ದೇವಭೂಮಿ ಉತ್ತರಾಖಂಡದ ಉತ್ತರಕಾಶಿಯಲ್ಲಿ ನವೆಂಬರ್ ೧೨ ರಂದು ಸಿಲ್ಕಿಯಾರಾ ಸುರಂಗದ ಕೆಲವು ಭಾಗ ಕುಸಿದು ದುರ್ಘಟನೆಯಾಯಿತು; ಅದರಲ್ಲಿ ಸಿಲುಕಿದ ೪೧ ಜನ ಕಾರ್ಮಿಕರನ್ನು ೧೭ ದಿನಗಳ ನಂತರ ಬಿಡುಗಡೆಯಾಯಿತು. ಇಡೀ ದೇಶದ ಗಮನ ಸೆಳೆದಿದ್ದ ಈ ಘಟನೆಯಲ್ಲಿ ಕಾರ್ಮಿಕರನ್ನು ಹೊರಗೆ ತೆಗೆಯುವ ಪ್ರಯತ್ನ ಕೊನೆಗೆ ಸಫಲವಾಯಿತು ಹಾಗೂ ಎಲ್ಲರೂ ನಿಟ್ಟುಸಿರು ಬಿಟ್ಟರು. ಈ ರಕ್ಷಣೆಯ ಕಾರ್ಯದ ಅಂತರ್ಗತ ವಿವಿಧ ಆಧುನಿಕ ಯಂತ್ರಗಳ ಸಹಾಯದಿಂದ ಮಾಡಿದ ಅಗೆಯುವ ಕಾರ್ಯವಿರಲಿ, ಕಾರ್ಮಿಕರಿಗೆ ಊಟ-ತಿಂಡಿಯಂತಹ ಜೀವನಾವಶ್ಯಕ ವಸ್ತುಗಳ ಪೂರೈಕೆ ಮಾಡುವುದಿರಲಿ, ಅದೇ ರೀತಿ ಈ ಆಪತ್ತಿನಿಂದ ಕಾಪಾಡಲು ಅವರ ಮಾನಸಿಕತೆ ಸ್ಥಿರವಾಗಿರುವಂತೆ ಮಾಡಿದ ಪ್ರಯತ್ನವಿರಲಿ, ಈ ಎಲ್ಲ ವ್ಯವಸ್ಥೆಗಳು ವಿಫಲವಾದಾಗ ‘ರ್ಯಾಟ್ ಮೈನರ್ಸ್’ ಕಾರ್ಮಿಕರು (ಇಲಿಯ ಹಾಗೆ ಸಣ್ಣ ಸ್ಥಳವನ್ನು ಕೊರೆಯುವ ವಿಶಿಷ್ಟ ಕೌಶಲ್ಯವಿರುವ ಕಾರ್ಮಿಕರು) ಕೈಯಿಂದ ಕೊರೆದು ಕಾರ್ಮಿಕರನ್ನು ಕ್ಷೇಮವಾಗಿ ಹೊರಗೆ ತೆಗೆಯುವುದಿರಲಿ, ಈ ಪ್ರತಿಯೊಂದಕ್ಕೆ ಸಂಬಂಧಿಸಿದ ವ್ಯವಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿದವು. ಘಟನೆಯ ಗಾಂಭೀರ್ಯವನ್ನು ಗಮನಿಸಿ ದುರ್ಘಟನೆಗೀಡಾದ ಜನರನ್ನು ಹೊರಗೆ ತೆಗೆಯಲು ಅಂತರರಾಷ್ಟ್ರೀಯ ಖ್ಯಾತಿಯ ಸುರಂಗತಜ್ಞ ಅರ್ನಾಲ್ಡ್ ಡಿಕ್ಸ್ ಇವರನ್ನು ಆಸ್ಟ್ರೇಲಿಯಾದಿಂದ ಕರೆಸಲಾಗಿತ್ತು. ಈ ಸಹಾಯ ಕಾರ್ಯದಲ್ಲಿ ಅವರು ಮಹತ್ವದ ಪಾತ್ರವನ್ನು ನಿಭಾಯಿಸಿದರು. ಅರ್ನಾಲ್ಡ್ ಡಿಕ್ಸ್ ಇವರು ಸಿಲ್ಕಿಯಾರಾ ಸುರಂಗದ ಪ್ರವೇಶದ್ವಾರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಒಂದು ಸಣ್ಣ ಮಂದಿರದಲ್ಲಿ ಪೂಜೆಯನ್ನು ಮಾಡುತ್ತಿರುವ ವಿಡಿಯೋ ಪ್ರಸಾರವಾಯಿತು. ಅದರಿಂದಲೂ ಅವರ ಚರ್ಚೆ ಹೆಚ್ಚಾಯಿತು. ನಂತರ ಕೆಲವು ದಿನಗಳ ವರೆಗೆ ಈ ವಿಷಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಷಯಗಳ ಚರ್ಚೆ ನಡೆಯಿತು, ಲೇಖನಗಳು ಪ್ರಸಿದ್ಧವಾದವು. ದುರ್ಘಟನೆಗೀಡಾದವರ ಸಂದರ್ಶನ ತೆಗೆದುಕೊಳ್ಳಲಾಯಿತು. ಸಹಾಯ ಕಾರ್ಯದ ಕಾರ್ಮಿಕರ ಪ್ರಶಂಸೆಯೂ ಆಯಿತು; ಆದರೆ ಸಂಬಂಧಪಟ್ಟ ಘಟನೆಯ ಆಳಕ್ಕೆ ಹೋದಾಗ ಆಧ್ಯಾತ್ಮಿಕ ದೃಷ್ಟಿಕೋನದಿಂದ ಅರಿವಾದ ಕೆಲವು ವಿಷಯಗಳನ್ನು ಇಲ್ಲಿ ಕೊಡುತ್ತಿದ್ದೇವೆ.
