊಳಿಸಲು ಅವನಿಗೆ ಭೂತಕಾಲದ ಪ್ರಸಂಗವನ್ನು ನೆನಪಿಸಿದನು, ‘ಪಾತಾಳದಲ್ಲಿ ಬಲಿರಾಜನನ್ನು ಜಯಿಸಲು ಹೋದಾಗ ಅಲ್ಲಿ ಅವರು ರಾವಣನನ್ನು ಬಂಧಿಸಿದ್ದರು, ಸಹಸ್ರ ಬಾಹು ರಾಜನು ಈ ರಾವಣನನ್ನು ಬಂಧಿಸಿದ್ದನು ಹಾಗೂ ವಾಲಿ ಈ ರಾವಣನನ್ನು ಕಂಕುಳಲ್ಲಿ ಅದುಮಿಟ್ಟಿದ್ದನು. ಆದ್ದರಿಂದ ರಾವಣನನ್ನು ಸೋಲಿಸಲು ಸಾಧ್ಯವಿದೆ. ಈಗ ಸಾಕ್ಷಾತ್ ವಿಷ್ಣುವಿನ ಅವತಾರವೇ ಸ್ವತಃ ರಾವಣನೊಂದಿಗೆ ಯುದ್ಧ ಮಾಡಲು ಸಮುದ್ರತೀರದಲ್ಲಿ ಸಜ್ಜಾಗಿದೆ. ಆದ್ದರಿಂದ ರಾವಣನ ಅಹಂಕಾರದಿಂದಾಗಿ ಅವನ ನಾಶವಂತೂ ಆಗುವುದು; ಆದರೆ ರಾಜಸಭೆಯಲ್ಲಿ ಕುಳಿತಿರುವ ಎಲ್ಲರ ನಾಶವಾಗಿ ಅವರ ಪತ್ನಿ-ಮಕ್ಕಳು ಅನಾಥರಾಗುವರು. ಆದ್ದರಿಂದ ಈಗಲೇ ರಾವಣನ ಪಕ್ಷವನ್ನು ತ್ಯಜಿಸಿ ಶ್ರೀರಾಮನಿಗೆ ಶರಣಾಗಿರಿ,’ ಎಂದನು. ಇದನ್ನು ಕೇಳಿ ಕೆಂಡಾಮಂಡಲನಾದ ರಾವಣನು ಅಂಗದನ ರುಂಡವನ್ನು ಹಾರಿಸಲು ಆದೇಶ ನೀಡಿದನು. ಆಗ ಅಂಗದನು ಪ್ರಾಣವಿದ್ಯೆಯನ್ನು ಉಪಯೋಗಿಸಿ ತನ್ನ ಕಾಲನ್ನು ದರಬಾರಿನ ಭೂಮಿಯಲ್ಲಿಟ್ಟನು ಹಾಗೂ ರಾವಣನಿಗೆ ಸವಾಲೊಡ್ಡಿದನು, ‘ಒಂದು ವೇಳೆ ಅವನ ದರಬಾರಿನ ಯಾವುದೇ ಶೂರ ಹಾಗೂ ಶಕ್ತಿಶಾಲಿ ಯೋಧ ನನ್ನ ಕಾಲನ್ನು ಭೂಮಿಯ ಮೇಲಿಂದ ಅಲುಗಾಡಿಸಿದರೆ, ತಾನು ಸೋಲನ್ನು ಸ್ವೀಕರಿಸುವೆನು ಹಾಗೂ ಶ್ರೀರಾಮನು ಯುದ್ಧ ಮಾಡದೆ ಅಲ್ಲಿಂದ ಹಿಂತಿರುಗಿ ಹೋಗುವರು’, ಎಂದನು. ಮೇಘನಾದ ಹಾಗೂ ಕುಂಭಕರ್ಣ ಸಹಿತ ರಾವಣನ ಅನೇಕ ಯೋಧರು ಪ್ರಯತ್ನಿಸಿದರು; ಆದರೆ ಯಾರಿಗೂ ಅಂಗದನ ಕಾಲನ್ನು ಭೂಮಿಯಿಂದ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಕೊನೆಗೆ ರಾವಣನು ಸ್ವತಃ ಅಂಗದನ ಕಾಲನ್ನು ಅಲುಗಾಡಿಸಲು ಬಂದನು ಹಾಗೂ ಅವನ ಕಾಲನ್ನು ಹಿಡಿದನು; ಆದರೆ ಅಂಗದನು ತನ್ನ ಕಾಲನ್ನು ಬಿಡಿಸಿಕೊಂಡು ಅವನಿಗೆ ಹೇಳಿದನು, ‘ರಾವಣ ನೀನು ಹೇಗೆ ನನ್ನ ಕಾಲನ್ನು ಹಿಡಿದ್ದಿಯೋ, ಹಾಗೆಯೇ ಶ್ರೀರಾಮನ ಕಾಲನ್ನು ಹಿಡಿಯುತ್ತಿದ್ದರೆ, ನಿನ್ನ ಉದ್ಧಾರವಾಗುತ್ತಿತ್ತು.’ ಇದರಿಂದ ಅಂಗದನ ವಿದ್ವತ್ತು, ಶತ್ರುವಿನ ರಾಜಸಭೆಗೆ ಹೋಗಿ ಅವನನ್ನು ನಿರುತ್ಸಾಹಗೊಳಿಸುವ ಕೌಶಲ್ಯ ಹಾಗೂ ಅವನ ಮನಸ್ಸಿನಲ್ಲಿ ಶ್ರೀರಾಮನ ಬಗ್ಗೆ ಇರುವ ಭಾವದ ಅರಿವಾಗುತ್ತದೆ ಹಾಗೂ ಅದರಿಂದ ಶ್ರೀರಾಮನು ಅವನನ್ನು ದೂತನೆಂದು ಮಾಡಿದ ಆಯ್ಕೆಯ ಬಗ್ಗೆಯೂ ಅರಿವಾಗುತ್ತದೆ.
