ವೈದಿಕ ಪುನರುತ್ಥಾನದ ‘ಸಮಯ’!

ಜೀವನದಲ್ಲಿ ಸಮಯಕ್ಕೆ ಅಸಾಧಾರಣ ಮಹತ್ವವಿದೆ. ದೈನಂದಿನ ಜೀವನದಲ್ಲಿ ‘ಕಾಲವು ಬಂದಿತ್ತು; ಆದರೆ ಸಮಯ ಬಂದಿರಲಿಲ್ಲ’, ‘ಒಂದು ಬಾರಿ ಕಳೆದು ಹೋದ ಸಮಯ ಪುನಃ ಬರುವುದಿಲ್ಲ’ ಮತ್ತು ಆಂಗ್ಲದಲ್ಲಿ ‘ಟೈಮ್‌ ಇಸ್‌ ಮನಿ’, ಹೀಗೆ ಒಂದಲ್ಲ ಹಲವು ವಚನಗಳು ನಮ್ಮ ಮನಸ್ಸಿನ ಮೇಲೆ ಸಮಯದ ಮಹತ್ವವನ್ನು ಬಿಂಬಿಸುತ್ತಿರುತ್ತವೆ. ಇದೇ ಸಮಯವು ಕಾಲಗತಿಯ ಮೌಲ್ಯಮಾಪನವನ್ನೂ ಮಾಡುತ್ತದೆ. ಪ್ರಾಚೀನ ಭಾರತದ ಸಮಯದ ಪ್ರಮಾಣವನ್ನು ಆಧರಿಸಿ ವಿದೇಶಿಯರು ತಮ್ಮ ‘ಗ್ರೀನವಿಚ್‌ ಮೀನ್‌ ಟೈಮ್’ ಅಂದರೆ ‘ಜಿ.ಎಮ್‌.ಟಿ.’ ವ್ಯವಸ್ಥೆಯನ್ನು ಜಗತ್ತಿನ ಮೇಲೆ ಹೇರಿದರು. ಮಧ್ಯಪ್ರದೇಶದ ನೂತನವಾಗಿ ಚುನಾಯಿತ ಮುಖ್ಯಮಂತ್ರಿ ಮೋಹನ ಯಾದವ ಇವರು ಈ ವಿದೇಶಿ ‘ಗ್ರೀನವಿಚ್‌ ಮೀನ್‌ ಟೈಮ್’ ವ್ಯವಸ್ಥೆಯನ್ನು ಪ್ರಾಚೀನ ಭಾರತೀಯ ಕಾಲಮಾನದ ಪದ್ಧತಿಯೊಂದಿಗೆ (ಮಹಾಕಾಲ ಮೀನ್‌ ಟೈಮ್) ಬದಲಾಯಿಸುವುದಾಗಿ ಇತ್ತೀಚೆಗಷ್ಟೇ ಘೋಷಿಸಿದರು. ಪ್ರಸ್ತುತ ಸಮಯವನ್ನು ನಿರ್ಧರಿಸಲು ಜಾಗತಿಕ ಸಂದರ್ಭವೆಂದು ಬಳಸಲಾಗುವ ‘ಪ್ರೈಮ್‌ ಮೆರಿಡಿಯನ್’ (ಶೂನ್ಯ ರೇಖಾಂಶ) ಈ ಪದ್ಧತಿಯನ್ನು ಇಂಗ್ಲೆಂಡ್‌ನ ಗ್ರೀನವಿಚ್‌ನಿಂದ ಉಜ್ಜೈನಿಗೆ ತರುವ ಮೂಲಕ ಯಾದವ ಸರಕಾರವು ‘ಮಹಾಕಾಲ ಮೀನ್‌ ಟೈಮ್‌’ಅನ್ನು ಪುನರುತ್ಥಾನ ಗೊಳಿಸಲು ಸಜ್ಜಾಗಿದೆ. ಇದರಿಂದ ರಾತ್ರಿ ವೇಳೆ ಸಮಯವನ್ನು ಬದಲಿಸುವ ವಿದೇಶಿ ಸಂಪ್ರದಾಯಕ್ಕೆ ಕಡಿವಾಣ ಬೀಳಲಿದ್ದು, ಭಾರತೀಯ ಪ್ರಾಮಾಣಿತ ಸಮಯವನ್ನು ಅಳವಡಿಸಿಕೊಂಡು ಸೂರ್ಯೋದಯದಿಂದ ಸಮಯವು ನಿಗದಿಯಾಗಲಿದೆ. ರಾಷ್ಟ್ರ ಮತ್ತು ಸಂಸ್ಕೃತಿ ಪ್ರೇಮಿಗಳಿಗೆ ಇದು ಉತ್ಸಾಹವರ್ಧಕ ವಿಷಯವಾಗಿದೆ.