೧. ವಿಕಾಸದ ಜೊತೆಗೆ ಧಾರ್ಮಿಕ ವಿಷಯಗಳಿಗೂ ಪ್ರಾಧಾನ್ಯತೆ ಬೇಕು !
ಪ್ರತಿಯೊಂದು ದೇಶವು ರಾಷ್ಟ್ರದ ವಿಕಾಸಕ್ಕಾಗಿ ಪ್ರಯತ್ನಿಸುತ್ತಿರುತ್ತದೆ; ಆದರೆ ಧಾರ್ಮಿಕ ವಿಷಯಗಳನ್ನು ಕಡೆಗಣಿಸಿ ಮಾಡಿದ ವಿಕಾಸಯೋಜನೆಗಳು ಕಾಲಕ್ರಮೇಣ ನಿಷ್ಫಲವಾಗುತ್ತವೆ ಅಥವಾ ಕೆಲವು ದುರ್ಘಟನೆಗಳಾದ ನಂತರ ನಮಗೆ ಅದರ ಅರಿವಾಗುತ್ತದೆ. ದೇವರ ಮೇಲೆ ವಿಶ್ವಾಸ ಇಲ್ಲದ, ಕೇವಲ ವಿಜ್ಞಾನವನ್ನೇ ಸರ್ವಶ್ರೇಷ್ಠವೆಂದು ತಿಳಿಯುವ ಹಾಗೂ ತನ್ನ ಬುದ್ಧಿಯ ಮೇಲೆ ವಿಶ್ವಾಸವಿಟ್ಟು ಅಧರ್ಮವನ್ನು ಕೊಂಡಾಡುವ ಪ್ರಗತಿಪರರಿಗೆ ಈ ವಿಷಯ ಇಷ್ಟವಾಗದಿದ್ದರೂ ಶ್ರದ್ಧೆಯುಳ್ಳ ಸಾಮಾನ್ಯ ವ್ಯಕ್ತಿಗಳು ಮಾತ್ರ ಈ ವಿಷಯವನ್ನು ನಿಶ್ಚಿತವಾಗಿ ಮನ್ನಿಸುತ್ತಾರೆ; ಏಕೆಂದರೆ ಅವರು ಒಂದಲ್ಲ ಒಂದು ಪ್ರಸಂಗದಲ್ಲಿ ಅದನ್ನು ಅನುಭವಿಸಿರುತ್ತಾರೆ. ಧಾರ್ಮಿಕ ಶ್ರದ್ಧೆ ಮತ್ತು ವಿಶ್ವಾಸದಿಂದ ಅವರಿಗೆ ದೇವರ ಮೇಲೆ ದೃಢ ಶ್ರದ್ಧೆ ಇರುತ್ತದೆ. ಉತ್ತರಕಾಶಿಯಲ್ಲಿನ ಸುರಂಗ ದುರ್ಘಟನೆಯ ನಂತರ ತಿಳಿದು ಬಂದಿರುವ ಕೆಲವು ವಿಷಯಗಳಿಂದ ಇದು ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ.
೨. ಸ್ಥಳೀಯ ದೇವತೆಯ ಮಂದಿರವನ್ನು ಕೆಡವಿದ್ದರಿಂದ ದುರ್ಘಟನೆ ಆಯಿತು (?)