ಶ್ರೀರಾಮನು ಈ ರೀತಿ ಹನುಮಂತ, ಜಾಂಬವಂತ, ನಳ-ನೀಲ ಇವರಿಂದಲೂ ಸೀತೆಯನ್ನು ಹುಡುಕಲು ಸಹಾಯ ಪಡೆದನು ಹಾಗೂ ಅವರ ಗುಣಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಂಡನು. ವಿಶ್ವಕರ್ಮನ ಪುತ್ರರಾಗಿರುವ ನಳ-ನೀಲ ಇವರು ತಮಗೆ ಲಭಿಸಿದ ವರದಾನವನ್ನು ಉಪಯೋಗಿಸಿ ಲಂಕೆಗೆ ಹೋಗಲು ಸಮುದ್ರದ ಮೇಲೆ ಸೇತುವೆ ನಿರ್ಮಿಸಲು ಸಹಾಯ ಮಾಡಿದರು.
೫. ರಾವಣನ ಸಹೋದರ ವಿಭೀಷಣನಿಗೆ ಆಶ್ರಯ ಹಾಗೂ ಯುದ್ಧದಲ್ಲಿ ಅವನಿಂದ ಪಡೆದ ಸಹಾಯ
ವಿಭೀಷಣ ರಾವಣನ ಅತ್ಯಂತ ಕಿರಿಯ ತಮ್ಮನಾಗಿದ್ದನು. ಅವನು ರಾಕ್ಷಸಕುಲದಲ್ಲಿ ಜನಿಸಿದರೂ ಶ್ರೀವಿಷ್ಣುವಿನ ಭಕ್ತನಾಗಿದ್ದನು. ಅವನು ರಾವಣನಿಗೆ ರಾಜದರ್ಬಾರಿನ ಚರ್ಚೆಯಲ್ಲಿ, ‘ಶ್ರೀರಾಮನಿಗೆ ಶರಣಾಗಿ ಸೀತಾಮಾತೆಯನ್ನು ರಾಮನಿಗೆ ಒಪ್ಪಿಸುವುದರಲ್ಲಿಯೇ ನಿನ್ನ ಹಿತವಿದೆ’, ಎಂದಿದ್ದನು. ಅದರಿಂದ ರಾವಣನು ಕೋಪಿಸಿ ಕೊಂಡು ವಿಭೀಷಣನನ್ನು ರಾಜ್ಯದಿಂದ ಹೊರಹಾಕಿದನು. ಆಗ ವಿಭೀಷಣ ಆಶ್ರಯ ಕೇಳಲು ಶ್ರೀರಾಮನಲ್ಲಿಗೆ ಬಂದನು. ಶತ್ರುವಿನ ಸಹೋದರ ಆಶ್ರಯ ಕೇಳಲು ಬಂದಾಗ ಅವನ ಉದ್ದೇಶವನ್ನು ಖಚಿತ ಪಡಿಸಿಕೊಳ್ಳುವುದು ಆವಶ್ಯಕವಾಗಿತ್ತು. ಆದ್ದರಿಂದ ಶ್ರೀರಾಮನು ಮೊತ್ತಮೊದಲು ಹನುಮಂತನ ಅಭಿಪ್ರಾಯವನ್ನು ಕೇಳಿದನು. ಆಗ ಹನುಮಂತನು ಲಂಕೆಯಲ್ಲಿ ವಿಭೀಷಣನ ಭೇಟಿಯಾಗಿರುವ ವಿಷಯ ಮತ್ತು ಅವನ ಭಗವದ್ಭಕ್ತಿಯ ಮಾಹಿತಿಯನ್ನು ನೀಡಿ ವಿಭೀಷಣನಿಗೆ ಆಶ್ರಯ ನೀಡಲು ಹೇಳಿದನು; ಆದರೆ ಜಾಂಬವಂತ, ನಳ-ನೀಲ ಮುಂತಾದವರ ಮನಸ್ಸಿನಲ್ಲಿ ಸಂಶಯ ಹಾಗೆಯೇ ಉಳಿದಿರುವುದರಿಂದ ರಾಮನು ಅವರ ಸಂಶಯ ದೂರಗೊಳಿಸಲು ನಿರ್ಣಯಿಸಿದರು; ಅದಕ್ಕಾಗಿ ಶ್ರೀರಾಮನು ಅವರಿಗೆ ಇತಿಹಾಸದಲ್ಲಿನ ಉದಾಹರಣೆಗಳನ್ನು ಹೇಳಿ ಆಶ್ರಯ ಕೇಳಿ ಬಂದವರಿಗೆ ಸಹಾಯ ಮಾಡುವ ಕರ್ತವ್ಯವನ್ನು ವಿವರಿಸಿದನು.