ಅನೇಕ ಧರ್ಮಶಾಸ್ತ್ರೀಯ ಮತ್ತು ಐತಿಹಾಸಿಕ ಸಿದ್ಧಾಂತಗಳಿಗನುಸಾರ ಪ್ರಾಚೀನ ಕಾಲದಲ್ಲಿ ಜಗತ್ತಿನಲ್ಲಿ ಉಜ್ಜೈನಿ ಮಾತ್ರ ಕಾಲಗಣನೆಯ ಏಕೈಕ ಕೇಂದ್ರವಾಗಿತ್ತು. ಭಾರತದ ನಡುಮಧ್ಯ ಇರುವುದರಿಂದ ಉಜ್ಜೈನಿಗೆ ‘ನಾಭಿಪ್ರದೇಶ’ ಅಥವಾ ‘ಮಣಿಪುರಚಕ್ರ’ ಎಂದೂ ಹೇಳ ಲಾಗುತ್ತದೆ. ಪ್ರಾಚೀನ ‘ಸೂರ್ಯ ಸಿದ್ಧಾಂತ’, ‘ಬ್ರಹ್ಮಸ್ಫೂಟ ಸಿದ್ಧಾಂತ’, ‘ಆರ್ಯಭಟ್ಟ’, ‘ಭಾಸ್ಕರಾಚಾರ್ಯ’ರ ಪ್ರಕಾರ ಉಜ್ಜೈನಿ ಮಧ್ಯದಲ್ಲಿ ನೆಲೆಗೊಂಡಿರುವ ನಗರವಾಗಿದೆ. ಸ್ಕಂದ ಪುರಾಣಕ್ಕನುಸಾರ ಉಜ್ಜೈನಿಯಲ್ಲಿ ೧೨ ಜ್ಯೋತಿರ್ಲಿಂಗ ಗಳ ಪೈಕಿ ಒಂದಾಗಿರುವ ಭಗವಾನ ಶ್ರೀ ಮಹಾಕಾಲೇಶ್ವಗ್ನನ್ನು ಕಾಲಗಣನೆಯ ಪ್ರವರ್ತಕನೆಂದು ನಂಬಲಾಗುತ್ತದೆ. ಉಜ್ಜೈನಿಯು ಪ್ರಾಚೀನ ಭಾರತದ ಕಾಲಗಣನೆಯ ಕೇಂದ್ರ ಬಿಂದುವಾಗಿದೆ. ಭಗವಾನ ಶ್ರೀ ಮಹಾಕಾಲನು ಕಾಲದ ಆರಾಧ್ಯ ದೇವತೆಯಾಗಿದ್ದಾನೆ. ಭಾರತದ ಸುಪ್ರಸಿದ್ಧ ರಾಜಾ ವಿಕ್ರಮಾದಿತ್ಯನ ಶಾಸನ ಕಾಲದಲ್ಲಿ ಸಂಪೂರ್ಣ ಭಾರತದ ಕಾಲವನ್ನು ಉಜ್ಜೈನಿಯಿಂದ ನಿರ್ಧರಿಸಲಾಗಿತ್ತು. ಈ ಸಮಯ ಸೂರ್ಯೋದಯದಿಂದ ಸೂರ್ಯೋದಯ, ಎಂದು ನಿರ್ಧರಿಸಲಾಯಿತು. ಮುಂದೆ ಭಾರತೀಯ ಕಾಲಗಣನೆ ಯಿಂದ ಪ್ರೇರಣೆಯನ್ನು ಪಡೆದು ಗ್ರೀಕ್, ಪರ್ಶೀಯನ್, ಅರಬಿ ಮತ್ತು ರೋಮನ್‌ ಜನರು ತಮ್ಮ ಸ್ಥಳಗಳ ಸಮಯವನ್ನು ತಿಳಿದುಕೊಳ್ಳಲು ಸ್ವಂತದ ಖಗೋಳ ಸಮೀಕ್ಷಾ ಮಂದಿರ ವನ್ನು(ವೇಧಶಾಲೆಯನ್ನು) ಸ್ಥಾಪಿಸಿದರು. ಈ ಬಗ್ಗೆ ತಜ್ಞರಲ್ಲಿ ಬಹಳಷ್ಟು ಚರ್ಚೆಯಾದ ನಂತರ ಗ್ರೀನ್‌ವಿಚ್ನ್ನು ಶೂನ್ಯ ರೇಖಾಂಶದ ಸ್ಥಳವೆಂದು