ಸಿಲ್ಕಿಯಾರಾದಲ್ಲಿನ ಸುರಂಗದ ಕಾರ್ಯ ಆರಂಭವಾದಾಗ ಅಲ್ಲಿ ನಿರ್ಮಾಣ ಕಾರ್ಯ ಮಾಡುವ ಕಂಪನಿ ಬಾಬಾ ಬೌಖನಾಗ ದೇವತೆಯ ಮಂದಿರವನ್ನು ಕೆಡವಿತ್ತು. ೨೦೧೯ ರಲ್ಲಿ ಈ ಸುರಂಗದ ಕಾರ್ಯ ಪ್ರಾರಂಭವಾದಾಗ ಆ ಕಂಪನಿ ‘ಮಂದಿರವನ್ನು ಪುನಃ ನಿರ್ಮಿಸುವುದಾಗಿ’, ಹೇಳಿತ್ತು. ಸ್ಥಳೀಯರು ಆ ಕಂಪನಿಗೆ ಅನೇಕ ಬಾರಿ ನೆನಪಿಸಿಕೊಟ್ಟರೂ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕೊನೆಗೆ ಸುರಂಗದ ಸ್ವಲ್ಪ ಭಾಗ ಕುಸಿಯಿತು, ಈ ದುರ್ಘಟನೆಯಲ್ಲಿ ಕಾರ್ಮಿಕರು ಅದರಲ್ಲಿ ಸಿಲುಕಿದರು. ಬಾಬಾ ಬೌಖನಾಗ ದೇವರನ್ನು ಸಿಲ್ಕಿಯಾರಾ ಸಹಿತ ಆ ಪರಿಸರದಲ್ಲಿನ ೩ ಪ್ರದೇಶಗಳ ಪ್ರಮುಖ ದೇವತೆಯೆಂದು ಗುರುತಿಸಲಾಗುತ್ತದೆ. ಮಂದಿರದ ಒಳಗೆ ನಾಗರಾಜನ ಮೂರ್ತಿ ಇದೆ. ಬಾಬಾ ಬೌಖನಾಗ ಈ ಪ್ರದೇಶದ ಸಂರಕ್ಷಕನಾಗಿದ್ದಾನೆ ಎಂದು ನಂಬಲಾಗುತ್ತದೆ. ಆದ್ದರಿಂದ ಈ ‘ದೇವತೆಯ ಪ್ರಕೋಪವಿದೆ’, ಎಂದು ಸ್ಥಳೀಯರು ಹೇಳಿದ್ದಾರೆ.
೩. ಕಾರ್ಮಿಕರನ್ನು ಹೊರಗೆ ತೆಗೆಯುವ ಪ್ರಯತ್ನಗಳು ವಿಫಲವಾದವು; ಅದರೆ ಆಧ್ಯಾತ್ಮಿಕ ಮಾರ್ಗವನ್ನು ಅವಲಂಬಿಸಿದಾಗ ಅಡಚಣೆಗಳು ದೂರವಾದವು !
ದುರ್ಘಟನೆಯ ನಂತರದ ಸಹಾಯಕಾರ್ಯಕ್ಕಾಗಿ ಅಮೇರಿಕಾದಿಂದ ತಂದಿರುವ ಅತ್ಯಾಧುನಿಕ ಆಗರ್ ಯಂತ್ರದಿಂದ ಅಗೆಯುವಾಗ ಬ್ಲೇಡ್ಸ ಸಿಕ್ಕಿಬಿದ್ದು ಅವು ಕೆಟ್ಟು ಹೋದವು. ವಿವಿಧ ಅತ್ಯಾಧುನಿಕ ಯಂತ್ರಗಳನ್ನು ಉಪಯೋಗಿಸಿಯೂ ಪ್ರತಿ ಬಾರಿಯೂ ಹೊಸ ಸವಾಲುಗಳು ಎದುರಾಗಿ ಕಾರ್ಮಿಕರವರೆಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕಾರ್ಮಿಕರನ್ನು ಮುಕ್ತಗೊಳಿಸುವ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತಿವೆ’, ಎಂದರಿವಾದಾಗ ಆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಕಂಪನಿ ಸಿಲ್ಕಿಯಾರಾ ಸುರಂಗದ ಎದುರಿಗೆ ತಾತ್ಕಾಲಿಕವಾಗಿ ಒಂದು ಮಂದಿರ ನಿರ್ಮಿಸಿತು. ಆ ಕಂಪನಿಯ ಅಧಿಕಾರಿಗಳು ಮಂದಿರದ ಪುರೋಹಿತರನ್ನು ಸಂಪರ್ಕಿಸಿ ಕ್ಷಮೆಯಾಚಿಸಿದರು. ಬಾಬಾ ಬೌಖನಾಗನ ಸ್ಥಾನವಾಗಿದ್ದ ಭಾಟಿಯಾ ಎಂಬ ಊರಿಗೆ ಹೋಗಿ ಅಧಿಕಾರಿಗಳು ಮಂದಿರದ ಪುರೋಹಿತರನ್ನು ಭೇಟಿಯಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ಸಫಲವಾಗ ಬೇಕೆಂದು ಪೂಜೆ ಮಾಡುವಂತೆ ಪ್ರಾರ್ಥನೆ ಮಾಡಿದರು. ಆಗ ಪುರೋಹಿತರು ‘೩ ದಿನಗಳಲ್ಲಿ ಎಲ್ಲ ಕಾರ್ಮಿಕರು ಮುಕ್ತರಾಗುವರು’, ಎಂದರು. ಅದೇ ರೀತಿ ೩ ದಿನಗಳಲ್ಲಿ ಸಹಾಯಕಾರ್ಯ ಯಶಸ್ವಿಯಾಗಿ ಕಾರ್ಮಿಕರು ಮುಕ್ತರಾದರು.
೪. ಅಂತರರಾಷ್ಟ್ರೀಯ ಖ್ಯಾತಿಯ ಸುರಂಗತಜ್ಞರು ನತಮಸ್ತಕರಾದರು !
ಅಂತರರಾಷ್ಟ್ರೀಯ ಖ್ಯಾತಿಯ ಸುರಂಗತಜ್ಞ (ಟನೆಲ್ ಎಕ್ಸ್‌ಪರ್ಟ್) ಆಸ್ಟ್ರೇಲಿಯಾದ ಅರ್ನಾಲ್ಡ್ ಡಿಕ್ಸ್ ಇವರನ್ನು ಭಾರತ ಸರಕಾರ ಸುರಂಗ ದುರ್ಘಟನೆಗೀಡಾದ ಕಾರ್ಮಿಕರ ಸಹಾಯಕ್ಕಾಗಿ ಸಲಹೆಗಾರರೆಂದು ಕರೆಸಿತು. ಅವರು ಪ್ರತಿದಿನ ಸುರಂಗದ ಹೊರಗೆ ತಾತ್ಕಾಲಿಕವಾಗಿ ನಿರ್ಮಿಸಿದ ಬಾಬಾ ಬೌಖನಾಗನ ಮಂದಿರದಲ್ಲಿ ನತಮಸ್ತಕರಾಗಿ ಕಾರ್ಮಿಕರನ್ನು ಹೊರಗೆ ತೆಗೆಯುವ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಒಬ್ಬ ವಿದೇಶಿ ವ್ಯಕ್ತಿಗೆ ಇಂತಹ ಕಠಿಣ ಪ್ರಸಂಗದಲ್ಲಿ ಸ್ಥಳೀಯ ದೇವತೆಯ ಮಹತ್ವ ತಿಳಿಯುವುದು, ಅವರು ದೇವತೆಯ ಚರಣಗಳಲ್ಲಿ ಶರಣಾಗಿ ಕಾರ್ಮಿಕರ ರಕ್ಷಣೆಗಾಗಿ ಮನಃಪೂರ್ವಕ ಪ್ರಾರ್ಥನೆ ಮಾಡುವುದು, ಇದು ಇಂದಿನ ವಿಜ್ಞಾನಯುಗದಲ್ಲಿ ವಿಜ್ಞಾನದ ಮಿತಿಯನ್ನು ಸ್ಪಷ್ಟಪಡಿಸುವುದರೊಂದಿಗೆ ಅಧ್ಯಾತ್ಮದ ಶ್ರೇಷ್ಠತೆಯನ್ನು ಸಿದ್ಧ ಪಡಿಸುವುದಾಗಿದೆ. ಕಾರ್ಮಿಕರ ಮುಕ್ತತೆಯ ನಂತರ ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅರ್ನಾಲ್ಡ್ ಡಿಕ್ಸ್, ”ನನಗೆ ಸುರಂಗದ ಹೊರಗೆ ಇರುವ ಮಂದಿರಕ್ಕೆ ಹೋಗಿ ಧನ್ಯವಾದ ಅರ್ಪಿಸಲಿಕ್ಕಿದೆ. ಕಾರ್ಮಿಕರು ಕ್ಷೇಮವಾಗಿ ಮುಕ್ತರಾಗಿರುವುದು ಒಂದು ಚಮತ್ಕಾರವೇ ಆಗಿದೆ. ಏನೆಲ್ಲ ಘಟಿಸಿತೋ, ಅದರ ಬಗ್ಗೆ ಧನ್ಯವಾದ ಸಮರ್ಪಿಸುವುದಾಗಿ ನಾನು ವಚನ ನೀಡಿದ್ದೇನೆ” ಎಂದರು. ಡಿಕ್ಸ್ ಮಾತುಗಳನ್ನು ಮುಂದುವರಿಸುತ್ತಾ, ”ಈ ಕಾರ್ಮಿಕರು ಕ್ರಿಸ್‌ಮಸ್‌ನ ಒಳಗೆ ಹೊರಗೆ ಬರುವರು, ಎಂದು ನಾನು ಹೇಳಿದ್ದು ನೆನಪಿದೆಯೆ ? ಯಾರಿಗೂ ಯಾವುದೇ ರೀತಿಯ ಆಘಾತವಾಗುವುದಿಲ್ಲ. ಕ್ರಿಸ್‌ಮಸ್ ಸಮೀಪಿಸುತ್ತಿದೆ. ನಾವು ರಕ್ಷಣೆಯ ಕಾರ್ಯ ಮಾಡುವಾಗ ಶಾಂತವಾಗಿದ್ದೆವು. ಮುಂದಿನ ಪ್ರಯಾಣ ಹೇಗೆ ಮಾಡಬೇಕೆನ್ನುವ ವಿಷಯದಲ್ಲಿ ನಾವು ದೃಢವಾಗಿದ್ದೆವು. ನಾವು ಒಂದು ತಂಡವಾಗಿ ಉತ್ತಮ ಕಾರ್ಯ ಮಾಡಿದೆವು. ಭಾರತದಲ್ಲಿ ಜಗತ್ತಿನ ಉತ್ಕೃಷ್ಟ ಅಭಿಯಂತರಿದ್ದಾರೆ. ಈ ಯಶಸ್ವಿ ಆಂದೋಲನದಲ್ಲಿ ನಾನು ಒಂದು ಭಾಗವಾಗಿದ್ದೆನು, ಎಂದು ನನಗೆ ಆನಂದವೆನಿಸುತ್ತದೆ,’ ಎಂದರು. ಕಾರ್ಮಿಕರನ್ನು ಹೊರ ತೆಗೆದನಂತರ ಅವರು ಈ ಅವಧಿಯಲ್ಲಿ ಭಾರತದಲ್ಲಿ ಸಿಕ್ಕಿದ ಶಾಕಾಹಾರಿ ಆಹಾರವನ್ನೂ ಹೊಗಳಿದರು. ಉನ್ನತ ಹುದ್ದೆಯಲ್ಲಿರುವ ವಿದೇಶಿ ವ್ಯಕ್ತಿಗೆ ಹಿಂದೂ ದೇವತೆಗಳ ಬಗ್ಗೆ ಇರುವ ಶ್ರದ್ಧೆ, ಭಾರತೀಯ ಹಾಗೂ ಇಲ್ಲಿನ ಸಂಸ್ಕೃತಿಯ ವಿಷಯದಲ್ಲಿ ಅವರಿಗೆ ಕಾಣಿಸಿದ ಆತ್ಮೀಯತೆ ಹಾಗೂ ಅವರ ಹೊಗಳಿಕೆಯು ಭಾರತೀಯರಿಗೆ ನಿಜವಾಗಿಯೂ ಅಭಿಮಾನಾಸ್ಪದವಾಗಿದೆ !
೫. ಸುರಂಗ ದುರ್ಘಟನೆಯ ವಿಷಯದಲ್ಲಿ ಅರಿವಾದ ಕೆಲವು ಅಂಶಗಳು
೫ ಅ. ಧಾರ್ಮಿಕ ದೃಷ್ಟಿಕೋನದಿಂದ ಉತ್ತರಾಖಂಡ ರಾಜ್ಯದ ಮಹತ್ವ ! : ಉತ್ತರಾಖಂಡವು ದೇವಭೂಮಿಯಾಗಿದೆ. ಅನೇಕ ಧಾರ್ಮಿಕ ಗ್ರಂಥಗಳಲ್ಲಿಯೂ ಇದರ ಉಲ್ಲೇಖವಿದೆ. ಅನೇಕ ಅವತಾರಗಳು ಇಲ್ಲಿ ಜನ್ಮ ಪಡೆದಿದ್ದಾರೆ. ಋಷಿಮುನಿಗಳು ವಾಸವಾಗಿದ್ದ ಕಾರಣ ಈ ಭೂಮಿ ಪಾವನವಾಗಿದೆ. ಕೇದಾರನಾಥ, ಬದ್ರೀನಾಥದಂತಹ ಪ್ರಮುಖ ಚಾರಧಾಮಗಳು ಇದೇ ರಾಜ್ಯದಲ್ಲಿವೆ. ಹರಿದ್ವಾರ, ಋಷಿಕೇಶದಂತಹ ಪ್ರಸಿದ್ಧ ಧಾರ್ಮಿಕ ಸ್ಥಳಗಳಿದ್ದು ಗಂಗಾ-ಯಮುನಾದಂತಹ ಪವಿತ್ರ ನದಿಗಳ ಉಗಮವೂ ಇದೇ ರಾಜ್ಯದಲ್ಲಿ ಆಗಿದೆ. ವರ್ಷವಿಡೀ ಲಕ್ಷಗಟ್ಟಲೆ ಭಕ್ತರು ಇಲ್ಲಿಗೆ ಬಂದು ದೇವಸ್ಥಾನಗಳ ದರ್ಶನ ಪಡೆಯುತ್ತಾರೆ. ಆದ್ದರಿಂದ ಉತ್ತರಾಖಂಡಕ್ಕೆ ಧಾರ್ಮಿಕ ದೃಷ್ಟಿಕೋನದಿಂದ ಅಸಾಧಾರಣ ಮಹತ್ವವಿದೆ. ಇಂತಹ ಸಾತ್ತ್ವಿಕ ವಾತಾವರಣದಲ್ಲಿ ವಾಸಿಸಲು ಸಿಗುವುದು ಇಲ್ಲಿರುವ ಜನರ ಭಾಗ್ಯವೆಂದೇ ಹೇಳಬೇಕು.