ಶ್ರೀರಾಮನ ನಿರ್ಣಯದಿಂದ ವಿಭೀಷಣ ಶತ್ರು ಪಕ್ಷದಲ್ಲಿನ ಎಲ್ಲ ಪ್ರದೇಶ, ಶಸ್ತ್ರಗಳು ಹಾಗೂ ಅಸುರರ ಸೈನ್ಯ ಹಾಗೂ ಶಕ್ತಿಯ ರಹಸ್ಯವನ್ನು ತಿಳಿದಿರುವ ಸಹಾಯಕನಾದನು. ಅದರಿಂದ ಯುದ್ಧದಲ್ಲಿ ಅವನು ಪ್ರಭು ಶ್ರೀರಾಮನಿಗೆ ಪ್ರತಿಯೊಂದು ಹೆಜ್ಜೆಗೂ ಯೋಗ್ಯವಾದ ಸಹಾಯ ಮಾಡಿ ಅವರ ವಿಜಯದ ಮಾರ್ಗವನ್ನು ಮುಕ್ತಗೊಳಿಸಿದನು. ರಾವಣನ ವಧೆಯ ನಂತರ ಲಂಕೆ ರಾಜರಹಿತÀವಾಯಿತು, ಈಗ ಅಲ್ಲಿ ಯೋಗ್ಯ ರಾಜನು ಬೇಕು, ಎಂಬುದನ್ನು ಗಮನಿಸಿ ಪ್ರಭು ಶ್ರೀರಾಮನು ಲಂಕೆಯ ಮುಂದಿನ ರಾಜನೆಂದು ವಿಭೀಷಣನನ್ನು ಆರಿಸಿದನು. ಇಷ್ಟು ಮಾತ್ರವಲ್ಲ, ‘ಮರಣಾಂತಾನಿ ವೈರಾಣಿ’ ಎಂದು ಸ್ವತಃ ರಾವಣನ ಅಂತ್ಯಸಂಸ್ಕಾರ ಮಾಡಿದನು. ಅದರಿಂದ ಲಂಕೆಯಲ್ಲಿ ಎಲ್ಲರೂ ಸಂತುಷ್ಟರಾದರು. ಭಗವಾನ ಶ್ರೀರಾಮನ ಧ್ಯೇಯ ಲಂಕೆಯ ಅಧಿಕಾರವನ್ನು ವಶ ಪಡಿಸಿಕೊಳ್ಳುವುದಾಗಿರಲಿಲ್ಲ. ಆದ್ದರಿಂದ ಲಕ್ಷ್ಮಣನಿಗೆ ಸ್ವರ್ಣ ಲಂಕೆಯ ಮೋಹವಾದಾಗ ಶ್ರೀರಾಮನು ಅವನಿಗೆ ‘ಜನನೀ ಜನ್ಮಭೂಮಿಶ್ಚ, ಸ್ವರ್ಗಾದಪೀ ಗರಿಯಸೀ’ (ಅರ್ಥ : ಸ್ವರ್ಗಕ್ಕಿಂತಲೂ ಜನ್ಮಭೂಮಿ ಶ್ರೇಷ್ಠವಾಗಿದೆ), ಎಂದು ಮಾರ್ಗದರ್ಶನ ಮಾಡಿ ಮಾತೃಭೂಮಿಯ ಮಹತ್ವವನ್ನು ಹೇಳಿದನು. ಇದರಿಂದಲೂ ಶ್ರೀರಾಮನ ಅದ್ಭುತ ಸಂಘಟನಾ ಕೌಶಲ್ಯದ ಅರಿವಾಗುತ್ತದೆ.
೬. ತಂದೆಯ ವನವಾಸದ ಆಜ್ಞೆಯನ್ನು ಪಾಲಿಸುತ್ತಾ ಶ್ರೀರಾಮನಿಂದ ಲಂಕಾವಿಜಯಕ್ಕಾಗಿ ಸಂಘಟನೆ !
ನಿಜವಾಗಿ ನೋಡಿದರೆ ರಾವಣನು ಸೀತಾಹರಣ ಮಾಡಿದ ನಂತರ ಶ್ರೀರಾಮನು ಒಂದು ವೇಳೆ ಅಯೋಧ್ಯೆಯ ಸೇನೆ ಮತ್ತು ತನ್ನ ಸಹೋದರರಿಂದ ಸಹಾಯ ಕೇಳುತ್ತಿದ್ದರೆ, ಅವರು ಸಹಜವಾಗಿ ಸಹಾಯ ಮಾಡುತ್ತಿದ್ದರು; ಆದರೆ ವನವಾಸದಲ್ಲಿ ಧನಸಂಗ್ರಹ ಮಾಡಲಿಕ್ಕಿಲ್ಲದ ಕಾರಣ ಸೈನ್ಯದ ವೇತನ, ಅವರ ಯುದ್ಧಸಾಮಗ್ರಿಗಳ ಖರ್ಚು ಮತ್ತು ಅವರಿಗೆ ಬೇಕಾಗುವ ಅನ್ನ-ಧಾನ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತಂದೆಗೆ ನೀಡಿದ ವನವಾಸದ ವಚನ ಭಂಗವಾಗುತ್ತಿತ್ತು, ಆದ್ದರಿಂದ ಪ್ರಭು ಶ್ರೀರಾಮನು ವನದಲ್ಲಿನ ವನವಾಸಿಗಳು, ವಾನರ ಮುಂತಾದವರೊಂದಿಗೆ ಆತ್ಮೀಯತೆ ಬೆಳೆಸಿ ಅವರ ಸಹಾಯ ಪಡೆದನು ಹಾಗೂ ಅವರದ್ದೇ ಸೇನೆಯನ್ನು ರಚಿಸಿ ದನು. ಆದ್ದರಿಂದ ಈ ಸೇನೆಗೆ ಹಸಿವಾದರೆ ವನದಲ್ಲಿನ ಹಣ್ಣು-ಹಂಪಲುಗಳನ್ನು ಸೇವಿಸುವ ಅಭ್ಯಾಸವಿರುವುದರಿಂದ ಹಾಗೂ ಅವರು ಅಲ್ಲಿನ ವೃಕ್ಷ-ಕಲ್ಲು ಇತ್ಯಾದಿಗಳನ್ನು ಸಹಜವಾಗಿ ಶಸ್ತ್ರವೆಂದು ಬಳಸುವುದರಿಂದ ರಾವಣನ ಸೈನ್ಯದೊಂದಿಗೆ ಯುದ್ಧ ಮಾಡಲು ಸಾಧ್ಯವಾಯಿತು. ಇದರಿಂದ ಶ್ರೀರಾಮನು ಸೀತಾ ಮಾತೆಯನ್ನು ಮುಕ್ತಗೊಳಿಸಿ ಆದರ್ಶ ಪತಿ ಧರ್ಮವನ್ನು ಪಾಲಿಸಿದ್ದಾನೆ ಮಾತ್ರವಲ್ಲ, ಅದರ ಜೊತೆಗೆ ತಂದೆಯ ವನವಾಸದ ವಚನಭಂಗ ವಾಗದಂತೆ ಆದರ್ಶ ಪುತ್ರಧರ್ಮವನ್ನೂ ಪಾಲಿಸಿದನು.
ಇದರ ಮೂಲಕ ಪ್ರಭು ಶ್ರೀರಾಮನು ವನವಾಸದಲ್ಲಿಯೇ ಕುಶಲ ಸಂಘಟನೆಯ ಆದರ್ಶವನ್ನು ಹಾಕಿ ಕೊಟ್ಟಿದ್ದಾನೆ. ಆದ್ದರಿಂದ ನಾವು ಹಿಂದೂಗಳು ಕೂಡ ಇಂತಹ ಸಂಘಟನೆ ಮಾಡಿದರೆ ಹಾಗೂ ಅದರಲ್ಲಿ ಪ್ರತಿಯೊಬ್ಬರ ಕೌಶಲ್ಯವನ್ನು ಉಪಯೋಗಿಸಿಕೊಂಡರೆ ಹಿಂದೂ ರಾಷ್ಟ್ರ ರೂಪಿ ‘ರಾಮರಾಜ್ಯ’ ಪುನಃ ಸಾಕಾರವಾಗಲು ಕಠಿಣವಿಲ್ಲ.
ಸಂಕಲನಕಾರರು : ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