ಒಪ್ಪಿಕೊಳ್ಳಲಾಯಿತು. ಲಂಡನ್‌ನ ಉಪನಗರವಾದ ಗ್ರೀನ್‌ವಿಚ್‌ ಮೂಲಕ ‘ಶೂನ್ಯ ರೇಖಾಂಶ’ವು ಹಾದುಹೋಗುತ್ತದೆ’, ಎಂದು ಊಹಿಸಲಾಗಿತ್ತು. ಅನಂತರ ಇಂದಿನವರೆಗೂ ನಮ್ಮೊಂದಿಗೆ ಪೂರ್ಣ ಜಗತ್ತು ಇಂಗ್ಲೆಂಡ್‌ನ ‘ಗ್ರೀನ್‌ವಿಚ್‌ ಮೀನ್‌ ಟೈಮ್‌’ನ್ನು ಪಾಲಿಸುತ್ತಿದೆÉ. ಮೊದಲು ಈ ಪ್ರಾಮಾಣಿತ ಸಮಯವನ್ನು ಉಜ್ಜೈನಿಯಿಂದ ಅಳೆಯಲಾಗುತ್ತಿತ್ತು. ಆದುದರಿಂದ ಇದನ್ನೇ ಬದಲಾಯಿಸಿ ಪ್ರಾಚೀನ ‘ಮಹಾಕಾಲ ಮೀನ್‌ ಟೈಮ್‌’ಅನ್ನು ಪುನಃ ಜಾರಿಗೆ ತರುವ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಈ ವ್ಯಾಪಕ ಮಹತ್ವಾಕಾಂಕ್ಷೆಗೆ ಕೇಂದ್ರ ಸರಕಾರವು ಸಕ್ರಿಯವಾಗಿ ಬೆಂಬಲಿಸಬೇಕು. ವೈಮಾನಿಕಶಾಸ್ತ್ರ ವಾಗಲಿ, ಶೂನ್ಯದ ಅವಿಷ್ಕಾರವಾಗಲಿ ಅಥವಾ ಕಾಲಗಣನೆ ಯಾಗಲಿ, ಇಂತಹ ಅನೇಕ ಪ್ರಮುಖ ವಿಷಯಗಳು ಈ ಭಾರತ ಜಗತ್ತಿಗೆ ನೀಡಿದ ಕೊಡುಗೆಗಳಾಗಿವೆ. ಈ ಎಲ್ಲ ವಿಷಯಗಳ ಮೇಲೆ ಇಂದು ವಿದೇಶಿಯರು ತಮ್ಮ ಸ್ವಾಮಿತ್ವ ವನ್ನು ತೋರಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ನಮಗೆ ನಿಜವಾದ ಇತಿಹಾಸವನ್ನು ಕಲಿಸಿದ್ದರೆ ಪಾಶ್ಚಿಮಾತ್ಯರಿಗೆ ಮುಖ ತೋರಿಸಲು ಸ್ಥಳವೇ ಇರುತ್ತಿರಲಿಲ್ಲ. ಆದುದರಿಂದ ‘ಸತ್ಯವು ಎಂದಿಗೂ ಅಡಗಲು ಸಾಧ್ಯವಿಲ್ಲ’, ಈ ಸಿದ್ಧಾಂತ ಕ್ಕನುಸಾರ ಕಾಲದ ಪ್ರವಾಹದಲ್ಲಿ ಪ್ರಾಚೀನ ಭಾರತೀಯ ಜ್ಞಾನ ಮತ್ತು ಸಂಪ್ರದಾಯಗಳ ಮಹತ್ವ ಜಗತ್ತಿಗೆ ಈಗ ಮನವರಿಕೆಯಾಗುತ್ತಿದೆ; ಎಂದೇ ಈ ನಿಜವಾದ ಅರ್ಥದಲ್ಲಿ ವೈದಿಕ ‘ಪುನರುತ್ಥಾನದ ‘ಸಮಯ’ ಬಂದಿದೆ.