೫ ಆ. ಸ್ಥಳೀಯ ದೇವತೆಯ ಬಗ್ಗೆ ಇರುವ ಭಾವ : ಉತ್ತರಾಖಂಡದಲ್ಲಿ ಯಾವುದೇ ಹೊಸ ಸೇತುವೆ, ರಸ್ತೆ ಅಥವಾ ಸುರಂಗ ನಿರ್ಮಿಸುವ ಮೊದಲು ಸ್ಥಳೀಯ ದೇವತೆಯ ಒಂದು ಚಿಕ್ಕ ದೇವಸ್ಥಾನವನ್ನು ನಿರ್ಮಿಸುವ ಪದ್ಧತಿಯಿದೆ. ‘ಮಂದಿರದಲ್ಲಿನ ದೇವತೆಯ ಆಶೀರ್ವಾದ ಪಡೆದ ನಂತರವೇ ಕೆಲಸ ಪೂರ್ಣವಾಗುತ್ತದೆ’, ಎನ್ನುವುದು ಸ್ಥಳೀಯರ ಶ್ರದ್ಧೆಯಾಗಿದೆ. ಆದ್ದರಿಂದ ಸಿಲ್ಕಿಯಾರಾದಲ್ಲಿನ ಸುರಂಗದ ನಿರ್ಮಾಣ ಕಾರ್ಯ ಆರಂಭಿಸುವ ಮೊದಲು ಸಂಬಂಧಪಟ್ಟ ನಿರ್ಮಾಣ ಕಾರ್ಯ ಮಾಡುವ ಕಂಪನಿ ಸ್ಥಳೀಯ ದೇವತೆ ಬಾಬಾ ಬೌಖನಾಗನ ಮಂದಿರವನ್ನು ಕೆಡವಿ ದೊಡ್ಡ ತಪ್ಪು ಮಾಡಿದೆಯೆಂಬ ಭಾವನೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು.
೫ ಇ. ವಿಕಾಸದ ಕೆಲಸಗಳನ್ನು ಮಾಡುವಾಗ ಧಾರ್ಮಿಕತೆಯ ದೃಷ್ಟಿಯಿಂದ ಯಾವ ಕಾಳಜಿ ವಹಿಸಬೇಕು ? : ಕೆಲವು ವಿಕಸಿತ ದೇಶಗಳಲ್ಲಿ ವಿವಿಧ ಕಟ್ಟಡಗಳನ್ನು ಜೋಡಿಸುವ ಸೇತುವೆಯ ಸ್ವರೂಪದ ರಸ್ತೆ, ಮೆಟ್ರೋರೈಲ್ ಇತ್ಯಾದಿಗಳ ನಿರ್ಮಾಣ ಮಾಡುವಾಗ ಆ ಯೋಜನೆಯಿಂದಾಗಿ ವಲಸೆ ಹೋಗಬೇಕಾದ ಕೆಲವು ಜನರು ತಮ್ಮ ಭೂಮಿಯನ್ನು ನೀಡಲು ವಿರೋಧಿಸುವುದರಿಂದ ಆ ವಾಸ್ತುವಿಗೆ ಆಘಾತ ಮಾಡದೆ ಪರ್ಯಾಯವನ್ನು ಕಂಡು ಹಿಡಿದು ಮಾರ್ಗ ನಿರ್ಮಿಸಿರುವ ಅನೇಕ ಉದಾಹರಣೆಗಳು ನೋಡಲು ಸಿಗುತ್ತವೆ. ವಿದೇಶಗಳಲ್ಲಿ ಹಾಗೂ ಅದು ಕೂಡ ಜನರು ಆಕ್ಷೇಪ ತೆಗೆದುಕೊಂಡಿರುವ ಪ್ರಕರಣದಲ್ಲಿ ಸಂಬಂಧಪಟ್ಟ ನಿರ್ಮಾಣಕಾರ್ಯ ಮಾಡುವ ಕಂಪನಿಗಳು ಇಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ, ಭಾರತದಂತಹ ಧಾರ್ಮಿಕ ದೇಶದಲ್ಲಿ ಯಾವುದೇ ದೇವತೆಯ ಮಂದಿರವನ್ನು ಯೋಜನೆ ಗಾಗಿ ಕೆಡಹುವುದು ದುರದೃಷ್ಠಕರವಾಗಿದೆ.
ನಿಜವಾಗಿ ನೋಡಿದರೆ, ದೊಡ್ಡ ನಿರ್ಮಾಣ ಕಾರ್ಯದ ಯೋಜನೆಯನ್ನು ಹಮ್ಮಿಕೊಳ್ಳುವಾಗ ಆ ಕ್ಷೇತ್ರದಡಿಯಲ್ಲಿ ಬರುವ ಜನರಿಗಾಗಿ ಸರಕಾರದಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಆ ಕ್ಷೇತ್ರದ ಜನರಿಗೆ ಯೋಜನೆಯ ಮಹತ್ವ ವನ್ನು ವಿವರಿಸಿ ಅವರನ್ನು ಸ್ಥಳಾಂತರ ಮಾಡಲಾಗುತ್ತದೆ. ಸರಕಾರ ಕೇವಲ ಇಷ್ಟಕ್ಕೇ ನಿಲ್ಲದೆ ಸಂಬಂಧಪಟ್ಟ ಕ್ಷೇತ್ರದಲ್ಲಿನ ಮಂದಿರಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಆಘಾತವಾಗದಂತೆ ಕಾಳಜಿ ವಹಿಸಬೇಕು. ಕೆಲವು ಕಾರಣಗಳಿಂದ ಇಂತಹ ಯಾವ ಸ್ಥಳಗಳನ್ನು ಕೆಡವ ಬೇಕಾಗುವುದು ? ಧರ್ಮಶಾಸ್ತ್ರಕ್ಕನುಸಾರ ಹೇಗೆ ಮಾಡಬೇಕು ? ಎಂಬುದನ್ನು ಧಾರ್ಮಿಕ ಕ್ಷೇತ್ರದಲ್ಲಿನ ಉನ್ನತರಿಂದ ತಿಳಿದುಕೊಂಡು ಮಂದಿರಗಳ ಪುನರ್ಸ್ಥಾಪನೆ ಮಾಡಬೇಕು ಹಾಗೂ ಆನಂತರವೆ ನಿರ್ಮಾಣಕಾರ್ಯ ಆರಂಭಿಸಬೇಕು.
೫ ಈ. ಧರ್ಮಶಾಸ್ತ್ರ ಹಾಗೂ ವಾಸ್ತುಶಾಸ್ತ್ರಕ್ಕನುಸಾರ ಮಾಡುವ ನಿರ್ಮಾಣಕಾರ್ಯ ! : ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ಧರ್ಮಶಾಸ್ತ್ರಕ್ಕನುಸಾರ ಹಾಗೂ ವಾಸ್ತುಶಾಸ್ತ್ರಕ್ಕನುಸಾರ ನಿರ್ಮಿಸಿದ ಅನೇಕ ಸುಪ್ರಸಿದ್ಧ ಹಾಗೂ ಭವ್ಯದಿವ್ಯ ಪುರಾತನ ಮಂದಿರಗಳಿವೆ. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ಮಂದಿರ ಅಥವಾ ಯಾವುದೇ ನಿರ್ಮಾಣ ಕಾರ್ಯವನ್ನು ಮಾಡುವಾಗ ಅದಕ್ಕಾಗಿ ವಾಸ್ತುವನ್ನು ಆಯ್ಕೆ ಮಾಡುವುದರಿಂದ ಹಿಡಿದು ಅದರ ನಿರ್ಮಾಣ ಕಾರ್ಯ ಪೂರ್ಣವಾಗುವವರೆಗೆ ಪ್ರತಿಯೊಂದು ಹಂತದಲ್ಲಿ ಧರ್ಮಶಾಸ್ತ್ರಕ್ಕನುಸಾರ ಎಲ್ಲ ಕೃತಿಗಳನ್ನು ಮಾಡಲಾಗುತ್ತಿತ್ತು. ಆದ್ದರಿಂದ ನಿರ್ಮಾಣಕಾರ್ಯ ಪರಿಪೂರ್ಣ ಹಾಗೂ ಉತ್ಕೃಷ್ಟ ಆಗುವುದರೊಂದಿಗೆ ಅದಕ್ಕೆ ದೇವತೆಗಳ ಆಶೀರ್ವಾದ ಲಭಿಸಿರುವುದರಿಂದ ಅದು ಅನೇಕ ವರ್ಷಗಳ ವರೆಗೆ ಶಾಶ್ವತವಾಗಿ ಇರುತ್ತಿತ್ತು. ಅಲ್ಲಿ ದೇವತೆಗಳು, ಋಷಿಮುನಿಗಳು, ಸಾಧು-ಸಂತರ ಸಹವಾಸ ಇರುವುದರಿಂದ ವಾಸ್ತು ಹಾಗೂ ಅಲ್ಲಿನ ಪರಿಸರದಲ್ಲಿ ಒಳ್ಳೆಯ ಸ್ಪಂದನಗಳು ನಿರ್ಮಾಣವಾಗಿ ಅದರಿಂದ ಎಲ್ಲರಿಗೂ ಲಾಭವಾಗುತ್ತಿತ್ತು. ತದ್ವಿರುದ್ಧ ಇಂದಿನ ಆಧುನಿಕ ಕಾಲದ ನಿರ್ಮಾಣ ಕಾರ್ಯವನ್ನು ನೋಡಿದರೆ, ಯಾವಾಗ ಯಾವ ಕಟ್ಟಡ ಕುಸಿದು ಬೀಳುವುದು, ರಸ್ತೆಗಳು ಎಷ್ಟು ದಿನ ಉಳಿಯಬಹುದು, ಎಂಬುದನ್ನು ಹೇಳಲು ಸಾಧ್ಯವಿಲ್ಲ ಅಥವಾ ಅದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಂಬಂಧಪಟ್ಟ ಕಾರ್ಯವನ್ನು ಮಾಡುವಾಗ ಆಗುವ ಹಗರಣಗಳು, ಭ್ರಷ್ಟಾಚಾರ ಇತ್ಯಾದಿಗಳಿಂದ ಸಾಧಿಸುವ ಸ್ವಾರ್ಥದಿಂದ ಆ ವಾಸ್ತುವಿನಲ್ಲಿನ ಸ್ಪಂದನಗಳೂ ಚೆನ್ನಾಗಿರುವುದಿಲ್ಲ.