ಧಾರ್ಮಿಕ ಸ್ಥಳಗಳನ್ನು ಪುನರುಜ್ಜೀವನಗೊಳಿಸಬೇಕು !

ಭಾರತವು ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಸುಶೋಭಿತಗೊಂಡ ದೇಶವಾಗಿದೆ. ಕಾಲದ ಪ್ರವಾಹದಲ್ಲಿ ನಾವು ಮಾತ್ರ ನಮ್ಮದೇ ಆದ ಅನೇಕ ಪ್ರಾಚೀನ ವಿಷಯಗಳನ್ನು ಮರೆತಿದ್ದೇವೆ. ಈ ವಿಷಯ ಹೊಸ ಪೀಳಿಗೆಗೆ ತಿಳಿಯಬೇಕೆಂದು ಗುಜರಾತ ಸರಕಾರವು ಇತ್ತೀಚೆಗಷ್ಟೇ ಒಂದು ಪ್ರಶಂಸನೀಯ ಉಪಕ್ರಮವನ್ನು ಹಮ್ಮಿಕೊಂಡಿದೆ. ಗುಜರಾತ ಸರಕಾರವು ಭಗವಾನ ಶ್ರೀಕೃಷ್ಣನ ದ್ವಾರಕೆಯಿಂದ ಕೆಲವು ಕಿಲೋಮೀಟರ್‌ ಅಂತರದಲ್ಲಿ ಸಮುದ್ರದಲ್ಲಿ ಮುಳು ಗಿದ ದ್ವಾರಕಾನಗರಿಯ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯ ಸೌಲಭ್ಯವನ್ನು ಒದಗಿಸಲಿದೆ. ಇದು ಧಾರ್ಮಿಕ ಪ್ರವಾಸದ ವಿಷಯವಾಗಿದ್ದರೂ, ಈ ಮೂಲಕ ಭಕ್ತರಿಗೆ ಸಮೃದ್ಧವಾದ ದ್ವಾರಕೆಯ ಅವಶೇಷಗಳ ದರ್ಶನ ಲಭ್ಯವಾಗಲಿದೆ. ಶ್ರೀಕೃಷ್ಣನು ಧರ್ಮ ಸಂಸ್ಥಾಪನೆಯ ದೇವತೆಯಾಗಿದ್ದಾನೆ. ಆದುದರಿಂದ ಸರಕಾರದ ಈ ನಿರ್ಣಯ ಹಿಂದೂ ಸಮಾಜಕ್ಕೆ ಆನಂದ ತಂದಿದೆ. ಇದು ಆಧುನಿಕ ತಂತ್ರಜ್ಞಾನದ ಕೊಡುಗೆ ಎಂದು ಹೇಳಬಹುದು. ಆದುದರಿಂದ ಭಕ್ತರು ಕೇವಲ ದ್ವಾರಕಾ ನಗರದ ಬಾಹ್ಯ ದರ್ಶನಕ್ಕೆ ಸಮಾಧಾನ ಪಡದೇ ಅಲ್ಲಿ ಸಾವಿರಾರು ವರ್ಷಗಳಿಂದ ತುಂಬಿಕೊಂಡ ಕೃಷ್ಣತತ್ತ್ವದ ಅನುಭೂತಿಯನ್ನು ಪಡೆಯಬೇಕು, ಅಂದರೆ ಮಾತ್ರ ‘ಅವರ ಈ ಪ್ರವಾಸ ಸಾರ್ಥಕವಾಯಿತು’, ಎಂದು ಹೇಳಬಹುದು. ಆ ದೃಷ್ಟಿಯಿಂದಲೂ ಸರಕಾರವು ವ್ಯವಸ್ಥೆ ಮಾಡಬೇಕು. ಭಕ್ತರಿಗೆ ಈ ಕೃಷ್ಣತತ್ತ್ವವನ್ನು ಅನುಭವಿಸಬೇಕಾಗಿದ್ದರೆ ಅವರು ಸ್ವತಃ ಸಾಧನೆಯನ್ನು ಮಾಡುವ ಆವಶ್ಯಕತೆಯೂ ಇದೆ. ಒಟ್ಟು ಎರಡರಿಂದ ಎರಡೂವರೆ ಗಂಟೆ ಆಳವಾದ ಸಮುದ್ರದಲ್ಲಿ ಪ್ರವಾಸ ಮಾಡಿ ದ್ವಾರಕಾನಗರದ ದರ್ಶನ ಪಡೆಯುವುದು ನಿಜವಾಗಿಯೂ ಅದ್ಭುತವಾಗಿದೆ. ಸರಕಾರದ ಇಚ್ಛಾಶಕ್ತಿ ಇದ್ದರೆ, ಸರಕಾರ ಏನೂ ಮಾಡಬಹುದು, ಎಂಬುದರ ಇದು ಉತ್ತಮ ಉದಾಹರಣೆಯಾಗಿದೆ. ದ್ವಾರಕೆಯ ಬಗ್ಗೆ ಹೇಗೆ ಭಕ್ತರಲ್ಲಿ ಒಲವು ಇದೆಯೋ, ಅದೇ ರೀತಿ ರಾಮ ಸೇತುವಿನ ಬಗ್ಗೆಯೂ ಇದೆ; ಆದರೆ ಇದರ ಹೆಚ್ಚಿನ ಭಾಗ ಶ್ರೀಲಂಕಾ ದಲ್ಲಿ ಇರುವುದರಿಂದ ವಾಸ್ತವದಲ್ಲಿ ರಾಮ ಸೇತುವಿನ ದರ್ಶನ ಪಡೆಯಲು ಸಾಧ್ಯವಾಗಲಾರದು. ಐತಿಹಾಸಿಕ ರಾಮಸೇತುವಿನ ಅಸ್ತಿತ್ವವನ್ನೇ ನಿರಾಕರಿಸಿದ ಕಾಂಗ್ರೆಸ್‌ನಿಂದ ಅಪೇಕ್ಷೆ ಪಡುವುದೇ ತಪ್ಪಾಗಿದೆ; ಆದರೆ ಈಗ ಗುಜರಾತ ಸರಕಾರದ ದ್ವಾರಕಾದರ್ಶನ ವ್ಯವಸ್ಥೆಯ ಮಾದರಿಯಲ್ಲಿ ಕೇಂದ್ರ ಸರಕಾರವು ರಾಮಸೇತುವಿನ ಪ್ರತ್ಯಕ್ಷ ದರ್ಶನಕ್ಕೆ ಸೌಲಭ್ಯ ಕಲ್ಪಿಸಿಕೊಡಬೇಕು. ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಶುಭ ವೇಳೆ ಸರಕಾರವು ಈ ಬಗ್ಗೆ ಘೋಷಿಸಬೇಕು; ಧಾರ್ಮಿಕ ಸ್ಥಳಗಳ ಪುನರುತ್ಥಾನವು ಕಾಲದ ಆವಶ್ಯಕತೆಯಾಗಿದೆ !