೬. ಧಾರ್ಮಿಕ ಅಧಿಷ್ಠಾನವಿರುವ ಕಾರ್ಯ ಯಶಸ್ವಿಯಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೃತಿ ಮಾಡುವುದು ಆವಶ್ಯಕ !
ಇಂದಿನ ಆಧುನಿಕ ವಿಜ್ಞಾನಯುಗದಲ್ಲಿ ವ್ಯಕ್ತಿ ತನ್ನ ಭೌತಿಕ ವಿಕಾಸವನ್ನು ಸಾಧಿಸುವುದಕ್ಕೆ ಹೆಚ್ಚು ಗಮನವನ್ನು ಕೊಡುತ್ತಿದ್ದಾನೆ. ಪ್ರಚಂಡ ಜನಸಂಖ್ಯೆ ಹೆಚ್ಚಳದಿಂದಾಗಿ ಜನರ ಸೌಲಭ್ಯಕ್ಕಾಗಿ ನಿಸರ್ಗದ ಮೇಲೆ ಆಘಾತ ಮಾಡಿ ವಿಕಾಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕೇವಲ ಭೌತಿಕ ವಿಕಾಸಕ್ಕೆ ಪ್ರಾಧಾನ್ಯತೆ ನೀಡುವುದರಿಂದ ಅದು ಕ್ಷಣಿಕ ಸುಖ ನೀಡುವುದಾಗಿರುತ್ತದೆ. ಅಧರ್ಮಾಚರಣೆಯಿಂದ ವ್ಯಕ್ತಿ ತನ್ನ ಮಾನಸಿಕ ಆರೋಗ್ಯ, ಸ್ಥೈರ್ಯ ಹಾಗೂ ಆನಂದವನ್ನು ಕಳೆದುಕೊಳ್ಳುತ್ತಿದ್ದಾನೆ. ಉತ್ತರಾಖಂಡದಲ್ಲಿ ಕೆಲವು ವರ್ಷಗಳ ಹಿಂದೆ ಬಂದಿರುವ ನೆರೆಹಾವಳಿಯಿಂದಾದ ಹಾನಿಯನ್ನು ನಾವು ಅನುಭವಿಸಿದ್ದೇವೆ. ಅಲ್ಲಿ ಪದೇ ಪದೇ ಆಗುವ ಭೂಸ್ಖಲನ ದಂತಹ ನೈಸರ್ಗಿಕ ಆಪತ್ತುಗಳಿಂದಾಗಿ ಭೀಕರ ಪರಿಣಾಮವನ್ನೂ ನಾವು ನೋಡಿದ್ದೇವೆ. ಈಗ ಉತ್ತರಾಖಂಡದಲ್ಲಿನ ಸಿಲ್ಕಿಯಾರಾ ದಲ್ಲಿನ ಸುರಂಗ ದುರ್ಘಟನೆಯಿಂದಾದರೂ ಸರಕಾರ ಪಾಠ ಕಲಿಯಬೇಕು ಹಾಗೂ ಯಾವುದೇ ವಿಕಾಸ ಯೋಜನೆ ಯನ್ನು ಹಮ್ಮಿಕೊಳ್ಳುವಾಗ ಮಂದಿರಗಳನ್ನು ಕೆಡಹುವಂತಹ ಪಾಪ ಮಾಡದೇ ಧಾರ್ಮಿಕ ವಿಷಯಗಳಿಗೆ ಪ್ರಾಧಾನ್ಯತೆ ನೀಡಿ ಧರ್ಮಶಾಸ್ತ್ರಕ್ಕನುಸಾರ ಎಲ್ಲ ಕೃತಿಗಳನ್ನು ಮಾಡಬೇಕು. ಭಗವಂತನ ಅಧಿಷ್ಠಾನವಿರುವ ಕಾರ್ಯವೇ ಯಶಸ್ವಿ ಯಾಗುತ್ತದೆ ಹಾಗೂ ನಿರ್ವಿಘ್ನವಾಗಿ ನೆರವೇರುತ್ತದೆ, ಎಂಬುದು ಇದರಿಂದ ತಿಳಿಯುತ್ತದೆ !
– ಶ್ರೀ. ಸಂದೇಶ ನಾಣೋಸ್ಕರ, ಸನಾತನ ಆಶ್ರಮ, ದೇವದ ಪನವೇಲ. (೭.೧೨.೨೦೨೩)